
ಮೈಸೂರು: ಅನುಮಾನಾಸ್ಪದವಾಗಿ ವೈದ್ಯೆ ಸಾವನ್ನಪ್ಪಿದ್ದು, ಗಂಡನ ಕಿರುಕುಳ ಹಾಗು ಕೊಲೆ ಆರೋಪ ಮಾಡಲಾಗಿದೆ. ಮೈಸೂರಿನ ಪ್ರತಿಷ್ಠಿತ ಚೆಲುವಾಂಬ ಆಸ್ಪತ್ರೆಯಲ್ಲಿ ಖ್ಯಾತ ಪ್ರಸೂತಿ ತಜ್ಞೆಯಾಗಿದ್ದ ಡಾ ಜಿ.ಎಸ್.ವಿದ್ಯಾಧರೆ ಮೃತ ವೈದ್ಯೆಯಾಗಿದ್ದಾರೆ.

ಮಂಡ್ಯದ ಗೌಡಗೆರೆಯ ವಿದ್ಯಾಧರೆಯನ್ನ ಡಾ. ಷಣ್ಮುಖ ವಿವಾಹವಾಗಿದ್ದರು. ಪತಿ ಡಾ.ಷಣ್ಮುಖ ಕೂಡ ಕೆ.ಆರ್ ಆಸ್ಪತ್ರೆಯ ಪ್ರಖ್ಯಾತ ಮೂಳೆ ತಜ್ಞರಾಗಿದ್ದಾರೆ. ಕಳೆದ 14 ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ವೈದ್ಯೆ ಸಾವನ್ನಪ್ಪಿದ್ದಾರೆ.

ನಿನ್ನೆಯಷ್ಟೇ ತವರು ಮನೆ ಗೌಡಗೆರೆಯಿಂದ ಗಂಡನ ಮನೆಗೆ ತೆರಳಿದ್ದ ವೈದ್ಯೆ ಡಾ. ವಿದ್ಯಾಧರೆ, ಮೈಸೂರಿನ ಆರ್‌ಟಿಓ ಸರ್ಕಲ್ ಬಳಿ ಇರುವ ಡೆನ್ಮಾರ್ ಅಪಾರ್ಟ್ಮೆಂಟ್ನಲ್ಲಿ ವಾಸ ಇದ್ದರು. ಒಂದೇ ಅಪಾರ್ಟ್ಮೆಂಟ್ನಲ್ಲಿ ಇದ್ದರೂ ಬೇರೆ ಬೇರೆ ಫ್ಲಾಟ್ಗಳಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು.

ಹಲವಾರು ಬಾರಿ ನ್ಯಾಯ ಪಂಚಾಯ್ತಿ ಮಾಡಿದರೂ ದಾಂಪತ್ಯ ಜೀವನ ಸರಿ ದಾರಿಗೆ ಬಂದಿರಲಿಲ್ಲ. ಕಳೆದ 6-7 ವರ್ಷಗಳಿಂದ ಗಂಡ – ಹೆಂಡತಿ ನಡುವೆ ವಿರಸ ಉಂಟಾಗಿತ್ತು. ನಾಲ್ಕೈದು ತಿಂಗಳಿಂದ ಮನಸ್ತಾಪ ಹೆಚ್ಚಾಗಿದ್ದು, ಕೊಲೆ ಮಾಡಿದ್ದಾರೆ ಎಂದು ಡಾ ವಿದ್ಯಾಧರೆ ಕುಟುಂಬಸ್ಥರು ಆರೋಪಿಸಿದ್ದಾರೆ. ಮೈಸೂರಿನ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.