ಕೆಲಸಕ್ಕೆ ಹಿಂದೆ.. ಊಟಕ್ಕೆ ನಾ ಮುಂದೆ ಅನ್ನೋ ಮಾತನ್ನು ಗ್ರಾಮೀಣ ಭಾಗದಲ್ಲಿ ಸೋಮಾರಿ ಜನರಿಗೆ ಹೇಳುವುದುಂಟು. ಆದರೆ ಜನರ ಪ್ರತಿನಿಧಿ ಆಗಿರುವ ಶಾಸಕರು, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರೆದಿದ್ದ ಸಭೆಯಿಂದ ಎದ್ದು ನಡೆದಿದ್ದಾರೆ ಬಿಜೆಪಿ ನಾಯಕರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರಿಯಾದ ಸಮಯಕ್ಕೆ ಬಾರದಿರುವುದೂ ಒಂದು ಕಾರಣ ಇರಬಹುದು. ಆದರೆ ಬೆಂಗಳೂರು ಶಾಸಕರು, ಸಂಸದರ ಸಭೆಯಿಂದ ಎದ್ದು ಹೋಗಲು ಪ್ರಮುಖ ಕಾರಣ ಮದುವೆ ಊಟ. ಪರಿಸರ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಡಿ.ಕೆ ಶಿವಕುಮಾರ್, ಬೆಂಗಳೂರು ಶಾಸಕರು, ಸಂಸದರ ಸಭೆಗೆ ಓಡೋಡಿ ಬಂದಿದ್ದರು. ಆದರೆ ಬಿಜೆಪಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜ್, ಎಸ್.ಆರ್ ವಿಶ್ವನಾಥ್, ಎಸ್.ಟಿ ಸೋಮಶೇಖರ್ ಸಭೆಯಿಂದ ಹೊರ ನಡೆದಿದ್ದು ಟೀಕೆಗೆ ಕಾರಣವಾಗಿದೆ.
ಸರ್ಕಾರದ ಮೇಲೆ ಬಿಜೆಪಿ ಶಾಸಕರ ಕೋಪ-ತಾಪ

ಡಿ.ಕೆ ಶಿವಕುಮಾರ್ ಕರೆದಿದ್ದ ಸಭೆಯಿಂದ ಎದ್ದು ಹೊರಡುವ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ಎಸ್.ಟಿ ಸೋಮಶೇಖರ್, ಬೆಂಗಳೂರು ಅಭಿವೃದ್ಧಿ ಸಚಿವರು ಬೆಳಗ್ಗೆ 11 ಗಂಟೆಗೆ ಸಭೆ ಕರೆದಿದ್ದರು. ಮಧ್ಯಾಹ್ನ 12 ಗಂಟೆ ಆದರೂ ಉಪಮುಖ್ಯಮಂತ್ರಿಗಳು ಬರಲಿಲ್ಲ, ನಮಗೂ ಬೇರೆ ಕೆಲಸ ಇರುತ್ತೆ, ನಾವು ಹೋಗ್ತಾ ಇದ್ದೀವಿ ಎಂದೇಳಿ ಜಾಗ ಖಾಲಿ ಮಾಡಿದ್ರು. ಇನ್ನು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿ, ಬೆಂಗಳೂರು ಅಭಿವೃದ್ಧಿ ಸಭೆ ಕರೆದು ಸ್ವತಃ ಡಿ.ಕೆ ಶಿವಕುಮಾರ್ ಅವರೇ ಬಂದಿಲ್ಲ. ಇದೆನಾ ವಿರೋಧ ಪಕ್ಷದ ಶಾಸಕರನ್ನು ನಡೆಸಿಕೊಳ್ಳುವ ರೀತಿ ಎಂದು ಪ್ರಶ್ನಿಸಿದ್ರು. ಜೊತೆಗೆ ಏನು ಮಾಡಿದ್ರು ನಡೆಯುತ್ತೆ ಅನ್ನೋ ಭಾವನೆ ಎಂದು ಟೀಕಿಸಿ ಹೊರನಡೆದ್ರು. ನಾಲ್ವರು ಎದ್ದು ಹೋದರೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನುಳಿದ ಬಿಜೆಪಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.
ಡಿಕೆಶಿ ಮೇಲಿನ ಕೋಪ, ಮದುವೆಗೆ ಹೊರಟ ಕೇಸರಿ ಟೀಂ..

ಬೆಂಗಳೂರು ಅಭಿವೃದ್ಧಿ ಸಭೆ ಕರೆದಿದ್ದ ಡಿ.ಕೆ ಶಿವಕುಮಾರ್, ಸಭೆಗೆ ಬರುವುದು ತಡವಾಗಿದ್ದರಿಂದ ಕುಪಿತಗೊಂಡ ಬಿಜೆಪಿ ಶಾಸಕರು, ತಮ್ಮ ಕ್ಷೇತ್ರದ ಅಭಿವೃದ್ಧಿ ಸಭೆಗೆ ಗೈರು ಹಾಜರಾಗಿ, ಮದುವೆ ಸಮಾರಂಭಕ್ಕೆ ಹಾಜರಾಗಿದ್ದರು. ಬೆಳಗ್ಗೆ 11 ಗಂಟೆಗೆ ಸಭೆ ಕರೆದಿದ್ದ ಡಿ.ಕೆ ಶಿವಕುಮಾರ್, 12 ಗಂಟೆ ಆದರೂ ಬಾರಲಿಲ್ಲ ಎಂದು ಬಿಜೆಪಿ ಐವರು ಶಾಸಕರಲ್ಲಿ ಅಶ್ವತ್ಥ ನಾರಾಯಣ ಮನೆ ದಾರಿ ಹಿಡಿದಿದ್ರೆ, ಇನ್ನುಳಿದ ಶಾಸಕರಾದ ಮುನಿರತ್ನ, ಭೈರತಿ ಬಸವರಾಜ್, ಎಸ್.ಆರ್ ವಿಶ್ವನಾಥ್, ಎಸ್.ಟಿ ಸೋಮಶೇಖರ್ ಮದುವೆ ಸಮಾರಂಭದಲ್ಲಿ ಹಾಜರಾಗಿದ್ದರು. ಅಂದರೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಕರೆದಿದ್ದ ಸಭೆಗಿಂತಲೂ ಮದುವೆಯೇ ಹೆಚ್ಚಾಯ್ತಾ ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ. ಬಹುತೇಕ ರಾಜಕಾರಣಿಗಳು ಮದುವೆ ಕಾರ್ಯಕ್ರಮಕ್ಕಿಂತ ರಿಸೆಪ್ಷನ್ಗಳಲ್ಲಿ ಭಾಗಿಯಾಗುತ್ತಾರೆ. ಆದರೆ ಡಿಕೆ ಶಿವಕುಮಾರ್ ಬರಲಿಲ್ಲ ಅನ್ನೋ ಕೋಪವೋ..? ಅಥವಾ ಡಿ.ಕೆ ಶಿವಕುಮಾರ್ ಮೇಲಿನ ವೈಯಕ್ತಿಕ ದ್ವೇಷದಿಂದ ಸಭೆ ಬಹಿಷ್ಕರಿಸಿದ್ರೋ ಅನ್ನೋ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಬಿಜೆಪಿ ಶಾಸಕರ ನಡೆಗೆ ಕಾಂಗ್ರೆಸ್ ಶಾಸಕರ ಆಕ್ರೋಶ..

ಬೆಂಗಳೂರು ಶಾಸಕರ ಸಭೆ ಬಳಿಕ ಮಾತನಾಡಿದ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಡಿಸಿಎಂ ಡಿ.ಕೆ ಶಿವಕುಮಾರ್ ಸಭೆ ಕರೆದಿದ್ರು, ಕಳೆದ ಹಲವು ವರ್ಷದಿಂದ ಉಸ್ತುವಾರಿ ಸಚಿವರು ಇಲ್ಲದೆ ಅಭಿವೃದ್ಧಿ ಇರಲಿಲ್ಲ. ಬೆಂಗಳೂರು ಅಂತರಾಷ್ಟ್ರೀಯ ನಗರ ಅಂತ ಹೇಳಿ ಬದುಕು ನಡೆಸಲಾಗ್ತಿತ್ತು. ನಮ್ಮೆಲ್ಲರ ಬದ್ಧತೆ ಬೆಂಗಳೂರು ಅಭಿವೃದ್ಧಿಯೇ ಆಗಿದೆ. ನಮ್ಮೆಲ್ಲರ ಅನುಭವದಂತೆ ಜನರ ಧ್ವನಿಯಾಗಿ ಸರ್ಕಾರದ ನಿರ್ಧಾರ ಆಗಬೇಕು. ಬೆಂಗಳೂರು ಅಭಿವೃದ್ಧಿಗೆ ಏನೆಲ್ಲಾ ಮಾಡಬೇಕು ಅಂತ ಸಲಹೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಒಳ್ಳೆಯದಾಗಲಿದೆ ಅನ್ನೋ ಭಾವನೆ ಇದೆ. ಬಿಜೆಪಿ ಅವಧಿಯಲ್ಲಿ ಅನುದಾನ ಕೇವಲ ಬಿಜೆಪಿ ಶಾಸಕರಿರೋ ಕ್ಷೇತ್ರಕ್ಕೆ ಮಾತ್ರ ನೀಡಲಾಗಿತ್ತು. ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಆಗಬೇಕು. ಆದರೆ ಕೆಲವು ಬಿಜೆಪಿ ಶಾಸಕರು ಸಭೆ ಬಿಟ್ಟು ಹೋಗಿದ್ದು ಸರಿಯಲ್ಲ, ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ರೂ ಏನೂ ಮಾಡಲಿಲ್ಲ. ಡಿಸಿಎಂ ಸಾಹೇಬ್ರು ಬರುವುದು ಅರ್ಧ ಗಂಟೆ ತಡ ಆಗಿದ್ದು ಸಮಸ್ಯೆಯಿಲ್ಲ ಅಂದ್ರು.
ಬೆಂಗಳೂರು ಶಾಸಕರು, ಸಂಸದರ ಸಭೆಯಲ್ಲಿ ಡಿಕೆ ವಾರ್ನ್..

ನೀವು ಯಾವುದೇ ರಾಜಕೀಯ ಪಕ್ಷದವರು ಆಗಿರಬಹುದು. ಒಟ್ಟಿಗೆ ಕೆಲಸ ಮಾಡೋಣ. ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡೋಣ. ರಾಜಕೀಯವನ್ನೇ ಮಾಡ್ತೀನಿ ಅಂದ್ರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸೈ, ಸಂಘರ್ಷಕ್ಕೂ ಸೈ. ನನಗೆ ದ್ವೇಷದ ರಾಜಕೀಯ ಬೇಕಿಲ್ಲ, ಅದರಲ್ಲಿ ನಂಬಿಕೆ ಇಲ್ಲ. ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಸಂಪೂರ್ಣ ಸಹಕಾರ, ಸಲಹೆ ಅಗತ್ಯ. ಚುನಾವಣೆ ರಾಜಕೀಯ ಮುಗೀತು. ಈಗ ರಾಜಕೀಯ ಗೊಡವೆ ಬೇಡ. ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಏನೇ ಇರಬಹುದು. ಅದನ್ನು ಪಕ್ಕಕ್ಕಿಡೋಣ, ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ. ವಾಜಪೇಯಿ ಅವರು ಬಹಳ ಹಿಂದೆಯೇ ವಿಶ್ವಮಟ್ಟದಲ್ಲಿ ಬೆಂಗಳೂರು ನಗರದ ಘನತೆ, ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಈಗಿನ ಪ್ರಧಾನಿಯವರೂ ಅದನ್ನು ಬಹಳ ಸಾರಿ ಹೇಳಿದ್ದಾರೆ. ಹೀಗಾಗಿ ನಾವು-ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ, ಹೆಚ್ಚಿಸೋಣ. ಬೆಂಗಳೂರು ನಾಗರಿಕರು ಮೂಲಸೌಕರ್ಯ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಿದ್ದಾರೆ. ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದಾರೆ, ಸಮರ್ಪಕ ನಾಗರಿಕ ಸೌಕರ್ಯ ಪೂರೈಕೆ ನಮ್ಮೆಲ್ಲರ ಕರ್ತವ್ಯ ಎಂದು ಎಚ್ಚರಿಸಿದ್ದಾರೆ.

ಆದರೂ ಬೆಂಗಳೂರಿಗೆ ಸಚಿವರು ಯಾರು ಅನ್ನೋದನ್ನೇ ಹೇಳದೆ ಅಧಿಕಾರ ಮುಗಿಸಿದ ಬಿಜೆಪಿ, ಬಿಬಿಎಂಪಿ ಚುನಾವಣೆಯನ್ನೇ ನಡೆಸದೆ ಬಿಬಿಎಂಪಿ ಮೇಲೆ ತನ್ನಿಷ್ಟ ಬಂದಂತೆ ಅಧಿಕಾರ ನಡೆಸಿದ ಬಿಜೆಪಿ ನಾಯಕರು, ಸೋಮವಾರ ಬೆಂಗಳೂರು ಅಭಿವೃದ್ಧಿ ಸಚಿವರೇ ಕರೆದಿದ್ದ ಸಭೆಗೆ ಹೋಗಿ, ಸಚಿವರು ಬರುವುದು ತಡವಾಯ್ತು ಅನ್ನೋ ಕಾರಣಕ್ಕೆ ಎದ್ದು ಹೋಗಿದ್ದು ನಾಚಿಕೆಗೇಡಿನ ವಿಚಾರವೇ ಸರಿ. ಆದರೂ ನಾನು ದ್ವೇಷ ಸಾಧನೆ ಮಾಡಲ್ಲ, ಚುನಾವಣೆ ಮುಗಿದಿದೆ, ಇನ್ಮುಂದೆ ಕೆಲಸ ಮಾಡೋಣ, ಸಲಹೆ ಸೂಚನೆಗಳನ್ನು ಕೊಡಿ, ಬೆಂಗಳೂರು ಅಭಿವೃದ್ಧಿ ಮಾಡೋಣ ಎಂದಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನಬಹುದು.
ಕೃಷ್ಣಮಣಿ