
ಡಮಾಸ್ಕಸ್: ಸಿರಿಯಾದಲ್ಲಿ ಪ್ರಮುಖ ರಾಜಕೀಯ ಬದಲಾವಣೆ ಉಂಟಾಗಿದ್ದು ಅದ್ಯಕ್ಷ ಬಷರ್ ಅಲ್-ಅಸ್ಸಾದ್ ಅಧಿಕಾರವನ್ನು ಕಳೆದುಕೊಂಡಿದ್ದು, ಭಾನುವಾರ ದೇಶದಿಂದ ಪಲಾಯನ ಮಾಡಿರುವುದಾಗಿ ವರದಿಯಾಗಿದೆ. ಇನ್ನು, ಡಮಾಸ್ಕಸ್ ಸೇರಿದಂತೆ ಹಲವು ಮುಖ್ಯ ಪ್ರದೇಶಗಳನ್ನು ವಶಕ್ಕೆ ಪಡೆದಿರುವ ಹಯಾತ್ ತಹ್ರಿರ್ ಅಲ್-ಶಾಮ್ (ಎಚ್ಟಿಎಸ್) ಗುಂಪು, “ಹೊಸ ಯುಗದ ಆರಂಭ” ಎಂದು ಘೋಷಣೆ ಮಾಡಿದೆ. ಈ ಬೆಳವಣಿಗೆಯೊಂದಿಗೆ, ಎಚ್ಟಿಎಸ್ ನಾಯಕ ಅಬು ಮೊಹಮ್ಮದ್ ಅಲ್-ಜುಲಾನಿಯ ಮುಂದಿನ ಚಲನೆಗಳ ಮೇಲೆ ಜಗತ್ತಿನ ಗಮನ ಸೆಳೆದಿದೆ. ಒಮ್ಮೆ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿಯೊಂದಿಗೆ ಕಾರ್ಯನಿರ್ವಹಿಸಿದ್ದ ಜುಲಾನಿಯ ಮುಂದೆ ನಡೆ ಏನಾಗಲಿದೆ ಎಂಬ ಕುತೂಹಲವಿದೆ.

ಎಚ್ಟಿಎಸ್, ಈ ಹಿಂದಿನ ಅಲ್-ನುಸ್ರಾ ಫ್ರಂಟ್ ಎಂದೇ ಹೆಸರಾಗಿದ್ದ ಈ ಸಂಘಟನೆ, ಅಲ್-ಖೈದಾ ಜೊತೆ ಸೇರಿ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತೀಚೆಗೆ ಸಿರಿಯಾದ ಉತ್ತರ ಪ್ರದೇಶಗಳಲ್ಲಿ ಬೃಹತ್ ದಾಳಿಗಳನ್ನು ನಡೆಸಿ ಅಲೆಪ್ಪೊ ಮತ್ತು ಹಮಾ ಮುಂತಾದ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದೆ.ಇದರಿಂದಾಗಿ ಡಮಾಸ್ಕಸ್ ನಗರವನ್ನೂ ಅವರ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಈ ಸಂದರ್ಭದಲ್ಲಿ ಎಲ್ಲಿದ್ದಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಈ ಮಧ್ಯೆ, ಭಯೋತ್ಪಾದಕ ಸಂಘಟನೆಯೆಂದು ಅಮೆರಿಕದಲ್ಲಿ ಘೋಷಿಸಲ್ಪಟ್ಟಿರುವ ಎಚ್ಟಿಎಸ್ ನಡೆಸುತ್ತಿರುವ ಹಿಂಸಾತ್ಮಕ ಕಾರ್ಯಾಚರಣೆಗಳು ಜಗತ್ತಿನ ಗಮನ ಸೆಳೆಯುತ್ತಿವೆ.ಎಚ್ಟಿಎಸ್ ನಾಯಕರಾಗಿರುವ ಅಬು ಮೊಹಮ್ಮದ್ ಅಲ್-ಜುಲಾನಿ ಅವರನ್ನು “ವಿಶೇಷ ಜಾಗತಿಕ ಭಯೋತ್ಪಾದಕ” ಎಂದು ಘೋಷಿಸಲಾಗಿದ್ದು, ಅವರ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನವಿದೆ.
ಅಹ್ಮದ್ ಹುಸೇನ್ ಅಲ್-ಶರಾ ಎಂಬ ತಾತ್ಕಾಲಿಕ ಹೆಸರಿನಲ್ಲಿರುವ ಜುಲಾನಿ, ಮೊಹಮ್ಮದ್ ಅಲ್-ಜವ್ಲಾನಿ ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದಾನೆ. ಇವನು ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ.. ಇರಾಕಿನಲ್ಲಿ ಅಲ್-ಖೈದಾ ಪರ ಕೆಲಸ ಮಾಡಿದ್ದ ಜುಲಾನಿ, ಐದು ವರ್ಷಗಳ ಕಾಲ ಅಮೆರಿಕದ ಕಾದಾಯ ಜೈಲಿನಲ್ಲಿ ದಿನಕಳೆಯುವಂತಾಗಿತ್ತು.
2012ರಲ್ಲಿ, ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಆಡಳಿತವನ್ನು ತೆರವುಗೊಳಿಸುವ ಪ್ರಣಾಳಿಕೆಯನ್ನು ಅಲ್-ನುಸ್ರಾ ಫ್ರಂಟ್ ಕೈಗೊಂಡಿತ್ತು. ಅಲ್-ಖೈದಾ ಮುಖ್ಯಸ್ಥ ಅಯಮಾನ್ ಅಲ್-ಜವಾಹಿರಿಯೊಂದಿಗೆ ನಂಟು ಹೊಂದಿದ ಜುಲಾನಿ, ಈ ಸಂಘಟನೆಯನ್ನು ಬೆಳೆಯಲು ಮತ್ತು ಬಲಪಡಿಸಲು ಶ್ರಮಿಸಿದ್ದಾನೆ.
ಈ ಬೆಳವಣಿಗೆಗಳು ಸಿರಿಯಾದ ರಾಜಕೀಯ ಸ್ಥಿರತೆ ಮತ್ತು ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇಡೀ ಜಗತ್ತಿನ ಗಮನ ಈ ಪ್ರದೇಶದ ಕಡೆ ಸೆಳೆಯುತ್ತಿವೆ.







