ಶಿವಮೊಗ್ಗದಲ್ಲಿ ಕೋಮು ದಳ್ಳುರಿಗೆ ಕಾರಣವಾದ ಯುವಕ ಹರ್ಷ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ.
ಒಂದು ಕಡೆ ಹರ್ಷ ಕೊಲೆಗೆ ಮುನ್ನ ಆತನಿಗೆ ವೀಡಿಯೋ ಕರೆ ಮಾಡಿದ ಹುಡುಗಿಯರು ಯಾರು ಮತ್ತು ಅವರಿಗೂ ಕೊಲೆಗಾರರಿಗೂ ಇರುವ ಸಂಬಂಧವೇನು ಎಂಬ ಆತನ ಮೊಬೈಲ್ ಪತ್ತೆಯಾಗದೇ ಇನ್ನೂ ನಿಗೂಢವಾಗಿಯೇ ಇದ್ದರೆ, ಮತ್ತೊಂದು ಕಡೆ ಕೊಲೆ ಆರೋಪಿಗಳಿಗೂ ಅವರನ್ನು ಪೊಲೀಸರಿಗೆ ಶರಣಾಗಿಸಲು ಯತ್ನಿಸಿದ ವ್ಯಕ್ತಿಗೂ ಇರುವ ಸಂಬಂಧವೇನು ಮತ್ತು ಇಡೀ ಪ್ರಕರಣದ ಹಿಂದಿನ ಉದ್ದೇಶಕ್ಕೂ ಶಿವಮೊಗ್ಗದ ರಾಜಕಾರಣಕ್ಕೂ ನಂಟಿದೆಯೇ ಎಂಬ ನಿಟ್ಟಿನಲ್ಲಿಯೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ಈ ನಡುವೆ, ಬಿಜೆಪಿ ಮತ್ತು ಸಂಘಪರಿವಾರದ ವಲಯದಲ್ಲಿ ಮುಂದಿನ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆಯೂ ಆರಂಭವಾಗಿದೆ. ಬಿಜೆಪಿ ಮತ್ತು ಪರಿವಾರದ ಒಂದು ವಲಯದಲ್ಲಿ ಮೃತ ಹರ್ಷ ಕುಟುಂಬದವರಿಗೇ ಚುನಾವಣಾ ಟಿಕೆಟ್ ನೀಡಬೇಕು. ಹಿಂದೂ ಧರ್ಮ ಮತ್ತು ದೇಶಕ್ಕಾಗಿ ಪ್ರಾಣ ಕೊಟ್ಟಿರುವ ಯುವಕನ ತ್ಯಾಗದ ಋಣ ತೀರಿಸಬೇಕು. ಬಿಜೆಪಿ ನಾಯಕರು ಈಗಲೇ ಈ ವಿಷಯದಲ್ಲಿ ತಮ್ಮ ನಿರ್ಧಾರ ಪ್ರಕಟಿಸಬೇಕು. ಹರ್ಷ ತಾಯಿ ಅಥವಾ ಸಹೋದರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಹರ್ಷನ ಮನೆಗೆ ಭೇಟಿ ನೀಡುತ್ತಿರುವ ಪಕ್ಷ ಮತ್ತು ಪರಿವಾರದ ಮುಖಂಡರ ಮುಂದೆಯೂ ಈ ವಿಷಯ ಪ್ರಸ್ತಾಪವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಂತೂ ವ್ಯಾಪಕ ಅಭಿಯಾನದ ಸ್ವರೂಪ ಪಡೆದುಕೊಂಡಿದೆ.
ಈ ಅಭಿಯಾನ, ಚರ್ಚೆಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಮತ್ತು ಪರಿವಾರದ ವಲಯದಲ್ಲಿ ಚರ್ಚೆಯಲ್ಲಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಕುರಿತ ವಿಷಯ ಕೂಡ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಸಂಬಂಧ, ಪರಿವಾರ ಮತ್ತು ಈಶ್ವರಪ್ಪ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ಕಳೆದ ಆರೇಳು ತಿಂಗಳುಗಳಿಂದಲೇ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ಬಿಜೆಪಿ ಮತ್ತು ಪರಿವಾರದ ಆಂತರಿಕ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು.
ಈಶ್ವರಪ್ಪ ಅವರಿಗೆ ಯಡಿಯೂರಪ್ಪ ಮಾದರಿಯಲ್ಲೇ ನಿವೃತ್ತಿಯ ದಾರಿ ತೋರಿಸಿ ಆರ್ ಎಸ್ ಎಸ್ ಹಿನ್ನೆಲೆಯ ವೃತ್ತಿನಿರತ ವೈದ್ಯರೊಬ್ಬರನ್ನು ಕಣಕ್ಕಿಳಿಸುವ ಲೆಕ್ಕಾಚಾರಗಳು ಪರಿವಾರದ ವಲಯದಲ್ಲಿ ಗರಿಗೆದರಿದ್ದವು. ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಹಾಲಿ ಟಿಕೆಟ್ ಆಕಾಂಕ್ಷಿ ಕೆ ಬಿ ಪ್ರಸನ್ನಕುಮಾರ್ ವಿರುದ್ಧ ಜಾತಿ ಹಿನ್ನೆಲೆಯಲ್ಲಿ ಪ್ರಬಲ ಪೈಪೋಟಿ ಕೊಡುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಈಶ್ವರಪ್ಪ ಬದಲಾದರೂ ಕ್ಷೇತ್ರ ಕೈತಪ್ಪದಂತೆ ಹಿಡಿದಿಟ್ಟುಕೊಳ್ಳುವುದು ಪರಿವಾರದ ಲೆಕ್ಕಾಚಾರವಾಗಿತ್ತು.
ಜೊತೆಗೆ ಯಡಿಯೂರಪ್ಪ ಬಣ ಈ ಬಾರಿ ಶಿವಮೊಗ್ಗ ನಗರದಿಂದ ವಿಧಾನಪರಿಷತ್ ಸದಸ್ಯ ಹಾಗೂ ಉದ್ಯಮಿ ರುದ್ರೇಗೌಡರನ್ನು ಕಣಕ್ಕಿಳಿಸುವ ಯತ್ನದಲ್ಲಿತ್ತು. 2013ರ ಚುನಾವಣೆಯಲ್ಲಿ ಬಿಜೆಪಿಯ ಈಶ್ವರಪ್ಪ ವಿರುದ್ಧ ಕೆಜೆಪಿಯಿಂದ ಕಣಕ್ಕಿಳಿದು ಸಮಬಲದ ಪೈಪೋಟಿ ನೀಡಿದ್ದ ರುದ್ರೇಗೌಡರ ಶಕ್ತಿ ಏನೆಂಬುದು ಗೊತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಈಶ್ವರಪ್ಪ ಬಣದ ಕೆಲವರನ್ನು ಹೊರತುಪಡಿಸಿ ಬಿಜೆಪಿಯ ಬಹುತೇಕರು ಕೂಡ ಗೌಡರ ಪರ ಒಲವು ಹೊಂದಿದ್ದರು. ಯಡಿಯೂರಪ್ಪ ಮತ್ತು ಅವರ ಪುತ್ರರೊಂದಿಗೆ ಆಪ್ತ ನಂಟು ಹೊಂದಿರುವ ಗೌಡರಿಗೆ ಲಿಂಗಾಯತ ಸಮುದಾಯದ ಬೆಂಬಲದೊಂದಿಗೆ ಬಿಜೆಪಿಯ ಸಾಂಪ್ರದಾಯಿಕ ಮತಗಳು ಬಂದರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಕೂಡ ಅವರ ಪರ ಪಕ್ಷದ ಬಹುತೇಕರ ಒಲವಿಗೆ ಕಾರಣ.
ಹೀಗೆ ಹಲವು ಆಯಾಮಗಳಿಂದ ಈ ಬಾರಿ ಸಚಿವ ಕೆ ಎಸ್ ಈಶ್ವರಪ್ಪಗೆ ಬಿಜೆಪಿ ಕೈತಪ್ಪುವ ಸಾಧ್ಯತೆಗಳೇ ಹೆಚ್ಚಿವೆ. ಈ ನಡುವೆ ಹರ್ಷ ಕೊಲೆ ಪ್ರಕರಣ ಶಿವಮೊಗ್ಗ ರಾಜಕಾರಣದ ಮೇಲೆಯೂ ಪ್ರಭಾವ ಬೀರುವ ಮುನ್ಸೂಚನೆಗಳು ಈಗಾಗಲೇ ಸಿಕ್ಕಿದ್ದು, ಒಂದು ಕಡೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದೂ ಹಿಂದೂ ಕಾರ್ಯಕರ್ತರ ಕಗ್ಗೊಲೆಗಳನ್ನು ತಡೆಯಲಾಗಿಲ್ಲ ಎಂಬ ಆಕ್ರೋಶ ಸಾಮಾನ್ಯ ಪರಿವಾರ ಮತ್ತು ಬಿಜೆಪೆ ಕಾಡರ್ ನಲ್ಲಿ ಮಡುಗಟ್ಟಿದೆ. ಶಿವಮೊಗ್ಗ ನಗರದ ಶಾಸಕರೂ ಆದ ಪ್ರಭಾವಿ ಸಚಿವ ಈಶ್ವರಪ್ಪ ಮತ್ತು ಜಿಲ್ಲೆಯವರೇ ಆದ ಸಂಘಪರಿವಾರದ ಕಟ್ಟಾಳು ಆರಗ ಜ್ಞಾನೇಂದ್ರ ಗೃಹ ಸಚಿವರಾಗಿರುವಾಗಲೂ ಹೀಗೆ ಸಂಫದ ಹುಡುಗರು ಹಾದಿಬೀದಿ ಹೆಣವಾಗುತ್ತಿರುವುದಕ್ಕೆ ಕಾರಣ ಯಾರು? ಯಾಕೆ ದಶಕಗಳಿಂದ ತಾವು ಹೋರಾಟ ಮಾಡಿಕೊಂಡು ಬಂದಿದ್ದರೂ, ತಮ್ಮದೇ ಸರ್ಕಾರವಿದ್ದರೂ ಪಿಎಫ್ ಐನಂತಹ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸಿಲ್ಲ ಎಂಬ ಪ್ರಶ್ನೆ ಕೂಡ ಪರಿವಾರದ ಯುವಕರ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಅದೇ ಆಕ್ರೋಶದ ಭರದಲ್ಲೇ ಮೃತ ಹರ್ಷ ಕುಟುಂಬದವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕು. ಬಿಜೆಪಿ ಟಿಕೆಟ್ ನೀಡಿದ್ದೇ ಆದರೆ, ಅವರನ್ನು ಗೆಲ್ಲಿಸಿಕೊಂಡು ಬರುವುದು ತಮಗೆ ಬಿಟ್ಟಿದ್ದು ಎಂಬ ಕೂಗೂ ಭುಗಿಲೆದ್ದಿದೆ. ಮೂಲಗಳ ಪ್ರಕಾರ ಈ ದನಿಗೆ ಈಗಾಗಲೇ ಸಂಘಪರಿವಾರದ ಬಳಗ ಕೂಡ ಪ್ರತಿಸ್ಪಂದನೆ ನೀಡಿದ್ದು, ಈಶ್ವರಪ್ಪ ಅವರನ್ನು ಬದಿಗೆ ಸರಿಸಲು ಈಗಾಗಲೇ ಯೋಜಿಸಿದ್ದ ಪರಿವಾರ ಮತ್ತು ಬಿಜೆಪಿಯ ಒಂದು ಬಣ, ಇದೀಗ ಈ ಕೂಗನ್ನೇ ದಾಳವಾಗಿ ಬಳಸಿಕೊಂಡು ತಮ್ಮ ಕಾರ್ಯ ಸಾಧಿಸುವ ಉಮೇದಿನಲ್ಲಿದೆ.
ಅಲ್ಲದೆ, ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯಿಂದ ಪಾರ್ಲಿಮೆಂಟ್ ವರೆಗೆ, ಪಕ್ಷದ ಮೋರ್ಚಾಗಳಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ವರೆಗೆ ಬಿಜೆಪಿಯಲ್ಲಿ ಅಧಿಕಾರ ಅನುಭವಿಸುವುದು ಮೇಲ್ಜಾತಿ ಮತ್ತು ಮೇಲ್ವರ್ಗದವರು. ಆದರೆ, ಮತ ತಂದುಕೊಡುವ ಕೋಮು ಸಂಘರ್ಷ, ಗಲಭೆಗಳಲ್ಲಿ ಜೀವ ಬಿಡುವವರು ಮಾತ್ರ ಬಡ ಶೂದ್ರರು, ದಲಿತರ ಮಕ್ಕಳು ಎಂಬ ವಾದ ಮುನ್ನೆಲೆಗೆ ಬಂದಿದೆ. ಅಂತಹ ವ್ಯತಿರಿಕ್ತ ವಾದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಸಂಘ ಮತ್ತು ಬಿಜೆಪಿ ಸಂಘಟನೆಯ ಬದ್ಧತೆ ಮತ್ತು ಅರ್ಹತೆ ಇದ್ದರೆ ಎಲ್ಲರಿಗೂ ಅವಕಾಶ ನೀಡುತ್ತದೆ ಎಂಬುದನ್ನು ಸಾಬೀತು ಮಾಡಲು ಕೂಡ ಹರ್ಷ ಕುಟುಂಬದವರಿಗೆ ಟಿಕೆಟ್ ನೀಡುವುದು ಒಂದು ತಂತ್ರಗಾರಿಕೆಯಾಗಿಯೂ ಒದಗಿಬರಲಿದೆ ಎಂಬ ಮಾತು ಸಂಘದ ವಲಯದಲ್ಲಿಯೂ ಚರ್ಚೆಗೆ ಬಂದಿದೆ ಎನ್ನಲಾಗುತ್ತಿದೆ.
ಆ ಎಲ್ಲಾ ಹಿನ್ನೆಲೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಚುನಾವಣೆಯ ಮೇಲೆ ಹರ್ಷ ಕೊಲೆ ಪ್ರಕರಣ ನಿರೀಕ್ಷೆಗೂ ಮೀರಿದ ಪರಿಣಾಮ ಬೀರಲಿದ್ದು, ಸ್ವತಃ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ರಾಜಕೀಯ ಭವಿಷ್ಯದ ಪಾಲಿಗೇ ಉರುಳಾಗುವ ಸಾಧ್ಯತೆ ತಳ್ಳಿಹಾಕಲಾಗದು!