
ಡಾ. ರಾಜ್ ಕುಮಾರ್ ಜನ್ಮದಿನ ಹಿನ್ನೆಲೆ ವರನಟನ ಸಮಾಧಿಗೆ ನೂರಾರು ಜನರು ಭೇಟಿ ಕೊಟ್ಟು ನಮನ ಸಲ್ಲಿಸಿದ್ದಾರೆ. ಇದೇ ಸಂದರ್ಭ ಸ್ಯಾಂಡಲ್ವುಡ್ ನ ಹಿರಿಯ ನಟ ಜಗ್ಗೇಶ್ ಅಣ್ಣಾವ್ರ ನಡುವಿನ ಸಂಬಂಧದ ಒಂದು ಘಟನೆಯನ್ನ ನೆನಪಿಸಿಕೊಂಡಿದ್ದಾರೆ. ಅಣ್ಣಾವ್ರ ಸಮಾಧಿಗೆ ನಮಿಸಿದ ಸಂದರ್ಭ 30 ವರ್ಷ ಹಿಂದಿನ ಘಟನೆ ಮೆಲಕು ಹಾಕಿದ್ದಾರೆ.


ರಾಜ್ಕುಮಾರ್ ಜೊತೆ ಜಗ್ಗೇಶ್ ಒಳ್ಳೆಯ ಒಡನಾಟ ಹೊಂದಿದ್ದರು.. ಬುಧವಾರ ಮಾಧ್ಯಮದ ಜೊತೆ ಮಾತನಾಡಿದ ಜಗ್ಗೇಶ್ ಹಳೆಯ ಘಟನೆ ಒಂದನ್ನು ನೆನಪಿಸಿಕೊಂಡಿದ್ದಾರೆ. 1994ರ ಸಮಯದಲ್ಲಿ ಜಗ್ಗೇಶ್ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಬೇಸರಗೊಂಡ ಜಗ್ಗೇಶ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಆ ವೇಳೆ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದು ಅಣ್ಣಾವ್ರು ಅಂತ ಹೇಳಿದ್ದಾರೆ

ನಾನು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ. ಮಣಿಪಾಲ್ ಆಸ್ಪತ್ರೆಗೆ ನನ್ನನ್ನು ಅಡ್ಮಿಟ್ ಮಾಡಿದ್ದರು. ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಯಾವುದೇ ಕಾರಣಕ್ಕೂ ಅತಿಯಾದ ಆಸೆ ಬೇಡ, ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗಬಾರದು ಎಂದು ಕಿವಿಮಾತು ಹೇಳಿದ್ದರು.

ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟಿದ್ದು ರಾಜ್ಕುಮಾರ್. ಅಣ್ಣಾವ್ರ ಆಶೀರ್ವಾದ ನಂತರ ನನ್ನ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದವು’ ಎಂದು ರಾಜ್ಕುಮಾರ್ ಸಹಾಯ ನೆನಪಿಸಿಕೊಂಡಿದ್ದಾರೆ.