ನವದೆಹಲಿ: ರಿಲಯನ್ಸ್ ಗ್ರೂಪ್ ಕಂಪನಿಗಳ ವಿರುದ್ಧ ದಾಖಲಾಗಿರುವ ₹40,000 ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಮಾಜಿ ನಿರ್ದೇಶಕ ಹಾಗೂ ಹಿರಿಯ ಅಧಿಕಾರಿಯಾಗಿದ್ದ ಪುನೀತ್ ಗರ್ಗ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿರುವ ಮಾಹಿತಿ ಹೊರಬಿದ್ದಿದೆ.

ಪುನೀತ್ ಗರ್ಗ್ ಅವರನ್ನು ಇ.ಡಿ. ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದು, ದೆಹಲಿಯ ಹಣಕಾಸು ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯವು ಅವರನ್ನು 9 ದಿನಗಳ ಇ.ಡಿ. ಕಸ್ಟಡಿಗೆ ಒಪ್ಪಿಸಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಗ್ ಅವರ ಪತ್ನಿಯ ಹೆಸರಿನಲ್ಲಿ ಇರುವ ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಬುಧವಾರವೇ ತಿಳಿಸಿತ್ತು. ಇ.ಡಿ. ಆರೋಪದ ಪ್ರಕಾರ, ಪುನೀತ್ ಗರ್ಗ್ ಅವರು 2001ರಿಂದ 2005ರ ಅವಧಿಯಲ್ಲಿ RCOMನಲ್ಲಿ ಹಿರಿಯ ವ್ಯವಸ್ಥಾಪಕ ಹಾಗೂ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಪಡೆದ ಸಾಲದ ಮೊತ್ತವನ್ನು ವಿದೇಶಿ ಸಂಸ್ಥೆಗಳು ಹಾಗೂ ಶೆಲ್ ಕಂಪನಿಗಳ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ದೂರಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.














