ಬೆಂಗಳೂರು ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಸುವ ಯೋಜನೆಯಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 90ಕ್ಕೂ ಹೆಚ್ಚು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 5 ವಲಯಗಳ ಪೈಕಿ ರಾಜರಾಜೇಶ್ವರಿನಗರ, ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳ ವ್ಯಾಪ್ತಿಯ 66 ವಾರ್ಡ್ ಗಳಲ್ಲಿ 2016-17 ಮತ್ತು 2017-18 ರ ಸಾಲಿನಲ್ಲಿ ಸುಮಾರು 8,426 ಕೊಳವೆ ಬಾವಿಗಳನ್ನು (ಒಟ್ಟು 9,588) ಕೊರೆಸಿರುವುದದಾಗಿ ಮತ್ತು 697 ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಒಟ್ಟು 976) ನಿರ್ಮಾಣ ಮಾಡಿರುವುದಾಗಿ, ಸುಮಾರು 970 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿತ್ತು.
ಈ ಬಗ್ಗೆ ಪರಿಶೀಲಿಸಿದಾಗ ಅಧಿಕಾರಿಗಳು ನೀಡಿದ್ದ ಮಾಹಿತಿಯಲ್ಲಿರುವಂತೆ ಶೇಕಾಡಾ 75% ರಷ್ಟು ಸುಳ್ಳು ಮಾಹಿತಿಯನ್ನು ನೀಡಿರುವ ಅಂಶ ಬೆಳಕಿಗೆ ಬಂದಿತ್ತು. ಈ ಕುರಿತಂತೆ 2019ರಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದಾಖಲೆ ಸಮೇತ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ದೂರು ದಾಖಲಿಸಿದ್ದರು.
ನೂರಾರು ಕೋಟಿ ರೂಪಾಯಿಗಳ ಅವ್ಯವಹಾರವಾಗಿರುವ ಕಾರಣ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹದಳವು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿತ್ತು. ಆನಂತರ ಹಗರಣದಲ್ಲಿ ಭಾಗಿಯಾಗಿರುವ ಕಾರ್ಯ ನಿರ್ವಹಿಸಿರುವ ಜಂಟಿ ಆಯುಕ್ತರು(JC), ಮುಖ್ಯ ಅಭಿಯಂತರರು(CE), ಕಾರ್ಯಪಾಲಕ ಅಭಿಯಂತರರು(EE), ಸಹಾಯಕ ಕಾರ್ಯಪಾಲಕ ಅಭಿಯಂತರರು (AEE) ಸೇರಿದಂತೆ ಒಟ್ಟು 90 ಕ್ಕೂ ಹೆಚ್ಚು ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಗಳನ್ನು ಜಾರಿ ಮಾಡಿತ್ತು. ಹೀಗಾಗಿ ಕಳೆದ 15 ದಿನಗಳಿಂದ 90ಕ್ಕೂ ಹೆಚ್ಚು ಅಧಿಕಾರಿಗಳ ವಿಚಾರಣೆ ನಡೆಯುತ್ತಿದೆ.