ಕನ್ನಡಿಗರ ಕುಡಿಯುವ ನೀರಿನ ಯೋಜನೆಗಳಿಗೆ ಅವಕಾಶ ಕಲ್ಪಿಸಿ
ನಂದಿನಿ ಗುಣಮಟ್ಟದಲ್ಲಿ ರಾಜಿ ಇಲ್ಲ
ಹೈನುಗಾರಿಕೆ ಮೂಲಕ ನಿರುದ್ಯೋಗಿ ಯುವಕರ ಸ್ವಾವಲಂಬನೆ
“ಕುಡಿಯುವ ನೀರಿನ ಯೋಜನೆಗೆ ಪ್ರಥಮ ಆದ್ಯತೆ ಎಂಬುದು ರಾಷ್ಟ್ರೀಯ ಜಲ ನೀತಿಯ ಮೂಲ ಉದ್ದೇಶವಾಗಿದೆ. ಕನ್ನಡಿಗರ ಕುಡಿಯುವ ನೀರಿನ ಯೋಜನೆಗೆ ಅವಕಾಶ ಕಲ್ವಿಸಬೇಕು” ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು. ದೊಡ್ಡಬಳ್ಳಾಪುರದ ಬಮುಲ್ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗೆ ಸುರೇಶ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

“ಮಹದಾಯಿ ವಿಚಾರವಾಗಿ ಗೋವಾ ತಗಾದೆ ತೆಗೆದಿರುವ ಬಗ್ಗೆ ಕೇಳಿದಾಗ, “ಮಹದಾಯಿ ವಿಚಾರ ಈಗಾಗಲೇ ನ್ಯಾಯಾಧಿಕರಣದಲ್ಲಿ ತೀರ್ಮಾನವಾಗಿದ್ದು, ನಮ್ಮ ಪಾಲಿನ ನೀರು ಎಷ್ಟು ಎಂದು ಸ್ಪಷ್ಟವಾಗಿದೆ. ಗೋವಾದವರು ಅನಗತ್ಯವಾಗಿ ನಮ್ಮ ಕುಡಿಯುವ ನೀರಿನ ಯೋಜನೆ ತಡೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರು ಸಂಬಂಧ ಪಟ್ಟ ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ನ್ಯಾಯಾಧಿಕರಣದ ತೀರ್ಪಿನಂತೆ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು. ಕನ್ನಡಿಗರಿಗೆ ಗೋವಾ ಜತೆ ಉತ್ತಮ ಬಾಂಧವ್ಯವಿದೆ. ಅನಗತ್ಯವಾಗಿ ಈ ರೀತಿ ಗೊಂದಲ ಸೃಷ್ಟಿಸಿ ಈ ಬಾಂಧವ್ಯವನ್ನು ಹಾಳುಮಾಡುವುದು ಒಳ್ಳೆಯದಲ್ಲ. ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ನಮ್ಮ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಬದ್ಧರಾಗಿದ್ದಾರೆ. ಇದಕ್ಕೆ ಸಹಕಾರ ನೀಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ” ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ರಾಹುಲ್ ಗಾಂಧಿ ಅವರೇ ಹೇಳಿರುವಾಗ, ಮತ್ತೆ ನಾನೇನು ಹೇಳುವುದಿದೆ” ಎಂದು ತಿಳಿಸಿದರು.
ಗುಣಮಟ್ಟದಲ್ಲಿ ನಂದಿನಿ ರಾಜಿಯಾಗುವುದಿಲ್ಲ:

“ಬಮುಲ್ ಅಧ್ಯಕ್ಷನಾದ ಬಳಿಕ ನಾನು ದೊಡ್ಡಬಳ್ಳಾಪುರಕ್ಕೆ ಭೇಟಿ ಮಾಡಿ, ಇಲ್ಲಿನ ರೈತರು ಹಾಗೂ ಹಾಲು ಒಕ್ಕೂಟಗಳ ಪದಾಧಿಕಾರಿಗಳ ಜೊತೆ ಚರ್ಚಿಸಿ, ಇಲ್ಲಿನ ಸಮಸ್ಯೆ ಅರಿಯಲು ಬಂದಿದ್ದೇನೆ. ಮೂರು ಜಿಲ್ಲೆಯ ನಾಯಕರು ನನಗೆ ಬಮುಲ್ ಜವಾಬ್ದಾರಿಯನ್ನು ವಹಿಸಿದ ನಂತರ ಹಾಲು ಉತ್ಪಾಕರ ಸಮಸ್ಯೆಗಳ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದೇನೆ. ಬಮುಲ್ ನಲ್ಲಿ ನಿತ್ಯ 17-18 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಹಾಲಿನ ಗುಣಮಟ್ಟ ನಿರ್ವಹಣೆ, ರೈತರಿಗೆ ಉತ್ತಮ ಬೆಲೆ ನೀಡುವುದು, ಗ್ರಾಹಕರ ಹಿತ ಕಾಯುವ ಜವಾಬ್ದಾರಿ ನಮ್ಮ ಮೇಲಿದೆ. ಬೆಂಗಳೂರು ಹಾಲು ಒಕ್ಕೂಟ ಸಹಕಾರ ತತ್ವದ ಮೇಲೆ ನಂಬಿಕೆ ಇಟ್ಟು ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲಾಗಿದೆ. 1965ರಲ್ಲಿ ಕೃಷ್ಣಪ್ಪನವರು ಇದನ್ನು ಪ್ರಾರಂಭಿಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಈ ಸಂಸ್ಥೆ ಮೈಲುಗಲ್ಲು ಹಾಕಿಕೊಂಡು ಬಂದಿದೆ” ಎಂದು ಹೇಳಿದರು.
“ವ್ಯವಸ್ಥೆಗೆ ತಕ್ಕಂತೆ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗಿದ್ದು, ಎಲ್ಲರ ಹಿತ ಕಾಯಲು ದೊಡ್ಡಬಳ್ಳಾಪುರದ ಬಮುಲ್ ಕೇಂದ್ರಕ್ಕೆ ಭೇಟಿ ನೀಡಿದ್ದೇನನೆ. ಪ್ರತಿ ವಿಭಾಗದಲ್ಲಿ ಯಾವ ರೀತಿ ಬದಲಾವಣೆ ತರಬಹುದು ಎಂದು ಚಿಂತನೆ ಮಾಡಿದ್ದೇವೆ. ನಂದಿನಿ ಪರಿಶುದ್ಧ ಹಾಲು. ಬೆಲೆ ಕಡಿಮೆ ಎಂದು ಇದನ್ನು ಬಳಸಲು ಹಿಂಜರಿಯುತ್ತಾರೆ. ನಾವು ಸಂರಕ್ಷಕ ರಾಸಾಯನಗಳನ್ನು ಬಳಸಿದರೆ ಹಾಲಿನ ಬಾಳಿಕೆ ಅವಧಿ ವಿಸ್ತರಿಸಬಹುದು. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಅಂದು ಸಂಗ್ರಹಿಸಿದ ಹಾಲನ್ನು ಅಂದೇ ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಹೊಂದಿದ್ದೇವೆ. ನಂದಿನಿ ಉತ್ಪನ್ನಗಳನ್ನು ಹೆಚ್ಚು ಬಳಸಿ ಸಹಕಾರ ನೀಡಬೇಕು” ಮನವಿ ಮಾಡಿದರು.

“ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲು ಅನೇಕ ಮಾರ್ಗಗಳಿವೆ. ಆದರೆ ನಾವು ಗುಣಮಟ್ಟ, ಆರೋಗ್ಯ ವಿಚಾರದಲ್ಲಿ ರಾಜಿಯಾಗದೇ ಕೆಲಸ ಮಾಡುತ್ತಿದ್ದೇವೆ. ನಂದಿನಿ ಮೂಲಕ 160ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇಷ್ಟು ಉತ್ಪನ್ನಗಳಿವೆ ಎಂದು ಬಹುತೇಕ ಜನರಿಗೆ ಗೊತ್ತೇ ಇಲ್ಲ. ನಂದಿನಿ ತುಪ್ಪವನ್ನು ತಿರುಪತಿ ತಿರುಮಲ ದೇವಾಲಯ, ವಿದೇಶಗಳಿಗೆ ರಫ್ತಾಗುತ್ತಿದೆ. ನಾನು ಅಧ್ಯಕ್ಷನಾದ ಬಳಿಕ ಕಳೆದ ಒಂದೂವರೆ ತಿಂಗಳಲ್ಲಿ ಮಾರುಕಟ್ಟೆ ವ್ಯಾಪಾರಸ್ಥರು, ಹೊಟೇಲ್ ಸಂಸ್ಥೆಗಳು, ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಸಧ್ಯ ಮಾರುಕಟ್ಟೆಯಲ್ಲಿ ಕಲಬೆರಕೆ ಪನ್ನೀರ್ ಹೆಚ್ಚಾಗಿದ್ದು, ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಅನೇಕರು ಅದನ್ನೇ ಖರೀದಿ ಮಾಡುತ್ತಿದ್ದಾರೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ಆಸ್ಪತ್ರೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ” ಎಂದರು.
ಹೈನುಗಾರಿಕೆ ಮೂಲಕ ನಿರುದ್ಯೋಗಿ ಯುವಕರಿಗೆ ಸ್ವಾವಲಂಬನೆ:

“ಸಂಸ್ಥೆಯ ಆಡಳಿತ ಮಂಡಳಿ ನನಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ನಗರೀಕರಣದ ಪರಿಣಾಮದಿಂದಾಗಿ ದೊಡ್ಡಬಳ್ಳಾಪುರದಲ್ಲಿ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಿದೆ. ಈ ಮಧ್ಯೆ ನಾವು ಹಾಲಿನ ಉತ್ಪಾದನೆ ಹೆಚ್ಚಿಸಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಬಹುತೇಕ ಯುವಕರು ನಿರುದ್ಯೋಗಿಗಳಾಗಿದ್ದು, ಇದಕ್ಕೆ ಪರಿಹಾರ ಹೈನುಗಾರಿಕೆ. ಯುವಕರು ಇದರಲ್ಲಿ ತೊಡಗಿಸಿಕೊಂಡರೆ ಸ್ವಾವಲಂಬಿಗಳಾಗಬಹುದು. ಈ ಭಾಗದ ರೈತರು, ಯುವಕರಿಗೆ ಇದು ನೆರವಾಗಲಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1 ಲಕ್ಷ ಲೀಟರ್ ಗೆ ಕುಸಿದಿದೆ. ಇಲ್ಲಿ ಕನಿಷ್ಠ 2.50 ಲಕ್ಷದಿಂದ 3 ಲಕ್ಷದವರೆಗೆ ಹಾಲು ಉತ್ಪಾದನೆಯಾಗಬೇಕು. ಇದಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲು ಚರ್ಚಿಸುತ್ತಿದ್ದೇನೆ. ಈ ಬಗ್ಗೆ ಜಿಲ್ಲಾ ಸಹಕಾರಿ ಬ್ಯಾಂಕ್ ಜೊತೆ ಚರ್ಚಿಸಿದ್ದು ಹಸು ಖರೀದಿಗೆ ನೀಡುವ ಸಾಲ ಸೌಲಭ್ಯವನ್ನು 1 ಲಕ್ಷದಿಂದ 2 ಲಕ್ಷಕ್ಕೆ ಏರಿಸುವಂತೆ ತಿಳಿಸಿದ್ದೇನೆ. ಮೆಗಾ ಡೈರಿ ಮಾಡುವವರಿಗೆ 15 ಲಕ್ಷದವರೆಗೆ ಸಾಲ ನೀಡುವ ಅವಕಾಶವಿದೆ. ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಜನರಿಗೆ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದರು.