ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ ಕರ್ ಗೆ ಜನರ ಬಗ್ಗೆ ಅಪಾರವಾದ ಕಾಳಜಿ, ಸದನದಲ್ಲಿ ಮಾತನಾಡುವ ಜ್ಞಾನ ಇವೆಲ್ಲವೂ ಲಕ್ಷ್ಮಿ ಹೆಬ್ಬಾಳ್‌ಕರ್ ಅವರಲ್ಲಿದೆ. ಇಂಥವರು ಮತ್ತೆ ವಿಧಾನಸಭೆಗೆ ಆಯ್ಕೆಯಾಗಿ ಬರಬೇಕು, ಈ ಕೆಲಸವನ್ನು ಕ್ಷೇತ್ರದ ಜನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಪಂತಬಾಳೇಕುಂದ್ರಿಯಲ್ಲಿ ಇಂದು ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕೊಡುವ ಸರ್ಟಿಫಿಕೇಟ್ ಲಕ್ಷ್ಮಿ ಹೆಬ್ಬಾಳ್‌ಕರ್ ಅವರಿಗೆ ಬೇಡ, ನೀವು ಕೊಡುವ ಸರ್ಟಿಫಿಕೇಟ್ ಅಷ್ಟೇ ಮುಖ್ಯವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇಂದ ಯಾರೇ ಲಕ್ಷ್ಮಿ ಹೆಬ್ಬಾಳ್‌ಕರ್ ಎದುರಾಳಿಯಾಗಿ ನಿಂತರೂ ಅವರ ಠೇವಣಿ ಹೋಗಬೇಕು ಅಂಥಾ ತೀರ್ಪನ್ನು ನೀವು ನೀಡಬೇಕು ಎಂದು ಕೋರಿದರು.
ರಾಜ್ಯದ ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ, ನುಡಿದಂತೆ ನಡೆದಿದ್ದೆವು. ಬಿಜೆಪಿ ಪಕ್ಷ ಜನರಿಗೆ 600 ಭರವಸೆಗಳನ್ನು ನೀಡಿ ಅದರಲ್ಲಿ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಇವರು ಜನರಿಗೆ ದ್ರೋಹ ಮಾಡಿದವರು, ಮೋಸ ಮಾಡಿದವರು, ಮತ್ತೆ ನಿಮ್ಮ ಬಳಿ ಮತ ಕೇಳುವ ನೈತಿಕತೆ ಬಿಜೆಪಿಯವರಿಗೆ ಇದೆಯಾ? ಎಂದು ಪ್ರಶ್ನಿಸಿದರು.

ಸಂಜಯ್ ಪಾಟೀಲ್ ಮುಖವನ್ನೇ ನೋಡಿಲ್ಲ
ಈ ಸಂಜಯ್ ಪಾಟೀಲ್ ಅವರ ಮುಖವನ್ನೇ ನಾನು ಇದುವರೆಗೆ ನೋಡಿಲ್ಲ. ಆದರೂ ಆ ಮನುಷ್ಯ ಶಿವಾಜಿ ಪ್ರತಿಮೆ ಮಾಡಲು ಸಿದ್ದರಾಮಯ್ಯನವರ ಬಳಿ 50 ಲಕ್ಷ ಕೇಳಿದ್ದೆ, ಅವರು ಮುಖ್ಯಮಂತ್ರಿಯಾಗಿರುವಾಗ ಕೊಡಲಿಲ್ಲ ಎಂದು ಸುಳ್ಳು ಹೇಳಿದ್ದಾರೆ. ನಾಚಿಕೆಯಾಗಲ್ವೇನ್ರಿ ಅವನಿಗೆ? ಕೇಳಿದ್ರೆ ನೂರಕ್ಕೆ ನೂರು ಅನುದಾನ ಕೊಡುತ್ತಿದ್ದೆ. ನನಗೂ ಶಿವಾಜಿ ಮಹರಾಜರ ಬಗ್ಗೆ ಅಪಾರವಾದ ಗೌರವ ಇದೆ, ನನ್ನತ್ರ ಬಂದೇ ಇರಲಿಲ್ಲ ಗಿರಾಕಿ, ಈಗ ಸುಳ್ಳು ಹೇಳಿಕೊಂಡು ತಿರುಗಾಡುತ್ತಾ ಇದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ರಕ್ತ ಕುಡಿಯುತ್ತಿದ್ದಾರೆ
ಇಂದಿನಿಂದ ಸಿಲಿಂಡರ್ ಬೆಲೆ ಮತ್ತೆ 50ರೂ. ಜಾಸ್ತಿಯಾಗಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸಿಲಿಂಡರ್ ಬೆಲೆ 414ರೂ. ಇತ್ತು, ಇಂದು 1200 ರೂ. ಗೆ ಬಂದು ನಿಂತಿದೆ. ಡಿಎಪಿ ಬೆಲೆ 50 ಕೆ.ಜಿ ಚೀಲದ ಮೇಲೆ 1,000 ರೂ. ಹೆಚ್ಚಾಗಿದೆ. ಬೆಳಗಾವಿಗೆ ಬಂದಿದ್ದ ವೇಳೆ ನರೇಂದ್ರ ಮೋದಿ ಅವರು ನಮ್ಮ ಸರ್ಕಾರ ರೈತರಿಗೆ 6,000 ರೂಪಾಯಿ ಕೊಟ್ಟಿದೆ ಎಂದು ಹೇಳಿದ್ರು, ರೈತರಿಗೆ ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ. ಮಜ್ಜಿಗೆ, ಜಾಲು, ಮೊಸರು, ಪೆನ್ನು, ಪೆನ್ಸಿಲ್ ಹೀಗೆ ಎಲ್ಲದರ ಮೇಲೆ ಜಿಎಸ್’ಟಿ ಹಾಕಿ ಜನರ ರಕ್ತ ಕುಡಿಯುತ್ತಿದ್ದಾರೆ ಎಂದು ಗುಡುಗಿದರು.
ಅಡ್ವಾಣಿ, ಮುರುಳಿ ಮನೋಹರ ಜೋಷಿ ಅವರನ್ನು ಮೂಲೆಗುಂಪು ಮಾಡಿದ್ದು ಯಾರು ?
ಮೋದಿ ಅವರು ಕರ್ನಾಟಕಕ್ಕೆ ಬಂದು ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡುತ್ತಿದೆ ಎಂದರು. ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಷಿ ಅವರನ್ನು ಮೂಲೆಗುಂಪು ಮಾಡಿದ್ದು ಯಾರು ಮೋದಿಜಿ? ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕಿತ್ತುಹಾಕಿ, ಪಾಪ ಅವರು ಕಣ್ಣೀರು ಹಾಕುವಂತೆ ಮಾಡಿದ್ದು ಇದೇ ಮೋದಿ ಮತ್ತು ಅಮಿತ್ ಶಾ ಅವರಲ್ವಾ? ಎಂದರು.

ಚುನಾವಣೆಯಿಂದಾಗಿ ರಾಜ್ಯಕ್ಕೆ ಬರುತ್ತಿರುವ ಮೋದಿ
ಮೋದಿ ಅವರು ಬೆಳಗಾವಿಯಲ್ಲಿ ಬಂದು ರೋಡ್ ಶೋ ಮಾಡಿದ್ರು, ಬೆಳಗಾವಿಗೆ ಅವರು ಏನು ಕೊಟ್ಟಿದ್ದಾರೆ ಹೇಳಲಿ. ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡಿದ್ರಾ? ದುಡ್ಡು ಕೊಟ್ಟು ಜನ ಕರೆದುಕೊಂಡು ಬಂದು ರೋಡ್ ಶೋ ಮಾಡಿದ್ರೆ ಬಡವರಿಗೇನು ಉಪಯೋಗ? ಕೊರೊನಾ ಬಂದಾಗ ಬೆಡ್, ಆಕ್ಸಿಜನ್ ಕೊಡಲಿಲ್ಲ ಇದರಿಂದ ಲಕ್ಷಾಂತರ ಜನ ಸತ್ತು ಹೋದರು. ಪ್ರವಾಹ ಬಂದಾಗ, ಕೊರೊನಾ ಬಂದಾಗ ರಾಜ್ಯಕ್ಕೆ ಬರದೆ ಈಗ ಚುನಾವಣೆ ಇದೆ ಎಂದು ವಾರಕ್ಕೊಮ್ಮೆ ಬರುತ್ತಿದ್ದಾರೆ.
ಜನ ನೆಮ್ಮದಿಯಿಂದ ಬದುಕಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು
ನಾವು ರಾಜ್ಯದ ಜನರಿಗೆ 3 ಭರವಸೆಗಳನ್ನು ನೀಡಿದ್ದೇವೆ. ಮೊದಲನೆಯದು ಪ್ರತಿ ಬಡಕುಟುಂಬದ ಸದಸ್ಯನಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ರಾಜ್ಯದ ಪ್ರತೀ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ ಮತ್ತು ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ. ರಾಜ್ಯದ ಜನ ನೆಮ್ಮದಿಯಿಂದ ಬದುಕುವಂತಾಗಲು, ಜನ ಅಣ್ಣ ತಮ್ಮಂದಿರಂತೆ ಬದುಕಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂದು ಸಿದ್ದರಾಮಯ್ಯ ಹೇಳಿದರು.


