ತಪ್ಪಿತಸ್ಥ ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಹೆಚ್ಚುವರಿ ಹಣ ವಸೂಲು: ಎಂ ಬಿ ಪಾಟೀಲ

ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗೆಂದು ಕೆಐಡಿಬಿಡಿ ಮೂಲಕ ಭೂಸ್ವಾಧೀನ ಪಡಿಸಿಕೊಂಡಿರುವ ಕೆಲವೆಡೆಗಳಲ್ಲಿ ಸಂತ್ರಸ್ತ ರೈತರಿಗೆ ಅಧಿಕಾರಿಗಳ ತಪ್ಪಿನಿಂದ ಹಿಂದಿನ ಸರಕಾರದ ಅವಧಿಯಲ್ಲಿ ಎರಡೆರಡು ಬಾರಿ ಪರಿಹಾರ ಕೊಡಲಾಗಿದೆ. ಇಂತಹ ಪ್ರಕರಣಗಳ ಸಂಬಂಧ ಈಗಾಗಲೇ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುತ್ತಿದ್ದು, ಒಬ್ಬರು ಜೈಲಿನಲ್ಲೂ ಇದ್ದಾರೆ. ಇಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಜೊತೆಗೆ, ಹೆಚ್ಚುವರಿಯಾಗಿ ಪಾವತಿಯಾಗಿರುವ ಹಣವನ್ನು ಕಾನೂನು ರೀತ್ಯಾ ವಸೂಲು ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಎಸ್ ಎಸ್ ಭೋಜೇಗೌಡ ಅವರು ಮಂಗಳವಾರ ಕೇಳಿದ ಗಮನ ಸೆಳೆಯುವ ಸೂಚನೆಗೆ ಅವರು ಉತ್ತರಿಸಿದ್ದಾರೆ.

ಧಾರವಾಡ ಜಿಲ್ಲೆಯ ಕೆಳಗೇರಿ, ಮುಮ್ಮಿಗಟ್ಟಿ, ಕೋಟೂರು ಮತ್ತು ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಹಿಂದಿನ ಸರಕಾರವಿದ್ದಾಗ ಕೆಲವು ಜಮೀನುಗಳಿಗೆ ಎರಡೆರಡು ಬಾರಿ ಪರಿಹಾರ ವಿತರಣೆಯಾಗಿದೆ. ಇದರಲ್ಲಿ ಭೂಮಿಯ ಮೂಲ ಮಾಲೀಕರು ಮತ್ತು ಅಧಿಕಾರಿಗಳು ಷಾಮೀಲಾಗಿದ್ದು, 19.99 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಎರಡನೇ ಬಾರಿ ಹೆಚ್ಚುವರಿಯಾಗಿ ಪರಿಹಾರ ರೂಪದಲ್ಲಿ ಹೋಗಿದೆ. ಇದು ತನಿಖೆಯಿಂದ ದೃಢಪಟ್ಟಿದೆ. ಆಗ ಇದ್ದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಇತರ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ. ಇದರ ವಿಚಾರಣೆ ಕೂಡ ಪ್ರಗತಿಯಲ್ಲಿದ್ದು, ಹೆಚ್ಚುವರಿಯಾಗಿ ನೀಡಿರುವ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸಿದೆ ಎಂದು ಅವರು ವಿವರಿಸಿದ್ದಾರೆ.

ರಾಮನಗರ ಜಿಲ್ಲೆಯ ಬನ್ನಿಕುಪ್ಪೆ ಗ್ರಾಮದಲ್ಲೂ ಒಂದು ಜಮೀನಿಗೆ ಹೀಗೆಯೇ ಎರಡನೇ ಬಾರಿ 1.58 ಕೋಟಿ ರೂ. ಹಣವನ್ನು ಪರಿಹಾರವೆಂದು ಕೊಡಲಾಗಿದೆ. ಈ ಪ್ರಕರಣದಲ್ಲಿ ಹಿಂದೆ ಸಣ್ಣ ನೀರಾವರಿ ಇಲಾಖೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ನಂತರದ ದಿನಗಳಲ್ಲಿ ಕೆಐಎಡಿಬಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಸಂಬಂಧ ಹೈಕೋರ್ಟಿನಲ್ಲಿ ಪ್ರಕರಣ ದಾಖಲಾಗಿದ್ದು, ಭೂಮಿಯ ಮಾಲೀಕರು 75 ಲಕ್ಷ ರೂ.ಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟಿರುತ್ತಾರೆ. ಸದರಿ ಪ್ರಕರಣದಲ್ಲಿ ಅಂತಿಮ ಆದೇಶ ಬಾಕಿ ಇದ್ದು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಈ ಪ್ರಕರಣಗಳಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದು ಈ ಬಗ್ಗೆ ತನಿಖೆ ನಡೆದಿದೆ ಎಂದು ಹೇಳಿದರು.