ಭಾರತದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯ ಆಗಿದೆ. ಸರ್ಕಾರ ರಚನೆಯೂ ಆಗಿದೆ. INDIA ಒಕ್ಕೂಟ ಭರ್ಜರಿಯಾಗಿ ಯಶಸ್ಸು ಸಾಧಿಸಿದೆ. ಆದರೂ NDA ಒಕ್ಕೂಟ ಸಣ್ಣ ಪ್ರಮಾಣದ ಮುನ್ನಡೆ ಪಡೆದುಕೊಂಡು ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಸೋಲಾಗಿದ್ದರೂ ಒಕ್ಕೂಟದ ನಾಯಕನಾಗಿ ಆಯ್ಕೆಯಾಗಿ ಮೂರನೇ ಬಾರಿಗೆ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ EVM ಮಷೀನ್ ಬಗ್ಗೆ ಹೆಚ್ಚು ಆರೋಪ ಮಾಡಿಲ್ಲ. NDA ಒಕ್ಕೂಟದ ಮುನ್ನಡೆಗೆ EVM ತಿರುಚಿದ್ದು ಕಾರಣ ಎಂದು ಹೇಳಿಲ್ಲ. ಆದರೆ ವಿದ್ಯುನ್ಮಾನ ಮತದಾನ ಪದ್ದತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಇವಿಎಂ ಹ್ಯಾಕ್ ಮಾಡ್ತಿದೆ ಅಂತ ಕಾಂಗ್ರೆಸ್‌ನವ್ರು ಮಾಡ್ತಿದ್ದ ಗಂಭೀರ ಆರೋಪಕ್ಕೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ದನಿಗೂಡಿಸಿದ್ದಾರೆ. ಎಲಾನ್ ಮಸ್ಕ್ ಹೇಳಿಕೆ ಭಾರತದ ಚುನಾವಣಾ ವ್ಯವಸ್ಥೆ ಬಗ್ಗೆ ಮರು ಚರ್ಚೆ ಹುಟ್ಟುಹಾಕುವಂತೆ ಮಾಡಿದೆ. ಭಾರತದಲ್ಲಿ ಇವಿಎಂ ಕುರಿತಂತೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದ ವೇಳೆಯಲ್ಲಿ ಪೋರ್ಟೋ ರಿಕೋದಲ್ಲಿ ನಡೆದ ಚುನಾವಣಾ ಅಕ್ರಮ ಪ್ರಸ್ತಾಪಿಸಿ ಎಲಾನ್ ಮಸ್ಕ್ ಇವಿಎಂ ವಿರುದ್ಧ ದನಿ ಎತ್ತಿದ್ದಾರೆ. ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಮಾಡಿರುವ ಈ ಒಂದು ಟ್ವೀಟ್ನಿಂದ ಭಾರತೀಯ ರಾಜಕಾರಣಿಗಳ ಮಧ್ಯೆ ಬಿಸಿಬಿಸಿ ಚರ್ಚೆ ಶುರುವಾಗಿದೆ.
ಭಾರತದ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರ ಬಳಕೆ ಮಾಡದಂತೆಯೂ ಎಲಾನ್ ಮಸ್ಕ್ ಸಲಹೆ ನೀಡಿದ್ದಾರೆ. ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ‘ನಾವು ವಿದ್ಯುನ್ಮಾನ ಮತ ಯಂತ್ರಗಳನ್ನು ನಿರ್ಮೂಲನೆ ಮಾಡಬೇಕಿದೆ. ಮಾನವರು ಅಥವಾ ಕೃತಕ ಬುದ್ದಿಮತ್ತೆ ತಂತ್ರಜ್ಞಾನವು ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದಲ್ಲಿ ಈ ಸಾಧ್ಯತೆ ಇದ್ದರೂ ಕೂಡಾ, ಚುನಾವಣಾ ಫಲಿತಾಂಶದಲ್ಲಿ ಅದು ದೊಡ್ಡ ಪರಿಣಾಮ ಬೀರಬಲ್ಲದು’ ಎಂದಿದ್ದಾರೆ. ಆದ್ರೆ ಎಲಾನ್ ಮಸ್ಕ್ ಸಲಹೆಗೆ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದು, ಮಸ್ಕ್ ವಾದದಲ್ಲಿ ಸತ್ಯಾಂಶ ಇಲ್ಲ ಎಂದಿದ್ದಾರೆ
ಮಸ್ಕ್ ಅವರ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಇವಿಎಂಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಅವು ಸುರಕ್ಷಿತವಾಗಿದೆ. ‘ಇವಿಎಂಗೆ ಬ್ಲೂ ಟೂತ್, ವೈಫೈ, ಇಂಟರ್‌ನೆಟ್ ಯಾವುದೇ ಸಂಪರ್ಕವಿಲ್ಲ. ನಿರ್ಮಾಣ ಹಂತದ ಪ್ರೋಗ್ರಾಮಿಂಗ್ ನಿಯಂತ್ರಣಗಳನ್ನು ಬದಲಿಸಲು ಸಾಧ್ಯವೇ ಇಲ್ಲ. ಭಾರತವು ಅತ್ಯಂತ ಸುರಕ್ಷಿತವಾದ ಇವಿಎಂ ಯಂತ್ರಗಳನ್ನ ನಿರ್ಮಿಸಿದೆ. ಒಂದು ವೇಳೆ ಎಲಾನ್ ಮಸ್ಕ್‌ಗೆ ಮಾಹಿತಿ ಬೇಕಿದ್ದರೆ ನಾವು ಅವರಿಗೆ ಪಾಠ ಮಾಡಲು ಸಂತಸಪಡುತ್ತೇವೆ’ ಎಂದಿದ್ದಾರೆ. ಆದರೆ ಎಲಾನ್ ಮಸ್ಕ್ ಮಾಡಿರುವ ಟ್ವೀಟ್ಗೆ ರೀಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಬಗ್ಗೆ ಗಂಭೀರವಾದ ಕಳವಳಗಳು ಉಂಟಾಗುತ್ತಿದೆ ಎಂದು ಮಸ್ಕ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಭಾರತದಲ್ಲಿ ಇವಿಎಂಗಳು ಕಪ್ಪು ಪೆಟ್ಟಿಗೆಯಾಗಿದೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶವಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಬಗ್ಗೆ ಗಂಭೀರವಾದ ಕಳವಳಗಳು ಉಂಟಾಗುತ್ತಿವೆ. ಸಂಸ್ಥೆಗಳು ಹೊಣೆಗಾರಿಕೆಯ ಕೊರತೆಯಿಂದ ಪ್ರಜಾಪ್ರಭುತ್ವವು ನೆಪವಾಗಿ ಪರಿಣಮಿಸುತ್ತದೆ ಎಂದಿದ್ದಾರೆ. ಎಲನ್ ಮಸ್ಕ್ ಮಾಡಿರೋ ಟ್ವೀಟ್ಗೆ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ ಬೆಂಬಲ ಸೂಚಿಸಿದ್ದಾರೆ. ಬಿಜೆಪಿಯವರ ಬೆಂಬಲಕ್ಕೆ ಕಾರಣವೇನು ಅಂತ ಅಖಿಲೇಶ್ ಯಾದವ್ ಎಕ್ಸ್ ಮೂಲಕ ಪ್ರಶ್ನೆ ಮಾಡಿದ್ದಾರೆ. ತಂತ್ರಜ್ಞಾನ ಎಂದರೆ ಸಮಸ್ಯೆಗಳನ್ನು ಪರಿಹರಿಸುವುದು. ಅದು ಸಮಸ್ಯೆಗಳಿಗೆ ಕಾರಣವಾದರೆ ಅದರ ಬಳಕೆಯನ್ನು ನಿಲ್ಲಿಸಬೇಕು. ಇಂದು ಜಗತ್ತಿನ ಹಲವು ಚುನಾವಣೆಗಳಲ್ಲಿ ಇವಿಎಂ ಟ್ಯಾಂಪರಿಂಗ್ ಆಗುವ ಆತಂಕ ವ್ಯಕ್ತವಾಗುತ್ತಿದ್ದು, ಇವಿಎಂ ಟ್ಯಾಂಪರಿಂಗ್ ಅಪಾಯದ ಬಗ್ಗೆ ವಿಶ್ವದ ಖ್ಯಾತ ತಂತ್ರಜ್ಞಾನ ತಜ್ಞರು ಬಹಿರಂಗವಾಗಿಯೇ ಬರೆಯುತ್ತಿರುವಾಗ ಇವಿಎಂ ಬಳಸಲೇಬೇಕೆಂಬ ಆಗ್ರಹಕ್ಕೆ ಕಾರಣವೇನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು. ಭವಿಷ್ಯದ ಎಲ್ಲಾ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಬಳಸಿ ನಡೆಸಬೇಕೆಂಬ ನಮ್ಮ ಬೇಡಿಕೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದಿದ್ದಾರೆ.
ಭಾರತದಲ್ಲಿ ಚುನಾವಣೆ ವಿಚಾರ ತಣ್ಣಗಾಗಿದೆ. ಆದರೆ ಇವಿಎಂ ಹ್ಯಾಕಿಂಗ್ ಅನ್ನೋದು ಪ್ರಜಾಪ್ರಭುತ್ವಕ್ಕೆ ಮಾರಕ ಅನ್ನೋದು ಎಲ್ಲರೂ ಒಪ್ಪಲೇಬೇಕಾದ ಸಂಗತಿ. ಬ್ಯಾಲೆಟ್ ಪೇಪರ್ ಬಳಕೆಯಿಂದ ಕೆಲಸಗಳು ಸ್ವಲ್ಪ ದುಬಾರಿ ಆಗುತ್ತಿತ್ತು ಅನ್ನೋದನ್ನು ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಸಮಾಜಕ್ಕೆ ಬ್ಯಾಲೆಟ್ ಪೇಪರ್ ಉತ್ತಮ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಕೂಡ ಬ್ಯಾಲೆಟ್ ಪೇಪರ್‌ನಲ್ಲೇ ಮತದಾನ ಮಾಡುತ್ತೆ ಅನ್ನೋದು ಗಮನಿಸಬೇಕಾದ ಸಂಗತಿ.
ಕೃಷ್ಣಮಣಿ