ಯಾವುದೋ ಒಂದು ಮನೆಯಲ್ಲಿ ಕೋವಿಡ್ 19 ಗೆ ಯಾರೋ ಒಬ್ಬರು ಬಲಿಯಾದರು ಎಂದಿಟ್ಟುಕೊಳ್ಳೋಣ.
ಆ ಮನೆ ಮಂದಿಯ ಪರಿಸ್ಥಿತಿ ಯೋಚಿಸಿ. ಆತ ಎಷ್ಟೇ ಪ್ರಿಯಪಾತ್ರನಿರಬಹುದು. ಅನಿವಾರ್ಯ ವ್ಯಕ್ತಿಯೇ ಇರಬಹುದು. ಸಕಲ ನೋವು, ದುಃಖದೊಂದಿಗೆ ಆತನ ಆಂತ್ಯಕ್ರಿಯೆ ನಡೆಸಿದ ಮೇಲೆ ಮನೆಮಂದಿಯ ಖಾಲಿ ಮನಸ್ಸು ಆತಂಕದ ಜೇನುಗೂಡಾಗುತ್ತದೆ. ಒಂದೆರಡು ದಿನಗಳಾದ ತಲೆಯೊಳಗೆ ಹತ್ತಾರು ಪ್ರಶ್ನೆಗಳು ಕಾಡತೊಡಗುತ್ತದೆ. ಸತ್ತವನೇನೋ ಸತ್ತ. ಇನ್ನು ನಮ್ಮ ಕತೆಯೇನು? ನಮಗೂ ಕರೋನಾ ಬಂದಿರಲಿಕ್ಕಿಲ್ಲವಲ್ಲ? ನಾವೂ ಹಾಗೇ ಸಾಯಲಿಕ್ಕಿಲ್ಲವಲ್ಲ?
ಇಂಥ ಅನುಮಾನದ “ಹುಳ”ಗಳು ದೊಡ್ಡದಾಗುತ್ತ ಕ್ರಮೇಣ ಆ ಮನೆಮಂದಿಯ ಮನದಲ್ಲಿ ತಳಮಳ ಕಾಡಲಾರಂಭಿಸುತ್ತದೆ. “ನನಗೂ ಕರೋನಾ ಬಂದಿರಬಹುದೇ” ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಪದೇ ಪದೇ ಕಾಡಿ ಪ್ರತಿಕ್ಷಣವನ್ನೂ ನರಕವಾಗಿಸುತ್ತದೆ. ಊಟ, ತಿಂಡಿಯಲ್ಲಿ ಆಸಕ್ತಿ ಇಲ್ಲ. ಸಣ್ಣದಾಗಿ ಹೊಟ್ಟೆನೋವು, ತಲೆನೋವು, ಎದೆನೋವು ಕಾಡಿದರೂ ಆತಂಕದ ಕಾರ್ಮೋಡ. ಕರೋನಾ ನನಗೂ ಬಂದಿದೆ. ನಾನು ಇನ್ನೇನು ಸತ್ತೇ ಹೋಗುತ್ತೇನೇನೋ ಎಂಬ ಭೀತಿ. ಶೀತ, ಕೆಮ್ಮು, ಸಾಮಾನ್ಯ ಜ್ವರ ಬಂದರೂ ಪರಿಚಿತ, ಸಂಬಂಧಿ ಡಾಕ್ಟರ್ ಗೆ ಫೋನ್ ಮೇಲೆ ಫೋನು. ಕ್ಷಣ ಕ್ಷಣದ ವರದಿ ಒಪ್ಪಿಸದಿದ್ದರೆ ಏನೋ ತಳಮಳ. ಏನೂ ಆಗಲಿಕ್ಕಿಲ್ಲವಲ್ಲ ಎಂಬ ಪಾಸಿಟಿವ್ ಮಾತುಗಳಿಗೆ,ಅವರೇನಾದರೂ “ಏನೂ ಆಗಲ್ಲ ಬಿಡ್ರೀ, ಅದು ಮಾಮೂಲಿ ಶೀತ” ಎಂದು ಹೇಳಿದರೆ ಮನಸ್ಸು ನಿರಾಳ.
ಸುಮ್ಮನೆ ಯೋಚಿಸಿ. ಕೇವಲ ಮನೆಯಲ್ಲಾದ ಒಂದು ಪ್ರಕರಣದಿಂದ ನಮ್ಮನ್ನು ಕಾಡುವ ಆತಂಕ, ದುಗುಡ, ದುಮ್ಮಾನಗಳಿಗೆ ತಮ್ಮ ಸಮಾಧಾನದ ಮಾತುಗಳ ಮೂಲಕ ತೆರೆ ಎಳೆದು, ನಮಗೆ ನೆಮ್ಮದಿ ಕಲ್ಪಿಸಿಕೊಡುವ ವೈದ್ಯ ಮಹಾಶಯರು ನಿತ್ಯವೂ ನೂರಾರು ಪ್ರಕರಣಗಳಿಗೆ ಸಾಕ್ಷಿಯಾಗುತ್ತಾರಲ್ಲ, ಅವರ ಕತೆ ಹೇಗಿರಬಹುದು? ರೋಗಿಗಳ ಕ್ಷಣಕ್ಷಣದ ಪರಿಸ್ಥಿತಿಗಳನ್ನು ಕಂಡು ವೈದ್ಯರೂ, ವೈದ್ಯ ಸಿಬ್ಬಂದಿಯೂ ಅನುಭವಿಸುವ ಸ್ಥಿತಿ ಎಂಥದ್ದಿರಬಹುದು? ಅವರೂ ನಮ್ಮಂತೆ ಮನುಷ್ಯರೇ ತಾನೇ?
ನಮ್ಮ ಮನೆಯಲ್ಲಿ ಒಬ್ಬರಿಗೆ ಕರೋನಾ ಬಂದರೆ, ದುರದೃಷ್ಟವಶಾತ್ ತೀರಿಕೊಂಡರೆ ನಮ್ಮ ಕಥೆ-ವ್ಯಥೆ ಪುಟಗಟ್ಟಲೆ ಇರುತ್ತದೆ. ಅಂಥದ್ದರಲ್ಲಿ ಆ ವೈದ್ಯರು, ನರ್ಸ್ ಗಳು, ಆಸ್ಪತ್ರೆ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕ, ಆಸ್ಪತ್ರೆಯ ವಾಚ್ ಮನ್ ಹೀಗೆ ವೈದ್ಯರೂ ಸಿಬ್ಬಂದಿಗಳು ದಿನಕ್ಕೆ ಹತ್ತಾರು ಕರೋನಾ ಪೀಡಿತರನ್ನು, ಅವರ ಬವಣೆಗಳನ್ನು ಕಣ್ಣಾರೆ ಕಾಣಬೇಕು. ಅವರೊಂದಿಗೆ ಒಡನಾಡಬೇಕು. ಅವರಿಗೆ ಧೈರ್ಯ ತುಂಬಬೇಕು. ಶುಶ್ರೂಷೆ ನೀಡಬೇಕು. ಆರೈಕೆ ಮಾಡಬೇಕು. ಎಲ್ಲ ವೈದ್ಯ ಸೌಲಭ್ಯ ಒದಗಿಸಿದ ಮೇಲೂ ಆ ರೋಗಿ ಪ್ರಾಣ ಕೈಚೆಲ್ಲಿದಾಗ ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳಬೇಕು. ಆತನ ಸಾವಿಗೆ ಮಾನವೀಯತೆಯಿಂದ ಮಿಡಿದು ಮರುಗುತ್ತ ಕೂರದೆ, ಮತ್ತೊಬ್ಬ ಕರೋನಾ ಪೀಡಿತನ ಪ್ರಾಣ ಉಳಿಸಲು ದೌಡಾಯಿಸಬೇಕು. ಆತನನ್ನು ಉಳಿಸಲಾಗಲಿಲ್ಲ. ಈತನನ್ನಾದರೂ ಉಳಿಸಿಕೊಳ್ಳಲೇ ಬೇಕು ಎಂದು ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು!
ಸಾಂಕ್ರಾಮಿಕ ಪಿಡುಗು ಎಂಬ ಚಾಲೆಂಜ್:
ಅಸಲಿಗೆ, ಈ “ಕೋವಿಡ್ 19” ಎಂಬ ವೈರಸ್ ಕಳೆದ ವರ್ಷದ ಆರಂಭದಲ್ಲಿ ಕಳ್ಳ ಹೆಜ್ಜೆಗಳಲ್ಲಿ ಭಾರತಕ್ಕೆ ಕಾಲಿಟ್ಟಾಗ ಇದು ಇಷ್ಟೊಂದು ಭಯಂಕರ ‘ಸಾಂಕ್ರಾಮಿಕ ಪಿಡುಗು’ ಆಗಿ ಪರಿವರ್ತಿತವಾದೀತು ಎಂಬ ಪರಿಕಲ್ಪನೆ ಭಾರತೀಯರಿಗೆ ಇರಲಿಲ್ಲ. ಆರಂಭದಲ್ಲಿ ಅದು ಚೀನಾದಲ್ಲಿ ಸೃಷ್ಟಿಸಿದ ತಲ್ಲಣ ಚೀನೇತರ ಜಾಗತಿಕ ಸಮುದಾಯದ ಅರಿವಿಗೆ ಬಂದಿದ್ದರೂ, ಅದು ಹಕ್ಕಿಜ್ವರ, ಹಂದಿಜ್ವರದ ಥರ ಸ್ವಲ್ಪ ಮಟ್ಟಿಗೆ ಕಾಡಿ ಸುಮ್ಮನಾಗಬಹುದು ಎಂದೇ ಎಲ್ಲರೂ ಪರಿಭಾವಿಸಿದ್ದರು. ಇಂಥದ್ದನ್ನೆಲ್ಲ ಎಷ್ಟು ನೋಡಿಲ್ಲ ಎಂಬ ಉಡಾಫೆಯೂ ಜನರಲ್ಲಿತ್ತು. ಇಂಥದ್ದನ್ನು ನೋಡಿದ್ದೆವಾದರೂ ಇದನ್ನು ನೋಡಿರಲಿಲ್ಲವಲ್ಲ!
ನಾವು, ನಮ್ಮಪ್ಪ, ಅಜ್ಜನ ತಲೆಮಾರುಗಳಲ್ಲಿ ಈ ಪರಿಯ ಸಾಂಕ್ರಾಮಿಕ ಪಿಡುಗು ಕಾಣಿಸಿಕೊಂಡ ಉದಾಹರಣೆಗಳು ಇರಲಿಲ್ಲ. ಸಹಜವಾಗಿಯೇ ದೇಶ, ರಾಜ್ಯದ ಸರಕಾರಗಳು ಕರೋನಾವನ್ನು ಲಘುವಾಗಿ ತೆಗೆದುಕೊಂಡವು. ಜನಸಾಮಾನ್ಯರೂ ಕ್ಯಾರೇ ಅನ್ನಲಿಲ್ಲ.
2020ರ ಜನವರಿ, ಫೆಬ್ರವರಿಯಲ್ಲಿ ನಿಧಾನವಾಗಿ ಬಾಲಬಿಚ್ಚತೊಡಗಿದ ಕೋವಿಡ್ 19, ಕ್ರಮೇಣ ತನ್ನ ಪ್ರತಾಪ ಪ್ರದರ್ಶಿಸಲು ಆರಂಭಿಸಿತು. ಕೇಂದ್ರ ಸರಕಾರಕ್ಕೂ ಬಿಸಿ ತಟ್ಟಿತು. ಜನತಾ ಕರ್ಫ್ಯೂ ಬಂತು. ಕೊನೆಗೆ ತಿಂಗಳುಗಟ್ಟಲೆ ಲಾಕ್ ಡೌನ್ ಬಂತು. ಜನ ಮನೆಯಲ್ಲಿ ಕುಳಿತರು. ವೈದ್ಯರು, ವೈದ್ಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಕರೋನಾದ ವಿರುದ್ಧ ಕದನಕ್ಕಿಳಿದರು.
ಶತ್ರುವಿನ ಇತಿಮಿತಿ ಅರಿಯದೆ ಕಾದಾಟ:
ಕರೋನಾ ಕಾಟದ ಆರಂಭದ ದಿನಗಳನ್ನು ನೆನಪಿಸಿ. “ಕೋವಿಡ್ 19” ಅಂದರೆ ವೈರಸ್ ಅಂತ ಗೊತ್ತಾಗಿತ್ತು. ಆದರೆ ಅದು ಖಚಿತವಾಗಿ ಹೇಗೆ ಹರಡುತ್ತದೆ? ಅದರ ಶಕ್ತಿ, ದೌರ್ಬಲ್ಯಗಳೇನು ಎಂದು ಗೊತ್ತಾಗುವ ಮೊದಲೇ ವೈದ್ಯ ಜಗತ್ತು ಕಾಣದ ಶತ್ರುವಿನೆದುರು ಸಮರಕ್ಕೆ ನಿಂತುಬಿಟ್ಟಿತ್ತು. ಶತ್ರುವಿನ ಮೂಲ ಯಾವುದು? ಅದರ ಶಕ್ತಿ-ದೌರ್ಬಲ್ಯಗಳೇನು ಎಂದು ಗೊತ್ತಿಲ್ಲದೆ ವೀರ ಸೈನಿಕನೂ ರಣರಂಗದಲ್ಲಿ ಕಾದಾಡಲಾರ. ಕಾದಾಡಿದರೂ ವೀರ ಮರಣ ಗ್ಯಾರಂಟಿ.
ಅಂಥದ್ದರಲ್ಲಿ ವೈದ್ಯ ಜಗತ್ತು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕರೋನಾ ಎಂಬ ಸಾಂಕ್ರಾಮಿಕ ಪಿಡುಗಿನ ವಿರುದ್ಧ ರಣರಂಗಕ್ಕೆ ಧುಮುಕಿ ಆಗಿತ್ತು. ಕದನಕ್ಕಿಳಿದ ಮೇಲೆ ನಿಜವಾದ ಸೈನಿಕನಾಗಲಿ, ವೈದ್ಯನಾಗಲಿ ಹೆದರುಪುಕ್ಕಲನಂತೆ ಹಿಮ್ಮೆಟ್ಟಿ ಬರಲಾರ. ಒಂದೋ ಗೆಲುವು ಇಲ್ಲವೇ ವೀರಸ್ವರ್ಗ.
ಸಾವೇ ಎದುರಿಗೆ ನಿಂತರೂ ತನ್ನನ್ನು ನಂಬಿದ ರೋಗಿಗಾಗಿ ಬಡಿದಾಡಬಲ್ಲವನೇ ನಿಜವಾದ ವೈದ್ಯ. ಅದೇ ಕಾರಣಕ್ಕೆ ನಮ್ಮಲ್ಲಿ “ವೈದ್ಯೋ ನಾರಾಯಣೋ ಹರಿಃ” ಎಂಬ ಸೂಕ್ತಿ ರೋಗಿಯ ನಾಲಿಗೆಯಲ್ಲಿ ನಲಿದಾಡುವುದು. ಕೊಲ್ಲುವವನಿಗಿಂತ ಕಾಯುವವನೇ ದೊಡ್ಡವನು ನಿಜ. ಆದರೆ ಕಾಯುವವನ ಮನಸ್ಸಲ್ಲೂ ಯಾರಿಗೂ ಕಾಣದ ಗಾಯಗಳಾಗಿವೆಯಲ್ಲ, ಅದನ್ನು ಯಾರಿಗೆ ಹೇಳುವುದು?
ಶಸ್ತ್ರವಿಲ್ಲದೆ ಕಾಣದ ಶತ್ತುವಿನೊಂದಿಗೆ ಕಾದಾಟ:
ಸಾಕಷ್ಟು ಆಧುನಿಕ ವಸ್ತ್ರ, ಶಸ್ತ್ರಗಳಿದ್ದರೂ ಕಾರ್ಗಿಲ್, ಸಿಯಾಚಿನ್, ಲಡಾಖ್ ನಂಥ -40 ಡಿಗ್ರಿ ಶೀತವಿರುವ ಸನ್ನಿವೇಶದಲ್ಲಿ ಶತ್ರುಗಳೊಂದಿಗೆ ಕಾಲು ನೆಲಕ್ಕೂರಿ ಕಾದಾಡುವ ಕದನ ಕಲಿಗಳ ಅನುಭವ ಅವರಿಗೆ ಮಾತ್ರ ಗೊತ್ತು. ಅಂಥ ಜಾಗಗಳಲ್ಲಿ ಯುದ್ಧಕ್ಕೆ ಹೊರಟವರ ಮಾನಸಿಕ ಸ್ಥಿತಿ ಅದೆಷ್ಟು ಗಟ್ಟಿ ಇರಬೇಕೆಂದರೆ, ಅವರು ತಾವಿರುವ ಪರಿಸ್ಥಿತಿ, ಪರಿಸರವೆಂಬ ಶತ್ರುವಿನೊಂದಿಗೂ ನಮ್ಮ ಮೇಲೇರಿ ಬಂದ ಶತ್ರು ರಾಷ್ಟ್ರದ ಯೋಧನೊಂದಿಗೂ ಏಕಕಾಲದಲ್ಲಿ ಹೋರಾಡಬೇಕು. ಅದು ಎರಡು ಅಲಗಿನ ಕತ್ತಿಯಲ್ಲಿ ಎರರೂ ಅಲಗುಗಳಲ್ಲಿ ನಡೆದಾಡುವ ಸಾಹಸ!
ಈಗ ಜಗತ್ತಿನ, ಭಾರತದ ವೈದ್ಯರದ್ದೂ ಅಂಥದ್ದೇ ಸ್ಥಿತಿ. ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ನಂಥವುಗಳು ಇವೆ ನಿಜ. ಜತೆಗೆ ರೆಮಿಡಿಸಿವಿರ್ನಂಥ ಔಷಧಗಳು, ಐಸಿಯು, ವೆಂಟಿಲೇಟರ್, ಆಕ್ಸಿಜನ್ ನಂಥ ಸೌಲಭ್ಯಗಳು ಧಾರಾಳವಾಗಿ ಸಿಕ್ಕರೂ ರೋಗಿಯ ಕಠಿಣ ಪರಿಸ್ಥಿತಿಗಳಲ್ಲಿ ಅವರ ಪ್ರಾಣ ಉಳಿಸುವ ಪ್ರಯತ್ನ ಹರಸಾಹಸವೇ ಆಗಿರುತ್ತದೆ. ಅದೇನೋ ಒಂದೆರಡು ದಿನಗಳ ಕೆಲಸವಲ್ಲ. ಕಳೆದ ಜನವರಿಯಿಂದ ಎಂದು ಲೆಕ್ಕ ಹಾಕಿದರೂ ಹತ್ತಿರ ಹತ್ತಿರ ಒಂದೂವರೆ ವರ್ಷಗಳಾಗುತ್ತ ಬರುತ್ತಿದೆ. ಹೀಗೆ ಒಂದೂವರೆ ವರ್ಷದಿಂದ ಸತತವಾಗಿ ಆರೋಗ್ಯವನ್ನೂ ಲೆಕ್ಕಿಸದೆ, ತನ್ನ ಪ್ರಾಣವನ್ನೂ ಪರಿಗಣಿಸದೆ ರೋಗಿಗಳ ಪ್ರಾಣ ಕಾಪಾಡಲು ಸ್ವತಃ ಯಮರಾಜನೊಂದಿಗೆ ಬಡಿದಾಡುವ ವೈದ್ಯರ ಕತೆ ಹೇಗಾಗಿರಬೇಡ?
ಅಂಥದ್ದರಲ್ಲಿ, ಒಂದೆಡೆ ರೋಗಿಗಳನ್ನು ಕಾಪಾಡಲು ರೆಮಿಡಿಸಿವಿರ್ ಸಿಗುತ್ತಿಲ್ಲ. ಸಿಕ್ಕಿಲ್ಲವೆಂದರೆ ಪ್ರಾಣ ಹೋಗುವುದು ಖಚಿತ. ಆದರೆ ವೈದ್ಯನೇನು ಮಾಡುವುದು? ಕೊಡಲಾದ ಆಕ್ಸಿಜನ್ ಸಿಲಿಂಡರ್ ಖಾಲಿಯಾದರೆ ಇನ್ನೊಂದು ಹಚ್ಚಬೇಕು. ಆದರೆ ಸ್ಟಾಕ್ ಇಲ್ಲ, ಆರ್ಡರ್ ಮಾಡಿದರೂ ಬಂದಿಲ್ಲ. ಕೆಲವೆಡೆ ಸ್ಟಾಕ್ ಇಲ್ಲ. ಇರುವ ಆಕ್ಸಿಜನ್ ಖಾಲಿಯಾದರೆ, ರೋಗಿ ಕೊನೆಯ ಉಸಿರು ಎಳೆಯಲೇಬೇಕು. ನಿನ್ನ ಆಯಸ್ಸು ಈ ಸಿಲಿಂಡರ್ ಖಾಲಿಯಾಗುವವರೆಗೆ ಮಾತ್ರ ಎಂದು ರೋಗಿಗೆ ಹೇಳಲಾದೀತೆ? ಬದುಕಿನದ್ದಕ್ಕೂ ರೋಗಿಗಳ ಪ್ರಾಣ ಉಳಿಸಲು ಬಡಿದಾಡಿದ ವೈದ್ಯ ಹೀಗೆ ಅಸಹಾಯಕನಾಗಿ ನಿಲ್ಲುವ ಪರಿಸ್ಥಿತಿಯನ್ನು ಯಾರಿಗೆ ಹೇಳುವುದು? ಶಸ್ತ್ರಗಳಿಲ್ಲದೆ ಕಾರ್ಗಿಲ್ ನಲ್ಲಿ ಶತ್ರುಗಳೊಂದಿಗೆ ಕಾದಾಡುವಂಥ ವೀರ ಯೋಧನ ಪರಿಸ್ಥಿತಿಯನ್ನು ತಾವಿರುವ ಆಸ್ಪತ್ರೆಯಲ್ಲೇ ಎದುರಿಸುವಂತಾಗಿದೆ ವೈದ್ಯರು.
ಯುವ ಜನಾಂಗದ ಸಾವು ಕಾಣುವ ನೋವು:
ಕೋವಿಡ್ ಮೊದಲ ಅಲೆಯಲ್ಲಿ ಮರಣ ಹೊಂದಿದವರಲ್ಲಿ ಬಹುಸಂಖ್ಯೆ ಇದ್ದಿದ್ದು ನಿವೃತ್ತಿ ವಯಸ್ಸು ದಾಟಿದವರದ್ದು. ಆದರೆ ಎರಡನೇ ಅಲೆಯು ಅವರೊಂದಿಗೆ ಯುವ, ಮಧ್ಯ ವಯಸ್ಕರನ್ನೂ ಆಪೋಷನ ತೆಗೆದುಕೊಳ್ಳಲಾರಂಭಿಸಿದೆ. ಅವರ ಸಾವಿನ ನೋವು ತಡೆಯಲಾಗದೆ ಕುಸಿದು ಹೋಗುವ ಅವರ ಹೆತ್ತವರ, ಬಂಧುಬಾಂಧವರು, ಆಪ್ತರ ನೋವುಗಳು ವೈದ್ಯರ ಮನದಲ್ಲೂ ತಲ್ಲಣದ ತರಂಗಗಳನ್ನು ಎಬ್ಬಿಸುತ್ತಿದೆ. ಆಸ್ಪತ್ರೆಯಲ್ಲಿ ಅವರ ಪ್ರಾಣವನ್ನು ಉಳಿಸಲು ಬೇಕಾದ ಔಷಧ, ಉಪಕರಣಗಳ ಕೊರತೆ ಅವರನ್ನು ಕಾಡಿಸುತ್ತಿದೆ. ಸೂಕ್ತ ಸೌಲಭ್ಯವಿದ್ದರೆ ಬದುಕಿಸಬಹುದಿತ್ತೇನೋ ಎಂಬ ನೋವು ಅವರನ್ನು ಹೈರಾಣಾಗಿಸುತ್ತಿದೆ.
ಆಸ್ಪತ್ರೆಗೆ ಬಂದಾಗ ತುಂಟತನ, ನಗುಮುಖ, ಜೀವನೋತ್ಸಾಹದಿಂದ ಪುಟಿಯುತ್ತಿದ್ದ ತರುಣ, ತರುಣಿಯರ ಪ್ರಾಣವನ್ನು ಉಳಿಸಲಾಗದ ನೋವು, ಇವರನ್ನಾದರೂ ಉಳಿಸಿಕೊಳ್ಳಬೇಕಿತ್ತು ಎಂಬ ಅಸಹಾಯಕತೆ, ರೆಮಿಡಿಸಿಮರ್ ನಂಥ ಔಷಧಗಳನ್ನು, ಆಕ್ಸಿಜನ್ ಸಿಲಿಂಡರ್ ನಂಥ ಜೀವಾಮೃತವನ್ನು ಅಕ್ರಮವಾಗಿ ಇಟ್ಟುಕೊಂಡು ಹಣ ಸಂಪಾದಿಸಲು ಹೊರಟವರ ಮೇಲೆ ರೇಜಿಗೆಯ ಭಾವಗಳು ಹುಟ್ಟಿಕೊಳ್ಳುತ್ತದೆ. ಆದರೆ ಒಬ್ಬ ವೈದ್ಯ ವ್ಯವಸ್ಥೆಯ ವಿರುದ್ಧ ಹೋರಾಡುವುದೇ ಇಲ್ಲ ತನ್ನ ರೋಗಿಯ ಪ್ರಾಣಕ್ಕಾಗಿ ಯಮನೊಂದಿಗೆ ಹೋರಾಡುವುದೇ?
ವರ್ಷ ಆರಂಭವಾದೊಡನೆ ಸರಕಾರಿ ಅಥವಾ ಖಾಸಗಿಯಲ್ಲಿ ತಾವು ಕೆಲಸ ಮಾಡುವಲ್ಲಿ ಸಿಗುವ ವಾರಕ್ಕೊಂದು ರಜೆ, ವರ್ಷದ 21 ರಜೆ ಎಂದೆಲ್ಲ ಲೆಕ್ಕ ಹಾಕುವ ಜನಸಾಮಾನ್ಯರು ನಾವು. ಆದರೆ ವೈದ್ಯರು ಮಾತ್ರ ರಜೆಯನ್ನೇ ಹಾಕಬಾರದೆಂದು ಬಯಸುತ್ತೇವೆ. ಅದೆಂಥ ಸೇವಾಮನೋಭಾವದ ವೈದ್ಯನೇ ಇರಬಹುದು ನಮ್ಮ ಸಂಬಂಧಿಕರು, ಆಪ್ತರು, ಬಂಧುಬಳಗದವರಿಗೇನಾದರೂ ಕೋವಿಡ್ 19 ಬಂದಾಗ ಚಿಕಿತ್ಸೆ ಮಾಡದಿದ್ದರೆ ಕೆಂಡದಂಥ ಕೋಪ ಬರುತ್ತದೆ ಅವರ ಮೇಲೆ. ಕೋವಿಡ್ ಬಂದು ನಮ್ಮವರನ್ನು ಕಳೆದುಕೊಂಡರೆ ಆ ವೈದ್ಯನಿಗಿಂತ ದೊಡ್ಡ ಶತ್ರು ಇಲ್ಲ ಎಂದುಕೊಳ್ಳುವವರೂ ಇದ್ದಾರೆ. ತಮ್ಮ ಕುಟುಂಬ, ಮಕ್ಕಳು ಮರಿಗಳನ್ನು ದೂರ ಬಿಟ್ಟು, ರೋಗಿಗಳ ಪ್ರಾಣ ಉಳಿಸಲು ಪರದಾಡುವ ವೈದ್ಯರು, ನರ್ಸ್ ಗಳ, ಆರೋಗ್ಯ ಸಿಬ್ಬಂದಿಗಳ ತ್ಯಾಗದ ಬೆಲೆ ಯಾರಿಗೂ ಅರ್ಥವಾಗುತ್ತಿಲ್ಲ.ಅವರುಗಳ ಮಾನಸಿಕ ಒತ್ತಡ, ಭಾವನಾತ್ಮಕ ತಳಮಳದ ಆಳ ಯಾರಿಗೂ ತಿಳಿಯುತ್ತಿಲ್ಲ. ಇದು ಸಾಂಕ್ರಾಮಿಕ ಪಿಡುಗಿನ ಸಮಯ. ಎಲ್ಲರಿಗೂ ಅವರವರದ್ದೇ ಚಿಂತೆ.ವೈದ್ಯರಾಗಲಿ ಜನಸಾಮಾನ್ಯರಾಗಲಿ ಕಣ್ಣೆದುರಲ್ಲಿ ಕಂಡ ಸಾವಿನ ನಂತರ ಉಳಿಯುವುದು ಬರೀ ನೋವು.