ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ʻವೀಕೆಂಡ್ ವಿತ್ ರಮೇಶ್ ಸೀಸನ್ 5ʼ ಈಗಾಗಲೇ ಆರಂಭವಾಗಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ಮೋಹಕ ತಾರೆ ರಮ್ಯಾ ಭಾಗವಹಿಸಿದ್ದರು.

ಬಳಿಕ ಅದ್ಬುತ ಡ್ಯಾನ್ಸರ್ ಪ್ರಭುದೇವ, ಜಯದೇವ ಸಂಸ್ಥೆಯ ಮುಖ್ಯಸ್ಥ ಡಾ.ಸಿ.ಎನ್.ಮಜುನಾಥ್, ಹಿರಿಯ ನಟ ದತ್ತಣ್ಣ ಭಾಗವಹಿಸಿದ್ರು. ಈ ಬಾರಿ ʻವೀಕೆಂಡ್ ವಿತ್ ರಮೇಶ್ʼ ಕಾರ್ಯಕ್ರಮದ ಗೆಸ್ಟ್ ಯಾರು ಅಂತ ಕಿರುತೆರೆ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು.. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿದೆ.

ಯೆಸ್… ಸ್ಯಾಂಡಲ್‌ವುಡ್ ನಟ, ನಟರಾಕ್ಷಸ ಡಾಲಿ ಧನಂಜಯ್ ಈ ವಾರ ಸಾಧಕರ ಕುರ್ಚಿ ಏರಲಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ಮಾಪಕನಾಗಿಯೂ ಧನಂಜಯ್ ಗುರುತಿಸಿಕೊಂಡಿದ್ದಾರೆ. ಹಲವು ಏರಿಳಿತಗಳನ್ನ ಕಂಡು, ಇದೀಗ ಚಂದನವನದ ಭರವಸೆಯ ನಾಯಕನಾಗಿ ಬೆಳೆದು ನಿಂತಿದ್ದಾರೆ ಡಾಲಿ.

ʻಬಡವರ ಮಕ್ಕಳು ಬೆಳೀಬೇಕುʼ ಎಂಬ ಡೈಲಾಗ್ ಅವರಿಗೆ ಅಪಾರ ಅಭಿಮಾನಿಗಳನ್ನು ತಂದುಕೊಟ್ಟಿದೆ. ಇದೀಗ ಈ ನಟನ ಬದುಕು ವೀಕೆಂಡ್ ಶೋನಲ್ಲಿ ಅನಾವರಣಗೊಳ್ಳಲಿದೆ.

ಈ ಶೋನಲ್ಲಿ ಧನಂಜಯ್ ಅವರ ಸ್ನೇಹಿತರು, ಆಪ್ತರು, ಬಾಲ್ಯದ ಸ್ನೇಹಿತರು, ಸ್ಯಾಂಡಲ್‌ವುಡ್‌ನ ಕಲಾ ಬಳಗ ಅವರ ಬಗ್ಗೆ ಮಾತನಾಡಲಿದೆ. ಇದಷ್ಟೇ ಅಲ್ಲ ಹೊರಗಿನ ಜಗತ್ತಿಗೆ ಗೊತ್ತಿರದಂತಹ ಕೆಲವು ವಿಚಾರಗಳು, ಕುಟುಂಬದ ಹಿನ್ನೆಲೆ, ಹುಟ್ಟೂರಿನ ಬಗ್ಗೆಯೂ ಗೊತ್ತಾಗಲಿದೆ.

ಶಾಲೆಯ ದಿನಗಳು, ಚಿತ್ರರಂಗದ ಕಷ್ಟದ ದಿನಗಳು, ಇದೀಗ ಗೆಲುವಿನ ದಿನಗಳನ್ನೂ ಧನಂಜಯ್ ʻವೀಕೆಂಡ್ ವಿತ್ ರಮೇಶ್ʼ ಶೋನಲ್ಲಿ ಮೆಲುಕು ಹಾಕಲಿದ್ದಾರೆ










