ಬೆಳಗಾವಿ : ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಮಾರ್ಚ್ 9ರಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ 2 ಗಂಟೆಗಳ ರಾಜ್ಯಾದ್ಯಂತ ಬಂದ್ಗೆ ಕಾಂಗ್ರೆಸ್ ಕರೆ ನೀಡಿದೆ. ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಎಂ ಬೊಮ್ಮಾಯಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದೇವೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಾವು ಯಾರೂ ತಲೆ ಎತ್ತಿಕೊಂಡು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಎಲ್ಲಾ ರಾಜಕಾರಣಿಗಳೂ ಒಂದು ಪಾಠವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ತಮ್ಮ ಸಾಧನೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಸಾಧನೆ ಭ್ರಷ್ಟಾಚಾರವಾಗಿದೆ. ಇಡೀ ದೇಶದಲ್ಲಿ, ಪ್ರಪಂಚದಲ್ಲಿ ಕರ್ನಾಟಕದ ಆಡಳಿತಕ್ಕೆ ಎಷ್ಟೊಂದು ಗೌರವವಿತ್ತು. ಹಿಂದಿನ ಕಾಲದ ರಾಜಕಾರಣ ಅಂದರೆ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ , ಸಿದ್ದರಾಮಯ್ಯ, ಎಸ್.ಎಂ ಕೃಷ್ಣ ನಾವು ಇಂದಿಗೂ ನೆನಪು ಇಟ್ಟುಕೊಳ್ಳುವಂತಹ ಆಡಳಿತವನ್ನು ನೀಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ನಾನು ನಿನ್ನೆ ಕೆಲವು ಸರ್ಕಾರಿ ಅಧಿಕಾರಿಗಳನ್ನು ವಿಚಾರಿಸಿದ್ದೇನೆ. ಸಣ್ಣ ಇಲಾಖೆ ಅಧಿಕಾರಿಗಳು , ತಾಲೂಕು ಪಂಚಾಯ್ತಿ. ರಾಜ್ಯ ಮಟ್ಟದ ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸಗಳನ್ನು ಸರ್ಕಾರ ಮಾಡಿಸುತ್ತಿದೆ. ಅವರೆಲ್ಲ ನಾಳೆ ನಾವು ಜೈಲಿಗೆ ಹೋಗಬೇಕಾಗಬಹುದು ಎಂಬ ಭಯದಲ್ಲಿದ್ದಾರೆ. ಈ ಸರ್ಕಾರದ ಅವಧಿ ಎಷ್ಟು ಬೇಗ ಮುಗಿಯುತ್ತೋ ಅಷ್ಟು ಬೇಗ ನಮಗೆ ನೆಮ್ಮದಿ ಸಿಗುತ್ತೆ ಎಂದು ಹೇಳ್ತಿದ್ದಾರೆ ಎಂದು ಹೇಳಿದ್ದಾರೆ.