
ಬೆಂಗಳೂರು: ವೃದ್ಧೆಯ ಕೊಂದು ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ಉತ್ತರಹಳ್ಳಿಯ ನ್ಯೂ ಮಿಲಿನಿಯಂ ಸ್ಕೂಲ್ ರಸ್ತೆಯಲ್ಲಿ ನಡೆದಿದೆ.. ಮನೆಯಲ್ಲಿ ವಾಸವಿದ್ದ 65 ವರ್ಷದ ಶ್ರೀಲಕ್ಷ್ಮಿ ಮೃತ ದುರ್ದೈವಿ.

ನಿನ್ನೆ (ಮಂಗಳವಾರ) ಬೆಳಿಗ್ಗೆ 9.30 ಕ್ಕೆ ಕೆಲಸಕ್ಕೆ ಹೋಗಿದ್ದ ಪತಿ ಅಶ್ವತ್ಥ ನಾರಾಯಣ್ ಮಧ್ಯಾಹ್ನ 2 ಗಂಟೆಗೆ ಪತ್ನಿಗೆ ಕರೆ ಮಾಡಿದ್ದಾರೆ. ಆದರೆ ಪತ್ನಿ ಶ್ರೀಲಕ್ಷ್ಮಿ ಕರೆ ಸ್ವೀಕರಿಸಿಲ್ಲ. ಬಳಿಕ ಸಂಜೆ ಸುಮಾರು 5.30 ಕ್ಕೆ ಮನೆ ಬಾಡಿಗೆದಾರನಿಗೆ ಕರೆ ಮಾಡಿದ್ದ ಅಶ್ವತ್ಥ ನಾರಾಯಣ, ನನ್ನ ಹೆಂಡತಿ ಶ್ರೀಲಕ್ಷ್ಮೀ ಮದ್ಯಾಹ್ನ ದಿಂದ ಫೋನ್ ತೆಗೆಯುತ್ತಿಲ್ಲ, ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದಾರೆ. ಈ ವೇಳೆ ತಾನು ಸಹ ಹೊರಗಡೆ ಇರೋದಾಗಿ ಹೇಳಿದ್ದ ಫಣಿರಾಜ್, ತನ್ನ ಹೆಂಡತಿಗೆ ವಿಚಾರ ತಿಳಿಸಿದ್ದ.

ಸಂಜೆ 6ಕ್ಕೆ ಫಣಿರಾಜ್ ಅಶ್ವತ್ಥ ನಾರಾಯಣ ಗೆ ಕರೆ ಮಾಡಿ,
ನಿಮ್ಮ ಹೆಂಡತಿ ಶ್ರೀಲಕ್ಷ್ಮಿ ನೆಲದ ಮೇಲೆ ಬಿದ್ದಿದ್ದಾರೆ, ಉಸಿರಾಡುತ್ತಿಲ್ಲವೆಂದು ಹೇಳಿದಾಗ ಪತಿ ಮನೆ ಬಳಿ ಬಂದಿದ್ದಾರೆ. ಬಳಿಕ ಬೆಡ್ ಮೇಲೆ ಮಲಗಿಸಿ ನೋಡಿದಾಗ ಕುತ್ತಿಗೆಯ ಬಲಭಾಗ, ತುಟಿಯ ಮೇಲೆ ಗಾಯಗಳಾಗಿತ್ತು. ಹಾಗೆ ಮುಖದ ಮೇಲೆ ಪರಚಿತ ಗಾಯಗಳು ಸಹ ಇತ್ತು. ಅಷ್ಟಲ್ಲದೇ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಾಣೆಯಾಗಿತ್ತು.

ಮೇಲ್ನೋಟಕ್ಕೆ ಕಳ್ಳತನಕ್ಕೆ ಬಂದ ವ್ಯಕ್ತಿ ವೃದ್ದೆಯನ್ನ ಕೊಲೆ ಮಾಡಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದು ಗೊತ್ತಾಗಿದೆ. ಬಳಿಕ ಪತಿ ಅಶ್ವತ್ಥ್ ನಾರಾಯಣ‌್ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದರು.
ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೊಲೆ ಮತ್ತು ದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ












