ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಸಿಬಿಐ ಹಾಗೂ ಇಡಿಗೆ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದು ಈ ಬಗ್ಗೆ ಅಧಿಕೃತ ಮಾಹಿತಿಗಾಗಿ ಆರ್ಟಿಐ ಅರ್ಜಿ ಸಲ್ಲಿಸಲಾಗುವುದು ಎಂದು ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಬಿಟ್ ಕಾಯಿನ್ ನಲ್ಲಿ ಯಾವ ರಾಜಕಾರಣಿ ಇದ್ದಾರೆ ಎಂಬ ಸುದ್ದಿಯ ಬಗ್ಗೆ ನಾನು ಮಾತನಾಡುತ್ತಿಲ್ಲ. ಆದರೆ ಈ ಪ್ರಕರಣದ ತನಿಖೆಯನ್ನು ಇಡಿ, ಸಿಬಿಐಗೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಬರೆದಿರುವ ಪತ್ರದ ಕುರಿತಾಗಿ ಸರ್ಕಾರ ವಿವರಣೆ ನೀಡಲಿ ಎಂದಿದ್ದಾರೆ.
ಇದೇ ವೇಳೆ ಪೆಟ್ರೋಲ್, ಡೀಸೆಲ್ ದರ ಇಳಿಕೆ ವಿಚಾರವಾಗಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಜನರು ಕೊಟ್ಟ ಉತ್ತರ ನೋಡಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿದ್ದಾರೆ. ಇವಾಗ ಅವರಿಗೆ ತಿಳುವಳಿಕೆ ಬಂದಿದೆ. ಆದರೆ ಗ್ಯಾಸ್, ಕಬ್ಬಿಣ, ಸಿಮೆಂಟ್ ದರ ಕಡಿಮೆ ಅಗಿಲ್ಲ ಅಂದ್ರೆ ಬೇರೆ ಚುನಾವಣೆಯಲ್ಲಿ ಉತ್ತರ ಸಿಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.