ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವದರಿಂದ ಈಗಾಗಲೇ ಪಕ್ಷ ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದೇವೆ. ತಳಮಟ್ಟದಿಂದ ಹಿಡಿದು ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲೆಡೆ ಪಕ್ಷ ಸಂಘಟಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು, ಮುಖಂಡರು ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆಗೂ ಮುಂಚೆ ಚುನಾವಣೆ ತಯಾರಿ ನಡೆಸುತ್ತಿದ್ದಾರೆ. ಕಾರ್ಯಕರ್ತರ ಕೊರತೆಯನ್ನು ನೀಗಿಸುವ ಕೆಲಸ ಮಾಡಿದ್ದೇವೆ. ಈ ರೀತಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ ಪಕ್ಷವೆಂದರೇ ಅದು ಬಿಜೆಪಿ ಪಕ್ಷ ಮಾತ್ರ. ತಳಮಟ್ಟದಲ್ಲಿ ಬಿಜೆಪಿ ಪಕ್ಷವನ್ನ ಬಲಪಡಿಸಿ, ಕಾರ್ಯಕರ್ತರನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದ್ದೇವೆ. ಈ ರೀತಿ ಕೆಲಸಗಳು ಬೇರೆ ಯಾವುದೆ ಪಕ್ಷಗಳಲ್ಲಿಯೂ ಇಲ್ಲ. ಸಣ್ಣ ಸಣ್ಣ ಸಭೆಗಳ ಮುಖಾಂತರ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿಯವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರಾ ಎಂಬ ವಿಚಾರವಾಗಿ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಎಂ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಕುರಿತು ಇದುವರೆಗೂ ಯಾವುದೇ ಚರ್ಚೆಗಳು ಬಿಜೆಪಿ ಪಕ್ಷದಲ್ಲಿ ಅಗಿಲ್ಲ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ಅವರ ಸ್ವಂತ ನಿರ್ಣಯ. ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಅವರಿಂದಲೆ ಸ್ಪಷ್ಟತೆ ಪಡೆದುಕೊಳ್ಳಬೇಕು ಎಂದರು.
ಇನ್ನು ವಿಧಾನಸಭೆ ಚುನಾವಣೆ ಕುರಿತು ಮಾತನಾಡಿ, ವಿಧಾನಸಭಾ ಚುನಾವಣೆಯು ನಿಗದಿತ ಸಮಯದಲ್ಲೆ ಆಗುತ್ತದೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಆಗುವುದಿಲ್ಲ ಎಂದರು. ಇದೇ ವೇಳೆ ಸಿಎಂ ಬದಲಾವಣೆ ಕುರಿತು ಪಕ್ಷದಲ್ಲಿ ಯಾವುದೆ ರೀತಿಯ ಚರ್ಚೆಗಳು ಅಗಿಲ್ಲ ಎಂದು ಸ್ಪಷ್ಟಪಡಿಸಿದರು.