
ದುಬೈ : ಸಂಯುಕ್ತ ಅರಬ್ ಸಂಸ್ಥಾನ ದೇಶದ ಆರ್ಥಿಕ ರಾಜಧಾನಿ ದುಬೈಯಲ್ಲಿ ಆಗಸ್ಟ್ ಮೂರರಂದು ನಡೆದ ಖ್ಯಾತ ಅಂತರ್ ರಾಷ್ಟ್ರೀಯ ಸಂಘಟನೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಯುನೈಟೆಡ್ (Hindhu Muslim Christian United)ಇದರ ಹದಿನೈದನೇ ವರ್ಷದ ವಾರ್ಷಿಕೋತ್ಸವದ (15th year Celebration) ಪ್ರಯುಕ್ತ ನಡೆದ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಚಲನಚಿತ್ರರಂಗದ ಖ್ಯಾತ ಸಾಹಿತಿ , ನಿರ್ದೇಶಕರು ಆದ ಡಾ.ವಿ. ನಾಗೇಂದ್ರ ಪ್ರಸಾದ್ (Dr. V Nagendra Prasad) ಅವರಿಗೆ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದುಬೈ ಯ ಕರಾಮಾದಲ್ಲಿನ ಪಂಚತಾರಾ ಹೋಟೆಲ್ ಪಾರ್ಕ್ ರೆಜಿಸ್ ನಲ್ಲಿ (Dubai Karama’s Panchatara Hotel Park) ಜರಗಿದ ವರ್ಣರಂಜಿತ ಸಮಾರಂಭದಲ್ಲಿ ಇಪ್ಪತ್ತೆರಡು ದೇಶಗಳ ವಿವಿಧ ಪ್ರತಿನಿಧಿಗಳೊಂದಿಗೆ ಭಾರತದ ನಾಲ್ವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದುಬೈ ದೇಶದ ರಾಜಮನೆತನದ ಹಿಸ್ ಎಕ್ಸೆಲೆನ್ಸಿ ಮುಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಮಝರೂಕಿ , ಹಿಸ್ ಎಕ್ಸೆಲೆನ್ಸಿ ಜುಮಾ ಅಲ್ ಮದನಿ , ಹರ್ ಎಕ್ಸೆಲೆನ್ಸಿ ಮುನೀರಾ ಅಲ್ ಬಲೂಷಿ , ಇವರೊಂದಿಗೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು . ಸಂಘಟನೆಯ ಸ್ಥಾಪಕರು ಹಾಗೂ ಅಂತರ್ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಶಕೀಲ್ ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯನ್ನು ಹದಿನೈದು ವರ್ಷಗಳ ಹಿಂದೆ ಸ್ಥಾಪಿಸಿದ ಬಗ್ಗೆ ವಿಶ್ಲೇಷಣೆ ನೀಡಿದರು . ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದು ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾಗಿದ್ದು ಇಂದಿನ ಆದ್ಯ ಕರ್ತವ್ಯಗಳಲ್ಲೊಂದು ಎಂದು ತಿಳಿಹೇಳಿದರು . ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ದಾನಿಶ್ ಮುಹಮ್ಮದ್ , ಹಮೀದ್ ಸಾಗರ , ಸಯ್ಯದ್ ಅಹಮದ್ ಬಸ್ರುರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದರನ್ನು ಕೂಡ ಸನ್ಮಾನಿಸಲಾಯಿತು.












