ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಅವರು ಮರಳಿ ಕಾಂಗ್ರೆಸ್ಗೆ ಬರಲಿದ್ದಾರೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕಗಳು ಬಂದಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದ ಸೋಮಶೇಖರ್ ಅವರು ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೆ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೋಮಶೇಖರ್ ಅವರ ಕ್ಷೇತ್ರದ ಮೇಲೆ ಸ್ವತಃ ಡಿಕೆ ಶಿವಕುಮಾರ್ ಅವರು ವಿಶೇಷ ಕಾಳಜಿ ವಹಿಸಿದ್ದಾರೆ ಎನ್ನಲಾಗಿದೆ.
ಶನಿವಾರ (26 ಆಗಸ್ಟ್) ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ ʼಚೇಂಜ್ ಮೇಕರ್ಸ್ ಆಫ್ ಕನಕಪುರ ರಸ್ತೆ ನಿವಾಸಿ ಸಂಘʼ ಹಾಗೂ ʼಶೋಭಾ ಫಾರೆಸ್ಟ್ ವ್ಯೂ ನಿವಾಸಿ ಸಂಘʼದ ಸಹಯೋಗದೊಂದಿಗೆ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ರವರು ಭಾಗವಹಿಸಿದ್ದು, ಶಾಸಕ ಸೋಮಶೇಖರ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕುಂದು ಕೊರತೆಗಳ ಬಗ್ಗೆ ಚರ್ಚೆ ಕೂಡಾ ನಡೆಸಲಾಗಿದೆ.
ಇತ್ತಿಚೆಗೆ ರಾಜ್ಯ ಸರ್ಕಾರವು ಎಸ್ಟಿ ಸೋಮಶೇಖರ್ ಕ್ಷೇತ್ರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆಯೇ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆಗಿರುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 30 ರಂದು ಎಸ್ಟಿ ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರದ ಹಲವು ವಾರ್ಡ್ಗಳಲ್ಲಿ ಅಧಿಕೃತ ಚಾಲನೆ ದೊರೆಯಲಿದ್ದು, ಅದಕ್ಕೂ ಮುನ್ನ ನಾಳೆ (28 ಆಗಸ್ಟ್) ಪೂರ್ವಭಾವಿ ಸಭೆ ನಡೆಯಲಿದೆ. ಈ ಪೂರ್ವಭಾವಿ ಸಭೆಗೆ ಮಾಜಿ ಪಾಲಿಕೆ ಸದಸ್ಯರುಗಳು, ಮುಖಂಡರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಸ್ವತಃ ಎಸ್ಟಿ ಸೋಮಶೇಖರ್ ಅವರು ವಿನಂತಿ ಮಾಡಿದ್ದಾರೆ.
ಬಿಜೆಪಿಯಲ್ಲಿ ಸೋಮಶೇಖರ್ಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾಗ ತನಗೆ ಆಹ್ವಾನವಿರಲಿಲ್ಲ ಎಂದೂ ಸೋಮಶೇಖರ್ ಬೇಸರ ವ್ಯಕ್ತಪಡಿಸುತ್ತಿರುವುದಾಗಿ ವರದಿಯಾಗಿದೆ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಎಸ್ಟಿ ಸೋಮಶೇಖರ್ ಅವರ ಕ್ಷೇತ್ರದ ಬಗ್ಗೆ ಕಾಳಜಿ ವಹಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಯೋಜನೆಗಳಿಗೆ ಬಿಜೆಪಿ ಶಾಸಕರು ಪ್ರಚಾರ ಮಾಡುತ್ತಿರುವುದು, ಕಾಂಗ್ರೆಸ್ ರಾಜ್ಯ ವರಿಷ್ಠರೊಂದಿಗೆ ವೇದಿಕೆ ಹಂಚಿಕೊಂಡು ಕಾರ್ಯಕ್ರಮ ನಡೆಸುವುದು ಪಕ್ಷಾಂತರದ ಸುಳಿವುಗಳನ್ನು ನೀಡಲಾರಂಭಿಸಿದೆ. ಒಂದು ವೇಳೆ ಸೋಮಶೇಖರ್ ಕಾಂಗ್ರೆಸ್ ಸೇರಿದರೆ, ಅವರ ಶಾಸಕ ಸ್ಥಾನ ಅನರ್ಹಗೊಳ್ಳುವ ಸಾಧ್ಯತೆಯೂ ಇದ್ದು, ಇದರಿಂದ ನಡೆಯುವ ಉಪಚುನಾವಣೆಗೆ ಈಗಿಂದಲೇ ತಯಾರಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಡಿಕೆ ಶಿವಕುಮಾರ್ ಅವರು ಯಶವಂತಪುರದಲ್ಲಿ ಸೋಮಶೇಖರ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ, ಸೋಮಶೇಖರ್ ಅವರ ಆಪ್ತರು ಎನ್ನಲಾದ ಹಲವು ಬಿಜೆಪಿ ಮುಖಂಡರು, ಹಾಗೂ ಕಾರ್ಯಕರ್ತರು ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದು, ಸೋಮಶೇಖರ್ ʼಆಪರೇಷನ್ ಹಸ್ತʼಕ್ಕೆ ಒಳಗಾಗುವ ಎಲ್ಲಾ ಲಕ್ಷಣಗಳೂ ಗೋಚರಿಸಲಾರಂಭಿಸಿವೆ.