ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ ಬೆಳಿಗ್ಗೆ 10:15ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ ಹಬ್ಬದ ಉದ್ಘಾಟನೆ ನೆರವೇರಲಿದೆ. ನಾದ ಬ್ರಹ್ಮ ಹಂಸಲೇಖ ದಸರಾಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಾಡ ಅದಿ ದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮmಾಡುವ ಮೂಲಕ ಹಂಸಲೇಖ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11:30ಕ್ಕೆ ಮೈಸೂರು ಉಸ್ತುವಾರಿ ಸಚಿವರೂ ಆಗಿರುವ ಡಾ. ಹೆಚ್.ಸಿ ಮಹದೇವಪ್ಪ ಕಲಾಮಂದಿರದಲ್ಲಿ ಚಲನ ಚಿತ್ರೋತ್ಸವ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಕುಪ್ಪಣ್ಣ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನಕ್ಕೂ ಸಚಿವ ಹೆಚ್ ಸಿ ಮಹದೇವಪ್ಪ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ, ಆಹಾರ ಮೇಳ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ತೊಡೆ ತಟ್ಟಿ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 4:30ಕ್ಕೆ ವಸ್ತು ಪ್ರದರ್ಶನವನ್ನು ಸಿಎಂ ಉದ್ಘಾಟನೆ ಮಾಡಲಿದ್ದು, ಸಂಜೆ 5 ಗಂಟೆಗೆ ಸೆನೆಟ್ ಭವನದಲ್ಲಿ ಯೋಗ ದಸರಾ ಉದ್ಘಾಟನೆಯನ್ನು ಸಚಿವ ಡಾ. ಹೆಚ್.ಸಿ ಮಹದೇವಪ್ಪ ನೆರವೇರಿಸಲಿದ್ದಾರೆ. ಅದೇ ಸಮಯದಲ್ಲಿ ಕಲಾಮಂದಿರದಲ್ಲಿ ಅಖಿಲ ಭಾರತ ಹಾಗೂ ರಾಜ್ಯ ಮಟ್ಟದ ಚಿತ್ರ ಶಿಲ್ಪ ಕಲಾ ಪ್ರದರ್ಶನ ಉದ್ಘಾಟನೆಯನ್ನು ಸಚಿವ ಶಿವರಾಜ್ ತಂಗಡಗಿ ನೆರವೇರಿಸಲಿದ್ದಾರೆ. ಆ ಬಳಿಕ ಓವಲ್ ಮೈದಾನದಲ್ಲಿ ಪುಸ್ತಕ ಮಾರಾಟ ಮೇಳ ಹಾಗೂ ಸಂಜೆ 5:30 ಕ್ಕೆ ಕಲಾಮಂದಿರದ ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ ಉದ್ಘಾಟನೆ ಮಾಡಲಿದ್ದಾರೆ.
ಮೈಸೂರಿನಲ್ಲಿ ಜಗಮಗಿಸಲಿರುವ ದೀಪಾಲಂಕಾರ..
ಮೈಸೂರು ದಸರಾ ಅಂದರೆ ದೀಪಾಲಂಕಾರವೇ ಸೊಗಸು. ಮೈಸೂರನ್ನು ಬಣ್ಣ ಬಣ್ಣದ ದೀಪಗಳಿಂದ ನೋಡುವುದೇ ಒಂದು ಚಂದ. ಇಂದು ಸಂಜೆ 6:30ಕ್ಕೆ ಇಂಧನ ಸಚಿವ ಕೆ.ಜೆ ಜಾರ್ಜ್ ವಿದ್ಯುತ್ ದೀಪಾಲಂಕಾರ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತ ಚಾಲನೆ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ವಿಐಪಿ ಹಾಗೂ ರಾಜ್ಯದ ಮಂತ್ರಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಬರುವ ಭಕ್ತಾದಿಗಳಿಗೂ ಪ್ರತ್ಯೇಕವಾದ ಆಸನ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಿಕೊಳ್ಳಲಾಗಿದೆ. ಮೈಸೂರು ಡಿಸಿ ಹಾಗು ಮೈಸೂರು ಪೊಲೀಸ್ ಕಮಿಷನರ್ ಖುದ್ದು ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ದಸರಾ ಉದ್ಘಾಟಕರಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಸರ್ಕಾರ ಆಯ್ಕೆ ಮಾಡಿದ್ದು, ಹಂಸಲೇಖ ಈಗಾಗಲೇ ಮೈಸೂರಿಗೆ ತೆರಳಿದ್ದಾರೆ. ಕುಟುಂಬ ಸಮೇತರಾಗಿ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಹಂಸಲೇಖ ಅವರನ್ನು ಮೈಸೂರು ಜಿಲ್ಲಾಡಳಿತ ಪೂರ್ಣಕುಂಭ ಸ್ವಾಗತ ನೀಡಿದೆ. ವಾದ್ಯಗೋಷ್ಠಿ ಮೂಲಕ ಹಂಸಲೇಖ ಅವರನ್ನು ಸ್ವಾಗತಿಸಿದೆ. 2023ರ ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಹಂಸಲೇಖ ಅವರನ್ನು ಸುತ್ತೂರು ಶ್ರೀಗಳು ಸನ್ಮಾನಿಸಿದ್ದಾರೆ. ಇನ್ನೊಂದು ಕಡೆ ಗಜಪಡೆ ಹಾಗು ಅಶ್ವಾರೋಹಿ ಪಡೆಗಳನ್ನು ಜಂಭೂಸವಾರಿಗೆ ಅಣಿ ಮಾಡಲಾಗ್ತಿದೆ. ಇಂದಿನಿಂದ ನವರಾತ್ರಿ ಸಂಭ್ರಮ ಅಧಿಕೃತವಾಗಿ ಆರಂಭ ಆಗುತ್ತಿದ್ದು ಸಾಂಸ್ಕೃತಿಕ ರಾಜಧಾನಿ ಮೈಸೂರು ಜಗಮಗಿಸುತ್ತದೆ. ಕೆಎಸ್ಆರ್ಟಿಸಿ 2 ಸಾವಿರ ಹೆಚ್ಚುವರಿ ಬಸ್ ಸೌಲಭ್ಯ ನೀಡುತ್ತಿದ್ದು, ನಾಲ್ಕು ಜನರಿಗಿಂತ ಹೆಚ್ಚಿನ ಟಿಕೆಟ್ ಖರೀದಿ ಮಾಡಿದಾಗ ಶೇಕಡ 5ರಷ್ಟು ಹಾಗು ಒಂದೇ ಬಾರಿಗೆ ಎರಡೂ ಕಡೆಯ ಅಂದರೆ ಹೋಗುವ ಹಾಗು ವಾಪಸ್ ಆಗುವ ಟಿಕೆಟ್ ಬುಕ್ ಮಾಡಿದರೆ ಶೇಕಡ 10ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಕೊಡುಗೆ ಅಕ್ಟೋಬರ್ 20 ರಿಂದ 26ರ ತನಕ ಲಭ್ಯ ಆಗಲಿದೆ.
ಕೃಷ್ಣಮಣಿ