
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ ಕೆಲವರಿಗೆ ಕರಾಳವಾಗಿದೆ. ಹಬ್ಬದ ಹಿನ್ನೆಲೆ ಪಟಾಕಿ ಸಿಡಿತದಿಂದ ನಗರದಲ್ಲಿ ಕಳೆದ ಮೂರು ದಿನಗಳಿಂದ 250ಕ್ಕೂ ಹೆಚ್ಚು ಜನರ ಕಣ್ಣಿಗೆ ಹಾನಿಯಾಗಿದ್ದು, ಕೆಲವರು ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.

ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 90, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 37, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 35, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 13 ಮಂದಿ, ಮೋದಿ ಆಸ್ಪತ್ರೆಯಲ್ಲಿ 3 ಮಂದಿ ಮತ್ತು ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 4 ಕೇಸ್ಗಳು ದಾಖಲಾಗಿವೆ.

ಇನ್ನು ಮಿಂಟೋ ಆಸ್ಪತ್ರೆಯಲ್ಲಿ 37 ಜನರ ಪೈಕಿ 9 ರೋಗಿಗಳು ದಾಖಲಾಗಿ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. 14 ಜನರಿಗೆ ತೀವ್ರ ಗಾಯವಾಗಿದೆ. 2 ರೋಗಿಗಳ ದೃಷ್ಠಿ ದೋಷ ಎದುರಾಗಿದೆ. 19 ವರ್ಷದ ಬಿಹಾರ್ ಮೂಲದ ಯುವಕನ ಎಡಗಣ್ಣಿಗೆ ಸಂಪೂರ್ಣ ದೃಷ್ಠಿ ದೋಷವಾಗಿದೆ. ಫ್ಲವರ್ ಪಾಟ್ ಸಿಡಿಸುವ ವೇಳೆ ಅನಾಹುತ ಸಂಭವಿಸಿದ್ದು, ಯುವಕನ ಕಣ್ಣಿನ ಗುಡ್ಡೆಯೇ ಸೀಳಿದೆ. ಫ್ಲವರ್ ಪಾಟ್ ಪಟಾಕಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಗ ಕಣ್ಣಿಗೆ ಹಾನಿಯಾಗಿದೆ.