ಶಿವಮೊಗ್ಗ: ನಗರದ ಗೋಪಿಶೆಟ್ಟಿ ಹಾಗೂ ಗೋವಿಂದಾಪುರದಲ್ಲಿ ನಿರ್ಮಿಸಿರುವ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳ್ಳದೇ ಇದ್ದರೂ ಮುಖ್ಯಮಂತ್ರಿ ಅವರಿಂದ ಶಂಕುಸ್ಥಾಪನೆ ಮಾಡಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇನ್ನೂ ಪೂರ್ಣಗೊಳ್ಳದ, ಮೂಲ ಸೌಕರ್ಯಗಳಿಲ್ಲದ, ಸ್ವಂತ ವಿದ್ಯುತ್ ಸಂಪರ್ಕವನ್ನೂ ಪಡೆಯದ ಬಡವರ ಮನೆಗಳನ್ನು ಉದ್ಘಾಟಿಸಿ, ಪ್ರಚಾರಗಿಟ್ಟಿಸುವ ದರ್ದು ಏನಿತ್ತು ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಶಿವಮೊಗ್ಗ ನಗರದಲ್ಲಿ ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ಸುಮಾರು 57 ಕಾಮಗಾರಿಗಳಿಗೆ ಚಾಲನೆ ನೀಡಿದರು. ಯಾವುದೇ ಕಾರ್ಯಕ್ರಮಗಳಿಗೆ ಸಿಎಂ ಸ್ಥಳಕ್ಕೆ ಹೋಗಲಿಲ್ಲ. ಬದಲು ಎನ್.ಇಎಸ್ ಕಾಲೇಜು ಗ್ರೌಂಡ್’ನಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಫಲಕಗಳನ್ನುಅನಾವರಣ ಮಾಡಿದ್ದಾರೆ.
ಈ ಸಂಬಂಧ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್, ಶಾಸಕ ಈಶ್ವರಪ್ಪ ನಡವಳಿಕೆ ನೋಡಿದರೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಕಾರಣದಿಂದ ವಾಸಕ್ಕೆ ಯೋಗ್ಯವಲ್ಲದ ಆಶ್ರಯ ಮನೆಗಳನ್ನು ತರಾತುರಿಯಲ್ಲಿ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯವಾಗಿ ವಿದ್ಯುತ್ ಸಂಪರ್ಕವೇ ಇಲ್ಲ. ಮೆಸ್ಕಾಂನ ಮೂಲದ ಪ್ರಕಾರ ಒಂಭತ್ತು ಕೋಟಿ ರೂ. ಠೇವಣಿ ಕಟ್ಟಬೇಕು. ಈಗ ತಕ್ಷಣಕ್ಕೆ ೪ ಕೋಟಿ ರೂ. ಕಟ್ಟಬೇಕು. ಅದಿನ್ನೂ ಆಗಿಲ್ಲ. ಟೆಂಡರ್ ಕೂಡ ಕರೆದಿಲ್ಲ. ಆದರೆ ಅಧಿಕಾರಿಗಳ ಬಾಯಿ ಮುಚ್ಚಿಸಿ ಕೇವಲ ೨೦ಲಕ್ಷ ರೂ. ಕಟ್ಟಿದ್ದಾರೆ. ಅದು ೨೮ ದಿನಕ್ಕೆ ಮಾತ್ರ. ನಂತರ ಸಂಪರ್ಕ ಪಡೆಯಲು ೭ಲಕ್ಷರೂ.ನಂತೆ ಕಟ್ಟಬೇಕಾಗುತ್ತದೆ. ಈ ಹಣವೆಲ್ಲಾ ನೀರಿನಲ್ಲಿ ಹೋಮ ಮಾಡಿದ ಹಾಗಾಗುತ್ತದೆ. ಈ ಹಣವನ್ನು ಕೂಡ ಬಡವರ ಮೇಲೆಯೇ ಹಾಕುತ್ತಾರೆ. ಬಡವರಿಗೆ ಹೊರೆಯಾಗಲು ಶಾಸಕರೇ ಹೊಣೆಯಾಗುತ್ತಾರೆ ಎಂದರು.
ಯಾವುದೇ ಕಾರಣಕ್ಕೂ ಮೂಲಭೂತ ಸೌಲಭ್ಯ ಒದಗಿಸದೆ ಅವುಗಳನ್ನು ಉದ್ಘಾಟಿಸಬಾರದು. ಅಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕೂಡ. ಇದೆ. ತುಂಗೆ ಹತ್ತಿರ ಇದ್ದರೂ ತರಾತುರಿಯಲ್ಲಿ ಬೋರ್’ವೆಲ್’ಗಳನ್ನು ತೆಗೆಸಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಇದು ನಗರ ವ್ಯಾಪ್ತಿಗೆ ಬರುವುದಿಲ್ಲ. ಗ್ರಾಮಾಂತರ ವ್ಯಾಪ್ತಿಗೆ ಬರುತ್ತದೆ ಎಂಬ ಹಾರಿಕೆ ಉತ್ತರ ಕೊಡುತ್ತಾರೆ. ಶುದ್ಧ ನೀರು ಕೊಡಲು ಏಕೆ ಅಂತರ ಬೇಕು. ಇದು ಬಿಜೆಪಿಯ ಅವಾಂತರವಷ್ಟೆ. ಹೀಗೆ ಮೂಲಭೂತ ಸೌಕರ್ಯ ಒದಗಿಸಲು ಟೆಂಡರ್ ಕರೆಯಬೇಕು. ಆದರೆ ಬಹುಶಃ ಶೇ.೪೦ರಷ್ಟು ಕಮಿಷನ್ ಕೊಟ್ಟು ಕೆಲಸ ಮಾಡಲು ಯಾವ ಗುತ್ತಿಗೆದಾರನೂ ಬಂದಿರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.