10ರಂದು ನಡೆದ ಹೋರಾಟಕ್ಕೆ ಸರಕಾರ ಬೆಚ್ಚಿಬಿದ್ದಿದೆ… ಒಳ ಮೀಸಲಾತಿಯ ವಿಷಯದಲ್ಲಿ ಕೊಟ್ಟ ನಮ್ಮ ಒಂದು ವಾರದ ಗಡುವನ್ನು ಕರ್ನಾಟಕ ಸರಕಾರವು ಹಗುರವಾಗಿ ಪರಿಗಣಿಸಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ (P Rajeev) ಅವರು ಎಚ್ಚರಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಮಾತನಾಡಿದ ಅವರು, ಈ ಸರಕಾರದ ಬಳಿ 2 ದಿನ ಸಮಯ ಇದೆ. ನಮ್ಮನ್ನು ಕರೆದು ಮಾತನಾಡಬೇಕಿತ್ತು. ಮರು ಪರಿಶೀಲನೆಗೆ ಕೈಗೊಳ್ಳುವ ಕ್ರಮದ ಕುರಿತು ಹೇಳಬೇಕಿತ್ತು ಎಂದು ತಿಳಿಸಿದರು. ಇದು ನಮ್ಮ ಸಮುದಾಯಗಳ ನಿರ್ಲಕ್ಷ್ಯ ಎಂದು ಟೀಕಿಸಿದ ಅವರು, ನಿರ್ಲಕ್ಷ್ಯಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನುಡಿದರು. ಇದೇ ಬುಧವಾರ ಸಂಜೆ 5 ಗಂಟೆಗೆ ನಾವು ಕೊಟ್ಟ ಗಡುವು ಮುಕ್ತಾಯವಾಗಲಿದೆ. ಸರಕಾರವು ಈ ಶೋಷಿತ ಸಮುದಾಯಗಳ ನೋವನ್ನು ಈ ರೀತಿ ನಿರ್ಲಕ್ಷಿಸಿದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಹಿಂಬರಹ ಯಾಕೆ ಕೊಟ್ಟಿಲ್ಲ? ಕೈಗೊಂಡ ಕ್ರಮಗಳೇನು? 35- 40 ಸಾವಿರ ಜನರ ಹೋರಾಟದ ವಿಚಾರವಾಗಿ ಸರಕಾರದ ನಿಲುವೇನು ಎಂದು ಅವರು ಮನವಿ ಸ್ವೀಕರಿಸಿದ್ದ ರಾಮಲಿಂಗಾರೆಡ್ಡಿಯವರನ್ನು ಪ್ರಶ್ನಿಸಿದರು.
ಮೊನ್ನೆ ಕೈಗೊಂಡ ಹೋರಾಟಕ್ಕಿಂತ ತೀವ್ರವಾದ ಹೋರಾಟ ಮುಂದೆ ನಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಬುಧವಾರ ಸಂಜೆ 5 ಗಂಟೆ ವರೆಗೆ ಈ ಸರಕಾರದ ನಿರ್ಧಾರಕ್ಕಾಗಿ ನಿರೀಕ್ಷಿಸುತ್ತೇವೆ. ನಂತರ ನಮ್ಮ ಮುಂದಿನ ಹೋರಾಟದ ಕುರಿತು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು. ಕರ್ನಾಟಕ ಸರಕಾರವು ಒಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿದೆ. ಅಸಾಂವಿಧಾನಾತ್ಮಕವಾಗಿ ಅನುಷ್ಠಾನಕ್ಕೆ ತಂದಿದೆ. ಸುಪ್ರೀಂ ಕೋರ್ಟಿನ ಮಾನದಂಡಗಳು ಪಾಲನೆ ಆಗಿಲ್ಲ. ಯಾವ ವರದಿಗಳನ್ನೂ ಇವರು ಅನುಷ್ಠಾನಕ್ಕೆ ತಂದಿಲ್ಲ ಎಂದು ಟೀಕಿಸಿದರು. ಯಾವ ಆಯೋಗದ ಶಿಫಾರಸುಗಳನ್ನೂ ಇವರು ಅನುಷ್ಠಾನಕ್ಕೆ ತಂದಿಲ್ಲ ಎಂದ ಅವರು, ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರವು ಬೋವಿ, ಬಂಜಾರ, ಕೊರಚ, ಕೊರಮ- ಈ 4 ಜಾತಿಗಳಿಗೆ ಶೇ 4.5 ಮೀಸಲಾತಿ ಕೊಟ್ಟಿತ್ತು. 59 ಅಲೆಮಾರಿ ಜಾತಿಗಳಿದ್ದು, ಅವರಿಗೆ ಪ್ರತ್ಯೇಕವಾಗಿ ಶೇ 1 ನೀಡಿತ್ತು ಎಂದು ವಿವರಿಸಿದರು. ಇವೆರಡೂ ಪ್ರವರ್ಗಗಳನ್ನು ಒಂದುಗೂಡಿಸಿ ಸುಮಾರು 63 ಜಾತಿಗೆ ಬಿಜೆಪಿ ಕೊಟ್ಟಷ್ಟೇ ಮೀಸಲಾತಿ ಕೊಟ್ಟಿದ್ದರೂ ಶೇ 5.5 ಮೀಸಲಾತಿ ಸಿಗಬೇಕಿತ್ತು ಎಂದು ತಿಳಿಸಿದರು.

ಆದರೆ, ಈ ಸರಕಾರವು 2 ಪ್ರವರ್ಗಗಳನ್ನು ಸೇರಿಸಿ ಶೇ 5ಕ್ಕೆ ನಿಗದಿ ಮಾಡಿ, ಶೇ 0.5 ಅನ್ನು ಕಿತ್ತುಕೊಂಡಿದ್ದಾರೆ. ಇದರ ವಿರುದ್ಧ 10ರಂದು ಫ್ರೀಡಂ ಪಾರ್ಕಿನಲ್ಲಿ ಎಲ್ಲ ಸಮುದಾಯಗಳು ಒಟ್ಟಾಗಿ ದೊಡ್ಡ ಹೋರಾಟವನ್ನು ಕೈಗೊಂಡಿದ್ದೆವು. ಅವತ್ತು ರಾಮಲಿಂಗಾರೆಡ್ಡಿಯವರು ಬಂದು ಮನವಿ ಸ್ವೀಕರಿಸಿದ್ದರು. ಈ ಸರಕಾರಕ್ಕೆ ಒಂದು ವಾರದ ಗಡುವನ್ನು ನೀಡಿದ್ದೆವು ಎಂದರು. ಇವತ್ತಿನವರೆಗೆ ಸರಕಾರವು ತಾವು ಕೈಗೊಂಡ ಕ್ರಮಗಳ ಕುರಿತು ತಿಳಿಸಿಲ್ಲ; ಹಿಂಬರಹವನ್ನೂ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ನನ್ನ ಮೇಲೆ, ಕೆಲವು ಹೋರಾಟಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಇದು ಈ ಸರಕಾರದ ಹತಾಶ ಭಾವನೆಯನ್ನು ಎತ್ತಿ ತೋರಿಸುತ್ತದೆ. ಸರಕಾರವು ಹೋರಾಟಗಾರರ ಮೇಲೆ ಎಫ್‍ಐಆರ್ ಮಾಡುವ ಮೂಲಕ, ಆ ಹೋರಾಟಕ್ಕೆ ಸರಕಾರ ಬೆಚ್ಚಿ ಬಿದ್ದಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದರು.
ಹೊಸ ಜಾತಿಗಳ ನೆಲೆ ಎಲ್ಲಿ?
ಇತರ ಮತಗಳಲ್ಲಿ ಸಮಾನತೆ ಇರುವ ಕಾರಣ ಮತಾಂತರ ಆಗುವುದರಲ್ಲಿ ತಪ್ಪೇನಿದೆ ಎಂಬಂತೆ ಸಿದ್ದರಾಮಯ್ಯನವರು ಮಾತನಾಡಿದ್ದಾರೆ ಎಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಚರ್ಚೆಯ ವಿಷಯ ಅದಲ್ಲ; ಇದನ್ನು ತಪ್ಪಿಸಲು ಸಿದ್ದರಾಮಯ್ಯನವರು 75ನೇ ವಯಸ್ಸಿನವರೆಗೆ ಎಷ್ಟು ವೈಯಕ್ತಿಕವಾಗಿ ಪ್ರಯತ್ನ ಮಾಡಿದ್ದಾರೆ ಎಂದು ಕೇಳಿದರು. ಸಿದ್ದರಾಮಯ್ಯನವರ ಮಾತು ಕೇಳಿದರೆ, ಕನಕದಾಸರ ಸಂದೇಶವನ್ನು ಕೈಬಿಟ್ಟಂತೆ ಎಂದು ವಿಶ್ಲೇಷಿಸಿದರು. ಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಅಂದೇ ಹೇಳಿದ್ದರು. ಅದರ ಅನುಷ್ಠಾನಕ್ಕೆ ಆದ ಪ್ರಯತ್ನದ ಕುರಿತು ಬೇರೆ ಚರ್ಚೆ ಮಾಡೋಣ; ಇವತ್ತು ಇಲ್ಲದೇ ಇರುವ ಜಾತಿಗಳನ್ನು ಸೃಷ್ಟಿ ಮಾಡಿದ್ದಾರೆ; ಜಾತಿಯ ಪಟ್ಟಿಯಲ್ಲಿ ಅವು ಹೇಗೆ ಬರುತ್ತವೆ ಎಂದು ಕೇಳಿದರು. ಬಂಜಾರ, ಲಂಬಾಣಿ ಜಾತಿಗಳಿವೆ. ಬಂಜಾರ ಕ್ರಿಶ್ಚಿಯನ್ ಜಾತಿಯೇ ಇಲ್ಲ. ಬೋವಿ ಕ್ರಿಶ್ಚಿಯನ್ ಜಾತಿಯೇ ಇಲ್ಲ. ಹೊಸ ಜಾತಿ ಹುಟ್ಟು ಹಾಕಿದ್ದೀರಲ್ಲವೇ? ಇದರ ನೆಲೆ ಎಲ್ಲಿ ಎಂದು ಪ್ರಶ್ನಿಸಿದರು.

ಪ್ರತಾಪಸಿಂಹ ಅವರಿಗೆ ಕೋರ್ಟಿನಲ್ಲಿ ಹಿನ್ನಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಘಟನೆಯನ್ನು ಧಾರ್ಮಿಕ- ಕಾನೂನಾತ್ಮಕ ಹಿನ್ನೆಲೆಯಿಂದ ನೋಡಿದಾಗ ದೃಷ್ಟಿಕೋನ ಬೇರೆ ಬೇರೆ ಆಗುತ್ತದೆ. ಧಾರ್ಮಿಕ ಭಾವನೆ ಬೇರೆ; ಕಾನೂನು ಬೇರೆ ಎಂದು ತಿಳಿಸಿದರು. ದಸರಾ ವಿಚಾರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತಿದೆ ಎಂದು ಬಿಜೆಪಿ ಆರೋಪ; ಪ್ರತಾಪಸಿಂಹ ಅವರು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹೋಗಿದ್ದರು. ಪಕ್ಷದ ವತಿಯಿಂದ ನ್ಯಾಯಾಲಯಕ್ಕೆ ಹೋಗುವುದು ಇರಲಿಲ್ಲ ಎಂದರು. ನಮ್ಮ ಧಾರ್ಮಿಕ ಶ್ರದ್ಧೆ, ಆಚರಣೆ ಬಗ್ಗೆ ನಿಮಗೆ ನಂಬಿಕೆ ಇದೆಯೇ? ನೀವು ಚಾಮುಂಡೇಶ್ವರಿಯನ್ನು ಶಕ್ತಿ ಸ್ವರೂಪಿಣಿ ಎಂದು ಒಪ್ಪುವಿರಾ? ಕುಂಕುಮ ಮತ್ತು ಅರಿಶಿಣಕ್ಕೆ ಅಪಮಾನ ಮಾಡಿದ ಮಾತನ್ನು ಹಿಂದಕ್ಕೆ ಪಡೆಯುವಿರಾ ಎಂದು ಬಾನು ಮುಷ್ತಾಕ್ ಅವರನ್ನು ಪ್ರಶ್ನಿಸಿದರು. ನಾನು ಹಿಂದೂ ಆಚರಣೆಯನ್ನು ಗೌರವಿಸುವೆ; ಹಿಂದೂ ಸಂಸ್ಕøತಿ ಬಗ್ಗೆ ನನಗೆ ನಂಬಿಕೆ ಇದೆ; ನಾನು ಅಧ್ಯಾತ್ಮದಲ್ಲಿ ವಿಶ್ವಾಸ ಇಟ್ಟಿದ್ದೇನೆ ಎಂದರೆ ನಮಗೆ ಯಾವ ವ್ಯತ್ಯಾಸವೂ ಇಲ್ಲ; ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದು ವಿವರಿಸಿದರು. ಭೋವಿ ಸಮಾಜದ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
