ರಾಮನಗರ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೆ ಡಿಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ ಚುನಾವಣೆ ಅಖಾಡ ರಂಗೇರಿದ್ದು, ಚನ್ನಪಟ್ಟಣದಲ್ಲಿ ರಾಜಕೀಯ ಸಂಚಲನ ಮೂಡಿಸಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ MLC ಸಿ.ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವುದು ಫಿಕ್ಸ್ ಎನ್ನಲಾಗ್ತಿದೆ. ನಿನ್ನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದ ವೇಳೆ ನಿಶಾ ಯೋಗೇಶ್ವರ್ ಸೇರ್ಪಡೆಗೆ ಡಿಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ಇಂದು ಚನ್ನಪಟ್ಟಣದ ಹುಣಸನಹಳ್ಳಿ ಗ್ರಾಮದಲ್ಲಿರುವ ಬಿಸಿಲಮ್ಮನಿಗೆ ನಿಶಾ ಯೋಗೇಶ್ವರ್ ಪೂಜೆ ಸಲ್ಲಿಸಲಿದ್ದು, ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಅಪ್ಪನ ವಿರುದ್ಧವೇ ಅಖಾಡಕ್ಕಿಳಿಯುವ ಸಿದ್ಧತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ವಾರ ಅಧಿಕೃತವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದ್ದು, ಮುಂದಿನ ದಿನಗಳಲ್ಲಿ ರಾಯಕೀಯ ಸನ್ನಿವೇಶ ಬದಲಾದರೆ ಮಗಳ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ಹೋಗುವಂತೆ ಯೋಗೇಶ್ವರ್ ಅವರೇ ಕಳುಹಿಸಿದ್ದಾರೆ ಎನ್ನುವ ಮಾತುಗಳೂ ಕೇಳಿ ಬಂದಿವೆ.
