ಕಾಂಗ್ರೆಸ್ ಪಕ್ಷ ಸತತ ಸೋಲುಗಳ ನಡುವೆಯೂ ಪಾಠ ಕಲಿತಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ರಾಜ್ಯದಲ್ಲೀಗ ಸಂಪುಟ ಪುನರ್ ರಚನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಸ್ವಂತ ಊರಾದ ಅರಗದಲ್ಲೇ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಲಾಗಿದೆ. ಈ ಬಗ್ಗೆ ಎಫ್ ಐಆರ್ ದಾಖಲಾಗಿದೆ. ಪಿಎಸ್‌ಐ ನೇಮಕಾತಿ ಹಗರಣ ದಿನಕ್ಕೊಂದು ಹೊಸ ಆಯಾಮ ಪಡೆಯುತ್ತಿದೆ. ಹುಡುಕಿದರೆ ಇನ್ನಷ್ಟು ಹಗರಣಗಳು ಬಿಚ್ಚಿಕೊಳ್ಳಲಿವೆ. ಸರ್ಕಾರ ಸತ್ತಂತಿದೆ. ಮಂತ್ರಿಗಳು ನಿಷ್ಕ್ರಿಯರಾಗಿದ್ದಾರೆ. ಜನರ ಬಳಿ ಚರ್ಚೆ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸರಕುಗಳ ಸಾಗರವೇ ಇದೆ. ಆದರೆ ರಾಜ್ಯ ಕಾಂಗ್ರೆಸ್ ಕಳೆದರಡು ದಿನದಿಂದ ಮಾಜಿ ಸಂಸದೆ ರಮ್ಯಾ ವಿರುದ್ಧ ಹೋರಾಟ ಮಾಡುತ್ತಿದೆ.
ಸಚಿವ ಅಶ್ವತ್ಥನಾರಾಯಣ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ನಾಯಕ ಎಂ.ಬಿ. ಪಾಟೀಲ್ ಭೇಟಿಯಾಗಿದ್ದರು ಎಂಬ ಸುದ್ದಿಯನ್ನು ಕೆಪಿಸಿಸಿ ಡಿ.ಕೆ. ಶಿವಕುಮಾರ್ Ignore ಮಾಡಬಹುದಿತ್ತು. ಅಥವಾ ಎಂ.ಬಿ. ಪಾಟೀಲ್ ಅವರನ್ನು ಕರೆಸಿ ಮಾತನಾಡಬಹುದಿತ್ತು. ಆದರೆ ಅವರು ಪ್ರಾಮಾಣಿಕರಿಸುವ ಮುನ್ನವೇ ‘ಪಿಎಸ್‌ಐ ನೇಮಕಾತಿ ಹಗರಣದಿಂದ ಬಚಾವ್ ಆಗಲು ಅಶ್ವತ್ಥನಾರಾಯಣ ಅವರು ಎಂ.ಬಿ. ಪಾಟೀಲ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಚರ್ಚಿಸಿದ್ದಾರೆ’ ಎಂಬ Concludeಗೆ ಬಂದು ಅದನ್ನು ಮಾಧ್ಯಮಗಳ ಮುಂದೆ ಹೇಳಿಯೂಬಿಟ್ಟರು. ಡಿ.ಕೆ. ಶಿವಕುಮಾರ್ ಆರೋಪವನ್ನು ನಿರಾಕರಿಸಿದ ಎಂ.ಬಿ. ಪಾಟೀಲ್, ‘ಅಶ್ವಥ್ ನಾರಾಯಣ ಮತ್ತು ನಾನು ಭೇಟಿ ಆಗಿಲ್ಲ. ಒಂದೊಮ್ಮೆ ಸ್ನೇಹ-ಸಂಬಂಧದ ಹಿನ್ನೆಲೆಯಲ್ಲಿ ಭೇಟಿಯಾದರೆ ತಪ್ಪೇನಿದೆ? ಅದು ನನ್ನ ಖಾಸಗಿ ವಿಷಯ. ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿರುವುದು ಅವರ ಸಣ್ಣತನ. ರಾಜಕೀಯವಾಗಿ ನಾನು ಸದಾ ಪಕ್ಷದ ಪರವಾಗಿಯೇ ಇದ್ದೇನೆ. ಶಿವಕುಮಾರ್ ಆರೋಪವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ‘ಪಕ್ಷನಿಷ್ಠ ಎಂ.ಬಿ. ಪಾಟೀಲ್ ಬಗ್ಗೆ ಡಿಕೆ ಶಿವಕುಮಾರ್ ಈ ರೀತಿ ಮಾತನಾಡಬಾರದಿತ್ತು’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. Once again ರಮ್ಯಾ ಅವರ ಟ್ವೀಟ್ ಅನ್ನು ಕಾಂಗ್ರೆಸ್ Ignore ಮಾಡಬಹುದಿತ್ತು. ಆದರೆ ಕಾಂಗ್ರೆಸ್ ಎರಡು ದಿನದಿಂದ ನಿರಂತರವಾಗಿ ರಮ್ಯಾ ಕಾಂಗ್ರೆಸ್ ಸೇರಿದ್ದು, ಸಂಸದೆಯಾಗಿದ್ದು, ಮಾಜಿಯಾಗಿದ್ದು, ಮೌನಿಯಾಗಿದ್ದೆಲ್ಲವನ್ನೂ ಕೆದಕಿ ಕೆದಕಿ ರಾಡಿ ಮಾಡಿಕೊಳ್ಳುತ್ತಿದೆ. ರಮ್ಯಾ ಬಹಳ ಸ್ಪಷ್ಟ ಶಬ್ದಗಳಲ್ಲಿ ‘ತನ್ನ ವಿರುದ್ಧ ದಾಳಿ ಮಾಡುವಂತೆ ಐಟಿ ಸೆಲ್ ಗೆ ಮತ್ತು ಕೆಲ ಬೆಂಬಲಿಗರಿಗೆ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಸೂಚನೆ ನೀಡಿದ್ದಾರೆ’ ಎಂದು ದೂರಿದ್ದಾರೆ. ನಡೆಯುತ್ತಿರುವ ದಾಳಿ ನೋಡಿದರೆ ರಮ್ಯಾ ಆರೋಪದಲ್ಲಿ ನಿಜವಿದೆ ಎನಿಸುತ್ತಿದೆ.
ರಮ್ಯಾ ದಿಢೀರನೆ ಆ್ಯಕ್ಟೀವ್ ಆಗಿ ಎಂ.ಬಿ. ಪಾಟೀಲ್ ಪರ ಟ್ವೀಟ್ ಮಾಡಿದ್ದೇಕೆ? ನೇರವಾಗಿ ಡಿ.ಕೆ. ಶಿವಕುಮಾರ್ ನಡೆಯನ್ನು ಖಂಡಿಸಿದ್ದೇಕೆ? ಎಂದು ಪ್ರಶ್ನೆ ಮಾಡಲಾಗುತ್ತಿದೆ. ಆದರೆ ರಮ್ಯಾ ಆಗಲಿ, ಮತ್ತೊಬ್ಬರಾಗಲಿ ಎಂ.ಬಿ. ಪಾಟೀಲ್ ಸರಿ ಇದ್ದರೆ ಅವರನ್ನು ಬೆಂಬಲಿಸಬಾರದೇಕೆ?, ಡಿ.ಕೆ. ಶಿವಕುಮಾರ್ ನಡೆ ತಪ್ಪಿದ್ದರೆ ಅದನ್ನು ಖಂಡಿಸಬಾರದೇಕೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲಿಲ್ಲ. ಸರಿ-ತಪ್ಪುಗಳನ್ನು ತೂಗುವ ಮನಸ್ಥಿತಿ ಇಲ್ಲದೆ ಮಾಡಲಾಗುತ್ತಿರುವುದರಿಂದಲೇ ‘ಇದು ಡಿ.ಕೆ. ಶಿವಕುಮಾರ್ ಪ್ರಚೋದಿತ ದಾಳಿಯಂತೆ’ ಕಾಣಿಸುತ್ತಿರುವುದು.
ಡಿ.ಕೆ. ಶಿವಕುಮಾರ್ ಬೆಂಬಲಿಗರ ದಾಳಿ ತೀವ್ರಗೊಳ್ಳುತ್ತಿದ್ದಂತೆ ರಮ್ಯಾ ಇನ್ನಷ್ಟು ವ್ಯಗ್ರರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಅವಕಾಶವಾದಿ, ನನ್ನ ಬೆನ್ನಿಗೆ ಚೂರಿ ಹಾಕಿದವರು, ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದವರು ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತವರ ಬೆಂಬಲ ಪರಿಸ್ಥಿತಿ ‘ಓಡಿಸಿಕೊಂಡು ಹೋಗಿ ಹೊಡೆತ ತಿಂದರು’ ಎಂಬಂತಾಗಿದೆ. ಡಿ.ಕೆ. ಶಿವಕುಮಾರ್ ಅವರಿಗೆ ‘ಇದು ಬೇಕಿತ್ತಾ?’ ಎಂಬಂತಾಗಿದೆ. ಸಾಮಾನ್ಯವಾಗಿ ಡಿ.ಕೆ. ಶಿವಕುಮಾರ್ ಅವರ ಅಕೌಂಟ್ ನಿಂದ ಬಿಜೆಪಿ ನಾಯಕರ ಬಗ್ಗೆ ಮಾಡುವ ಟ್ವೀಟ್ ಗಳೆಲ್ಲವಕ್ಕೂ ಇದೇ ಪರಿಸ್ಥಿತಿ ಇದೆ. ಬಿಜೆಪಿ ನಾಯಕರ ಮೇಲೆ ಡಿ.ಕೆ. ಶಿವಕುಮಾರ್ ಅಟ್ಯಾಕ್ ಮಾಡಿದಾಗಲೆಲ್ಲಾ ‘ನೀವು ಸಾಚಾನಾ?’ ಎಂಬ ಅರ್ಥದಲ್ಲಿ ಬದನಾಮ್ ಮಾಡುವ ಕೆಲಸವೇ ಆಗುತ್ತಿದೆ. ಕಾಂಗ್ರೆಸ್ ಐಟಿ ಸೆಲ್ ಗೆ ಈವರೆಗೆ ಈ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈಗ ರಮ್ಯಾ ಅವರಿಂದ ಮಂಗಳಾರತಿ ಮಾಡಿಸಿಕೊಳ್ಳುತ್ತಿದೆ.

ಡಿ.ಕೆ. ಶಿವಕುಮಾರ್ ಮಾಡದ ಕೆಲಸಗಳಿಗೂ, ಮಾಡಿದ ಅಲ್ಪ-ಸ್ವಲ್ಪ ಕೆಲಸಗಳನ್ನು ತಮ್ಮ ಘನ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉಪ ಚುನಾವಣೆ ಗೆದ್ದದ್ದು ತನ್ನಿಂದಲೇ, ತಾನಿಲ್ಲದಿದ್ದರೆ ಅಹಮದ್ ಪಟೇಲ್ ರಾಜ್ಯಸಭಾ ಸದಸ್ಯರೇ ಆಗುತ್ತಿರಲಿಲ್ಲ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಷ್ಟು ದಿನ ಇದ್ದದ್ದಕ್ಕೂ ನಾನೇ ಕಾರಣ, ಅದೇ ರೀತಿ ಹಿಂದೆ ರಮ್ಯಾ ಅವರನ್ನು ರಾಜಕಾರಣಕ್ಕೆ ಕರೆತಂದದ್ದು, ಪ್ರಾಥಮಿಕ ಸದಸ್ಯತ್ವ ಕೊಡಿಸಿದ್ದು, ಗೆಲ್ಲಿಸಿದ್ದು ಎಲ್ಲವೂ ನಾನೇ ಎಂದು ಬಿಂಬಿಸಿಕೊಂಡಿದ್ದರು. ಈಗ ರಮ್ಯಾ ಒಂದೇ ಏಟಿಗೆ ಎಲ್ಲದಕ್ಕೂ ‘ರಾಹುಲ್ ಗಾಂಧಿ ಕಾರಣ’, ‘ನನಗೆ ಅವಕಾಶಗಳನ್ನು ಕೊಟ್ಟಿದ್ದಾರೆ ಎಂದು ಹೇಳಿಕೊಳ್ಳುವವರು ಅವಕಾಶವಾದಿಗಳು’ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಬೆಂಬಲಿಗರು ಎಂಬ ಕಾರಣಕ್ಕೆ ಎಂ.ಬಿ. ಪಾಟೀಲ್ ವಿಷಯದಲ್ಲಿ ಆತುರಾತುರವಾಗಿ ಶಿವಕುಮಾರ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಎಡವಟ್ಟು ಮಾಡಿಕೊಂಡರು. ಅದೇ ರೀತಿ ಎಂ.ಬಿ. ಪಾಟೀಲ್ ಬೆಂಬಲಕ್ಕೆ ನಿಂತಿದ್ದಾರೆ ಎಂದು ರಮ್ಯಾ ವಿರುದ್ಧ ಸಮರ ಸಾರಿ ಮುಖಭಂಗಕ್ಕೆ ಒಳಗಾದರು. ಇದು ರಾಜಕೀಯ; ಮುಂದೆಯೂ ಎಂ.ಬಿ. ಪಾಟೀಲ್ ಅಥವಾ ಇನ್ಯಾವುದೇ ಸಿದ್ದರಾಮಯ್ಯ ಬೆಂಬಲಿಗರು ಬೇರೆ ಪಕ್ಷದ ನಾಯಕರನ್ನು ಭೇಟಿಯಾಗಬಹುದು, ಅಥವಾ ಅಂತಹ ಸುದ್ದಿಯಾಗಬಹುದು. ರಮ್ಯಾ ಅವರಂತಹವರು ಬೇರೆ ನಾಯಕರನ್ನು ಬೆಂಬಲಿಸಬಹುದು. ಅದರ ವಿರುದ್ಧ ಹೋರಾಟ ಮಾಡುವ, ಹತ್ತಿಕ್ಕುವ ಅಗತ್ಯ ಡಿ.ಕೆ. ಶಿವಕುಮಾರ್ ಅವರಿಗೆ ಇಲ್ಲ. ಅನಗತ್ಯವಾಗಿ ಮೈಮೇಲೆ ಎಳೆದುಕೊಂಡರೆ ನಷ್ಟ ಭರಿಸಬೇಕಾಗುತ್ತದೆ; ಈಗ ಆಗುತ್ತಿರುವಂತೆ. Once again ಕಾಂಗ್ರೆಸ್ ನಾಯಕರು ಬುದ್ದಿ ಕಲಿಯುವುದು ಯಾವಾಗ?











