ಬೆಂಗಳೂರು : ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಪ್ಯಾನ್ ಕಾರ್ಡ್ (Pan Card) ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ದೇಶದಲ್ಲಿ ಯಾವುದೇ ಮಹತ್ವದ ಹಣಕಾಸು ವಹಿವಾಟುಗಳನ್ನು (Financial transaction) ನಡೆಸಲು ಸಾಧ್ಯವಿಲ್ಲ.
ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರೆಗೆ ಎಲ್ಲದಕ್ಕೂ ಇದು ಅತ್ಯಗತ್ಯ. ದೊಡ್ಡ ಮೊತ್ತದ ಹಣಕಾಸಿನ ವಹಿವಾಟುಗಳು, ಬೆಲೆಬಾಳುವ ಆಸ್ತಿ ಖರೀದಿ ಅಥವಾ ಹೊಸ ಉದ್ಯೋಗಕ್ಕೆ ಸೇರಿದ ನಂತರ ವೇತನ ಪಡೆಯಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಇಂತಹ ಪ್ರಮುಖ ದಾಖಲೆ ನಿಮ್ಮ ಬಳಿ ಇಲ್ಲದಿದ್ದರೆ, ಇನ್ಮುಂದೆ ದಿನಗಟ್ಟಲೆ ಕಾಯಬೇಕಿಲ್ಲ. ಕೇವಲ ಹತ್ತೇ ನಿಮಿಷಗಳಲ್ಲಿ ಸುಲಭವಾಗಿ ಆನ್ಲೈನ್ ಮೂಲಕ ಇ-ಪ್ಯಾನ್ ಪಡೆಯಬಹುದು.

ತತ್ಕ್ಷಣದ ಇ-ಪ್ಯಾನ್ ಪಡೆಯುವ ಸರಳ ವಿಧಾನ
ಇ-ಪ್ಯಾನ್ ಕಾರ್ಡ್ ಪಡೆಯಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಬೇಕು. ಅಲ್ಲಿ ಲಭ್ಯವಿರುವ ‘ಗೆಟ್ ನ್ಯೂ ಇ-ಪ್ಯಾನ್’ ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಹಾಕಿ ಆಧಾರ್ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು. ಆಧಾರ್ ಡೇಟಾಬೇಸ್ನಿಂದ ನಿಮ್ಮ ವಿವರಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಆ ವಿವರಗಳನ್ನು ಒಮ್ಮೆ ಪರಿಶೀಲಿಸಿ ಸಬ್ಮಿಟ್ ಬಟನ್ ಒತ್ತಿದ ತಕ್ಷಣವೇ ಇ-ಪ್ಯಾನ್ ಸೃಷ್ಟಿಯಾಗುತ್ತದೆ. ಇದರ ವಿವರಗಳು ನಿಮ್ಮ ಮೊಬೈಲ್ ಸಂದೇಶ ಹಾಗೂ ಇಮೇಲ್ಗೆ ಬರುತ್ತವೆ. ಅಲ್ಲಿ ನೀಡಿರುವ ಲಿಂಕ್ ಮೂಲಕ ತಕ್ಷಣವೇ ಇ-ಪ್ಯಾನ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಅರ್ಜಿ ಸ್ಥಿತಿ ಪರಿಶೀಲನೆ ಮತ್ತು ಡೌನ್ಲೋಡ್ ಮಾಡುವ ವಿಧಾನ
ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ಪರಿಶೀಲಿಸಲು ಆದಾಯ ತೆರಿಗೆ ಪೋರ್ಟಲ್ನ ಮುಖಪುಟದಲ್ಲಿರುವ ‘ಕ್ವಿಕ್ ಲಿಂಕ್ಸ್’ ವಿಭಾಗಕ್ಕೆ ಹೋಗಬೇಕು. ಅಲ್ಲಿ ‘ಇನ್ಸ್ಟಂಟ್ ಇ-ಪ್ಯಾನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಬಳಿಕ ‘ಚೆಕ್ ಸ್ಟೇಟಸ್ / ಡೌನ್ಲೋಡ್ ಪ್ಯಾನ್’ ಆಯ್ಕೆಯನ್ನು ಆರಿಸಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್ಗೆ ಬರುವ ಒಟಿಪಿಯನ್ನು ದೃಢೀಕರಿಸಬೇಕು. ಆಗ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ ಪರದೆಯ ಮೇಲೆ ಕಾಣಿಸುತ್ತದೆ. ಪ್ಯಾನ್ ಕಾರ್ಡ್ ಸಿದ್ಧವಾಗಿದ್ದರೆ, ‘ವ್ಯೂ ಪ್ಯಾನ್’ ಮೂಲಕ ಅದನ್ನು ವೀಕ್ಷಿಸಬಹುದು ಅಥವಾ ‘ಡೌನ್ಲೋಡ್ ಇ-ಪ್ಯಾನ್’ ಆಯ್ಕೆಯನ್ನು ಒತ್ತಿ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಇದ್ದರೆ ಸಾಕು
ಈ ತ್ವರಿತ ಇ-ಪ್ಯಾನ್ ಪಡೆಯಲು ಕೇವಲ ಆಧಾರ್ ಸಂಖ್ಯೆ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದ್ದರೆ ಸಾಕು. ಆಧಾರ್ ಮೂಲಕ ನಿಮ್ಮ ವೈಯಕ್ತಿಕ ವಿವರಗಳು ದೃಢೀಕರಣಗೊಳ್ಳುತ್ತವೆ ಹಾಗೂ ಮೊಬೈಲ್ಗೆ ಬರುವ ಒಟಿಪಿ ನಿಮ್ಮ ಗುರುತನ್ನು ಸಾಬೀತುಪಡಿಸುತ್ತದೆ. ಈ ಎರಡೂ ದಾಖಲೆಗಳು ಸರಿಯಾಗಿದ್ದರೆ ಹತ್ತೇ ನಿಮಿಷಗಳಲ್ಲಿ ಡಿಜಿಟಲ್ ಪ್ಯಾನ್ ಕಾರ್ಡ್ ನಿಮ್ಮ ಕೈಸೇರುತ್ತದೆ. ಈ ಇ-ಪ್ಯಾನ್ ಕಾರ್ಡ್ ಅನ್ನು ಸಾಮಾನ್ಯ ಭೌತಿಕ ಪ್ಯಾನ್ ಕಾರ್ಡ್ನಂತೆಯೇ ಎಲ್ಲ ಅಧಿಕೃತ ಮತ್ತು ಹಣಕಾಸಿನ ಕೆಲಸಗಳಿಗೂ ಬಳಸಬಹುದು.
ಹೆಚ್ಚುತ್ತಿರುವ ಸಾಲದ ಇಎಂಐ ಹೊರೆ: ಆರ್ಬಿಐ ರೆಪೋ ದರ ಏರಿಕೆಯಿಂದ ಪಾರಾಗಲು 3 ಪ್ರಮುಖ ಸೂತ್ರಗಳು | EMI






