
ಮೈಸೂರಿನ ಮುಡಾ ಹಗರಣ ಕುರಿತು ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಹೋರಾಟಕ್ಕೆ ಯೋಜನೆ ರೂಪಿಸಿವೆ. ಆಗಸ್ಟ್ 3 ರಿಂದ ಪಾದಯಾತ್ರೆ ಆರಂಭ ಆಗಲಿದೆ. ಆಗಸ್ಟ್ 10ರ ತನಕ ಪಾದಯಾತ್ರೆ ನಡೆಯಲಿದೆ. ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಸಭೆಯನ್ನೂ ಮಾಡಲಾಗಿದೆ. ಆದರೆ ಈ ಹೋರಾಟ ಡಿಸಿಎಂ ಡಿ.ಕೆ ಶಿವಕುಮಾರ್ ಮೂಗಿನ ನೇರಕ್ಕೆ ನಡೆಯುತ್ತಿರುವ ಹೋರಾಟ ಎಂದು ಬಿಜೆಪಿ ನಾಯಕ ಯತ್ನಾಳ್ ನೇರವಾಗಿ ಆರೋಪ ಮಾಡಿದ್ದಾರೆ.
ಸ್ವ ಪಕ್ಷೀಯ ನಾಯಕರ ವಿರುದ್ಧವೇ ವಾಗ್ದಾಳಿ ಮಾಡಿರುವ ಶಾಸಕ ಬಸನಗೌಡ ಪಾಟೀಲ್‌ಯತ್ನಾಳ್, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಮಾತನಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮುಡಾ ಹಗರಣದ ಕುರಿತು ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಡಿ.ಕೆ ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಲು ಹೋರಾಟ ಮಾಡುತ್ತಿದ್ದಾರೆ. ಇದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆದೇಶದಂತೆ ಬಿ.ವೈ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಲು ಈ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆ ಹೊಂದಾಣಿಕೆ ರಾಜಕಾರಣ, ಡಿ.ಕೆ ಶಿವಕುಮಾರ್ ಉಪಕಾರ ತೀರಿಸಲು ಪಾದಯಾತ್ರೆ ಮಾಡಲಾಗ್ತಿದೆ. ಬಳ್ಳಾರಿಗೆ ಪಾದಯಾತ್ರೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದು, ಕೇಂದ್ರದಿಂದ ಅನುಮತಿ ಪಡೆದು ಎಲ್ಲಿಂದ ಪಾದಯಾತ್ರೆ ಅನ್ನೋದು ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.
ವಾಲ್ಮೀಕಿ ನಿಗಮದ ಹಗರಣ ದೊಡ್ಡ ಹಗರಣ, ಸಮುದಾಯದ ಹಣ ನುಂಗಿದ್ದಾರೆ. ಯಾವುದೇ ಹೊಂದಾಣಿಕೆ ರಾಜಕಾರಣ ಮಾಡದೆ ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಗ್ಯಾರಂಟಿ ಯೋಜನೆ ತಡೆದಿರುವ ವಿಚಾರ, ಸರ್ಕಾರ ದಿವಾಳಿಯಾಗಿದೆ, ವರ್ಷಕ್ಕೆ 65 ಸಾವಿರ ಕೋಟಿ ಬೇಕು. 2 ಸಾವಿರ ಭಾಗ್ಯ ಲಕ್ಷ್ಮೀ ಹಣ ಕೂಡ 3 ತಿಂಗಳಿನಿಂದ ಬರುತ್ತಿಲ್ಲ. ಭಾಗ್ಯದ ಲಕ್ಷ್ಮಿ, ಲಕ್ಷ್ಮಿ ಅಕ್ಕಾ ಬೆಳಗಾವಿಯಲ್ಲೇ ಕೂತಿದ್ದಾರೆ. ಅಕ್ಕಾ ರೊಕ್ಕಾ ಕೊಡವ್ವಾ.. ಇಲ್ಲಾಂದ್ರೆ ಮನೆಗೆ ಹೋಗವ್ವಾ.. ಎಂದು ಹೋರಾಟ ಶುರು ಮಾಡಬೇಕಾಗುತ್ತದೆ ಎಂದಿದ್ದಾರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಕೃಷ್ಣಮಣಿ