ಹತ್ರಾಸ್ ಗ್ಯಾಂಗ್‌ರೇಪ್ ಪ್ರಕರಣದ ಹೆಸರಿನಲ್ಲಿ ಕೋಮುಗಲಭೆ ಹಾಗೂ ಭಯವನ್ನು ಹರಡಲು ಮನಿ ಲಾಂಡರಿಂಗ್ ನಡೆಸಿತ್ತು ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಹಾಗೂ ಅದರ ವಿದ್ಯಾರ್ಥಿ ಘಟಕ ಸಿಎಫ್‌ಐ ವಿರುದ್ಧ ಮೊದಲ ಚಾರ್ಜ್‌ಶೀಟ್ ಸಲ್ಲಿಸಿದೆ.
ಜಾರಿ ನಿರ್ದೇಶನಾಲಯವು ಪಿಎಫ್‌ಐಯನ್ನು 2018 ರಿಂದ ಪರಿಶೀಲಿಸುತ್ತಿತ್ತು. ಸಿಎಎ ವಿರೋಧಿ ಹೋರಾಟ ಹಾಗೂ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಇಸ್ಲಾಮಿಕ್ ಸಂಘಟನೆಗಳ ಪಾತ್ರದ ಕುರಿತಂತೆ ಇಡಿ ಇತ್ತೀಚೆಗೆ ವಿಚಾರಣೆ ನಡೆಸಲು ಪ್ರಾರಂಭಿಸಿತ್ತು.
ಲಕ್ನೋದಲ್ಲಿನ ವಿಶೇಷ PMLA ನ್ಯಾಯಾಲಯಕ್ಕೆ ಮನಿ ಲಾಂಡರಿಂಗ್ ತಡೆ ಕಾಯ್ದೆಯ (PMLA) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಅನ್ನು ಬುಧವಾರ ಸಲ್ಲಿಸಲಾಗಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ(CFI) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎ.ರವೂಫ್ ಶೆರಿಫ್, ಸಿಎಫ್‌ಐ ರಾಷ್ಟ್ರೀಯ ಖಜಾಂಚಿ ಅತಿಕೂರ್ ರಹಮಾನ್, ದೆಹಲಿ ಸಿಎಫ್‌ಐ ಪ್ರಧಾನ ಕಾರ್ಯದರ್ಶಿ ಮಸೂದ್ ಅಹ್ಮದ್, ಸಂಘಟನೆ ಸದಸ್ಯ ಮೊಹಮ್ಮದ್ ಆಲಂ ಹಾಗೂ ಪತ್ರಕರ್ತ ಸಿದ್ದೀಕ್ ಕಪ್ಪನ್ ಹೆಸರನ್ನೂ ಸೇರಿಸಲಾಗಿದೆ. ನ್ಯಾಯಾಲಯವು ಇಡಿ ಚಾರ್ಜ್‌ಶೀಟ್ ಆಧರಿಸಿ ಐದು ಆರೋಪಿಗಳಿಗೆ ಮಾರ್ಚ್ 18ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.
ಉತ್ತರ ಪ್ರದೇಶ ಹತ್ರಾಸ್‌ನಲ್ಲಿ ನಡೆದ ಭೀಕರ ಅತ್ಯಾಚಾರದ ವರದಿಗಾರಿಕೆಗೆ ತೆರಳುತ್ತಿದ್ದಾಗ ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗೂ ಅವರೊಂದಿಗೆ ಇತರೆ ಮೂವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.