ಹೊಟ್ಟೆನೋವು ಎಂದು 6 ತಿಂಗಳಿನಿಂದ ನರಳುತ್ತಿದ್ದ 56 ವ್ಯಕ್ತಿಯೊಬ್ಬನ ದೇಹದಿಂದ 206 ಕಿಡ್ನಿ ಸ್ಟೋನ್ ಗಳನ್ನು ವೈದ್ಯರು ಒಂದೇ ಗಂಟೆಯಲ್ಲಿ ಯಶಸ್ವಿಯಾಗಿ ಹೊರತೆಗೆದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ನಲ್ಗೊಂಡಾ ನಿವಾಸಿ ವೀರಮಲ್ಲ ರಾಮಲಕ್ಷ್ಮಯ್ಯ ಅವರ ದೇಹದಿಂದ ಹೈದರಾಬಾದ್ ನ ಆರ್ವೆ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ 206 ಕಿಡ್ನಿ ಸ್ಟೋನ್ ಗಳನ್ನು ಹೊರತೆಗೆದಿದ್ದಾರೆ.
ಪದೇಪದೆ ಹೊಟ್ಟೆ ನೋವು ಕಾಣಿಸಿಕೊಂಡರೂ ನೋವು ನಿವಾರಕ ಮಾತ್ರೆ ತೆಗೆದುಕೊಂಡು ವೀರಮಲ್ಲ ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಕೆಲಸಕ್ಕೆ ಹೋಗಲು ಆಗದಷ್ಟು ನೋವು ಉಲ್ಬಣಿಸಿದಾಗ ವೈದ್ಯರನ್ನು ಸಂಪರ್ಕಿಸಿದ್ದರು.
ವೈದ್ಯರು ಅಲ್ಟ್ರಾ ಸ್ಕ್ಯಾನಿಂಗ್ ಮಾಡಿದಾಗ ಹಲವಾರು ಕಿಡ್ನಿ ಸ್ಟೋನ್ ಗಳು ಪತ್ತೆಯಾಗಿದ್ದವು. ಶಸ್ತ್ರಚಿಕಿತ್ಸೆ ವೇಳೆ ನಿರೀಕ್ಷೆಗೂ ಮೀರಿ 206 ಸ್ಟೋನ್ ಗಳು ಪತ್ತೆಯಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅಲ್ಲದೇ ಮಾರನೇ ದಿನವೇ ಡಿಸ್ಚಾರ್ಜ್ ಮಾಡಿದ್ದಾರೆ.
ದೇಶದಲ್ಲಿ ನಿರೀಕ್ಷೆಗೂ ಮೀರಿದ ಉಷ್ಣಾಂಶ ಹೆಚ್ಚಾಗಿದ್ದರಿಂದ ಈ ಸಮಸ್ಯೆಗಳು ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಜನರು ಹೆಚ್ಚು ನೀರು ಸೇವಿಸಬೇಕು ಎಂದು ಮನವಿ ಮಾಡಿದ್ದಾರೆ.