ಅರಣ್ಯ ದ ಸುತ್ತ ಮುತ್ತ ಇರುವ ಗ್ರಾಮಗಳವರಿಗೆ ಕಾಡು ಪ್ರಾಣಿಗಳ ಕಾಟ ತಪ್ಪಿದ್ದಲ್ಲ. ಅದರಲ್ಲು ನಾಗರಹೊಳೆ ಅಭಯಾರಣ್ಯದ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಕಳೆದ ಕೆಲ ತಿಂಗಳುಗಳಿಂದ ಹುಲಿಯ ಕಾಟ ಅಪರಿಮಿತವಾಗಿದೆ. ಕಳೆದ ಮೂರು ತಿಂಗಳಿನಿಂದ ಸುಮಾರು 30ಕ್ಕೂ ಹೆಚ್ಚು ಜಾನವಾರುಗಳು ಹುಲಿ ದಾಳಿಗೆ ಬಲಿಯಾಗಿವೆ. ಅಷ್ಟೇ ಅಲ್ಲ ಮೂರು ಅಮೂಲ್ಯ ಜೀವಗಳು ಬಲಿಯಾಗಿವೆ. ಸೋಮವಾರ ಬೆಳಿಗ್ಗೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ತೋಟದ ಕೆಲಸ ಮಾಡುತಿದ್ದ ಕೆಂಚ (52) ಹಾಗೂ ಅವರ ಮೊಮ್ಮಗ ರಂಗಸ್ವಾಮಿ(8) ಮೇಲೆ ಹುಲಿ ದಾಳಿ ಮಾಡಿದೆ. ದಾಳಿಯ ಭೀಕರತೆಗೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕೆಂಚ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನತದೃಷ್ಟ ಕುಟುಂಬ ಕೂಲಿ ಆಸೆಗೆ ನಂಜನಗೂಡಿನಿಂದ ವಲಸೆ ಬಂದಿದ್ದು ಕರುಳ ಕುಡಿಯನ್ನು ಕಳೆದುಕೊಂಡಿರುವ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಹುಲಿಯ ಬೇಟೆಗೆ ಕಳೆದ 20 ದಿನಗಳಲ್ಲಿ ಮೂರು ವ್ಯಕ್ತಿಗಳು ಸೇರಿದಂತೆ 12 ಹಸುಗಳು ಬಲಿಯಾಗಿವೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗಾಗಿ ಹರಸಾಹಸ ಪಡುತ್ತಿದ್ದಾರೆ. ಇಂದು ಬೆಳಿಗ್ಗೆ ತೋಟದಲ್ಲಿ ಕೆಲಸ ಮಾಡುತಿದ್ದ ಸಂದರ್ಭ ಕೆಂಚ ಎಂಬವರನ್ನು ಗಂಭಿರ ಗಾಯಗೊಳಿಸಿದ ಹುಲಿ ಜತೆಯಲ್ಲೇ ಇದ್ದ ಮೊಮ್ಮಗನನ್ನು ಬಲಿ ಪಡೆದಿದೆ. ಈ ವಿಚಾರ ತಿಳಿಯುತಿದ್ದಂತೆ ನೂರಾರು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಕಳೆದ ಫೆಬ್ರುವರಿ 19 ಮತ್ತು 20 ರಂದು ಇಬ್ಬರನ್ನು ಹುಲಿ ಕೊಂದು ಹಾಕಿತ್ತು. ಕೂಡಲೇ 21 ರಿಂದಲೇ ಸುಮಾರು 150 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಅಧಿಕಾರಿಗಳು ಸ್ಥಳದಲ್ಲೇ ಬಿಡಾರ ಹೂಡಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತಿದ್ದಾರೆ.

ನಂತರ ಒಂದು ನಿತ್ರಾಣಗೊಂಡಿದ್ದ ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಜಾನುವಾರುಗಳ ಮೇಲೆ ಹುಲಿ ಧಾಳಿ ನಿಲ್ಲದೆ ಮತ್ತೆಯೂ 5-6 ಜಾನುವಾರುಗಳು ಬಲಿಯಾಗಿದ್ದವು. ನಂತರ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನು ಆಧರಿಸಿ ಗ್ರಾಮಸ್ಥರಿಗೆ ಉಪಟಳ ನೀಡುತ್ತಿರುವ ಹುಲಿಯು 12 ವರ್ಷ ಪ್ರಾಯದ ಗಂಡು ಹುಲಿ ಎಂದು ಪತ್ತೆ ಹಚ್ಚಲಾಗಿದೆ. ಅರಣ್ಯ ಇಲಾಖೆ ಹುಲಿ ಸೆರೆಗೆ ಸಾಕಾನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತಿದೆಯಾದರೂ ಹುಲಿ ಸೆರೆ ಸಾಧ್ಯವಾಗಿಲ್ಲ. ಸೆರೆ ಹಿಡಿಯಲು ಸಾಧ್ಯವಾಗದ್ದಕ್ಕೆ ಅರಣ್ಯ ಇಲಾಖೆಯ ವಿರುದ್ದ ಜನರು ಅಸಮಾಧಾನಗೊಂಡಿದ್ದರು. ಮತ್ತೊಂದೆಡೆ ಬೆಲೆ ಬಾಳುವ ಜಾನುವಾರುಗಳನ್ನು ಹುಲಿ ಕೊಂದು ಹಾಕುತ್ತಿದೆ. ಅರಣ್ಯ ಇಲಾಖೆ ಹುಲಿಯನ್ನು ಆಕರ್ಷಿಸಲು ಮೈಸೂರು ಮೃಗಾಲಯದಿಂದ ಹೆಣ್ಣು ಹುಲಿಯ ಮಲ ಮೂತ್ರವನ್ನೂ ಸಂಗ್ರಹಿಸಿ ಸಿಂಪಡಣೆ ಮಾಡಿತ್ತು. ಆದರೂ ಸೆರೆ ಸಾಧ್ಯವಾಗದಿರವುದು ಅರಣ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಇಂದು ಹುಲಿ ದಾಳಿ ಸುದ್ದಿ ತಿಳಿಯುತಿದ್ದಂತೆಯೇ ಅರಣ್ಯ ಸಂರಕ್ಷಣಾಧಿಕಾರಿ ಟಿ ಹೀರಾ ಲಾಲ್ ಸ್ಥಳಕ್ಕೆ ಧಾವಿಸಿದ್ದು ಗ್ರಾಮಸ್ಥರನ್ನು ಸಮಾಧಾನಿಸುತಿದ್ದಾರೆ. ಸ್ಥಳದಲ್ಲಿ ಪೋಲೀಸರೂ ಬಿಗಿ ಬಂದೋ ಬಸ್ತ್ ಮಾಡಿದ್ದು ಹುಲಿ ಸೆರೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಗ್ರಾಮಸ್ಥರ ಪ್ರತಿಭಟನೆಗೆ ಬೆದರಿದ ತಾಲ್ಲೂಕು ಆಡಳಿತ ಇಂದು ಮದ್ಯಾಹ್ನ 12 ಘಂಟೆಯಿಂದ ಹುದಿಕೇರಿ ಹೋಬಳಿಯಲ್ಲಿ ಸೆಕ್ಷನ್ 144 ನ್ನು ಜಾರಿ ಮಾಡಿದೆ. ಗ್ರಾಮಸ್ಥರು ಹುಲಿಯನ್ನು ಕೊಲ್ಲಬೇಕೆಂದು ಒತ್ತಾಯಿಸುತಿದ್ದಾರೆ. ಈಗ ಶ್ರೀಮಂಗಲದಿಂದ ಕೇರಳಕ್ಕೆ ತೆರಳುವ ಅಂತರ ರಾಜ್ಯ ಹೆದ್ದಾರಿಯನ್ನು ತಡೆದು ಗ್ರಾಮಸ್ಥರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತಿದ್ದಾರೆ. ಇದರಿಂದಾಗಿ ಗೋಣಿಕೊಪ್ಪ – ಕೇರಳ ರಸ್ತೆ ಬಂದ್ ಆಗಿದೆ. ಇದೀಗ ಬೆಂಗಳೂರಿನ ವನ್ಯ ಜೀವಿ ತಜ್ಷ ಜಿ ಸುನೀಲ್ ಅವರಿಗೆ ಹುಲಿ ಸೆರೆ ಕಾರ್ಯಾಚರಣೆಯ ನೇತೃತ್ವ ವಹಿಸಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಹುಲಿ ಸೆರೆಗೆ ಪ್ರಯತ್ನಿಸುತಿದ್ದಾರೆ. ನರಹಂತಕ ಗಂಡು ಹುಲಿಯು ಹುದಿಕೇರಿ, ಬೊಳ್ಳೂರು, ಟಿ ಶೆಟ್ಟಿಗೇರಿ ಗ್ರಾಮದ ನಡುವೆ ಓಡಾಡುತಿದ್ದು ಹಸಿವೆಯಿಂದ ಜಾನುವಾರುಗಳನ್ನು ಕೊಂದು ತಿನ್ನುತ್ತಿದೆ. ಇಂದು ಬೆಳಿಗ್ಗೆ ಕೂಡ ಹುಲಿಯು ಎರಡು ಜಾನುವಾರಗಳ ಮೇಲೆ ಧಾಇ ನಡೆಸಿ ಒಂದು ಜಾನವಾರನ್ನು ಕೊಂದು ಹಾಕಿದೆ. ಜನರ ಅಕ್ರೋಶವೂ ಕಟ್ಟೆ ಒಡೆಯುತ್ತಿದೆ. ಇದೀಗ ಗ್ರಾಮಸ್ಥರೇ ಕೋವಿ ಬಳಸಿ ಹುಲಿಯನ್ನು ಕೊಲ್ಲಲೂ ಮುಂದಾಗುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಜನರೆ ಕಾನೂನು ಕೈಗೆತ್ತಿಕೊಂಡು ಹುಲಿ ಕೊಲ್ಲುವಂತೆ ಕರೆ ನೀಡಲಾಗುತ್ತಿದೆ. ಅರಣ್ಯ ಇಲಾಖೆಯು ಶೀಘ್ರದಲ್ಲಿ ಹುಲಿ ಸೆರೆ ಹಿಡಿಯದಿದ್ದರೆ ಗ್ರಾಮಸ್ಥರು ತಮ್ಮ ಪ್ರಾಣ, ಜಾನುವಾರುಗಳನ್ನು ಉಳಿಸಿಕೊಳ್ಳಲು ಇದೊಂದೇ ಕೊನೇ ಮಾರ್ಗವಾಗಿದೆ.











