ಬೀದರ್: ನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬ್ರಿಮ್ಸ್ ಆಸ್ಪತ್ರೆಗೆ ಬರುತ್ತಾರೆ.ಗುಣಮಟ್ಟದ ಚಿಕಿತ್ಸೆ ದೊರಕದಿದ್ದರೆ ರೋಗಿಗಳ ಪಾಡೇನು ?ಎಂಬ ಸ್ಥಿತಿ ನಿರ್ಮಾಣವಾಗಿತ್ತು.ಸಾಲು ಸಾಲು ದೂರುಗಳು, ಅಕ್ರಮ ಎಸಗಿರುವ ಬಗ್ಗೆ ವ್ಯಾಪಕ ಆರೋಪಗಳ ಹಿನ್ನೆಲೆಯಲ್ಲಿ ನಗರದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ನಿರ್ದೇಶಕ ಡಾ.ಶಿವಕುಮಾರ್ ಶೆಟಕಾರ್‌ಗೆ ನಿರ್ದೇಶಕ ಸ್ಥಾನದಿಂದ ಸರ್ಕಾರ ಗೇಟ್ ಪಾಸ್ ನೀಡಿದೆ.
ಬ್ರಿಮ್ಸ್ ನಿರ್ದೇಶಕರಾದ ಬಳಿಕ ಶಿವಕುಮಾರ್ ಶೆಟಕಾರ್ ವಿರುದ್ಧ ಮೇಲಿಂದ ಮೇಲೆ ಸಾರ್ವಜನಿಕ ದೂರುಗಳು, ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಳ್ಳುತ್ತಲೇ ಇದ್ದವು. ನಿತ್ಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಂದಿಲ್ಲೊಒಂದು ಸುದ್ದಿಗಳು ಹರಿದಾಡುತ್ತಲೇ ಇದ್ದವು.ಸಕಾಲಕ್ಕೆ ವೈದ್ಯರಿಲ್ಲದೇ ರೋಗಿಗಳು ಪರದಾಡುವುದು ಮಾಮೂಲಾಗಿತ್ತು.ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದ ಶೆಟಕಾರ್‌ಗೆ ಬ್ರಿಮ್ಸ್ ಸಂಸ್ಥೆಯಲ್ಲಿ ಮುಂದುವರೆಯುವುದು ಸಾಧ್ಯವೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು.
ವೈಯಕ್ತಿಕವಾಗಿಯೂ ಶೆಟಕಾರ್ ವಿರುದ್ಧ ಬಹಿರಂಗವಾಗಿಯೇ ಟೀಕೆಗಳು ಕೇಳಿಬರುತ್ತಿದ್ದವು.ಇತ್ತೀಚೆಗೆ ಸುರಿದ ಮಳೆಯಿಂದ ಬ್ರಿಮ್ಸ್ ಕಟ್ಟಡದ ಅಂಡರ್ ಪಾಸ್‌ನಲ್ಲಿ ನೀರು ತುಂಬಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಕಟ್ಟಡದಲ್ಲಿ ವಿದ್ಯುತ್ ಪ್ರವಹಿಸಿದ ಹಿನ್ನೆಲೆ ಕೆಲ ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು.ಇದರಿಂದ ಐಸಿಯುದಲ್ಲಿದ್ದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.ಇಡೀ ಆಸ್ಪತ್ರೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.ಘಟನೆ ನಡೆದ ಬಳಿಕ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ವರದಿ ಕೇಳಿದರು.ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.
ಶೆಟಕಾರ್ ಅಕ್ರಮಗಳ ಕಥೆ ಏನು ? ಡಾ.ಶಿವಕುಮಾರ್ ಶೆಟಕಾರ್ ಬ್ರಿಮ್ಸ್ ನಿರ್ದೇಶಕರಾದ ಬಳಿಕ ನಡೆದ ಹೊರಗುತ್ತಿಗೆ ನೇಮಕಾತಿ, ಟೆಂಡರ್‌ಗಳ ಕುರಿತು ಸಾರ್ವಜನಿಕವಾಗಿಯೇ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.ಈಗ ಸರ್ಕಾರ ಶೆಟಕಾರ್‌ಗೆ ಹುದ್ದೆಯಿಂದ ಬಿಡುಗಡೆಗೊಳಿಸಿರುವುದು ಸರಿಯಾದ ಕ್ರಮವೇ ಆಗಿದೆ.ಆದರೆ, ಅಷ್ಟಕ್ಕೇ ಎಲ್ಲಾ ಮುಗಿಯುವುದಿಲ್ಲ.
ಶೆಟಕಾರ್ ಅವಧಿಯಲ್ಲಿ ಡಿ ಗ್ರೂಪ್ ಹೊರಗುತ್ತಿಗೆ ನೇಮಕಾತಿ ನಡೆದಿದ್ದು, ಪಾರದರ್ಶಕವಾಗಿ ನೇಮಕಾತಿ ನಡೆದಿಲ್ಲ ಎಂಬ ಆರೋಪಗಳು ಜೋರಾಗಿ ಕೇಳಿಬಂದಿದ್ದವು. ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ. ಹಾಗೇ, ಶೆಟಕಾರ್ ಅವಧಿಯಲ್ಲಿ ನಡೆದ ಟೆಂಡರ್‌ಗಳ ಬಗ್ಗೆಯೂ ತನಿಖೆ ನಡೆಸಿ ಅಕ್ರಮ ಎಸಗಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಪ್ರಭಾರ ನಿರ್ದೇಶಕಿಯಾಗಿ ಡಾ.ಶಾಂತಲಾ ಕೌಜಲಗಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸದ್ಯ ಮಕ್ಕಳ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಕೌಜಲಗಿ ಅವರಿಗೆ ಮುಂದಿನ ಆದೇಶದವರೆಗೆ ನಿರ್ದೇಶಕರ ಪ್ರಭಾರ ವಹಿಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಈಗ ಶೆಟಕಾರ್‌ಗೆ ಹುದ್ದೆಯಿಂದ ಬಿಡುಗಡೆಗೊಳಿಸಿದೆ. ಆದಷ್ಟು ಶೀಘ್ರ ನೂತನ ಪ್ರಭಾರಿ ನಿರ್ದೇಶಕಿ ಡಾ.ಕೌಜಲಗಿ ಅವರು ಬ್ರಿಮ್ಸ್ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಲಿ ಎಂಬ ಆಶಾಭಾವನೆ ಇದ್ದೇ ಇದೆ.
ಸಾರ್ವಜನಿಕರ ಹಾಗೂ ಸಂಘ- ಸಂಸ್ಥೆಗಳು ನೀಡಿದ ದೂರಿನ ಮೇಲೆ ಹಲವು ಬಾರಿ ಪ್ರತಿಧ್ವನಿ ನ್ಯೂಸ್ ಬ್ರಿಮ್ಸ್ ಆಸ್ಪತ್ರೆಯ ಅವಾಂತರಗಳ ಕುರಿತು ವರದಿ ಪ್ರಕಟಿಸಲಾಗಿತ್ತು.ಡಾ.ಶಿವಕುಮಾರ್ ಶೆಟಕಾರ್ ಕಾರ್ಯವೈಖ್ಯರಿ ಬಗ್ಗೆಯೂ ವಿಸ್ತರವಾಗಿ ವರದಿ ಬಿತ್ತರಿಸಿತ್ತು