ಕಲಬುರಗಿ ಜಿಲ್ಲೆಯಲ್ಲಿ ನವಂಬರ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಕಾರಣ ತೇವಾಂಶದ ಕೊರತೆಯಾಗಿರುವದರಿಂದ ಹಾಗೂ ಒಣಬೇರು ಕೊಳೆ ರೋಗ ಹಾಗೂ ಮಚ್ಚೆರೋಗ ಕಂಡು ಬಂದಿರುವದರಿಂದ ತೊಗರಿ ಬೆಳೆ ಒಣಗಲಾರಂಭಿಸಿದ್ದುರೈತರು ಮುಂಜಾಗರೂಕತ ಕ್ರಮಗಳನ್ನು ಅನುಸರಿಸಬೇಕೆಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ರೈತರಲ್ಲಿ ಮನವಿ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ವಾಡಿಕೆ ಮಳೆ 17.4 ಮಿ.ಮಿ ಆಗಿದ್ದು 5.6 ಮಿ.ಮಿ ಕಡಿಮೆ ಮಳೆಯಾಗಿರುತ್ತದೆ. ಇದರಿಂದ ಕಡಿಮೆ ಆಳ ಮತ್ತು ಮಧ್ಯಮ ಆಳದ ಭೂಮಿಯಲ್ಲಿ ತೇವಾಂಶದ ಕೊರತೆ ಕಂಡು ಬಂದಿರುತ್ತದೆ. ಬಿತ್ತನೆಯಾದ ತೊಗರಿ ಬೆಳೆಯಲ್ಲಿ ತೇವಾಂಶದ ಬಾಧೆಗೆ ಮ್ಯಾಕ್ರೋಫೋಮಿನಾ ಫೆಜಿಯೊಲ್ಕೆ ಶೀಲಿಂದ್ರದಿಂದ ಬರುವ ಒಣ ಬೇರು ಕೊಳೆ ರೋಗ ಹೆಚ್ಚಾಗಿ ಕಾಣಿಸಿಕೊಂಡಿರುತ್ತದೆ. ಅದರೊಂದಿಗೆ ಫೈಟೊಪ್ಲೋರಾ ಮಚ್ಚೆ ರೋಗವು ಅಲ್ಲಲ್ಲಿ ಉಲ್ಬಣಿಸಿರುವುದು ಕಂಡು ಬಂದಿರುವುದರಿಂದ ತೊಗರಿ ಒಣಗಲಾರಂಬಿಸಿರುತ್ತದೆ ಎಂಬ ವಿವರಗಳನ್ನು ಸಚಿವರು ನೀಡಿದ್ದಾರೆ.
ಈ ಸಂಬಂಧದಲ್ಲಿ ಕೃಷಿ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮಗಳು ಈ ಮುಂದಿನಂತಿದೆ: ಬೆಳೆಯಲ್ಲಿ ಹಸಿ ಆರದಂತೆ ಸತತ ಅಂತರ ಬೇಸಾಯ ಮಾಡಬೇಕಲ್ಲದೆ, ಭೂಮಿ ಎರೆಬಿಡಿ (ಬಿರುಕು) ಬಿಡದಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆಯಲ್ಲಿ ಶೇ 90 ರ ಸಹಾಯಧನದಲ್ಲಿ ಲಭ್ಯವಿರುವ ತುಂತುರು ನೀರಾವರಿ ಘಟಕ ಹಾಗೂ ಶೇ 50 ರ ಸಹಾಯಧನದಲ್ಲಿ ಲಭ್ಯವಿರುವ PVC ಪೈಪು ಹಾಗೂ HDPE Roll ಪೈಪು ಗಳನ್ನು ಬಳಸಿ ಸಮೀಪದ ಬಾವಿ ಅಧವಾ ಬೋರವೆಲ್ ನಿಂದ ಸಾಲು ಬಿಟ್ಟು ಸಾಲು ನೀರು ಹಾಯಿಸುವುದು.
ಶಿಲೀಂದ್ರದಿಂದ ಬರುವ ರೋಗವನ್ನು ನಿಯಂತ್ರಿಸಲು 5-10 ಗ್ರಾ ಟ್ರೈಕೊಡರ್ಮ (ಜೈವಿಕ ಶಿಲೀಂದ್ರನಾಶಕ) ಅಥವಾ ಕಾರ್ಬೇಂಡೆಜಿಮ್ ಹಾಗೂ ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತಿ ಲೀಟರ ನೀರಿಗೆ 2.5 ಗ್ರಾಂ ಬೆರಸಿ ಗಿಡದ ಕಾಂಡ ಅಥವಾ ಬೇರಿಗೆ ಸಿಂಪಡಿಸಬೇಕು. ಟ್ರೈಕೊಡರ್ಮ (ಜೈವಿಕ ಶಿಲೀಂದ್ರನಾಶಕ) ಮತ್ತು ಕಾರ್ಬೇಂಡೆಜಿಮ್ ಹಾಗೂ ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರನಾಶಕಗಳು ರೈ ತ ಸಂಪರ್ಕ ಕೇಂದ್ರಗಳಲ್ಲಿ ಶೇ 50 ರ ಸಹಾಯಧನದಲ್ಲಿ ಲಭ್ಯವಿರುತ್ತದೆ.