ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ನೀವಿನ್ನೂ ನೋಂದಣಿ ಮಾಡಿಸಿಕೊಂಡಿಲ್ಲವೇ? ಹಾಗಾದರೆ ಚಿಂತೆ ಬೇಡ, ಇದಕ್ಕೆ ಸಮಯದ ಮಿತಿಯೇನೂ ಇಲ್ಲ. ಇನ್ನೂ ನೋಂದಣಿಗೆ ಈಗಲೂ ಇದೆ ಅವಕಾಶ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಅಧಿಕೃತ ಚಾಲನೆಗೆ ಇನ್ನೇನು ಕ್ಷಣ ಗಣನೆ ಶುರುವಾಗಿದೆ. ಈಗಾಗಲೇ 1.10 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೊಂದಣಿ ಮಾಡಿಸಿದ್ದಾರೆ. ಇನ್ನೂ 60 ರಿಂದ 70 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವ ನಿರೀಕ್ಷೆಯಿದೆ.
ಸಾಕಷ್ಟು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಶೇ. 60 ಮಹಿಳೆಯರು ನೋಂದಣಿ ಮಾಡಿಸಿಕೊಂಡ ಅಂದಾಜಿದೆ. ಇನ್ನೂ ಶೇ. 40 ರಷ್ಟು ಮಹಿಳೆಯರು ನೋಂದಣಿಗೆ ಒಳಗಾಗಬೇಕಾಗಿದೆ. ಇದಕ್ಕಾಗಿ ಸಮಯವನ್ನೂ ನೀಡಲಾಗಿದೆ.
ನೋಂದಣಿಗೆ ಅವಕಾಶ
ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ನೋಂದಣಿಗೆ ಈಗಾಗಲೇ ಅವಕಾಶ ನೀಡಿ ಎರಡು ತಿಂಗಳೇ ಕಳೆದಿದೆ. ಕೆಲವರು ಪಡಿತರ ಕಾರ್ಡ್ ಇಲ್ಲದೇ ನೋಂದಣಿ ಮಾಡಿಸಿಕೊಂಡಿಲ್ಲ. ಬಹಳಷ್ಟು ಮಹಿಳೆಯರು ತಾಂತ್ರಿಕ ಸಮಸ್ಯೆಯಿಂದಲೂ ಮೂರ್ನಾಲ್ಕು ಬಾರಿ ಪ್ರಯತ್ನಿಸಿ ಸುಮ್ಮನಾಗಿರುವ ಸನ್ನಿವೇಶಗಳೂ ಇವೆ. ಇನ್ನು ಕೆಲವರು ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವ ಗೊಡವೆಗೆ ಹೋಗಿಲ್ಲ. ನಮಗೆ ಈ ಸೌಲಭ್ಯ ಬೇಡ ಎನ್ನುವವರೂ ಇದ್ದಾರೆ. ಆದರೆ ಈ ಎಲ್ಲರಿಗೂ ನೋಂದಣಿಗೆ ಮಾಡಿಸಿಕೊಳ್ಳಲು ಈಗಲೂ ಸಮಯವಿದೆ.
ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಇದೀಗ ಎಸ್ಎಂಎಸ್ ಅವಲಂಭಿಸದೇ ನೇರವಾಗಿ ನೋಂದಣಿ ಕೇಂದ್ರಗಳಿಗೆ ದಾಖಲಾತಿಗಳೊಂದಿಗೆ ತೆರಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನೋಂದಣಿ ಮಾಡಿಸಿದವರಿಗೆ ಹಣ
ಈವರೆಗೂ ನೋಂದಣಿ ಮಾಡಿಸಿಕೊಂಡು ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಂಡಿರುವವರು ಗೃಹಲಕ್ಷ್ಮಿ ಯೋಜನೆಯ ಆರ್ಥಿಕ ನೆರವನ್ನು ಈ ತಿಂಗಳೇ ಪಡೆಯಲಿದ್ದಾರೆ.
ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಆಗಸ್ಟ್ 30 ರಂದು ಗೃಹಲಕ್ಷ್ಮಿಗೆ ಚಾಲನೆ ನೀಡಿದ ಮರುದಿನವೇ ಅಂದರೆ ಗುರುವಾರವೇ ಖಾತೆಗೆ ತಲಾ 2000 ರೂ. ಗಳನ್ನು ಜಮೆ ಮಾಡಲಾಗುತ್ತದೆ. ಆದರೆ ಹೊಸದಾಗಿ ನೋಂದಣಿ ಮಾಡಿಸುವವರನ್ನು ಮುಂದಿನ ತಿಂಗಳಿಗೆ ಸೇರಿಸಲಾಗುತ್ತದೆ. ಅವರಿಗೆ ಈ ತಿಂಗಳ ನೆರವು ಸಿಗುವುದಿಲ್ಲ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಮುಂದಿನ ತಿಂಗಳಿನಿಂದ ಪಡೆಯಬಹುದು.
1902ಕ್ಕೆ ಕರೆ
ಇನ್ನೂ ನೋಂದಣಿಗೆ ಅವಕಾಶವಿದೆ. ಆಧಾರ್ ಕಾರ್ಡ್, ಪಡಿತರ ಚೀಟಿಯೊಂದಿಗ ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ 1902 ಸಹಾಯವಾಣಿಗೆ ಕರೆ ಮಾಡಿದರೆ ನೋಂದಣಿಗೆ ಬೇಕಾದ ಮಾಹಿತಿಯನ್ನು ನೀಡಲಾಗುತ್ತದೆ.
ಈಗಾಗಲೇ ಸಹಾಯವಾಣಿ ನೆರವು ಪಡೆದು ಹಲವರು ನೋಂದಣಿ ಮಾಡಿಸಿದ್ದಾರೆ. ಅವರಿಗೆ ಆಗುತ್ತಿರುವ ಗೊಂದಲ, ಅವರಲ್ಲಿರುವ ಅನುಮಾನಗಳ ಕುರಿತು ಮಾಹಿತಿಯನ್ನು ನೀಡಲಾಗುತ್ತಿದೆ. ಸಹಾಯವಾಣಿ ಕರೆ ಮಾಡಿ ಗೊಂದಲ ಬಗೆಹರಿಸಿಕೊಳ್ಳಬಹುದು. ಇದರ ಸೌಲಭ್ಯವನ್ನು ಪ್ರತಿಯೊಬ್ಬ ಅರ್ಹ ಮಹಿಳೆ ಕರ್ನಾಟಕದಲ್ಲಿ ಪಡೆಯಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.