ಅಕ್ರಮ ಹಣ ವರ್ಗಾವಣೆ ಸಂಬಂಧ ಛತ್ತೀಸ್‌ಘರ್ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಚೇರಿಗೆ ನಿಯೋಜನೆಗೊಂಡಿರುವ ಉಪಕಾರ್ಯದರ್ಶಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
ಬಂಧಿತ ಅಧಿಕಾರಿ ಹೆಸರು ಸೌಮ್ಯ ಚೌರಾಸಿಯಾ ಎಂದು ತಿಳಿದು ಬಂದಿದೆ. ಕಲ್ಲಿದ್ದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಸಂಬಂಧ ಸರ್ಕಾರಿ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರದ ಪ್ರಬಲ ಅಧಿಕಾರಿಯಾಗಿರುವ ಚೌರಾಸಿಯಾರನ್ನು ಕೆಲ ಘಂಟೆಗಳ ಇಡಿ ವಿಚಾರಣೆ ನಡೆಸಿದ ನಂತರ ಹಣ ವರ್ಗಾವಣೆ ತಡೆ ಕಾಯ್ದೆ(PMLA) ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದೆ.

ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳನ್ನು ಒಳಗೊಂಡ ಕಾರ್ಟೆಲ್‌ನಿಂದ ಪ್ರತಿ ಟನ್ ಕಲ್ಲಿದ್ದಲಿಗೆ 25 ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತಿತ್ತು ಎಂದು ಹೇಳಲಾಗಿತ್ತು. ಈ ಮೊದಲು ಇಡಿ ಅಧಿಕಾರಿಗಳು ಅಕ್ಟೋಬರ್ ತಿಂಗಳಲ್ಲಿ ಹಿರಿಯ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯಿ ಮತ್ತು ಇಬ್ಬರನ್ನು ಪ್ರಕರಣ ಸಂಬಂಧ ಬಂಧಿಸಿತ್ತು.