
ಮುಡಾ ಕೇಸ್‌ನಲ್ಲಿ ಇ.ಡಿ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ಸಚಿವ ಬೈರತಿ ಸುರೇಶ್ ಪರವಾಗಿ ಧಾರವಾಡ ಹೈಕೋರ್ಟ್ ನಲ್ಲಿ ಸಿ.ವಿ ನಾಗೇಶ್ ವಾದ ಮಂಡಿಸಿದ್ರು. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಸೈಟ್ ವಾಪಸ್ ಕೊಟ್ಟಿದ್ದಾರೆ. ಅದನ್ನ ಮುಡಾ ಆಯುಕ್ತರು ಪಡೆದುಕೊಂಡಿದ್ದಾರೆ. ಇದರಲ್ಲಿ ಬೈರತಿ ಸುರೇಶ್ ಅವರ ಪಾತ್ರವೇ ಇಲ್ಲ ಎಂದಿದ್ದಾರೆ.

ಸಿ.ವಿ ನಾಗೇಶ್ ವಾದಕ್ಕೆ ಪ್ರತಿಯಾಗಿ ಇಡಿ ಪರ ಅರವಿಂದ ಕಾಮತ್ ವಾದ ಮಂಡಿಸಿದ್ದು. ಜಾರಿ ನಿರ್ದೇಶನಾಲಯ ಅಧಿಕಾರಿಗಳ ತನಿಖೆ ವೇಳೆ ಹಲವು ವಿಚಾರ ಪತ್ತೆಯಾಗಿದೆ. ಅಪರಾಧ ಇರೋದಕ್ಕೆ ಇಡಿ ಪ್ರಕರಣ ದಾಖಲಿಸಿದೆ ಎಂದಿರುವ ವಕೀಲರು, ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿಯೊಂದನ್ನು ಸಲ್ಲಿಸಿದ್ದಾರೆ. ನಾವು ತನಿಖೆಯ ಮಧ್ಯೆ ಭಾಗದಲ್ಲಿದ್ದೇವೆ. ತನಿಖೆ ಇನ್ನೂ ಆಗಬೇಕಿದೆ. ಹೀಗಾಗಿ ಸಿಎಂ ಪತ್ನಿ ಪಾರ್ವತಿ ಸೇರಿದಂತೆ ಇತರೆ ಆರೋಪಿಗಳ ವಿಚಾರಣೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಪೀಠ ಆದೇಶ ಕಾಯ್ದಿರಿಸಿದೆ. ಇಡಿ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಆದೇಶ ಬರುವ ತನಕ ಈ ಹಿಂದೆ ನೀಡಿದ್ದ ರಕ್ಷಣೆಯನ್ನು ವಿಸ್ತರಣೆ ಮಾಡಲಾಗಿದೆ. ಇ.ಡಿ ವಿಚಾರಣೆಯಿಂದ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಮುಂದುವರಿಕೆ ಮಾಡಲು ಸೂಚಿಸಲಾಗಿದೆ.

ಮುಡಾ ED ಕೇಸ್ ಸಮನ್ಸ್ ಅರ್ಜಿಯ ತೀರ್ಪು ಕಾಯ್ದಿಟ್ಟ ವಿಚಾರದ ಬಗ್ಗೆ ಸಿ.ವಿ. ನಾಗೇಶ್ ತಂಡದ ವಕೀಲ ಸಮೃದ್ಧ ಹೆಗಡೆ ಮಾತನಾಡಿ, ಮುಡಾದ ED ಪ್ರಕರಣ ರದ್ದತಿಗೆ ವಾದ ಮಾಡಿದ್ದೇವೆ. ED ಪ್ರಕರಣ ದಾಖಲಿಸಿಕೊಂಡಿದ್ದು ಕಾನೂನು ಬಾಹಿರ ಅಂತಾ ವಾದ ಮಾಡಿದ್ದೇವೆ. ಸಿ.ವಿ. ನಾಗೇಶ್, ಸಂದೇಶ ಚೌಟ, ವಿಕ್ರಮ್ ಅವರು ಸಮರ್ಥ ವಾದ ಮಂಡಿಸಿದ್ದಾರೆ. ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವಾಗ ಮತ್ತೊಂದು ಸಂಸ್ಥೆ ತನಿಖೆ ಮಾಡೋದು ತಪ್ಪು. ಇದನ್ನೇ ವಾದದಲ್ಲಿ ಮಂಡಿಸಿದ್ದಾರೆ.
ಇ.ಡಿ PMLA ಅಡಿ ಕೇಸ್ ಮಾಡಿಕೊಂಡಿದೆ. ಈ ಕಾಯಿದೆ ಅಡಿಯಲ್ಲಿ ಅಪರಾಧದಿಂದ ಗಳಿಸಿದ ಆಸ್ತಿ ಇರಬೇಕು. ಅಕ್ರಮ ಹಣ ವರ್ಗಾವಣೆ ಆಗಿರಬೇಕು. ಆದರೆ ಈ ಕೇಸ್ ನಲ್ಲಿ ಇಂತಹುವುದು ಯಾವುದು ಇಲ್ಲ. ಇದನ್ನೇ ನಾವು ಹೈಕೋರ್ಟ್‌ನಲ್ಲಿ ಸುದೀರ್ಘವಾಗಿ ವಾದ ಮಂಡಿಸಿದ್ದೇವೆ. ಸುಪ್ರೀಂಕೋರ್ಟ್‌ನ ಹಲವಾರು ತೀರ್ಪುಗಳನ್ನು ಉಲ್ಲೇಖ ಮಾಡಿದ್ದೇವೆ. ED ಪರವಾಗಿ ವಕೀಲ ಅರವಿಂದ ಕಾಮತ್ ವಾದ ಮಂಡಿಸಿದರು. ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಿದ್ದಾರೆ ಎಂದಿದ್ದಾರೆ.