~ಡಾ. ಜೆ ಎಸ್ ಪಾಟೀಲ
ನಾಡು ಕಂಡ ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರಗಿಯವರನ್ನು ಒಂದು ಅತ್ಯಂತ ಅರಾಜಕಕಾರಿ ಸಿದ್ದಾಂತಕ್ಕೆ ಸೇರಿದ ಧಾರ್ಮಿಕ ಭಯೋತ್ಪಾದಕರು ಹತ್ಯೆ ಮಾಡಿ ಇಂದಿಗೆ ಎಂಟು ವರ್ಷಗಳು ಮುಗಿದವು. ಸತ್ಯವನ್ನು ಎಂದಿಗೂ ಸಹಿಸದ ಅಸತ್ಯದ ತಳಹದಿಯ ಮೇಲೆ ರೂಪಿತವಾದ ಧರ್ಮವು ಸದಾ ಅಭದ್ರತೆಯಲ್ಲಿ ಬದುಕುತ್ತದೆ. ತನ್ನನ್ನು ತನ್ನ ಅನುಯಾಯಿಗಳು ರಕ್ಷಿಸಬೇಕು ಎಂದು ಬಯಸುವ ಧರ್ಮವು ಅದೊಂದು ಟೊಳ್ಳು ಧರ್ಮವೆ ಆಗಿರುತ್ತದೆ. ಡಾ. ಕಲಬುರಗಿಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಅಭೂತಪೂರ್ವ ಸತ್ಯ ಸಂಶೋಧನೆಗಳು ಅಜರಾಮರ. ಅವರು ಬರೆದ ಸರಣಿ ಸಂಶೋಧನಾ ಪ್ರಬಂಧಗಳು ಲಿಂಗಾಯತ ಧರ್ಮದ ಮೂಲ ಹಾಗು ಲಿಂಗಾಯತರ ಬೇಡಿಕೆಗಳ ಕುರಿತು ನಮಗೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ಹೇಳುತ್ತವೆ. ಲಿಂಗೈಕ್ಯ ವಿದ್ವಾಂಸರು ಲಿಂಗಾಯತ ಧರ್ಮದ ಉದಯದ ಕುರಿತು ಆಳವಾದ ಒಳನೋಟವುಳ್ಳ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರ ಸಂಶೋಧನೆ ಮರೆಮಾಚಲಾಗಿದ್ದ ಸತ್ಯಗಳನ್ನು ಬಯಲಿಗೆ ತಂದಿದೆ.
೨೦೧೭ ರಲ್ಲಿ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನಕ್ಕಾಗಿ ಕರ್ನಾಟಕˌ ತೆಲಂಗಾಣ ಹಾಗು ಮಹಾರಾಷ್ಟ್ರಗಳಲ್ಲಿ ಲಿಂಗಾಯತರು ನಡೆಸಿದ ಆಂದೋಲನದ ನಂತರವೆ ಲಿಂಗಾಯತ ಧರ್ಮದಲ್ಲಿ ವೀರಶೈವ ಮತದ ಐಕ್ಯ ಹಾಗು ವೀರಶೈವವು ಹೇಗೆ ಲಿಂಗಾಯತ ಧರ್ಮವನ್ನು ಕಲುಷಿತಗೊಳಿಸಿದೆ ಎನ್ನುವ ಸಂಗತಿ ಅನೇಕ ಮುಗ್ಧ ಲಿಂಗಾಯತರ ಅರಿವಿಗೆ ಬಂತು. ಬಸವ ಪರಂಪರೆಯ ವಿರಕ್ತ ಮಠಗಳು ಮತ್ತು ವೀರಶೈವ ಆರಾಧ್ಯ ಪರಂಪರೆಯ ಮಠಗಳ ನಡುವಿನ ದೀರ್ಘಕಾಲದ ಸೈದ್ಧಾಂತಿಕ ಸಂಘರ್ಷವನ್ನು ಮುಂಚೂಣಿಗೆ ತಂತು. ಸಂವಿಧಾನ ಮಾನ್ಯತೆಯ ಆಂದೋಲನದಲ್ಲಿರುವ ಲಿಂಗಾಯತರು ಬಸವ ಪರಂಪರೆಯ ವಿರಕ್ತ ಮಠಗಳೊಂದಿಗೆ ಸಂಬಂಧ ಹೊಂದಿದವರು. ಜುಲೈ ೨೦೧೭ ರಲ್ಲಿ ಆಂದೋಲನ ಪ್ರಾರಂಭವಾದಾಗಿನಿಂದ, ವೀರಶೈವ ಆರಾಧ್ಯರು ಹೇಗೆಲ್ಲ ಕಂಗಾಲಾಗಿದ್ದರು ಎನ್ನುವುದು ತಾವೆಲ್ಲ ಬಲ್ಲಿರಿ. ಈ ಆಂದೋಲನವು ಸಮಾನಾರ್ಥಕ ಅಭಿವ್ಯಕ್ತಿಗಳಾಗಿ ಬಳಕೆಯಾಗುತ್ತಿರುವ ಲಿಂಗಾಯತ ಮತ್ತು ವಿರಶೈವಗಳ ನಡುವಿನ ವ್ಯತ್ಯಾಸವನ್ನು ಬಹಳ ವ್ಯಾಪಕವಾಗಿ ಪ್ರತಿಪಾದಿಸಿತು.
ಲಿಂಗಾಯತ ಧರ್ಮದ ಮೂಲ ತತ್ವಗಳಿಗೆ ವಿರೋಧವಾಗಿ ಬದುಕುವ ವೀರಶೈವ ಆರಾಧ್ಯರು ತಾಂತ್ರಿಕವಾಗಿ ಲಿಂಗಾಯತ ಧರ್ಮದಲ್ಲಿ ಸೇರಿದ್ದರೂ ಅವರು ತಮ್ಮ ಆಂಧ್ರ ಮೂಲದ ಆರಾಧ್ಯ ಬ್ರಾಹ್ಮಣ ಸಂಪ್ರದಾಯಗಳನ್ನು ತೊರೆದಿಲ್ಲ. ಮೇಲ್ನೋಟಕ್ಕೆ ಲಿಂಗಾಯತರಂತೆ ಕಾಣುವ ವೀರಶೈವ ಆರಾಧ್ಯರು ಲಿಂಗಾಯತ ಸಮಾಜದ ಮೇಲಿನ ತಮ್ಮ ಯಜಮಾನಿಕೆ ಕೈತಪ್ಪಿ ಹೋಗುತ್ತದೆ ಎನ್ನುವ ಭಯದಿಂದ ಈ ಹೋರಾಟಕ್ಕೆ ಹೆದರಿ ಕಂಗಾಲಾದರು. ಪ್ರಸ್ತಾವಿತ ಅಲ್ಪಸಂಖ್ಯಾತರ ಸ್ಥಾನಮಾನವನ್ನು ಬಲವಾಗಿ ವಿರೋಧಿಸುತ್ತಿರುವ ವೀರಶೈವ ಆರಾಧ್ಯರ ಎದುರಿಗೆ ಎರಡು ಆಯ್ಕೆಗಳಿವೆ: ೧. ಬಸವ ತತ್ವವನ್ನು ಒಪ್ಪಿಕೊಂಡು ಲಿಂಗಾಯತ ಧರ್ಮದಲ್ಲಿನ ಒಂದು ಉಪವರ್ಗವಾಗಿ ಮುಂದುವರೆಯˌ ೨. ಇಲ್ಲವೆ ಲಿಂಗಾಯತ ಧರ್ಮದಿಂದ ಆಚೆ ಹೋಗಿ ಹಿಂದೂ ಎಂದು ಕರೆಯಲ್ಪಡುವ ಬ್ರಾಹ್ಮಣ ಧರ್ಮದ ಭಾಗವಾಗಬೇಕು. ಎರಡನೇ ಆಯ್ಕೆ ಅಸಾಧ್ಯ ˌ ಏಕೆಂದರೆ ಲಿಂಗಾಯತಕ್ಕೆ ಮತಾಂತರ ಹೊಂದಿರುವ ಈ ಆರಾಧ್ಯರನ್ನು ಬ್ರಾಹ್ಮಣರೆಂದು ಹಿಂದೂ ಧರ್ಮದ ಠೇಕೆದಾರರು ಸುಲಭವಾಗಿ ಒಪ್ಪಿಕೊಳ್ಳಲಾರರು.
ವೀರಶೈವ ಆರಾಧ್ಯರು ತಮ್ಮ ಪೂರ್ವ ಧರ್ಮದ ವೈದಿಕ ಆಚರಣೆಗಳನ್ನು ತೊರೆದರೆ ಮಾತ್ರ ಲಿಂಗಾಯತರೊಡನೆ ಒಳಗೊಳ್ಳಬಹುದು ಎನ್ನುವುದು ಲಿಂಗಾಯತರ ಖಚಿತ ಅಭಿಪ್ರಾಯವಾಗಿದೆ. ಲಿಂಗಾಯತ ವಿರಕ್ತ ಪರಂಪರೆಯ ಮಠಗಳು ಮತ್ತು ವೀರಶೈವ ಆರಾಧ್ಯರ ಮಠಗಳ ನಡುವಿನ ವಿಭಜನೆಯು ೧೫ ನೇ ಶತಮಾನದ ನಂತರ ಕಾಣಿಸಿಕೊಂಡಿದೆ. ಇದರರ್ಥ ಆ ಮೊದಲು ವೀರಶೈವ ಮತ ಪ್ರತ್ಯೇಕ ಅಸ್ತಿತ್ವ ಹೊಂದಿರಲಿಲ್ಲ. ಲಿಂಗಾಯತ ಧರ್ಮದ ಮೇಲೆ ಯಜಮಾನಿಕೆ ಸ್ಥಾಪಿಸಲೋಸುಗ ಆಂಧ್ರದ ಆರಾಧ್ಯ ಬ್ರಾಹ್ಮಣರು ಲಿಂಗಾಯತಕ್ಕೆ ಮತಾಂತರ ಹೊಂದಿದ ನಂತರ ಶೈವ ಮತದ ಒಂದು ಶಾಖೆ ಅಥವಾ ವ್ರತ ಆಗಿರುವ ವೀರಶೈವವು ಒಂದು ಧರ್ಮವೆಂದು ಪ್ರತಿಪಾದಿಸುತ್ತಾ ೧೬ ನೇ ಶತಮಾನದ ನಂತರ ಅದಕ್ಕೆ ಸಿಂದ್ಧಾಂತ ಶಿಖಾಮಣಿ ಎಂಬ ಖೊಟ್ಟಿ ಅನಾಮಿಕ ಸಂಸ್ಕೃತ ಧರ್ಮಗ್ರಂಥವನ್ನು ಸೃಷ್ಠಿಸಿಕೊಂಡರು. ವೀರಶೈವವರು ಕರ್ನಾಟಕದ ದಕ್ಷಿಣದಲ್ಲಿ ಪ್ರಾಬಲ್ಯ ಹೊಂದಿದರೆ ಲಿಂಗಾಯತರು ಉತ್ತರದಲ್ಲಿ ಪ್ರಾಬಲ್ಯ ಹೊಂದಿದರು.
೧೫ ನೇ ಶತಮಾನದ ನಂತರ ಬಸವ ಪರಂಪರೆಯ ವಿರಕ್ತ ಮಠಗಳು ಲಿಂಗಾಯತ ಧರ್ಮ ಪ್ರಚಾರ ಆರಂಭಿಸಿದ ಮೇಲೆ ಆರಾಧ್ಯರು ಕೂಡ ಪೈಪೋಟಿಗಿಳಿದಂತೆ ಅನೇಕ ಶರಣ ಪರಂಪರೆಯ ಮಠಗಳನ್ನು ಅತಿಕ್ರಮಿಸಿಕೊಂಡು ಮುಗ್ಧ ಲಿಂಗಾಯತರ ಮೇಲೆ ಆಚಾರ್ಯ ಹಾಗು ಆರಾಧ್ಯ ಪರಂಪರೆ ಹೇರಲಾರಂಭಿಸಿದರು. ವೀರಶೈವದ ಮೂಲದ ಬಗ್ಗೆ ಅನೇಕ ಐತಿಹಾಸಿಕ ಸಂಶೋಧನೆಗಳು ನಡೆದಿವೆ. ಡಾ. ಎಂ. ಎಂ. ಕಲಬುರಗಿಯವರ ಲೇಖನಗಳ ಸರಣಿಯಲ್ಲಿ, ಲಿಂಗಾಯತ ಧರ್ಮದ ಉದಯದ ಕುರಿತು ಪ್ರಬಂಧವನ್ನು ಅವರು ಮಂಡಿಸಿದ್ದು, ಈ ಪ್ರಬಂಧಗಳು ಆಳವಾದ ಒಳನೋಟವನ್ನು ಹೊಂದಿವೆ. ಕನ್ನಡದ ಸಂಶೋಧಕರು ಹಾಗು ವಿದ್ವಾಂಸರಾಗಿದ್ದ ಡಾ. ಎಂ. ಎಂ. ಕಲಬುರಗಿಯವರು ಮೂಲ ಇತಿಹಾಸಕಾರರಲ್ಲದಿದ್ದರೂ ಲಿಂಗಾಯತ ಮತ್ತು ವೀರಶೈವಗಳ ನಡುವಿನ ಭಿನ್ನತೆಗಳನ್ನು ಬಹಳ ಕರಾರುವಕ್ಕಾಗಿ ಶೋಧಿಸಿದ್ದಾರೆ. ಲಿಂಗಾಯತರು ಅವೈದಿಕ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರಾದರೆ ವೀರಶೈವರು ವೈದಿಕತೆಯನ್ನು ಆಚರಿಸುವವರು ಎನ್ನುವುದು ದಿಟ.
ಶಂಬಾ ಜೋಶಿ ಅವರಿಂದ ಪರಿಚಯಿಸಲ್ಪಟ್ಟ ಶಾಸ್ತ್ರೀಯ, ಹಾಗು ಹೈಡೆಗ್ಗೆರಿಯನ್ ಅರ್ಥಶಾಸ್ತ್ರವನ್ನು ಮತ್ತು ಎ ಕೆ ರಾಮಾನುಜನ್ ಅವರಿಂದ ಪರಿಚಯಿಸಲ್ಪಟ್ಟ ರಷ್ಯನ್ ಔಪಚಾರಿಕತೆಯನ್ನು ಡಾ. ಕಲಬುರಗಿಯವರು ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಪರಿಚಯಿಸಿದರು. ಲಿಂಗಾಯತ ಧರ್ಮದ ನಂಬಿಕೆಗಳು ಹಿಂದೂ ಧರ್ಮದ ಭಾಗವಾಗಿರದೆ ಅವು ೧೨ ನೇ ಶತಮಾನದಲ್ಲಿ ವೈದಿಕ ಧರ್ಮಕ್ಕೆ ಪ್ರತಿಸ್ಪರ್ಧಿಯಾಗಿ ಉದಿಸಿದ ಅವೈದಿಕ ಸಿದ್ಧಾಂತಗಳು ಎಂದು ಡಾ. ಕಲಬುರಗಿಯವರು ಬಲವಾಗಿ ಪ್ರತಿಪಾದಿಸಿದ್ದಾರೆ. ಬಸವಣ್ಣನವರ ಮತ್ತು ಅವರ ಸಮಕಾಲೀನ ಶರಣರ ವಚನಗಳಲ್ಲಿ ಪ್ರತಿಪಾದಿಸಲ್ಪಟ್ಟ ಸಿದ್ದಾಂತಗಳು ಈ ನಂಬಿಕೆಗೆ ಆಧಾರವಾಗಿದ್ದು ಲಿಂಗಾಯತರು ಬಸವಾದಿ ಶಿವಶರಣರ ವಾರಸುದಾರರು. ಶರಣರ ವಚನಗಳು ಜಾತಿ ತಾರತಮ್ಯ ಮತ್ತು ಲಿಂಗ ತಾರತಮ್ಯವನ್ನು ತೀಕ್ಷ್ಣವಾಗಿ ಖಂಡಿಸುತ್ತವೆ, ಮಡಿ-ಮೈಲಿಗೆಯ ಕಲ್ಪನೆಯನ್ನು ಪ್ರಶ್ನಿಸುತ್ತವೆ, ವೈದಿಕ ಆಚರಣೆಗಳು ಮತ್ತು ಮೂರ್ತಿ ಪೂಜೆಯನ್ನು ತಿರಸ್ಕರಿಸುತ್ತವೆ ಮತ್ತು ಸಮಾನತೆಯನ್ನು ಉತ್ತೇಜಿಸುತ್ತವೆ ಎಂಬುದು ಡಾ. ಕಲಬುರಗಿಯವರು ಬಯಲಿಗೆಳೆದರು.
ಬಸವಾನುಯಾಯಿ ಡಾ. ಕಲ್ಬುರ್ಗಿಯವರು ಬಸವ ಪರಂಪರೆಯ ವಿರಕ್ತ ಮಠಗಳಲ್ಲಿ ಆಳವಾಗಿ ಬೇರೂರಿರುವ ವೈದಿಕ ಆಚರಣೆಗಳನ್ನು ವಿರೋಧಿಸಿದ್ದರು, ಕಾರಣ ಆ ಆಚರಣೆಗಳು ಶರಣರ ವಚನಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಆದರ್ಶಗಗೆ ವಿರೋಧವಾಗಿವೆ. ಅವರ ಈ ಚಿಕಿತ್ಸಿಕ ವಿಚಾರಗಳು ಅನೇಕ ವೇಳೆ ಮಠಗಳೊಂದಿಗೆ ಅವರ ಸಂಘರ್ಷಕ್ಕೆ ಎಡೆಮಾಡಿದ್ದವು. ಬ್ರಾಹ್ಮಣ್ಯದ ಅನೇಕ ಆದರ್ಶಗಳು ಮತ್ತು ಆಚರಣೆಗಳಿಗೆ ಬದ್ಧರಾಗಿರುವ ವೀರಶೈವ ಆರಾಧ್ಯರ ಬಗೆಗಿನ ಡಾ. ಕಲಬುರಗಿಯವರ ನಿಲುವುಗಳು ಅತ್ಯಂತ ನಿಖರ ಹಾಗು ಅಷ್ಟೇ ಸತ್ಯದಿಂದ ಕೂಡಿದ್ದವು. ಲಿಂಗಾಯತ ಧರ್ಮದ ಮೂಲದ ಬಗ್ಗೆ ಕಲಬುರಗಿಯವರ ಸಂಶೋಧನೆಯು ಪೂರ್ವಾಗ್ರಹಿ ವೀರಶೈವವಾದಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಲಿಂಗಾಯತ ಮತ್ತು ವೀರಶೈವ ಎಂಬ ಎರಡು ವಿರೋಧಭಾಸ ಪದಗಳ ನಡುವಿನ ವ್ಯತ್ಯಾಸ, ಮತ್ತು ವೀರಶೈವ ಎಂಬುದು ಆರಾಧ್ಯರು ಚಲಾವಣೆಗೆ ತಂದ ಪದವಾಗಿದೆ ಎಂದು ಅವರು ಒತ್ತಿ ಹೇಳುತ್ತಿದ್ದುದ್ದು ವೀರಶೈವವಾದಿಗಳ ನಿದ್ದೆಗೆಡಿಸಿತ್ತು.
ಹರಿಹರ, ರಾಘವಾಂಕ, ಕೆರೆಯ ಪದ್ಮರಸ ಮತ್ತು ಕುಮಾರ ಪದ್ಮರಸ ಮುಂತಾದ ಆರಂಭಿಕ ಲೇಖಕರು ವೀರಶೈವ ಪದವನ್ನು ಬಳಸಲಿಲ್ಲ ಎಂಬ ಸತ್ಯವನ್ನು ಎತ್ತಿ ತೋರಿಸಲು ಅವರು ಅನೇಕ ಪುರಾವೆಗಳನ್ನು ಸಾದರ ಪಡಿಸಿದರು. ಕೆಲವು ಖೊಟ್ಟಿ ವಚನಗಳನ್ನು ಹೊರತು ಪಡಿಸಿ ಶರಣರ ಮೂಲ ವಚನಗಳಲ್ಲಿಯೂ ವೀರಶೈವ ಪದ ಬಳಕೆ ಕಂಡುಬರುವುದಿಲ್ಲ ಎನ್ನುವುದನ್ನು ಅವರು ಸ್ವಷ್ಟವಾಗಿ ಗುರುತಿಸಿದ್ದರು. ೧೩ ನೇ ಶತಮಾನದ ತೆಲುಗು ಕವಿ ಪಾಲ್ಕುರಿಕೆ ಸೋಮನಾಥನು ತನ್ನ ಬಸವಪುರಾಣ ಕೃತಿಯಲ್ಲಿ ಈ ಪದವನ್ನು ವೀರಮಾಹೇಶ್ವರ ಶಬ್ಧಕ್ಕೆ ಸಮಾನಾರ್ಥಕವಾಗಿ ಮೊದಲ ಬಾರಿಗೆ ಬಳಸಿದ ಬಗ್ಗೆ ಅವರು ದಾಖಲಿಸಿದರು. ಈ ಪದವು ೧೪ ನೇ ಶತಮಾನದ ಭೀಮಕವಿಯು ತನ್ನ ಬಸವಪುರಾಣದ ಮೂಲಕ ಕನ್ನಡಕ್ಕೆ ಪರಿಚಯಿಸಿದ. ೧೫ ನೇ ಮತ್ತು ೧೯ ನೇ ಶತಮಾನದ ನಡುವೆ, ಆಂಧ್ರದ ಆರಾಧ್ಯರು ಮೊದಲು ಕರ್ನಾಟಕದ ದಕ್ಷಿಣ ಮತ್ತು ನಂತರ ಉತ್ತರ ಭಾಗದಲ್ಲಿ ಈ ಶಬ್ಧವನ್ನು ಪ್ರಚಾರ ಮಾಡಿದ ನಂತರ ಇದು ಸಾಹಿತ್ಯ ಕೃತಿಗಳಲ್ಲಿ ವಿರಳವಾಗಿ ಬಳಸಲಾಯಿತು ಎನ್ನುತ್ತಾರೆ ಡಾ. ಕಲಬುರಗಿ.
ಈ ಶತಮಾನಗಳುದ್ದಕ್ಕೂ, ಶರಣರ ವಿಚಾರಗಳಲ್ಲಿನ ತಮ್ಮ ನಂಬಿಕೆಯ ಆದ್ಯತೆ ಮತ್ತು ಅಭಿವ್ಯಕ್ತಿ ಲಿಂಗಾಯತ ಮಾತ್ರ ಆಗಿತ್ತು. ೧೯೦೩ ರಲ್ಲಿ ಧಾರವಾಡದಲ್ಲಿ ವೀರಶೈವ ಮತ ಪ್ರಚಾರಕ ಸಂಘವನ್ನು ಸ್ಥಾಪಿಸಿದ ನಂತರವೇ ಈ ಶಬ್ಧವನ್ನು ವೀರಶೈವವಾದಿ ಜಾತಿ ಜಂಗಮರು ಜನಪ್ರಿಯತೆಗೊಳಿಸಿದರು. ಡಾ. ಕಲ್ಬುರ್ಗಿಯವರ ಪ್ರಕಾರ, ೧೨ ನೇ ಶತಮಾನದಲ್ಲಿ ಲಿಂಗಾಯತರ ಮೂಲವು ಶೈವ ಧರ್ಮದ ಇತಿಹಾಸ ಮತ್ತು ಅದರ ಜಾತಿ ಪೂರ್ವಾಗ್ರಹಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಶೈವಧರ್ಮವು ಮೂರು ರೂಪಗಳಲ್ಲಿ ಕಾಣಿಸಿಕೊಂಡಿದೆ: ೧. ಶಂಕರಾಚಾರ್ಯರ ಅದ್ವೈತದಿಂದ ಪ್ರಭಾವಿತವಾದ ವೈದಿಕ ಸಂಪ್ರದಾಯ, ೨. ನಾಥಪಂಥದ ಆರಾಧನೆಗಳು, ಮತ್ತು ೩. ಗಣನೀಯವಾಗಿ ವೈದಿಕ ಪ್ರಭಾವಕ್ಕೆ ಒಳಗಾದ ಆಗಮ ಸಂಪ್ರದಾಯ. ಅಂದಿನ ಕನ್ನಡ ನಾಡಿನಲ್ಲಿ, ಮೇಲಿನ ಶೈವ ಪಂಗಡಗಳಲ್ಲಿ ಆಗಮಿಕ ಶೈವಕ್ಕೆ ಹೆಚ್ಚಿನ ಅನುಯಾಯಿಗಳಿದ್ದರು. ಮೂರನೇ ಶೈವಕ್ಕೆ ಕಾಳಾಮುಖ, ಪಾಶುಪತ/ಲಕುಲೀಸ, ಮಹಾವ್ರತಿ/ಕಾಪಾಲಿಕ, ಮತ್ತು ಸುದ್ಧ ಶೈವ/ಶ್ರೋತ್ರೀಯರೆಂಬ ನಾಲ್ಕು ಸಂಪ್ರದಾಯಗಳಿವೆ ಎನ್ನುತ್ತಾರೆ ಡಾ. ಕಲಬುರಗಿ ಅವರು.
ನಾಲ್ಕನೆಯದಾದ ಶ್ರೋತ್ರಿಯ ಶೈವ ಸಂಪ್ರದಾಯವು ಒಂದು ಚಿಕ್ಕ ಗುಂಪಾಗಿ ಮಾತ್ರ ಕಾಲಾನಂತರ ಉಳಿದುಕೊಂಡಿತು. ಆದರೆ ಸಮಕಾಲೀನ ಆಂಧ್ರ ಮತ್ತು ತಮಿಳುನಾಡಿನಲ್ಲಿ ಶೈವರಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಅಸಂಖ್ಯಾತರಾಗಿ ಉಳಿದ ಈ ಶ್ರೋತ್ರೀಯರನ್ನು ಅಲ್ಲಿ ಮಾಹೇಶ್ವರರು ಎಂದು ಕರೆಯಲಾಗುತ್ತಿತ್ತು. ಕರ್ನಾಟಕ-ಮಹಾರಾಷ್ಟ್ರ ಪ್ರದೇಶಗಳಲ್ಲಿ ಶ್ರೋತ್ರಿಯ ಶೈವರ ಅಸ್ತಿತ್ವದ ಕುರಿತು ಸ್ಪಷ್ಟ ಉಲ್ಲೇಖವು ಕ್ರಿ.ಶ. ೯೫೯ ರಲ್ಲಿ ಮೊದಲು ಕಾಣಿಸಿಕೊಂಡಿದೆ. ಈ ಶ್ರೋತ್ರೀಯ ಶೈವರು ಕಾಶ್ಮೀರಿ ಮೂಲದವರು ಮತ್ತು ಮಧ್ಯಪ್ರದೇಶದ ಗೋಲಕಿ ಮಠದ ಅನುಯಾಯಿಗಳಾಗಿ ದಕ್ಷಿಣಕ್ಕೆ ವಲಸೆ ಬಂದವರು. ೧೧ ಮತ್ತು ೧೨ ನೇ ಶತಮಾನದಲ್ಲಿ ಅವರು ತಮಿಳುನಾಡು ಮತ್ತು ಆಂಧ್ರದಾದ್ಯಂತ ಹರಡಿದರು. ಚೋಳರು ಮತ್ತು ಕಾಕತೀಯರ ಪ್ರೋತ್ಸಾಹವು ಅವರನ್ನು ಅಜೇಯರನ್ನಾಗಿ ಮಾಡಿತು. ಅವರು ತಮಿಳುನಾಡಿನಲ್ಲಿ ಜೈನರು ಮತ್ತು ಶ್ರೀವೈಷ್ಣವರಿಗೆ ಕಿರುಕುಳ ನೀಡಿದರು ಮತ್ತು ಆಂಧ್ರದ ಪಾಶುಪತರಿಂದ ಶ್ರೀಶೈಲವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು ಎನ್ನುವ ಸಂಗತಿಯನ್ನು ಡಾ. ಕಲಬುರಗಿಯವರು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ.
ಶ್ರೋತ್ರೀಯರು ಅತ್ಯಂತ ಸಾಂಪ್ರದಾಯಸ್ಥ ಬ್ರಾಹ್ಮಣರಾಗಿದ್ದರು, ಶೋಷಣೆ ಮತ್ತು ಹಿಂಸೆಗೆ ಅವರು ಜಗದ್ವಿಖ್ಯಾತರಾಗಿದ್ದರು. ಅವರ ಆಳವಾದ ಜಾತಿ ಪೂರ್ವಾಗ್ರಹಗಳ ಪ್ರತೀಕವೆಂದರೆ: ರಾಯಚೂರು ಜಿಲ್ಲೆಯ ಕರಡಿಕಲ್ಲು ಎಂಬ ಶಾಸನದಲ್ಲಿ, ಕೆಳವರ್ಗದ ಜನರು ತಮ್ಮ ಮದುವೆಯ ಸಂದರ್ಭದಲ್ಲಿ ಮಾರುಕಟ್ಟೆ ಬೀದಿಯಲ್ಲಿ ಗಾಡಿಗಳಲ್ಲಿ ಪ್ರಯಾಣಿಸುವುದನ್ನು ನಿಷೇಧಿಸುವ ಮತ್ತು ಆ ಆದೇಶವನ್ನು ಉಲ್ಲಂಘಿಸಿದವರಿಗೆ ೧೨ ಗದ್ಯಾಣಗಳ ದಂಡವನ್ನು ವಿಧಿಸುತ್ತಿದ್ದರ ಕುರಿತು ಮಾಹಿತಿ ಇದೆ. ಇವರ ಜಾತಿ ಪೂರ್ವಾಗ್ರಹಗಳ ವಿರುದ್ಧ ೧೨ ನೇ ಶತಮಾನದಲ್ಲಿ ಶ್ರೋತ್ರಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಸವಣ್ಣ ಅವರ ಕುಲದವರ ವಿರುದ್ಧವೆ ದಂಗೆ ಎದ್ದರು. ಅವರು ಹೊಸ ಶರಣ ಧರ್ಮದ ನಂಬಿಕೆ ಮತ್ತು ಸಿದ್ಧಾಂತವನ್ನು ಸ್ಥಾಪಿಸಿ ದೀಕ್ಷಾ ವಿಧಿಯ ಮೂಲಕ ಹೊಸ ಧರ್ಮದ ಸದಸ್ಯರನ್ನಾಗಿಸಿದರು. ಈ ದೀಕ್ಷಾ ವಿಧಾನವು ಹೆಚ್ಚಿನ ಸಂದರ್ಭಗಳಲ್ಲಿ ಈಗಾಗಲೇ ಇತರ ಶೈವ ಸಂಪ್ರದಾಯಗಳ ಭಾಗವಾಗಿರುವವರ ಮರು-ದೀಕ್ಷೆಯಾಗಿತ್ತು ಎಂದು ಡಾ. ಕಲಬುರಗಿ ಪ್ರತಿಪಾದಿಸಿದ್ದಾರೆ.
ಬಸವಣ್ಣ ಪ್ರತಿಪಾದಿಸಿದ ಹೊಸ ನಂಬಿಕೆಯು ಇಷ್ಟಲಿಂಗದ ಆರಾಧನೆಯನ್ನು ಉತ್ತೇಜಿಸಿˌ ಜಾತಿ ಮತ್ತು ಲಿಂಗದ ಆಧಾರದ ಮೇಲಿನ ಆಚರಣೆಗಳು, ಕ್ರಮಾನುಗತಗಳು ಮತ್ತು ಪಕ್ಷಪಾತಗಳನ್ನು ತಿರಸ್ಕರಿಸಿತು. ಕಾಳಾಮುಖ, ಪಾಶುಪಥ ಮತ್ತು ಮಹಾವ್ರತಿ ಸಂಪ್ರದಾಯಗಳಿಗೆ ಸೇರಿದ ಕೆಲವರು ಲಿಂಗಾಯತ ಧರ್ಮಕ್ಕೆ ಮತಾಂತರ ಹೊಂದಿದರೆ, ಶ್ರೋತ್ರಿಯರು ಬಸವಣ್ಣ ಸ್ಥಾಪಿಸಿದ ಈ ಹೊಸ ಧರ್ಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಗೊಂಡರು. ಬಸವಣ್ಣನವರ ವಿಚಾರಗಳ ಪ್ರಭಾವವು ನಾಲ್ಕೂ ಶೈವ ಸಂಪ್ರದಾಯದ ಮಠಗಳ ಮೇಲೂ ಇತ್ತು. ಆ ಮಠಗಳ ಮಠಾಧೀಶರು ಕರ್ನಾಟಕದಲ್ಲಿ ಜಂಗಮರಾಗಿ ಮತ್ತು ಆಂಧ್ರದಲ್ಲಿ ಆರಾಧ್ಯರಾಗಿ ವಿಕಸನಗೊಂಡರು. ಆರಾಧ್ಯರು ಶ್ರೋತ್ರೀಯರಾಗಿದ್ದು ತಮ್ಮ ಮೂಲ ಗುಣಗಳಾದ ಬ್ರಾಹ್ಮಣತ್ವ, ಜಾತಿ ಶ್ರೇಣೀಕರಣ ಮತ್ತು ಆಚರಣೆಗಳಿಗೆ ಅವರು ಹೆಚ್ಚು ಬದ್ಧರಾಗಿದ್ದರು, ಬಸವಣ್ಣನಲ್ಲಿ ಅವರ ಆಸಕ್ತಿಯು ಹೊರದಾಗಿ ಅವಿಷ್ಕರಿಸಿದ್ದ ಇಷ್ಟಲಿಂಗದ ಅನುಸಂಧಾನಕ್ಕೆ ಮಾತ್ರ ಸೀಮಿತವಾಗಿತ್ತು. ಈ ಶ್ರೋತ್ರೀಯರ ಪ್ರಮುಖ ಪ್ರತಿನಿಧಿ ಎಂದರೆ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಎಂದು ಡಾ. ಕಲಬುರಗಿಯವರು ದಾಖಲಿಸಿದ್ದಾರೆ.
೧೫ ನೇ ಮತ್ತು ೧೬ ನೇ ಶತಮಾನಗಳಲ್ಲಿ, ಆಂಧ್ರದ ಆರಾಧ್ಯರು ದಕ್ಷಿಣ ಕರ್ನಾಟಕಕ್ಕೆ ವಲಸೆ ಬಂದು, ಅಲ್ಲಿ ಅವರು ಲಿಂಗಾಯತ ಧರ್ಮವನ್ನು ಸ್ವೀಕರಿಸಿದರು. ಆದರೆ, ತಮ್ಮ ಹಳೆಯ ಕಾಳಾಮುಖ, ಪಾಶುಪಥ ಮತ್ತು ಮಹಾವ್ರತಿ ಶೈವರ ಅವಶೇಷಗಳನ್ನು ಮತ್ತು ನಾಥದಂತಹ ಆರಾಧನೆಗಳನ್ನು ಅವರು ಸಂಪೂರ್ಣವಾಗಿ ತ್ಯಜಿಸಲಿಲ್ಲ ಮತ್ತು ಬಸವಣ್ಣನವರ ಇಷ್ಟಲಿಂಗವನ್ನು ಕೂಡ ಧರಿಸುವ ಹೊಸ ಸಂಪ್ರದಾಯವನ್ನು ಅನುಸರಿಸಿದರು. ಆದರೆ ಅವರು ತಮ್ಮ ಮೂಲ ಗುಣದಂತೆ ಇಷ್ಟಲಿಂಗ ಧರಿಸಿಯೂ ಹೆಚ್ಚಾಗಿ ಬ್ರಾಹ್ಮಣರಾಗಿಯೆ ಉಳಿದರು. ಹೀಗೆ ಕರ್ನಾಟಕದಲ್ಲಿ ಪಂಚಾಚಾರ್ಯ ಪರಂಪರೆ ಆರಂಭವಾಯಿತು ಎಂದು ಡಾ. ಕಲಬುರಗಿಯವರು ಬಹಳ ಗೂಢವಾಗಿ ಉಳಿದಿದ್ದ ಸತ್ಯಗಳನ್ನು ಬಯಲಿಗೆಳೆದಿದ್ದಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಲಿಂಗಾಯತ ಧರ್ಮದ ಮೂಲದ ಬಗ್ಗೆ ಡಾ. ಕಲಬುರಗಿಯವರ ಪ್ರಬಂಧಗಳು ಶ್ರೋತ್ರೀಯ ಸಂಪ್ರದಾಯದ ಆರಾಧ್ಯರ ಮತಾಂತರ ಮತ್ತು ಆ ಮೂಲಕ ಲಿಂಗಾಯತ ಧರ್ಮದ ರೂಪಾಂತರವನ್ನು ಸಮರ್ಥವಾಗಿ ಹಾಗು ಸಾಕ್ಷ್ಯಗಳ ಸಮೇತ ವಿವರಿಸುತ್ತವೆ.
ಈ ಪ್ರಬಂಧಗಳು ೧೨ ನೇ ಮತ್ತು ೧೬ ನೇ ಶತಮಾನದ ನಡುವೆ ಕರ್ನಾಟಕದಲ್ಲಿ ಶೈವಧರ್ಮದ ವಿಕಾಸವನ್ನು ಅನ್ವೇಷಿಸಲು ಸಂಪೂರ್ಣವಾಗಿ ಹೊಸ ಸಂಶೋಧನಾ ಮಾರ್ಗವನ್ನು ತೆರೆಯುತ್ತವೆ. ಡಾ. ಕಲಬುರಗಿಯವರು ಆರಾಧ್ಯರು ಮತ್ತು ವಿರಕ್ತರ ನಡುವೆ ನಡೆದ ಸಂಘರ್ಷದ ಅನೇಕ ಪುರಾವೆಗಳನ್ನು ನೀಡುವ ಮೂಲಕ ಸಮಕಾಲೀನ ವೀರಶೈವರ ಪೂರ್ವಾಗ್ರಹಗಳಿಗೆ ಸರಳವಾದ ಮತ್ತು ಅಷ್ಟೇ ತೀಕ್ಷ್ಣವಾದ ಬರೆಯನ್ನು ಹಾಕಿದ್ದಾರೆ. ವೀರಶೈವ ಗುಂಪಿನ ರಚನಾತ್ಮಕವಲ್ಲದ ಅಸಾಮರಸ್ಯವು ಹೇಗೆ ಲಿಂಗಾಯತ ಧರ್ಮವನ್ನು ಕುಲಗೆಡಿಸಿದೆ ಎಂಬುದನ್ನು ಅನ್ವೇಷಿಸಲು ಐತಿಹಾಸಿಕ ನಿಖರ ಮೂಲಗಳ ಬಗ್ಗೆ ಡಾ. ಕಲಬುರಗಿಯವರ ವಿಚಾರಗಳು ಹೆಚ್ಚು ವಾದಿಸತ್ತವೆ. ಲಿಂಗಾಯತ ಧರ್ಮಿಯರ ಬಹುಕಾಲದ ಅಲ್ಪಸಂಖ್ಯಾತ ಸ್ಥಾನಮಾನದ ಪ್ರಸ್ತುತ ಬೇಡಿಕೆಯ ಭಾಗವಾಗಿ ಡಾ. ಕಲಬುರಗಿಯವರು ಪ್ರತಿಪಾದಿಸಿದ ಐತಿಹಾಸಿಕ ಸಂಗತಿಗಳ ಬಗ್ಗೆ ನಾವೆಲ್ಲರೂ ಹೆಮ್ಮೆಪಡಬೇಕಾಗಿದೆ, ಏಕೆಂದರೆ ಅವು ಕೇವಲ ಕಲಬುರಗಿಯವರ ಪ್ರಬಂಧದ ಪ್ರತಿಧ್ವನಿಗಳಷ್ಟೆ ಅಲ್ಲದೆ ಇತಿಹಾಸದ ಕಾಲಗರ್ಭದಲ್ಲಿ ಗತಿಸಿಹೋದ ಪ್ರಮಾದಗಳನ್ನು ಸರಿಪಡಿಸುವ ಪ್ರತಿಧ್ವನಿಗಳು ಎಂದು ನಾವು ಭಾವಿಸಬೇಕಿದೆ. ಅದೇ ನಾವು ಡಾ. ಕಲಬುರಗಿಯವರಿಗೆ ಸಲ್ಲಿಸುವ ನೈಜ ಗೌರವವಾಗಿದೆ.