“ನಾನು ಹೇಡಿ ಅಲ್ಲ, ಹೆದರಿ ಎಲ್ಲಿಯೂ ಓಡಿ ಹೋಗಲ್ಲ. ಮಾಜಿ ಸಿಎಂ, ನಕಲಿ ಸ್ವಾಮಿ ಬ್ಲಾಕ್ ಮೇಲ್, ಲೂಟಿ ರವಿ ಎಲ್ಲರಿಗೂ ತಕ್ಕ ಉತ್ತರ ಕೊಡುತ್ತೇನೆ. ಅವರದೆಲ್ಲ ಬಿಚ್ಚಿಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ ಹಾಗೂ ಕುಮಾರಕೃಪ ಅತಿಥಿ ಗೃಹದ ಬಳಿ ಮಾಧ್ಯಮಗಳಿಗೆ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.
‘ಪಕ್ಷದ ಹೈಕಮಾಂಡ್ ನಾಯಕರು ಹಾಗೂ ಸಚಿವರಿಗೆ ಹಣ ಕಲೆಕ್ಷನ್ ಮಾಡುವ ಟಾಸ್ಕ್ ನೀಡಿದೆ’ ಎಂಬ ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು.
ಹೈಕೋರ್ಟ್ ತಡೆಯಾಜ್ಞೆ ತೆರವಿಗೆ ಸಿಬಿಐ ಮಾಡಿದ್ದ ಮನವಿಯನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್, ‘ಶಿವಕುಮಾರ್ ಎಲ್ಲಿಯೂ ಓಡಿ ಹೋಗೋಲ್ಲ’ ಎಂದು ಹೇಳಿರುವ ಬಗ್ಗೆ ಗಮನ ಸೆಳೆದಾಗ, “ಹೌದು, ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ನ್ಯಾಯಾಲಯದ ವಿಚಾರಣೆ, ನೆಲದ ಕಾನೂನನ್ನು ನಾನು ಗೌರವಿಸುತ್ತೇನೆ” ಎಂದರು.
“ಯಾರಿಗೆ ಏನು ಉತ್ತರ ನೀಡಬೇಕೋ ನೀಡುತ್ತೇನೆ. ಅವರಿಗೆ ಐಟಿ ಇಲಾಖೆ ಪ್ರಕ್ರಿಯೆ ಗೊತ್ತಿಲ್ಲ. ಅವರು ಏಜೆಂಟರಂತೆ ಮಾತನಾಡುತ್ತಿದ್ದಾರೆ. ಅವರಂತೆ ನಾನು ಮಾತನಾಡುವುದಿಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಅವರಂತೆ ಮಾತನಾಡಲು ಸಾಧ್ಯವಿಲ್ಲ. ನ್ಯಾಯಾಲಯದ ವಿಚಾರದಲ್ಲಿ ಆ ರೀತಿ ಮಾತನಾಡಿದರೆ ತಪ್ಪಾಗುತ್ತದೆ. ಅವರಿಗೆ ಉತ್ತರ ನೀಡಲು ಮುಹೂರ್ತ ಫಿಕ್ಸ್ ಮಾಡುತ್ತೇನೆ” ಎಂದು ತಿಳಿಸಿದರು.
ಪ್ರತಿಪಕ್ಷದವರ ಆರೋಪಕ್ಕೆ ಹೈವೋಲ್ಟೇಜೂ ಕೊಡ್ತಿನಿ, ಲೋವೋಲ್ಟೇಜೂ ಕೊಡ್ತಿನಿ, ನಕಲಿಗೂ ಕೊಡುವೆ, ಲೂಟಿಗೂ ಕೊಡುವೆ, ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದರು.
“ಬಿಜೆಪಿಯವರು ಪ್ರತಿಭಟನೆ ಮಾಡಬೇಕು, ಪ್ರತಿಭಟನೆ ಮಾಡಿದರೆ ಜನರಿಗೆ ಅವರ ಎಲ್ಲಾ ತರಹದ ಲೂಟಿ ಬಗ್ಗೆ ಗೊತ್ತಾಗುತ್ತದೆ, ಎಲ್ಲವನ್ನೂ ಬಿಚ್ಚಿಡುತ್ತೇವೆ” ಎಂದೂ ಹೇಳಿದರು.
ವೇಣುಗೋಪಾಲ್ ಅವರ ಆಗಮನ ಹಾಗೂ ಪಕ್ಷದ ನಾಯಕರ ಸಭೆ ಕುರಿತು ಕೇಳಿದಾಗ, “ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ನಾನು ಪಕ್ಷದ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಲೋಕಸಭೆ ಕ್ಷೇತ್ರಗಳಿಗೆ ಹೋಗಿ ವರದಿ ನೀಡುವಂತೆ ಮಂತ್ರಿಗಳಿಗೆ ಜವಾಬ್ದಾರಿ ನೀಡಿದ್ದೆವು. ಈ ಪ್ರಕ್ರಿಯೆ ತಡವಾಗುತ್ತಿರುವುದರಿಂದ ಅದನ್ನು ತ್ವರಿತವಾಗಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
ನಿಗಮ-ಮಂಡಳಿಗಳಲ್ಲಿ ಶಾಸಕರಿಗೆ ಮಾತ್ರ ಸ್ಥಾನವೇ? ಕಾರ್ಯಕರ್ತರಿಗೂ ಸ್ಥಾನ ಸಿಗುತ್ತದೆಯೋ ಎಂದು ಕೇಳಿದಾಗ, “ಶಾಸಕರು ಹಾಗೂ ಕಾರ್ಯಕರ್ತರು ಇಬ್ಬರಿಗೂ ನೀಡಬೇಕು. ಪಕ್ಷ ಎಂದರೆ ಎಲ್ಲರೂ ಸೇರುತ್ತಾರೆ. ಎಲ್ಲರಿಗೂ ಸ್ಥಾನಮಾನ ನೀಡಬೇಕು. ಈ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿಗಳು ಒಂದೆರಡು ದಿನದಲ್ಲಿ ಚರ್ಚೆ ಮಾಡುತ್ತೇವೆ” ಎಂದರು.