ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ಸುಮಾರು 10 ಕೀ.ಮೀ. ದೂರ ರೋಡ್ ಶೋ ಮೂಲಕ ಅಬ್ಬರದ ಚುನಾವಣಾ ಪ್ರಚಾರ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮದ ಹೆಸರಲ್ಲಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೂ ಮೊದಲು ಚುನಾವಣಾ ಱಲಿ ನಡೆಸಿದ್ದಾರೆ. ಸಮಾವೇಶದಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ ನರೇಂದ್ರ ಮೋದಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದರು. ನಾವು ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಅಕೌಂಟ್ಗೆ ನೇರವಾಗಿ ಹಣ ಹಾಕ್ತೇವೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ 1 ರುಪಾಯಿ ಬಿಡುಗಡೆ ಆಗಿದ್ದರೆ ಅದು ರೈತರ ಕೈ ಸೇರುವ ಹೊತ್ತಿಗೆ 15 ಪೈಸೆ ಆಗಿರುತ್ತಿತ್ತು. ಜನರ ಮೇಲೆ ಕಾಂಗ್ರೆಸ್’ಗೆ ಅಭಿಮಾನವಿಲ್ಲ. ಕಾಂಗ್ರೆಸ್ ಉಳ್ಳವರ ಪರ ಎಂದು ವಾಗ್ದಾಳಿ ಮಾಡಿದ್ದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಮೇಲೆ ಕನಿಕರ ವ್ಯಕ್ತಪಡಿಸಿದ ಪ್ರಧಾನಿ ಮಲ್ಲಿಕಾರ್ಜುನ ಖರ್ಗೆಯನ್ನು ಹಾಡಿ ಹೊಗಳಿದ್ದಾರೆ. ಅದೇ ವೇಳೆ ಮಹಿಳೆಯನ್ನು ಹಿಯ್ಯಾಳಿಸಿದ್ದಾರೆ ಎನಿಸುತ್ತದೆ.

ಖರ್ಗೆ ದಲಿ ಎನ್ನುವ ಕಾರಣಕ್ಕೆ ಓಲೈಕೆಯೋ..?
ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಪಕ್ಷ ಉನ್ನತ ಹುದ್ದೆಗಳನ್ನು ನೀಡಿದೆ. ಲೋಕಸಭೆ ವಿರೋಧ ಪಕ್ಷದ ಸ್ಥಾನ, ರಾಜ್ಯಸಭೆ ವಿರೋಧ ಪಕ್ಷದ ಸ್ಥಾನ ಹಾಗು ಎಐಸಿಸಿ ಅಧ್ಯಕ್ಷ ಸ್ಥಾನವನ್ನೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದೆ. ಆದರೂ ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕನಿಕರದ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಆದರೂ ಅವರಿಗೆ ಕಾಂಗ್ರೆಸ್ ಗೌರವ ನೀಡುತ್ತಿಲ್ಲ. ಕರ್ನಾಟಕದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅಸಡ್ಡೆ ಇದೆ ಎಂದಿರುವ ನರೇಂದ್ರ ಮೋದಿ, ನಿಜಲಿಂಗಪ್ಪ ಹಾಗು ವೀರೇಂದ್ರ ಪಾಟೀಲರಿಗೆ ಅಪಮಾನ ಮಾಡಿದ್ದು ಎಲ್ಲರಿಗೂ ಗೊತ್ತಿದೆ.
ಇದೀಗ ಮತ್ತೊಬ್ಬ ನಾಯಕನಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಛತ್ತೀಸ್ಗಢದ ಮಹಾ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷರು ಬಿಸಿಲಿನಲ್ಲಿ ನಿಂತಿದ್ದಾಗ ಛತ್ರಿಯ ಸೌಭಾಗ್ಯ ಮಲ್ಲಿಕಾರ್ಜುನ ಖರ್ಗೆಗೆ ಸಿಗಲಿಲ್ಲ. ಖರ್ಗೆ ಪಕ್ಕದಲ್ಲಿ ನಿಂತಿದ್ದವರಿಗೆ ಛತ್ರಿಯ ಭಾಗ್ಯ ಸಿಕ್ಕಿತು ಎನ್ನುವ ಮೂಲಕ ಸೋನಿಯಾ ಗಾಂಧಿಯನ್ನು ಟೀಕಿಸಿದ್ದಾರೆ.
ಕ್ಯಾನ್ಸರ್ ಪೀಡಿತ ಸೋನಿಯಾ ಗಾಂಧಿ ಮೇಲ್ಯಾಕೆ ಕೋಪ..!

ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ನ ಬಹುತೇಕ ನಾಯಕರು ಭಾಗಿಯಾಗಿದ್ದ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ನಿಂತಿದ್ದಾಗ ಸೋನಿಯಾ ಗಾಂಧಿ ಅವರಿಗೆ ಛತ್ರಿ ಹಿಡಿದು ನೆರಳು ಕಲ್ಪಿಸಲಾಗಿತ್ತು. ಈ ವಿಚಾರವನ್ನು ನರೇಂದ್ರ ಮೋದಿ ಅಣಕಿಸಿದ್ದಾರೆ. ಸೋನಿಯಾ ಗಾಂಧಿ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಳ್ತಿದ್ದಾರೆ. ಸಾಕಷ್ಟು ದಿನಗಳಿಂದ ಗೃಹವಾಸ ಬಿಟ್ಟು ಹೊರಕ್ಕೆ ಬಂದಿರದ ಸೋನಿಯಾ ಇತ್ತೀಚಿಗಷ್ಟೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಆದರೆ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಕ್ಷಲ್ಲಕ ರೀತಿಯಲ್ಲಿ ಅಣಕಿಸಿದ್ದು ಮಹಿಳಾ ಸಮುದಾಯವನ್ನು ಮೂದಲಿಸಿದಂತೆ ಅನ್ನೋ ಚರ್ಚೆಗಳು ಶುರುವಾಗಿವೆ. ಮಹಿಳೆಗೆ ಸಾಕಷ್ಟು ರೀತಿಯಲ್ಲಿ ಸಮಸ್ಯೆಗಳು ಬರುತ್ತವೆ. ಆ ದಿನ ಆಕೆ ಕಷ್ಟವಿದ್ದರೂ ತನ್ನ ಕಾಯಕದಲ್ಲಿ ಭಾಗಿಯಾಗಿದ್ದಾರೆ ಎಂದರೆ ಶ್ಲಾಘಿಸಬೇಕೇ ಹೊರತು ಟೀಕೆ ಸರಿಯಲ್ಲ ಎನ್ನಲಾಗ್ತಿದೆ. ಆದರೂ ಓರ್ವ ಹಿರಿಯ ಮಹಿಳೆ ಸೋನಿಯಾ ಗಾಂಧಿಯನ್ನು ಮೋದಿ ಟೀಕಿಸಿದ್ದು ಸಣ್ಣತನ ಪ್ರದರ್ಶನ ಎನ್ನುತ್ತಿದ್ದಾರೆ ಜನಸಾಮಾನ್ಯರು.
ಖರ್ಗೆ ಮೇಲೆ ಪ್ರೀತಿ ಇದ್ದರೆ ಸೋಲಿಸಿದ್ದು ಯಾಕೆ..?

ಮಲ್ಲಿಕಾರ್ಜುನ ಖರ್ಗೆ ಮೇಲೆ ನನಗೆ ಅಪಾರ ಗೌರವಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಉದ್ದೇಶಪೂರ್ವಕವಾಗಿ ಸೋಲಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಶಿಷ್ಯ ಅರವಿಂದ ಜಾಧವ್ ಅವರನ್ನೇ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೆಳೆದು ಖರ್ಗೆ ವಿರುದ್ಧ ಛೂ ಬಿಟ್ಟರು. ಮೂರ್ನಾಲ್ಕು ಬಾರಿ ಮಲ್ಲಿಕಾರ್ಜುಕ ಖರ್ಗೆ ಸ್ಪರ್ಧೆ ಮಾಡುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಸೋಲು ಕಾಣುವಂತೆ ಮಾಡಿದ್ದರು. ಆದರೀಗ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ವಿರುದ್ಧವಾಗಿ ಮಾತನಾಡಿದರೆ ಕರ್ನಾಟಕದ ಚುನಾವಣೆಯಲ್ಲಿ ದಲಿತ ಸಮುದಾಯ ತಿರುಗಿ ಬಿದ್ದರೆ ಎನ್ನುವ ಒಂದೇ ಒಂದು ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಆಧರ ತೋರಿಸಿದ್ದಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ್ನಾಗಿ ಕಾಂಗ್ರೆಸ್ ಮಾಡಿದರೂ ಅಧಿಕೃತ ವಿಪಕ್ಷ ನಾಯಕನ ಸ್ಥಾನ ಮಾನ ನೀಡದೆ ದಲಿತ ವಿರೋಧಿ ನಡೆ ಅನುಸರಿಸಿದ್ದ ನರೇಂದ್ರ ಮೋದಿ ನಿನ್ನೆ ಬೆಳಗಾವಿಯಲ್ಲಿ ಪ್ರೀತಿ ವಾತ್ಸಲ್ಯ ತೋರಿಸಿದ್ದು ಅಭಾಸವಾದಂತೆ ಕಾಣಿಸಿದ್ದು ಸುಳ್ಳಲ್ಲ.