• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ದಿನಾಂಕ 13 ಫೆಬ್ರವರಿ 2026ರಂದು ಮೈಸೂರು ವಿಶ್ವವಿದ್ಯಾಲಯದ ಅಂಬೇಡ್ಕರ್‌ ಅಧ್ಯಯನ ಕೇಂದ್ರದಲ್ಲಿ ಮಂಡಿಸಿದ ಉಪನ್ಯಾಸ

ಪ್ರತಿಧ್ವನಿ by ಪ್ರತಿಧ್ವನಿ
March 17, 2026
in Top Story, ಕರ್ನಾಟಕ, ರಾಜಕೀಯ, ವಿದೇಶ, ವಿಶೇಷ, ಸರ್ಕಾರಿ ಗೆಜೆಟ್
0
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ
Share on WhatsAppShare on FacebookShare on Telegram

 

ADVERTISEMENT

ಭಾಗ 1

ಪ್ರವೇಶಿಕೆ

 ಭಾರತದ ಸ್ವಾತಂತ್ರ್ಯ ಸಂಗ್ರಾಮ ಒಂದು ನಿರ್ಣಾಯಕ ಘಟ್ಟ ತಲುಪಿದ್ದು 20ನೇ ಶತಮಾನದ ಎರಡನೆ ಮತ್ತು ಮೂರನೆ ದಶಕಗಳಲ್ಲಿ. ಇದೇ  ಸಮಯದಲ್ಲೇ ವಸಾಹತು ಆಳ್ವಿಕೆಯನ್ನು ಮತ್ತು ಅದರಿಂದ ವಿಮೋಚನೆ ಪಡೆಯಲು ಅನುಸರಿಸಬೇಕಾದ ಮಾರ್ಗಗಳನ್ನು ವಿಭಿನ್ನ ಸೈದ್ಧಾಂತಿಕ ದೃಷ್ಟಿಕೋನಗಳಿಂದ ನೋಡುವ ಬೌದ್ಧಿಕ ಚಿಂತನಾ ವಾಹಿನಿಗಳೂ ಹುಟ್ಟಿಕೊಂಡವು. 20ನೆ ಶತಮಾನದ ಆರಂಭದಿಂದಲೇ ವಿಶ್ವದಾದ್ಯಂತ ವಿವಿಧ ದೇಶಗಳ ಸಾಮಾನ್ಯ ಜನರ ನಡುವೆ ಹುಟ್ಟಿಕೊಂಡಂತಹ ಆಳ್ವಿಕೆಯ ಮಾದರಿಗಳು ಮತ್ತು ಆಡಳಿತ ವ್ಯವಸ್ಥೆಯ ಚೌಕಟ್ಟುಗಳು ಭಾರತವನ್ನೂ ಪ್ರಭಾವಿಸಿತ್ತು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷವೇ ಇದ್ದರೂ ಸಹ ಅದರೊಳಗೆ ಕವಲೊಡೆದ ಸೈದ್ದಾಂತಿಕ ಮಾರ್ಗಗಳು ಒಂದೇ ರೀತಿಯ ತಾತ್ವಿಕ ಚಿಂತನೆಗಳನ್ನು ಹೊಂದಿರಲಿಲ್ಲ.

 ಪ್ರಜಾಪ್ರಭುತ್ವ, ವಯಸ್ಕ ಮತದಾನ, ಸಾಂವಿಧಾನಿಕ ಸಂರಚನೆಗಳು, ಮಹಿಳಾ ಹಕ್ಕುಗಳು, ಕಾರ್ಮಿಕ ಹಕ್ಕುಗಳು, ರಾಜಪ್ರಭುತ್ವಗಳ ವಿರುದ್ಧದ ಧೋರಣೆ, ನಿರಂಕುಶಾಧಿಕಾರ ಮತ್ತು ಸರ್ವಾಧಿಕಾರಗಳ ನಿರಾಕರಣೆ ಇವೆಲ್ಲವೂ ಸಹ ಈ ದಶಕಗಳಲ್ಲೇ ಕೇಳಿಬಂದಂತಹ ಧ್ವನಿಗಳು. ಈ ಧ್ವನಿಗಳಿಗೆ ಪೂರಕವಾಗಿ ಸೈದ್ದಾಂತಿಕ ನೆಲೆಯಲ್ಲಿ ಮಾರ್ಕ್ಸ್‌ವಾದ, ರಷ್ಯಾದ ಕ್ರಾಂತಿ, ಸಮಾಜವಾದ ಮೊದಲಾದ ಪುರೋಗಾಮಿ ಚಿಂತನೆಗಳೂ ವ್ಯಾಪಕವಾಗಿ ಹರಡಿದ್ದವು. ಮತ್ತೊಂದು ಮಗ್ಗುಲಲ್ಲಿ ಹಿಟ್ಲರ್‌ ಮುಸೋಲಿನಿಯ ನಾಝೀವಾದ-ಫ್ಯಾಸೀವಾದವೂ ಅಷ್ಟೇ ಪ್ರಭಾವಶಾಲಿಯಾಗಿತ್ತು. ಇದರ ಒಂದು ಛಾಯೆಯನ್ನು ಭಾರತದ ಬಲಪಂಥೀಯ ಚಿಂತನಾವಾಹಿನಿಗಳ ಮೂಲಕ ಹರಿದಾಡತೊಡಗಿತ್ತು. ಏಕಕಾಲಕ್ಕೆ ಕಮ್ಯುನಿಸ್ಟ್‌ ಪಕ್ಷ ಮತ್ತು ಸೈದ್ದಾಂತಿಕವಾಗಿ ಮತ್ತೊಂದು ಧೃವದಲ್ಲಿ ಆರೆಸ್ಸೆಸ್‌ ಸ್ಥಾಪನೆಯಾದದ್ದು, ನಡುವೆಯೇ ರಷ್ಯಾ ಕ್ರಾಂತಿಯ ಪ್ರಭಾವದಿಂದ ಮೂಡಿದ ಕ್ರಾಂತಿಯ ಅಲೆಗಳು, ಈ ಚಾರಿತ್ರಿಕ ವೈರುಧ್ಯಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

Ambedkar Jayanti honouring 135 years of equality and social justice

 ವಸಾಹತುಶಾಹಿ ಆಳ್ವಿಕೆ, ಔದ್ಯೋಗಿಕ ಬಂಡವಾಳಶಾಹಿ ಮತ್ತು ನಿಧಾನವಾಗಿ ರೂಪುಗೊಳ್ಳುತ್ತಿದ್ದ ಸಾಮ್ರಜ್ಯಶಾಹಿಗಳ ನಡುವೆ, ಭಾರತದಲ್ಲಿ ಅಲ್ಲಿಯವರೆಗೂ ಪ್ರಧಾನವಾಗಿ ಕಾಣದೆ ಇದ್ದ ಒಂದು ವಿದ್ಯಮಾನ ಈ ದಶಕಗಳಲ್ಲಿ ಇಡೀ ವಿಶ್ವದ ಗಮನ ಸೆಳೆದಿತ್ತು. ಈ ವಿದ್ಯಮಾನವನ್ನು ಜನರ ಮುಂದೆ ತೆರೆದಿಟ್ಟವರು ಡಾ. ಬಿ.ಆರ್.‌ ಅಂಬೇಡ್ಕರ್.‌ ಭಾರತವನ್ನು ರಾಜಕೀಯವಾಗಿ ಬ್ರಿಟೀಷ್‌ ವಸಾಹತುಶಾಹಿ ಆಳುತ್ತಿದ್ದರೂ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಇಡೀ ಸಮಾಜವನ್ನು ನಿರ್ದೇಶಿಸಿ, ನಿಯಂತ್ರಿಸುತ್ತಿದ್ದುದು ಶತಮಾನಗಳಿಂದ ಬೇರೂರಿದ್ದ ಜಾತಿ ವ್ಯವಸ್ಥೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಇದೇನೂ ತಿಳಿಯದ ಸಂಗತಿ ಆಗಿರಲಿಲ್ಲ. 1915ರಲ್ಲಿ ಭಾರತಕ್ಕೆ ಬರುವ ಮುನ್ನವೇ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ಗಾಂಧಿ ಮತ್ತಿತರ ಸ್ವದೇಶಿ ನಾಯಕರಿಗೆ ಇದರ ಅರಿವಿತ್ತು.

 ಆದರೆ ಈ ಜಾತಿ ವ್ಯವಸ್ಥೆಯೊಳಗಿನ ಕ್ರೌರ್ಯ, ಸಮಾಜವನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳುವ ಮೇಲ್ಜಾತಿಗಳ ದಬ್ಬಾಳಿಕೆ, ಅದಕ್ಕೆ ಉತ್ತೇಜಕವಾಗಿದ್ದ ಸ್ಥಳೀಯ ರಾಜಪ್ರಭುತ್ವಗಳು ಹಾಗೂ ಈ ಜಾತಿ ತಾರತಮ್ಯಗಳ ಫಲವಾಗಿ ದೇಶದ ಉದ್ದಗಲಕ್ಕೂ ಅಂತರ್‌ ವಾಹಿನಿಯಾಗಿ ಹರಿಯುತ್ತಿದ್ದ ಸಾಮಾಜಿಕ-ಆರ್ಥಿಕ ಅಸಮಾನತೆ, ಅತ್ಯಂತ ಕ್ರೂರ ಅಮಾನವೀಯ ಅಸ್ಪೃಶ್ಯತೆಯ ಆಚರಣೆ, ಸಾಮಾಜಿಕ ಬಹಿಷ್ಕಾರದ ಚೌಕಟ್ಟುಗಳು ಹಾಗೂ ಇವುಗಳನ್ನು ನಿರ್ವಹಿಸಲೆಂದೇ ತಾತ್ವಿಕವಾಗಿ ಬೇರೂರಿದ್ದ ಊಳಿಗಮಾನ್ಯ-ಪಿತೃಪ್ರಧಾನ ಸಮಾಜಗಳು ಇವೆಲ್ಲವೂ ಸ್ವಾತಂತ್ರ್ಯಪೂರ್ವ ಭಾರತದ ಸಾರ್ವಜನಿಕ ಸಂಕಥನದ ಒಂದು ಭಾಗವಾಗಲು ಕಾರಣ ಅಂಬೇಡ್ಕರ್‌ ಅವರ ಅಧ್ಯಯನ, ಸಂಶೋಧನೆ ಮತ್ತು ರಾಜಕೀಯ ಪರಿಕಲ್ಪನೆ. ವಸಾಹತು ದಾಸ್ಯದಿಂದ ವಿಮೋಚನೆ ಪಡೆಯುವುದಕ್ಕಿಂತಲೂ ಹೆಚ್ಚಾಗಿ, ಭಾರತದಲ್ಲೇ ಶತಮಾನಗಳ ಆಧಿಪತ್ಯ ಸಾಧಿಸಿದ್ದ ಜಾತಿ ವ್ಯವಸ್ಥೆಯ ಮೇಲ್ಪದರ ಸಮಾಜದ ಸಂಕೋಲೆಗಳಿಂದ, ಶೋಷಿತ ತಳಸಮುದಾಯಗಳಿಗೆ, ಅಸ್ಪೃಶ್ಯ ಸಮುದಾಯಗಳಿಗೆ, ಆದಿವಾಸಿಗಳಿಗೆ ಹಾಗೂ ಅಂಚಿನಲ್ಲಿರುವ ಸಮುದಾಯಗಳಿಗೆ ವಿಮೋಚನೆ ಪಡೆಯುವುದು ಅಂಬೇಡ್ಕರ್‌ ಅವರಿಗೆ ಪ್ರಥಮ ಆದ್ಯತೆಯಾಗಿತ್ತು.

Podcast with UPSC Topper Kiran kamate : ಕೋಚಿಂಗ್ ಇಲ್ಲದೆ ಐಎಎಸ್ ಪಾಸ್ ಆಗೋದು ಹೇಗೆ..? #pratidhvani

 ಆಫ್ರಿಕಾದ ವರ್ಣಭೇದ ನೀತಿಗಿಂತಲೂ ಕ್ರೂರವಾದ ಒಂದು ಸಮಾಜವನ್ನು ಅಂಬೇಡ್ಕರ್‌ ಭಾರತದಲ್ಲಿ ಗುರುತಿಸಿದ್ದರು. ಇದು ಜನ್ಮಭೇದ ನೀತಿಯಾಗಿ, ಅಲಿಖಿತ ಸಂವಿಧಾನದ ಮೂಲಕ ಹಿಂದೂ ಧರ್ಮೀಯರಲ್ಲದೆ ಇತರ ಧರ್ಮಗಳ ಸಮಾಜಗಳನ್ನೂ ಆಕ್ರಮಿಸಿತ್ತು. ವ್ಯಕ್ತಿಯನ್ನು ಆತನ/ಆಕೆಯ ಹುಟ್ಟಿನ ಆಧಾರದಲ್ಲಿ ನೋಡುವ, ತನ್ಮೂಲಕ ಪ್ರತ್ಯೇಕತೆಯನ್ನು ಸೃಷ್ಟಿಸುವ ಹಾಗೂ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕೆಳಶ್ರೇಣಿಯ ಜನರನ್ನು ನಿಕೃಷ್ಟವಾಗಿ ಕಾಣುವ ಒಂದು ಸಮಾಜ ಭಾರತೀಯ ಸಮಾಜವನ್ನು ಪರೋಕ್ಷವಾಗಿ, ಮನುಸ್ಮೃತಿಯಂತಹ ಮಧ್ಯಕಾಲೀನ ಗ್ರಂಥಗಳ ಸಂಹಿತೆಗಳನ್ನು ಅಧರಿಸಿ ನಿಯಂತ್ರಿಸುತ್ತಿದ್ದು, ಶ್ರೇಣೀಕೃತ ವ್ಯವಸ್ಥೆಯ ನಿರ್ವಚಿತ ನಾಲ್ಕು ಜಾತಿಗಳಿಂದಾಚೆಗಿನ ಅಸ್ಪೃಶ್ಯರು/ಪಂಚಮರು, ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಅತ್ಯಂತ ಕ್ರೂರ ಶೋಷಣೆ, ಅಮಾನವೀಯ ದಬ್ಬಾಳಿಕೆ ಮತ್ತು ಭೌತಿಕ-ಬೌದ್ಧಿಕ ಚಿತ್ರಹಿಂಸೆಗೊಳಗಾಗುತ್ತಿದ್ದ ಸಮುದಾಯಗಳಾಗಿದ್ದವು.

 ಸಂವಿಧಾನ ರಚನಾ ಮಂಡಲಿಯಲ್ಲಿ ಅಂಬೇಡ್ಕರ್‌ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ ಕಾರಣ ಎಂದರೆ ಈ ಕ್ಷಮತೆ, ಅಧ್ಯಯನ ವಿದ್ವತ್ತು ಮತ್ತು ಭಾರತೀಯ ಸಮಾಜದ ಗ್ರಹಿಕೆ ಇದ್ದುದು ಅವರಲ್ಲೇ ಹೆಚ್ಚು. ಗಾಂಧಿ ಇಡೀ ಭಾರತವನ್ನು ಕಾಲ್ನಡಿಗೆಯಲ್ಲೇ ಸುತ್ತಿದ ಏಕೈಕ ನಾಯಕರಾದರೂ, ಅವರಲ್ಲಿ ಅಧ್ಯಯನದ ಕೊರತೆ ಇತ್ತು. ಭಾರತೀಯ ಸಮಾಜವನ್ನು Practical ಆಗಿ ನೋಡಲಿಲ್ಲ. ಅಂಬೇಡ್ಕರ್‌ ಸಹ ಗಾಂಧಿಯಷ್ಟಲ್ಲದಿದ್ದರೂ, ಭಾರತದ ಉದ್ದಗಲಕ್ಕೂ ಪ್ರಯಾಣ ಮಾಡಿದ್ದು, ಜನರ ನಾಡಿಮಿಡಿತವನ್ನು, ಸಮಾಜದ ಒಳಸುಳಿಗಳನ್ನು ನಿತ್ಯಜೀವನದ  ನಿರ್ವಹಣೆಯ ದೃಷ್ಟಿಯಿಂದ Practical ಆಗಿ ನೋಡಿದ್ದರು. ಜಾಗತಿಕ ಇತಿಹಾಸ ಮತ್ತು ಸಂವಿಧಾನಗಳ ಅಧ್ಯಯನದ ಅರಿವು ಅಂಬೇಡ್ಕರ್‌ ಅವರಲ್ಲಿ ಹೆಚ್ಚಾಗಿತ್ತು. ನೆಹರೂ ಅವರಲ್ಲಿ ಈ ವಿದ್ವತ್ತು ಇದ್ದರೂ ಸಹ ಅವರಿಗೆ ಭಾರತದ ತಳಸಮಾಜಗಳ ಗ್ರಹಿಕೆಯಲ್ಲಿ ಕೊರತೆ ಇತ್ತು. ಈ ಮೂವರು ನಾಯಕರನ್ನು ಹೊರತುಪಡಿಸಿ ಮತ್ತಾವುದೇ ನಾಯಕರಿಗೂ ಸಂವಿಧಾನ ರಚನೆಯ ಮುಂದಾಳತ್ವ ವಹಿಸುವ ಅರ್ಹತೆ ಇರಲಿಲ್ಲ. ಇವರ ಪೈಕಿ ಅಂಬೇಡ್ಕರ್‌ ಅತ್ಯಂತ ಸೂಕ್ತ ವ್ಯಕ್ತಿಯಾಗಿ ಕಂಡಿದ್ದರು.

FATHER OF OUR CONSTIUTION- DR. B.R AMBEDHKAR – Eduindex

 ಸಾಮಾನ್ಯವಾಗಿ ಬೌದ್ಧಿಕ ಚರ್ಚೆಗಳಲ್ಲಿ ಭಾರತೀಯ ಸಮಾಜವನ್ನು ವ್ಯಾಖ್ಯಾನಿಸುವಾಗ   ಡಾ ಬಿ.ಆರ್.‌ ಅಂಬೇಡ್ಕರ್‌ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನೇ ಕೇಂದ್ರೀಕರಿಸಿದ್ದರು ಎಂದು ಹೇಳಲಾಗುತ್ತದೆ. ಆದರೆ ವಾಸ್ತವವಾಗಿ ಸಮಾನತೆಯ ಪ್ರತಿಪಾದಕರಾಗಿ, ಸಮಾಜದ ಎಲ್ಲ ಜನಸಮುದಾಯಗಳಿಗೂ ಸಮಾನ ಅವಕಾಶ, ಸಮಾನ ಹಕ್ಕು, ಸಮಾನ ಅಧಿಕಾರ ಮತ್ತು ಸಮಾನ ಸ್ಥಾನಮಾನಗಳನ್ನು ಬಲವಾಗಿ ಸಮರ್ಥಿಸುತ್ತಿದ್ದ ಆಂಬೇಡ್ಕರ್‌, ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿದ್ದ ಅಸಮಾನತೆ ಮತ್ತು ತಾರತಮ್ಯಗಳ ಮೂಲ ಕೇಂದ್ರವನ್ನು ಗುರುತಿಸಿದ್ದು  ಜಾತಿ ವ್ಯವಸ್ಥೆಯಲ್ಲಿ. ಈ ವ್ಯವಸ್ಥೆಯ ಗರ್ಭದಲ್ಲೇ ಎಲ್ಲ ರೀತಿಯ ಸಾಮಾಜಿಕ ತರತಮಗಳೂ ಅಡಗಿರುವುದನ್ನು ಗುರುತಿಸಿದ ಅಂಬೇಡ್ಕರ್‌, ಇದರ ಮೂಲ ಕಾರಣವನ್ನು ಹಿಂದೂ ಧರ್ಮದ ಸಂಹಿತೆಗಳಲ್ಲಿ, ಪುರಾಣಗಳಲ್ಲಿ ಹಾಗೂ ಬ್ರಾಹ್ಮಣಶಾಹಿಯ ಆಧಿಪತ್ಯದಲ್ಲಿ ಗುರುತಿಸಿದ್ದರು. ಅಂಬೇಡ್ಕರ್‌ ಅವರ ಪ್ರಭುತ್ವದ ಕಲ್ಪನೆಯನ್ನು ಈ ಚಾರಿತ್ರಿಕ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ.

 ಅಂಬೇಡ್ಕರ್‌ ಮತ್ತು ಪ್ರಭುತ್ವ

 20ನೆ ಶತಮಾನದಲ್ಲಿ ವಿವಿಧ ದೇಶಗಳಲ್ಲಿ ಭಿನ್ನ ಮಾದರಿಗಳಲ್ಲಿ ರಚನೆಯಾಗಿದ್ದ ಪ್ರಭುತ್ವಗಳ ಲಕ್ಷಣವನ್ನು ಹಾಗೂ ಅಂತರ್ಗತ ರೂಪವನ್ನು ತಮ್ಮ ಅಧ್ಯಯನದ ಮೂಲಕ ಗ್ರಹಿಸಿದ್ದ ಅಂಬೇಡ್ಕರ್‌ ಸಹಜವಾಗಿಯೇ ಪ್ರಭುತ್ವ ಅಥವಾ ಸ್ಟೇಟ್‌ ಎಂಬ ಕಲ್ಪನೆಯ ಒಳಹೊರಗುಗಳನ್ನು ಸ್ಪಷ್ಟವಾಗಿ ಅರಿತಿದ್ದರು. ದೇಶದ ಸಾಮಾಜಿಕ-ಆರ್ಥಿಕ ವಲಯಗಳಲ್ಲಿ ತಳಮಟ್ಟದವರೆಗೂ ಜನರ ಯೋಗಕ್ಷೇಮ ಮತ್ತು ಏಳಿಗೆಯನ್ನು ಸಾಧಿಸುವ ನಿಟ್ಟಿನಲ್ಲಿ ನ್ಯಾಯಪರವಾದ ಪ್ರಭುತ್ವ ಅತ್ಯವಶ್ಯ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಜಾತಿ, ಮತ , ಧರ್ಮ, ಜನಾಂಗ ಮತ್ತು ಪ್ರಾದೇಶಿಕ ತಾರತಮ್ಯಗಳಿಲ್ಲದ ಪ್ರಜಾಸತ್ತಾತ್ಮಕ ಆಳ್ವಿಕೆಗೆ ಪೂರಕವಾಗಿ ಪ್ರಭುತ್ವವೂ ರೂಪುಗೊಳ್ಳಬೇಕು ಎನ್ನುವುದು ಅವರ ಖಚಿತ ಅಭಿಪ್ರಾಯವಾಗಿತ್ತು.  ಹಾಗಾಗಿಯೇ ಅವರ ಕಲ್ಪನೆಯಲ್ಲಿ ಸ್ವಾತಂತ್ರ್ಯ ಸಮಾನತೆ  ನ್ಯಾಯ ಮತ್ತು ಬಂಧುತ್ವ ಈ ಮೌಲ್ಯಗಳು ಪ್ರಭುತ್ವದ ಆಧಾರ ಸ್ತಂಭಗಳಾಗಿ ಕಂಡಿದ್ದವು.

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ - ಕಾನೂನು ವಿಧಿ

 ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಸ್ಟೇಟ್‌ ಅಥವಾ ಪ್ರಭುತ್ವ ಎನ್ನುವುದು ವಿಶಾಲಾರ್ಥದ ಒಂದು ರಾಜಕೀಯ ವ್ಯವಸ್ಥೆ. ಸರ್ಕಾರ ಈ ವ್ಯವಸ್ಥೆಯಲ್ಲಿ ಆಳ್ವಿಕೆ ನಡೆಸುವ ಒಂದು ಸಾಂವಿಧಾನಿಕ ಸಂಸ್ಥೆ ಅಥವಾ ಘಟಕ. ಪ್ರಭುತ್ವದ ಕಲ್ಪನೆಯಲ್ಲಿ ನ್ಯಾಯಾಂಗ ವ್ಯವಸ್ಥೆ, ಸಾಂಸ್ಕೃತಿಕ ನೀತಿ-ನಿಯಮ, ಸಾಮಾಜಿಕ ಸಮತೋಲನ ಮತ್ತು ಆರ್ಥಿಕ ಸಮಾನತೆ ಇವೆಲ್ಲವೂ ಅಡಗಿರುತ್ತದೆ. ಈ ದೃಷ್ಟಿಯಿಂದ ಅಂಬೇಡ್ಕರ್‌ ತಮ್ಮ ಸ್ಟೇಟ್ಸ್‌ ಅಂಡ್‌ ಮೈನಾರಿಟೀಸ್‌ ಕೃತಿಯಲ್ಲಿ ಪ್ರಭುತ್ವವನ್ನು ನಿರ್ವಚಿಸುತ್ತಾರೆ. ಸಮಾನತೆ ಎಂದಾಗ ಅಂಬೇಡ್ಕರ್‌ ಅವರಿಗೆ ಕೇವಲ ಒಂದೇ ಸ್ತರದಲ್ಲಿರುವ ಲಕ್ಷಣವಾಗಿ ಕಾಣುವುದಿಲ್ಲ. ಸಮಾನ ಅವಕಾಶ, ಸಮಾನ ಹಕ್ಕು, ಸಮಾನ ಸ್ವಾತಂತ್ರ್ಯ ಮತ್ತು ಸಮಾನ ಸ್ಥಾನಮಾನಗಳು ಈ ಒಂದು ಪದದೊಳಗೆ ನಿರ್ವಚಿಸುತ್ತಾರೆ. ಹಾಗಾಗಿಯೇ ಅವರಿಗೆ ಮೂಲಭೂತ ಹಕ್ಕುಗಳು ಪ್ರಧಾನವಾಗಿ ಕಾಣುತ್ತದೆ.

 ಈ ಹಕ್ಕುಗಳನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಪ್ರಜೆಗಳಿಗೆ ಒದಗಿಸುವ ಮೂಲಕವೇ ಕೆಳಶ್ರೇಣಿಯಲ್ಲಿರುವ ಸಮಾಜ/ಸಮುದಾಯಗಳನ್ನು ಸಬಲೀಕರಣಗೊಳಿಸುವ, ಮೇಲ್ದರ್ಜೆಗೆ ಏರಿಸುವ ಒಂದು ಔದಾತ್ಯವನ್ನು ಇಲ್ಲಿ ಕಾಣಬಹುದು. ಭಾರತದಂತಹ ಜಾತಿಗ್ರಸ್ತ ಸಮಾಜದಲ್ಲಿ ಈ ಚಿಂತನೆಯೇ ಕ್ರಾಂತಿಕಾರಿಯಾಗಿ ಕಂಡಿತ್ತು. ಏಕೆಂದರೆ ಈ ಸಮಾನತೆಯನ್ನು ಸಾಧಿಸುವುದರ ಮೂಲಕವೇ ಭಾರತದ ಸಾಮಾಜಿಕ ವ್ಯವಸ್ಥೆಯೊಳಗಿನ ಎಲ್ಲ ರೀತಿಯ ಶೋಷಣೆ-ದೌರ್ಜನ್ಯಗಳನ್ನೂ ಕೊನೆಗೊಳಿಸಲು ಸಾಧ್ಯವಾಗುತ್ತಿತ್ತು.  ಕಾನೂನಿನ ದೃಷ್ಟಿಯಲ್ಲಿ (ಸಂವಿಧಾನ ಎಂದೂ ಅರ್ಥೈಸಬಹುದು) ಎಲ್ಲರೂ ಸಮಾನರು , ಸಾರ್ವಜನಿಕ ಸವಲತ್ತು ಮತ್ತು ಅನುಕೂಲತೆಗಳು ಎಲ್ಲರಿಗೂ ಸಮಾನವಾಗಿ ಲಭಿಸಬೇಕು ಎನ್ನುವ ಆಲೋಚನೆಯೇ ನಮ್ಮ ಸಂವಿಧಾನದ ಅಡಿಪಾಯವೂ ಆಗಿದೆ. ಒಬ್ಬ ವ್ಯಕ್ತಿ-ಒಂದು ಮತ –ಒಂದು ಮೌಲ್ಯ ಈ ಔದಾತ್ಯದ ಘೋಷವಾಕ್ಯ ಎನ್ನಬಹುದು.

Ambedkar Jayanti 2025: ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು:  ಸಮಾನತೆಯ ಹರಿಕಾರ ಅಂಬೇಡ್ಕರ್ ನುಡಿಮುತ್ತು Kannada News | Dr Ambedkar's Birth  Anniversary 2022 Motivational ...

 ಪ್ರಭುತ್ವ ಕಲ್ಪನೆಯಲ್ಲಿ ಈ ಸಮಾನತಾ ದೃಷ್ಟಿಯನ್ನು ಅಂಬೇಡ್ಕರ್‌ ಲಿಂಗ ಸಮಾನತೆ ಮತ್ತು ಅಲ್ಪಸಂಖ್ಯಾತ ರಕ್ಷಣೆಯ ಚೌಕಟ್ಟಿನಲ್ಲಿ ಸ್ಪಷ್ಟೀಕರಿಸುತ್ತಾರೆ. ಜನಸಾಮಾನ್ಯರ ಬದುಕಿನಲ್ಲಿ ಅವಕಾಶವಂಚಿತರಾಗುವ ಎಲ್ಲರನ್ನೂ ಒಳಗೊಳ್ಳುವ ಅವರ ಚಿಂತನೆಯ ಗ್ರಾಂಥಿಕ ರೂಪವನ್ನು ಹಿಂದೂ ಕೋಡ್‌ ಬಿಲ್‌ನಲ್ಲಿ ಕಾಣಬಹುದು. ಅಂಬೇಡ್ಕರರನ್ನು ದಲಿತರಿಗೆ ಕಟ್ಟಿಹಾಕುವವರು ಗಮನಿಸಬೇಕಾದ್ದು, ಈ ತಿರಸ್ಕೃತ ಬಿಲ್‌ನಲ್ಲಿ ಸಮಸ್ತ ಮಹಿಳೆಯರಿಗೂ ಅನ್ವಯಿಸುವಂತಹ ಅಂಶಗಳನ್ನು. ಈ ಸರ್ವಜನಾಂಗದ, ಸರ್ವತೋಮುಖ ಸಮಾನತೆ ಇಲ್ಲವಾದರೆ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ ಎಂಬ ಅಂಬೇಡ್ಕರ್‌ ಅವರ ವಾದ ವರ್ತಮಾನದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ. ಇದು ಅವರ ದಾರ್ಶನಿಕತೆಯ ಸಂಕೇತ. ಮಾನವ ಹಕ್ಕು, ನಾಗರಿಕ ಹಕ್ಕು, ಸಾಂವಿಧಾನಿಕ ಹಕ್ಕು ಇವೆಲ್ಲದರ ಹೂರಣವನ್ನು ಅನುಚ್ಛೇದ 19ರ ಬದುಕುವ ಹಕ್ಕು ಖಚಿತಪಡಿಸುತ್ತದೆ. ಈ All encompassing Article ಪ್ರಭುತ್ವದ ಕಲ್ಪನೆಯನ್ನೇ ಮಾನವೀಯಗೊಳಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ.

 ಈ ಸಮಾನತೆಯ ಚೌಕಟ್ಟಿನಲ್ಲೇ ಅಂಬೇಡ್ಕರ್‌ ಅಲ್ಪಸಂಖ್ಯಾತರ ಹಕ್ಕುಗಳನ್ನೂ ನಿರ್ವಚಿಸುತ್ತಾರೆ.  ಒಂದು ಹಂತದಲ್ಲಿ ಭಾರತದ ದಮನಿತ ವರ್ಗಗಳನ್ನೂ (Depressed Classes ), ಶೋಷಿತರನ್ನು, ಅಸ್ಪೃಶ್ಯರನ್ನೂ ಅಲ್ಪಸಂಖ್ಯಾತರೆಂದೇ ವ್ಯಾಖ್ಯಾನಿಸವ ಅಂಬೇಡ್ಕರ್‌ ಈ ಕಲ್ಪನೆಯನ್ನು ಭೌಗೋಳಿಕವಾಗಿ ಅಥವಾ ಜನಸಂಖ್ಯಾಧಾರಿತವಾಗಿ ನೋಡುವುದಿಲ್ಲ. ಬದಲಾಗಿ ವ್ಯವಸ್ಥೆಯಲ್ಲಿ ವಿವಿಧ ಜನಸಮುದಾಯಗಳಿಗೆ ಇರುವ ಅವಕಾಶಗಳು, ಹಕ್ಕುಗಳು ಮತ್ತು ಸ್ವಾತಂತ್ರ್ಯದ ನೆಲೆಯಲ್ಲಿ ನೋಡುತ್ತಾರೆ  ಹಾಗಾಗಿಯೇ ಚುನಾಯಿತ ಶಾಸನಸಭೆಗಳಲ್ಲಿ ನಿಮ್ನ ವರ್ಗಗಳ, ಪರಿಶಿಷ್ಟ ಜಾತಿ, ಪಂಗಡಗಳ ಪ್ರಾತಿನಿಧ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ.  “ ಭಾರತದಂತಹ ಜಾತಿಗ್ರಸ್ತ ಮನಸ್ಸುಳ್ಳ ಒಂದು ಪರಿಸರದಲ್ಲಿ ಅಧಿಕಾರದಲ್ಲಿರುವವರು ತಮ್ಮ ಜಾತಿಯವರಲ್ಲದವರ ಬಗ್ಗೆ  ತಾರತಮ್ಯ ಮಾಡುವುದಿಲ್ಲವೆಂಉ ಭಾವಿಸುವುದು ಕಷ್ಟ. ಈ ಪರಿಸರದಲ್ಲಿ ಅಸ್ಪೃಶ್ಯರನ್ನು ನಡೆಸಿಕೊಳ್ಳುವುದಂತೂ ಅತಿನಿಕೃಷ್ಟವಾಗಿ ” (S&M) ಎಂಬ ಅಂಬೇಡ್ಕರ್‌ ಅವರ ಆತಂಕ ಸ್ವತಂತ್ರ ಭಾರತದಲ್ಲೂ ನಿರೂಪಿತವಾಗಿದೆ.

Podcast with Niketh Raj Maurya on war #ಭಾರತಕ್ಕೆ ಎದುರಾದ ಸಂಕಷ್ಟ! : ಟ್ರಂಪ್ ಕೈಗೊಂಬೆಯಾದ್ರಾ ಮೋದಿ..? #war

 ಪೂನಾ ಒಪ್ಪಂದದ ಹಿನ್ನೆಲೆಯಲ್ಲಿ ಅಂಬೇಡ್ಕರ್‌ ಅವರ ಮೂಲ ಆಶಯದಂತೆ ಪ್ರಾತಿನಿಧ್ಯ ವ್ಯವಸ್ಥೆಯನ್ನು ರೂಪಿಸಲಾಗದಿದ್ದರೂ, ವರ್ತಮಾನದ ರಾಜಕೀಯವನ್ನು ಗಮನಿಸುವಾಗ, ಸಂಸದೀಯ ಚುನಾವಣಾ ವ್ಯವಸ್ಥೆಯಲ್ಲೂ ಸಹ ದಲಿತರಿಗೆ ಪ್ರಾತಿನಿಧ್ಯ ದೊರೆಯುತ್ತಿರುವುದು ಸಂವಿಧಾನದ ಈ ನಿಯಮಗಳಿಂದಲೇ ಆಗಿದೆ. ಮೀಸಲು ಕ್ಷೇತ್ರಗಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲದೆ ಹೋಗಿದ್ದರೆ, ಬಹುಶಃ ಇಂದಿಗೂ ಸಹ ಭಾರತದ ಸಂಸತ್ತು ಮೇಲ್ಜಾತಿಗಳ ಆಡುಂಬೊಲವಾಗಿಯೇ ಉಳಿಯುತ್ತಿತ್ತು. ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಶೇಕಡಾ 33ರಷ್ಟು ಸ್ಥಾನಗಳನ್ನು ಕಲ್ಪಿಸುವುದಕ್ಕೇ ಪ್ರಭುತ್ವ ನಾನಾ ತೊಡಕುಗಳನ್ನು ಎದುರಿಸುತ್ತಿದ್ದು, ಇನ್ನೂ 15 ವರ್ಷ ಕಾಯಬೇಕಿದೆ.

 ಅಂಬೇಡ್ಕರ್‌ ಅವರ ಪ್ರಭುತ್ವದ ಕಲ್ಪನೆಯಲ್ಲಿ ಬಹುಮುಖ್ಯವಾಗಿ ಗಮನಿಸಬೇಕಿರುವುದು ಅವರು ನಂಬಿದ್ದ ಸಮಾಜವಾದಿ ತತ್ವಗಳು. ( ಸಮಾಜವಾದ ಎಂಬ ತಾತ್ವಿಕ ಕಲ್ಪನೆಗೆ ನಾನಾ ಆಯಾಮಗಳಿಗೆ ಅದರ ಚರ್ಚೆ ಪ್ರಸ್ತುತ ಉಪನ್ಯಾಸದ ವ್ಯಾಪ್ತಿಗೆ ಹೊರತಾದುದು.) ಅಂಬೇಡ್ಕರ್‌ ಮಾರ್ಕ್ಸ್‌ ಮತ್ತು ಏಂಗೆಲ್ಸ್‌ ಪ್ರತಿಪಾದಿಸಿದ ವೈಜ್ಞಾನಿಕ ಸಮಾಜವಾದ ಮತ್ತು ಚಾರಿತ್ರಿಕ ಭೌತವಾದವನ್ನು ಅನುಕರಿಸಲಿಲ್ಲ. ಬದಲಾಗಿ 1880ರ ದಶಕದಲ್ಲಿ ಇಂಗ್ಲೆಂಡಿನಲ್ಲಿ ಉಗಮಿಸಿದ ಫೇಬಿಯನ್‌ ಸಮಾಜವಾದದಿಂದ ಪ್ರೇರಿತರಾಗಿದ್ದರು. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ವ್ಯಾಸಂಗ ಮಾಡುವಾಗ ಇದರಿಂದ ಪ್ರಭಾವಿತರಾದ ಅಂಬೇಡ್ಕರ್‌, ಸಾಂವಿಧಾನಿಕ ಚೌಕಟ್ಟಿನಲ್ಲೇ ದೇಶದ ಸಂಪನ್ಮೂಲಗಳನ್ನು, ಕೃಷಿ ಭೂಮಿಯನ್ನು, ಆರ್ಥಿಕ ಸಂರಚನೆಗಳನ್ನು ನಿಯಂತ್ರಿಸಿ, ನಿರ್ವಹಿಸುವ ಮೂಲಕ, ಸಂಪತ್ತು ಮತ್ತು ಉತ್ಪಾದನೆಯ ಸಮಾನ ಹಂಚಿಕೆಯ ಕಲ್ಪನೆಯನ್ನು ಹೊಂದಿದ್ದರು. ಫೇಬಿಯನ್‌ ಸಮಾಜವಾದ ಮೂಲತಃ ಸಾಂವಿಧಾನಿಕ ಚೌಕಟ್ಟಿನಲ್ಲಿ ಶಾಂತಿಯುತ, ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ವ್ಯವಸ್ಥೆಯನ್ನು ಬದಲಿಸುವ ಒಂದು ವಾದ. ಜಾನ್‌ ಡೇವಿ ಮುಂತಾದ ಫೇಬಿಯನ್‌ ಚಿಂತಕರಿಂದಲೇ ಅಂಬೇಡ್ಕರ್‌ ಪ್ರಭಾವಿತರಾಗಿದ್ದರಿಂದ ಲಿಬರಲ್‌ ಡೆಮಾಕ್ರಸಿ ಅಂದರೆ ಉದಾರವಾದಿ ಪ್ರಜಾಪ್ರಭುತ್ವ ಅವರ ಮೂಲ ಧ್ಯೇಯವಾಗಿತ್ತು.

ನಿಮ್ಮೊಡನೆ ವಿ.ಆರ್.ಭಟ್: ಗುರು, ಪ್ರಭುತ್ವ ಮತ್ತು ಸ್ವಸ್ಥ ಸಮಾಜ

 ಅಂಬೇಡ್ಕರ್‌ ಸಂವಿಧಾನ ರಚನೆಯ ವೇಳೆ ಪ್ರಸ್ತಾಪಿಸಿದ ಪ್ರಭುತ್ವ ಸಮಾಜವಾದದ (State Socialism) ಕಲ್ಪನೆಯಲ್ಲಿ ಭೂ ರಾಷ್ಟ್ರೀಕರಣವೂ ಮುಖ್ಯ ಅಂಶವಾಗಿತ್ತು. ಕೃಷಿ ಬ್ಯಾಂಕಿಂಗ್‌, ಕೈಗಾರಿಕೆ, ವಿಮೆ ಇವೆಲ್ಲ ಕ್ಷೇತ್ರಗಳನ್ನೂ ಸರ್ಕಾರಿ ಸ್ವಾಮ್ಯದಲ್ಲಿ ಇಟ್ಟುಕೊಳ್ಳುವುದು ಈ ಸಮಾಜವಾದಿ ಕಲ್ಪನೆಯ ಮುಖ್ಯ ಭೂಮಿಕೆಯಾಗಿತ್ತು. ಕನಿಷ್ಠ ಮೊದಲ ಹತ್ತು ವರ್ಷಗಳ ಕಾಲ ಪ್ರಭುತ್ವ ಸಮಾಜವಾದವನ್ನು ಅಳವಡಿಸುವ ಅಂಬೇಡ್ಕರ್‌ ಅವರ ಆಲೋಚನೆಗೆ ಸರ್ದಾರ್‌ ಪಟೇಲ್‌, ರಾಜೆಂದ್ರ ಪ್ರಸಾದ್‌ , ಕೃಪಲಾನಿ  ಮತ್ತು ಒಂದು ಹಂತದಲ್ಲಿ ನೆಹರೂ ಸಹ ವಿರೋಧ ವ್ಯಕ್ತಪಡಿಸಿದ್ದರು. ಸಮಾಜವಾದವನ್ನು ಮೂಲಭೂತ ಹಕ್ಕುಗಳಲ್ಲಿ ಅಳವಡಿಸುವ ಅವರ ಆಲೋಚನೆಗೆ ಮಾನ್ಯತೆ ದೊರೆಯಲಿಲ್ಲ. ಈ ನಡುವೆ ಗಮನಿಸಬೇಕಾದ ಅಂಶ ಎಂದರೆ ಅಂಬೇಡ್ಕರ್‌ ಉತ್ಪಾದನಾ ಸಂಬಂಧಗಳ ( Production Relations) ಬಗ್ಗೆ ಯಾವುದೇ ವ್ಯಾಖ್ಯಾನ ಮಾಡಲಿಲ್ಲ. ಈ ಕೊರತೆಯನ್ನು ನಾವು ಗುರುತಿಸಲೇಬೇಕಿದೆ. ಔದ್ಯೋಗಿಕ ವಲಯದಲ್ಲಿ ಪ್ರಭುತ್ವದ ಹಿಡಿತದಿಂದ ಮುಕ್ತವಾದ ಪರಿಸ್ಥಿತಿ ಖಾಸಗಿ ಮಾಲೀಕರ ಸರ್ವಾಧಿಕಾರವಾಗುತ್ತದೆ ಎಂದು ಅಂಬೇಡ್ಕರ್‌ ನಂಬಿದ್ದರು.

 ಅಂಬೇಡ್ಕರ್‌ ವರ್ಗ ದೃಷ್ಟಿಕೋನದಿಂದಲೇ ತಮ್ಮ ತಾತ್ವಿಕತೆಯನ್ನು ನಿರ್ವಚಿಸಿದರೂ, ಅದು ಮಾರ್ಕ್ಸ್‌ ಕಲ್ಪನೆಯ ವರ್ಗಕ್ಕಿಂತಲೂ ಭಿನ್ನವಾಗಿತ್ತು. ಮಾರ್ಕ್ಸ್‌ ಉತ್ಪಾದನಾ ಸಂಬಂಧಗಳು ಮತ್ತು ಉತ್ಪಾದನಾ ವಿಧಾನಗಳ (Modes of Production) ನೆಲೆಯಲ್ಲಿ ಸಮಾಜದಲ್ಲಿ ಸೃಷ್ಟಿಯಾಗುವ ವರ್ಗಗಳನ್ನು ಪ್ರಧಾನವಾಗಿ ವಿಶ್ಲೇಷಿಸಿದ್ದರು. ಅಂಬೇಡ್ಕರ್‌ ಭಾರತೀಯ ಸಮಾಜದಲ್ಲಿ ಈ ಜಾತಿ ಸಮಾಜದ ಲಂಬ ರೇಖೆಯನ್ನು ವರ್ಗಗಳು ಅಡ್ಡಡ್ಡಲಾಗಿ ವಿಭಜಿಸುತ್ತದೆ ಎಂದು ವಾದಿಸಿದರು. ಇಡೀ ಸಮಾಜದಲ್ಲಿ ಮೇಲು ಕೀಳು ಎಂಬ ವರ್ಗ ಪ್ರಜ್ಞೆಯನ್ನು ಜಾತಿ ಶ್ರೇಣೀಕರಣ ನಿರ್ಧರಿಸಿದರೆ, ಪ್ರತಿಯೊಂದು ಜಾತಿಯಲ್ಲೂ ಇದೇ ರೀತಿಯ ಮೇಲು ಕೀಳಿನ ವರ್ಗ ತಾರತಮ್ಯಗಳು ಇರುವುದನ್ನು ಅಂಬೇಡ್ಕರ್‌ ಗುರುತಿಸಿದ್ದರು. ಹಾಗಾಗಿ ಜಾತಿ ವ್ಯವಸ್ಥೆಯನ್ನು ಮೂಲತಃ ನಿರ್ನಾಮ ಮಾಡದೆ ವರ್ಗ ಸಮಾಜವನ್ನು ಸೃಷ್ಟಿಸಲಾಗುವುದಿಲ್ಲ ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಆದರೆ ಅಂದಿನ ಕಾಲದಲ್ಲಿ ಜನಪ್ರಿಯವಾಗಿದ್ದ ವರ್ಗ ಸಂಘರ್ಷದ ಮೂಲಕ ಸಮಾಜವನ್ನು ವಿಶ್ಲೇಷಿಸುವ ಮಾದರಿ ಅಂಬೇಡ್ಕರ್‌ ಅವರಲ್ಲಿ ಕಾಣಲಾಗುವುದಿಲ್ಲ.. ಇದನ್ನು ಅವರು ಪ್ರಜ್ಞಾತ್ಮಕ ವಾಗಿ ಆಯ್ದುಕೊಂಡ ಮಾರ್ಗ . ಆದರೆ ಈ ಬಗ್ಗೆ ತಾತ್ವಿಕ ವಾದವನ್ನು ಬರೆದಿಲ್ಲ. ಗಾಂಧಿ ಸಹ ಭಾರತೀಯ ಸಮಾಜವನ್ನು ವರ್ಗ ದೃಷ್ಟಿಕೋನದಿಂದ ನಿಷ್ಕರ್ಷೆ ಮಾಡಲಿಲ್ಲ. .ಎರಡನೆಯದಾಗಿ  ಭಾರತೀಯ ಸಮಾಜದ ಬಗ್ಗೆ  ಅವರಿಗಿದ್ದ ಅತಿಶಯ ಬದ್ಧತೆ. ಇದು ದೇಶದಾದ್ಯಂತ ಓಡಾಡಿ ಜನಮನವನ್ನು ಅರಿತುಕೊಂಡಿದ್ದರ ಪ್ರಭಾವ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪರಿಭಾಷೆಗಳ ಪರಿಚಯ – 7ನೇ ತರಗತಿ ಸಮಾಜ |  hulkutrischool.in

 ಪ್ರಭುತ್ವದ ರಚನೆಯಲ್ಲಿ ಅಂದರೆ ಶಾಸಕಾಂಗ ಮತ್ತು ಕಾರ್ಯಾಂಗದ ಸಂರಚನೆಯಲ್ಲಿ ಅಂಬೇಡ್ಕರ್‌ ಅವರ ಮುಂದೆ ಎರಡು ಮಾರ್ಗಗಳಿದ್ದವು. ಈಗ ಭಾರತ ಅಳವಡಿಸಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವವನ್ನೂ ಸಹ ಅಂಬೇಡ್ಕರ್‌ ವಿರೋಧಿಸಿದ್ದರು. ಬ್ರಿಟನ್‌ ಮಾದರಿ ಮತ್ತು ಅಮೆರಿಕನ್‌ ಮಾದರಿಯ ಪ್ರಜಾತಂತ್ರ ವ್ಯವಸ್ಥೆಯನ್ನು ಅಂಬೇಡ್ಕರ್‌ ಆಳವಾಗಿ ಅಧ್ಯಯನ ನಡೆಸಿ ಭಾರತಕ್ಕೆ ಅಗತ್ಯವಾದ ರೀತಿಯಲ್ಲಿ ಸಂಸದೀಯ ಮಾದರಿಯನ್ನು ಅಳವಡಿಸಿದ್ದರು. ಶಾಸಕಾಂಗದಲ್ಲಿ ಸ್ಪಷ್ಟ ಬಹುಮತ ಇರುವ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ, ಅನ್ಯ ಪಕ್ಷಗಳನ್ನು ಹೊರಗಿಡುವ ಹಕ್ಕು ಮತ್ತು ಅಧಿಕಾರ ಹಾಗೂ ಬಹುಮತ ಕಳೆದುಕೊಂಡ ಕೂಡಲೇ ತೆರವು ಮಾಡುವ ನಿಯಮಗಳು ಬ್ರಿಟನ್‌ ಮಾದರಿಯಲ್ಲಿ ಕಂಡುಬರುತ್ತದೆ. ಈ ಮಾದರಿಯನ್ನು ಅಂಬೇಡ್ಕರ್‌ ಭಾರತದ ಸಂದರ್ಭಕ್ಕೆ ಅಪಾಯಕಾರಿ ಎಂದೇ ಗುರುತಿಸುತ್ತಾರೆ. ಹಾಬ್ಸ್‌ ಮತ್ತು ಹೆಗೆಲ್ಸ್‌ ಮೊದಲಾದ ಚಿಂತಕರು ಪ್ರತಿಪಾದಿಸಿದಂತೆ ಪ್ರಭುತ್ವವನ್ನು Absolute (ಪರಮಾಧಿಕಾರದ ಸಂಸ್ಥೆ) ಎಂದು ಅಂಬೇಡ್ಕರ್‌ ಭಾವಿಸುವುದಿಲ್ಲ. ಪ್ರಭುತ್ವದ ಸಂರಚನೆಯನ್ನು ಅಂಬೇಡ್ಕರ್‌ ಮಾನವೀಯ ನೆಲೆಯಲ್ಲಿ ಗುರುತಿಸುತ್ತಾರೆ.

 

ಭಾರತೀಯ ಸಮಾಜದಲ್ಲಿ ರಾಜಕೀಯವಾಗಿಯೂ ಸಹ ಚುನಾವಣೆಗಳಲ್ಲಿ ಜಾತಿ ಆಧಾರಿತ ಬಹುಮತವೇ ಪ್ರಧಾನವಾಗಿ ರೂಪುಗೊಳ್ಳುವುದನ್ನು ಅಂಬೇಡ್ಕರ್‌, ಜಾತಿ ಶ್ರೇಣಿಯ ಸಮಾಜದೊಳಗಿನ ವ್ಯತ್ಯಯಗಳೊಂದಿಗೆ ತುಲನಾತ್ಮಕವಾಗಿ ವಿಶ್ಲೇಷಿಸುತ್ತಾರೆ. ಹಾಗಾಗಿ ಬ್ರಿಟೀಷ್‌ ಮಾದರಿಯನ್ನು ಒಪ್ಪಿಕೊಂಡರೆ, ಪ್ರಾತಿನಿಧ್ಯದ ಹೊರತಾಗಿಯೂ ಕೋಮುವಾದಿ ಬಹುಮತದ ಕೈಗೆ ಅಧಿಕಾರ ಕೊಟ್ಟಂತಾಗುತ್ತದೆ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ. ಅಲ್ಪಸಂಖ್ಯಾತರ ಪಕ್ಷಗಳ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ನೀಡುವುದು ಬ್ರಿಟನ್‌ ಮಾದರಿಯಲ್ಲಿ ಅನುಸರಿಸಲಾಗುವುದಿಲ್ಲ. ಹಾಗಾಗಿ ಈ ಮಾದರಿಯನ್ನು ಅಳವಡಿಸಿದರೆ, ಭಾರತದ ಅಲ್ಪಸಂಖ್ಯಾತ ಸಮುದಾಯಗಳು ಸಚಿವ ಸಂಪುಟದ ಪ್ರಾತಿನಿಧ್ಯದ ಅವಕಾಶಗಳಿಂದ ಶಾಶ್ವತವಾಗಿ ವಂಚಿತರಾಗುತ್ತಾರೆ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ. ವಿಶೇಷವಾಗಿ ಇದು ಅಸ್ಪೃಶ್ಯ ಸಮುದಾಯವನ್ನು ಶಾಶ್ವತವಾಗಿ ಆಳ್ವಿಕೆಯಿಂದ ದೂರ ಇರಿಸುತ್ತದೆ ಎಂದೂ ಆತಂಕ ವ್ಯಕ್ತಪಡಿಸಿದ್ದರು.

Podcast with Singer SAGE..! ಸಾಕಷ್ಟು ಜನ ಸಿಂಗರ್ಸ್ ಗಳು ದುಡ್ಡು ಕೊಟ್ಟು ಮ್ಯೂಸಿಕ್ ಗಾಗಿ ಜಾಹೀರಾತು ನೀಡ್ತಾರೆ..!

 ಇದಕ್ಕೆ ಪ್ರತಿಯಾಗಿ ಅಂಬೇಡ್ಕರ್‌ ಅಮೆರಿಕದ ಸಂಸದೀಯ ಮಾದರಿಯನ್ನು ಪ್ರತಿಪಾದಿಸುತ್ತಾರೆ. ಈ ಮಾದರಿಯಲ್ಲಿ ಅಲ್ಪಸಂಖ್ಯಾತರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ಬಹುಸಂಖ್ಯಾತರು ಸರ್ಕಾರ ರಚಿಸಲಾಗುವುದಿಲ್ಲ. ಆಗ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯನ್ನು ತಡೆಗಟ್ಟಬಹುದು. ಅಲ್ಪಸಂಖ್ಯಾತರ ಬೆಂಬಲ ಮತ್ತು ವಿಶ್ವಾಸ ಗಳಿಸದ ಅಲ್ಪಸಂಖ್ಯಾತ ಪ್ರತಿನಿಧಿಗಳೂ ಸಹ ಬಹುಮತ ಇರುವ ಪಕ್ಷ ಸರ್ಕಾರದಲ್ಲಿ ಸೇರಿಸಲಾಗುವುದಿಲ್ಲ. ಭಾರತದ ಅಲ್ಪಸಂಖ್ಯಾತರ ದೃಷ್ಟಿಯಿಂದ (ಅಸ್ಪೃಶ್ಯರನ್ನೂ ಒಳಗೊಂಡಂತೆ) ಈ ಮಾದರಿಯೇ ಸೂಕ್ತ ಎಂದು ಅಂಬೇಡ್ಕರ್‌ ವಾದಿಸಿದ್ದರು. ಆದರೆ ಅಂಬೇಡ್ಕರ್‌ ಅವರ ಬಲವಾದ ಪ್ರತಿಪಾದನೆಗೆ ಅಂತಿಮ ಸಂವಿಧಾನ ರಚನೆಯಲ್ಲಿ ಮಾನ್ಯತೆ ದೊರೆಯಲಿಲ್ಲ. ಬ್ರಿಟನ್ನಿನ ವೆಸ್ಟ್‌ಮಿನ್ಸ್‌ಟರ್‌ ಮಾದರಿಯನ್ನೇ ಅಳವಡಿಸಲಾಯಿತು.

 ಡಾ. ಬಿ.ಆರ್. ಅಂಬೇಡ್ಕರ್ ಭಾರತದ ಫೆಡರಲ್ ರಚನೆಯನ್ನು “ರಾಜ್ಯಗಳ ಒಕ್ಕೂಟ” ಎಂದು ನಿರ್ವಚಿಸಿದ್ದರು.  ಪ್ರಾದೇಶಿಕ ಸ್ವಾಯತ್ತತೆಯನ್ನು ಕಾಪಾಡಿಕೊಂಡೇ ರಾಜ್ಯಗಳು,  ರಾಷ್ಟ್ರೀಯ ಏಕತೆಯೊಂದಿಗೆ ಸಮತೋಲನ ಸಾಧಿಸುವ ಬಲಿಷ್ಠ ಕೇಂದ್ರ ಸರ್ಕಾರದೊಂದಿಗೆ ಹೊಂದಿಕೊಳ್ಳುವ ಮಾದರಿಯನ್ನು ರೂಪಿಸಿದ್ದರು.  ಅಮೆರಿಕದ ಮಾದರಿಯಲ್ಲಿ  ಭಾರತೀಯ ಒಕ್ಕೂಟವು ರಾಜ್ಯಗಳ ನಡುವಿನ ಒಪ್ಪಂದವನ್ನು ಅವಲಂಬಿಸಿರುವುದಿಲ್ಲ ಹಾಗಾಗಿ ರಾಜ್ಯಗಳಿಗೆ ಪ್ರತ್ಯೇಕತೆಯ ಹಕ್ಕನ್ನು ನಿರಾಕರಿಸಲಾಗಿದೆ. No right to Secede̤ ಸಂವಿಧಾನದ ಅನುಚ್ಚೇದ 1ರಲ್ಲಿ ಭಾರತವನ್ನು ರಾಜ್ಯಗಳ ಒಕ್ಕೂಟ Union of States ಎಂದೇ ಕರೆಯಲಾಗಿದೆ. ಭಾರತೀಯ ಒಕ್ಕೂಟವು ಶಾಶ್ವತವಾಗಿ ಉಳಿಯಬೇಕು ಎಂಬ ದೃಷ್ಟಿಯಿಂದ ಅಂಬೇಡ್ಕರ್‌ ಪ್ರಾದೇಶಿಕ ಸ್ವಾಯತ್ತತೆಯನ್ನು ಕಲ್ಪಿಸಿದರೂ ಸಹ ಬಲಿಷ್ಠ ಕೇಂದ್ರ ಸರ್ಕಾರದ ವಕ್ತಾರರಾಗಿದ್ದರು.  ಬಹುಶಃ ವಿಭಜನೆಯ ನಂತರ ದೇಶ ಮತ್ತೊಮ್ಮೆ ವಿಘಟನೆಯ ಹಾದಿಯಲ್ಲಿ ಕ್ರಮಿಸುವುದನ್ನು ತಡೆಗಟ್ಟಲು ಬಲಿಷ್ಠ ಕೇಂದ್ರ, Strong Centreಅಂಬೇಡ್ಕರ್‌ ಅವರ ಕಲ್ಪನೆಯಾಗಿತ್ತು.

ಈ ಬಲಿಷ್ಠ ಕೇಂದ್ರದ ಕಲ್ಪನೆ ವರ್ತಮಾನದ ಸಂದರ್ಭದಲ್ಲಿ ಗಂಭೀರ ಮರುವಿಮರ್ಶೆಗೊಳಗಾಗಬೇಕಿದೆ.

Personality of Dr. BR Ambedkar ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವ- ಸಾಧನೆ-  ನೆನಪು

 

(ಅಂಬೇಡ್ಕರ್‌ ಮತ್ತು ಪ್ರಜಾತಂತ್ರ ಮುಂದಿನ ಭಾಗದಲ್ಲಿ )

-೦-೦-೦-೦-

 

Tags: 10 lines on dr br ambedkar10 lines on dr br ambedkar in englishabout dr br ambedkarambedkar democracyb. r. ambedkar social democracybr ambedkar video interviewdr br ambedkardr br ambedkar biographydr br ambedkar old interviewsdr br ambedkar speechdr br ambedkar speech in englishessay on dr b r ambedkaressay on dr bhimrao ambedkaressay on dr bhimrao ambedkar in englishessay on dr br ambedkaressay on dr br ambedkar in englishfew lines on dr ambedkarfew lines on dr br ambedkar
Previous Post

ಕೃತಕ ಬುದ್ಧಿಮತ್ತೆ (ಎಐ) ಕಂಡುಹಿಡಿದವರು ಯಾರು? ಯಾವಾಗ ಆರಂಭವಾಯಿತು?

Next Post

ವಿಶ್ವದ ಅತಿ ದುಬಾರಿ ವಾಚ್ – ಭಾರತದಲ್ಲಿ ಕೇವಲ ಈ ಮೂವರ ಬಳಿ ಮಾತ್ರ ಇದೆ!

Related Posts

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

by ಪ್ರತಿಧ್ವನಿ
May 21, 2026
0

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ...

Read moreDetails
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
Next Post
ವಿಶ್ವದ ಅತಿ ದುಬಾರಿ ವಾಚ್ – ಭಾರತದಲ್ಲಿ ಕೇವಲ ಈ ಮೂವರ ಬಳಿ ಮಾತ್ರ ಇದೆ!

ವಿಶ್ವದ ಅತಿ ದುಬಾರಿ ವಾಚ್ - ಭಾರತದಲ್ಲಿ ಕೇವಲ ಈ ಮೂವರ ಬಳಿ ಮಾತ್ರ ಇದೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada