ರಾಮನಗರ: ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಎನ್ಡಿಎ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿರವರ ಪರವಾಗಿ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಶಿವ ಕನ್ವೆನ್ಷನ್ ಹಾಲ್ ನಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕುರುಬ (ಹಾಲುಮತ) ಸಮಾಜದ ಸಮಾವೇಶವು ಯಶಸ್ವಿಯಾಗಿ ನಡೆಯಿತು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥರವರು ಸೇರಿದಂತೆ ಎನ್ಡಿಎ ನಾಯಕರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರವರು, ನಾನು ಬಡವರ, ಶ್ರಮಿಕರ, ರೈತರ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಎಲ್ಲಿಯೂ ಜಾತಿ ತಾರತಮ್ಯ ಮಾಡಿಲ್ಲ. ಜಾತಿ ನೋಡಿ ಕೆಲಸ ಮಾಡಿಲ್ಲ. ಜನರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡೊಕೊಂಡು ಬಂದಿದ್ದೇನೆ ಎಂದರು.
ಈ ಬಾರಿ ಚನ್ನಪಟ್ಟಣ ಕ್ಷೇತ್ರದ ಜನರು ನಿಖಿಲ್ ಕುಮಾರಸ್ವಾಮಿರವರಿಗೆ ಮತ ನೀಡಿ ಗೆಲ್ಲಿಸಬೇಕು. ಆ ಮೂಲಕ ನನ್ನ ಕೈ ಬಲಪಡಿಸಬೇಕು. ಕ್ಷೇತ್ರದ ಜನರ ಸೇವೆ ಮಾಡಲು ನಿಖಿಲ್ ಕುಮಾರಸ್ವಾಮಿರವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರವರು ಮನವಿ ಮಾಡಿದರು.ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿ, ಕುರುಬ ಸಮಾಜದ ಜನರು ನಿಖಿಲ್ ಕುಮಾರಸ್ವಾಮಿರವರ ಪರವಾಗಿ ಮತ ಚಲಾಯಿಸಿ, ನಿಖಿಲ್ ಕುಮಾರಸ್ವಾಮಿರವರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನವರಿಗೆ ಬಡ ಜನರ ಪರ ಕಾಳಜಿ ಇಲ್ಲ. ಅವರ ಐದು ಗ್ಯಾರಂಟಿಗಳು ವಿಫಲವಾಗಿವೆ. ಕುಮಾರಸ್ವಾಮಿರವರು ಚನ್ನಪಟ್ಟಣ ಮಾತ್ರವಲ್ಲ ಕರ್ನಾಟಕ ರಾಜ್ಯಕ್ಕಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರವಿದ್ದಾಗ ನಾವು ರೈತರ ಸಾಲಮನ್ನಾ ಮಾಡಿದ್ದೇವೆ. ಕುಮಾರಸ್ವಾಮಿರವರು ದೇಶಕ್ಕೆ ಮಾದರಿಯಾಗಿದ್ದಾರೆ.
ಅವರು ಕೆಂದ್ರ ಸಚಿವರಾಗಿರುವ ಕಾರಣಕ್ಕಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ನಿಖಿಲ್ ಕುಮಾರಸ್ವಾಮಿರವರು ಎನ್ಡಿಎ ಅಭ್ಯರ್ಥಿಯಾಗಿದ್ದಾರೆ. ಕುರುಬ ಸಮುದಾಯದ ಜನರು ನಿಖಿಲ್ ಗೆಲುವಿಗಾಗಿ ಶ್ರಮಿಸಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.ಈ ವೇಳೆ ಮಾತನಾಡಿದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿರವರು, ಚನ್ನಪಟ್ಟಣ ಕ್ಷೇತ್ರದ ಜನರು ತಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ನೀಡಬೇಕು.ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಸೇರಿದಂತೆ ಅನೇಕರು ಮಾತನಾಡಿ, ನಿಖಿಲ್ ಕುಮಾರಸ್ವಾಮಿರವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ, ಶಾಸಕ ಕೆ.ಸಿ ರಾಮಮೂರ್ತಿ, ಜೆಡಿಎಸ್ ರಾಜ್ಯ ವಕ್ತಾರ ಸಿಎಂ ನಾಗರಾಜ, ಸೋಮಣ್ಣ, ಮಂಜುನಾಥ, ಗೀತಾ ಶಿವರಾಮ, ಆರ್.ಸಿ ಆಂಜನಪ್ಪ, ದಾಸರಹಳ್ಳಿ ಶಿವಣ್ಣ, ಹಲಸಿನಮರದದೊಡ್ಡಿ ಚಂದ್ರು, ಮಲ್ಲೇಶ ಬಿ ಕನಕಪುರ, ಬಿ.ಡಿ ಪಾಟೀಲ್ ಇಂಡಿ, ಜವಹರಲಾಲ್ ಸೇರಿದಂತೆ ಅನೇಕರಿದ್ದರು.