
ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯವು ಯುಜಿಸಿ-ನೆಟ್ ಪರೀಕ್ಷೆ ರದ್ದುಪಡಿಸಿ ಸಿಬಿಐ ತನಿಖೆಗೆ ಆದೇಶಿಸಿದ್ದು, ತನಿಖೆ ಮುಗಿಯುವವರೆಗೆ ಮರುಪರೀಕ್ಷೆ ನಡೆಸದಿರುವಂತೆ ಸೂಚನೆ ನೀಡಬೇಕು ಎಂದು ಕೋರಿ ವಕೀಲ ಉಜ್ವಲ್ ಗೌರ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠದ ಎದುರು ಇದು ಸದ್ಯದಲ್ಲೇ ವಿಚಾರಣೆಗೆ ಬರಲಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಸಚಿವಾಲಯ ಜೂ. 19ರಂದು ಪರೀಕ್ಷೆ ರದ್ದುಪಡಿಸಿ, ತನಿಖೆ ಸಿಬಿಐಗೆ ವಹಿಸಿತ್ತು.
‘ಕೇಂದ್ರ ನ್ಯಾಯಯುತವಲ್ಲದ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆಯೆಂಬ ವದಂತಿ ಆಧರಿಸಿ ಪರೀಕ್ಷೆ ರದ್ದುಪಡಿಸಲಾಗಿದೆ. ಆದರೆ ಆ ವದಂತಿ ಸುಳ್ಳು ಎಂಬ ಅಂಶ ಸಿಬಿಐನ ಈವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ. ಕೇಂದ್ರದ ತಪ್ಪು ಆದೇಶದಿಂದ ಸಾವಿರಾರು ವಿದ್ಯಾರ್ಥಿಗಳಿಗೆ, ಪಾಲಕರಿಗೆ ತೊಂದರೆ ಆಗಿದೆ. ಈ ಹಂತದಲ್ಲಿ, ಆಗಸ್ಟ್‌ನಲ್ಲಿ ನೆಟ್ ಮರುಪರೀಕ್ಷೆ ನಡೆಸಲು ಮತ್ತೊಂದು ಏಕಪಕ್ಷೀಯ ನಿರ್ಧಾರವನ್ನು ಕೇಂದ್ರ ಕೈಗೊಂಡಿದೆ. ಬೇಗ ತನಿಖೆ ಮುಗಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು.
ತನಿಖೆ ಪೂರ್ಣಗೊಂಡ ಬಳಿಕ ಮರುಪರೀಕ್ಷೆ ಬಗ್ಗೆ ನಿರ್ಧಾರ ಮಾಡಬೇಕು’ ಎಂಬುದು ಅರ್ಜಿದಾರರ ವಾದವಾಗಿದೆ. ಜೂ. 18ರಂದು ನಡೆದಿದ್ದ ಪರೀಕ್ಷೆಗೆ 11 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ವಿವಿಗಳು ಮತ್ತು ಕಾಲೇಜುಗಳಲ್ಲಿ ಪಿ.ಎಚ್‌ಡಿ. ಪ್ರವೇಶಕ್ಕೆ, ಸಹಾಯಕ ಪ್ರೊಫೆಸರ್‌ಗಳ ನೇಮಕಕ್ಕೆ, ಕಿರಿಯ ಸಂಶೋಧನಾ ಫೆಲೋಶಿಪ್ ನೀಡುವುದಕ್ಕೆ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.