ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಗಂಭೀರ ಆರೋಪ ಮಾಡುತ್ತಲೇ ಇದ್ದು, 5ನೇ ಹಂತದ ಮತದಾನ ಪ್ರಮಾಣ ಘೋಷಣೆಯಲ್ಲಿ ಲೋಪ ಆಗಿದೆ ಎಂದು ಆರೋಪಿಸಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಾದ ಬಳಿಕ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳು, ಈಗ ಚುನಾವಣೆ ನಡೆಯುವ ವೇಳೆ ಸಾಕಷ್ಟು ಲೋಪ ಆಗುತ್ತಿದೆ. ಅಂಕಿ ಆಂಶವೇ ಬದಲಾಗುತ್ತಿರುವುದು ಹೇಗೆ ಎಂದು CPIM ಮಹಾರಾಷ್ಟ್ರ ಘಟಕ ಪ್ರಶ್ನೆ ಮಾಡಿತ್ತು.
ಕೇಂದ್ರ ಬಿಜೆಪಿ ಇವಿಎಂ ಹ್ಯಾಕ್ ಮಾಡುತ್ತದೆ ಎನ್ನುವ ಆರೋಪದ ಜೊತೆಗೆ ಕೇಂದ್ರ ಚುನಾವಣಾ ಆಯೋಗವನ್ನು ಬಿಜೆಪಿ ತನ್ನ ಕೈಗೊಂಬೆ ರೀತಿ ಮಾಡಿಕೊಂಡಿದೆ ಅಂತಾನೂ ಆರೋಪ ಮಾಡಿದ್ದರು. ಈ ಬಾರಿ ಕೇಂದ್ರ ಚುನಾವಣಾ ಆಯೋಗದ ಮೇಲೆ ಸಾಕ್ಷಿ ಸಮೇತ ಗಂಭೀರ ಆರೋಪ ಹೊರಿಸಿದ್ದು, 5 ಹಂತದ ಚುನಾವಣೆಯ ಮತದಾನದ ಪ್ರಮಾಣವನ್ನ ವ್ಯತ್ಯಾಸ ಮಾಡಿದ್ದಾರೆ. ಅದೂ ಅಲ್ಲದೆ ಚುನಾವಣಾ ಆಯೋಗ ತಡವಾಗಿ ಮತಸಂಖ್ಯೆಯನ್ನು ಹೆಚ್ಚಳ ಮಾಡ್ತಿದೆ ಎಂದೂ ಟೀಕಿಸಿದ್ದವು. ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ಕೊಡಬೇಕು ಅಂತಾ ಆಗ್ರಹ ಮಾಡಿದ್ದವು.
ದೇಶದಲ್ಲಿ 1ನೇ ಹಂತದಲ್ಲಿ ಮತದಾನ ನಡೆದಿದ್ದು ಏಪ್ರಿಲ್ 19ರಂದು ನಡೆದಿತ್ತು. ಆದರೆ ಮತದಾನ ಪ್ರಮಾಣವನ್ನು ECI ಪ್ರಕಟಿಸಿದ್ದು ಏಪ್ರಿಲ್ 30ಕ್ಕೆ. 11 ದಿನ ತಡವಾಗಿ ಶೇಕಡವಾರು ಮತದಾನ 66.14 ಅಂತ ಆಯೋಗ ಮಾಹಿತಿ ಕೊಟ್ಟಿತ್ತು. ಇನ್ನು 2ನೇ ಹಂತದ ಮತದಾನ ಏಪ್ರಿಲ್ 26ಕ್ಕೇ ಮುಗಿದರೂ ಏಪ್ರಿಲ್ 30ಕ್ಕೆ ಶೇಕಡವಾರು ಮತದಾನ 66.71 ಎಂದು ಹೇಳಿತ್ತು. 4 ದಿನ ತಡವಾಗಿ ಮಾಹಿತಿ ಕೊಟ್ಟಿತ್ತು ಚುನಾವಣಾ ಆಯೋಗ. ಇನ್ನು 3ನೇ ಹಂತದ ಮತದಾನ ಮೇ 7ಕ್ಕೆ ಆಗಿತ್ತು. ಆದ್ರೆ ಚುನಾವಣಾ ಆಯೋಗ ಅಧಿಕೃತವಾಗಿ ಏಪ್ರಿಲ್ 11ಕ್ಕೆ ಶೇಕಡವಾರು ಮತದಾನ : 65.68 ರಷ್ಟು ಅಂತ ಪ್ರಕಟಿಸಿತ್ತು.
4ನೇ ಹಂತದ ಮತದಾನ ಆಗಿದ್ದು ಮೇ 13ರಂದು, ಆದರೆ ಅಧಿಕೃತವಾಗಿ ಪ್ರಕಟಿಸಿದ್ದು ಮೇ 17ಕ್ಕೆ ಶೇಕಡ 69.16 ರಷ್ಟು ಮತದಾನ ಆಗಿದೆ ಎಂದು. 5ನೇ ಹಂತದ ಮತದಾನ ಮೇ 20 ರಂದು ನಡೆದಿತ್ತು. ಆದರೆ ಮೇ 23 ರಂದು ಶೇಕಡವಾರು ಮತದಾನ 62.2ರಷ್ಟು ಆಗಿದೆ ಅಧಿಕೃತವಾಗಿ ಪ್ರಕಟಿಸಿತ್ತು. ಇದನ್ನೇ ಇಂಡಿಯಾ ಒಕ್ಕೂಟ ಪ್ರಶ್ನೆ ಮಾಡಿತ್ತು. ಆಯೋಗ ನೀಡಿದ್ದ ಮತದಾರರ ದತ್ತಾಂಶದಲ್ಲಿ ವ್ಯತ್ಯಾಸ ಆಗಿದೆ. 1.7 ಕೋಟಿ ಮತದಾರರ ದತ್ತಾಂಶಗಳಲ್ಲಿ ವ್ಯತ್ಯಾಸ ಆಗಿರುವ ಬಗ್ಗೆ ಪ್ರಶ್ನೆ ಎತ್ತಿತ್ತು. ವೆಬ್‌ಸೈಟ್‌ನಲ್ಲಿ ಫಾರ್ಮ್ 17ಸಿ ತಡವಾಗಿ ಅಪ್‌ಲೋಡ್ ಆಗ್ತಿದೆ. 11 ದಿನ ತಡವಾಗಿ ಮತಪ್ರಮಾಣ ಪ್ರಕಟಿಸಲು ಕಾರಣ ಏನು ಎಂದು ಆಕ್ರೋಶ ಹೊರ ಹಾಕಿತ್ತು.
ಒಂದು ಕಡೆ ಚುನಾವಣಾ ಆಯೋಗಕ್ಕೆ ಸಾಲು ಸಾಲು ಪ್ರಶ್ನೆಗಳ ನಡುವೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿತ್ತು. ಅರ್ಜಿ ವಿಚಾರಣೆ ವೇಳೆ ಚುನಾವಣಾ ಆಯೋಗ ಕೋರ್ಟ್‌ಗೆ 224 ಪುಟಗಳ ಅಫಿಡೆವಿಟ್ ಸಲ್ಲಿಕೆ ಮಾಡಿದ್ದು, ಮತಗಟ್ಟೆವಾರು ಮತದಾನ ವೆಬ್‌ಸೈಟ್‌ಗೆ ಹಾಕುವುದಿಲ್ಲ. ಈ ರೀತಿಯ ದತ್ತಾಂಶ ನೀಡಿದ್ರೆ ದುರ್ಬಳಕೆ ಆಗುತ್ತದೆ. ಮತದಾರರ ಮೇಲೂ ರಾಜಕೀಯ ದುಷ್ಪರಿಣಾಮ ಎದುರಾಗುತ್ತದೆ. ಗೊಂದಲ ನಿರ್ಮಾಣ ಆಗಬಾರದು ಅಂತ ಮಾಹಿತಿ ನೀಡಿಲ್ಲ . ಫಾರ್ಮ್ 17ಸಿ ಬಹಿರಂಗ ಪಡಿಸುವ ಬಗ್ಗೆ ಎಲ್ಲಿಯೂ ನಿಯಮಗಳಿಲ್ಲ. 17ಸಿ ಮೂಲ ಪ್ರತಿಗಳನ್ನು ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ಮತದಾನ ಪ್ರಮಾಣ ತಡವಾಗ್ತಿರೋದ್ದಕ್ಕೆ ತಾಂತ್ರಿಕ ಸಮಸ್ಯೆ ಕಾರಣ ಎಂದಿದೆ. ಚುನಾವಣೆ ಮುಗಿದ 48 ಗಂಟೆಯಲ್ಲಿ ದತ್ತಾಂಶ ನೀಡಲು ಸೂಚಿಸಬೇಕು ಎನ್ನುವ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.