ಬೆಂಗಳೂರು: ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಮುಂದಿನ ತಿಂಗಳಿಂದ ಹತ್ತು ಕೆಜಿ ಅಕ್ಕಿಯನ್ನು ನೀಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಬರ ಪೀಡಿತ ತಾಲೂಕುಗಳಲ್ಲಿ ಹಣದ ಬದಲು ಅಕ್ಕಿಯನ್ನೇ ಕೊಡುತ್ತೇವೆ ಎಂದರು.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕಾಂಗ್ರೆಸ್ 10 ಕೆಜೆ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಕಾಂಗ್ರೆಸ್ ಈ ಗ್ಯಾರಂಟಿಯನ್ನು ಜಾರಿಗೆ ತರಲು ಅಕ್ಕಿಯ ಕೊರತೆ ಎದುರಾಗಿತ್ತು. ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಅಕ್ಕಿಯನ್ನು ಕೇಂದ್ರ ಆಹಾರ ನಿಗಮದಿಂದ ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಕೇಂದ್ರ ಆಹಾರ ನಿಗಮ ರಾಜ್ಯಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿತ್ತು.
ಬರಪೀಡಿತ ತಾಲೂಕುಗಳಲ್ಲಿಅಕ್ಕಿ ವಿತರಣೆ
ಅಕ್ಕಿ ಕೊರತೆ ಎದುರಾದ ಹಿನ್ನೆಲೆಯಲ್ಲಿ ಐದು ಕೆಜಿ ಅಕ್ಕಿಯ ಬದಲಾಗಿ ಪ್ರತಿಯೊಬ್ಬರಿಗೆ ಪ್ರತಿತಿಂಗಳು 170 ರೂ ಹಣವನ್ನು ಹಾಕಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು. ಅದರಂತೆ ಅಕೌಂಟಿಗೆ 170 ರೂ ಹಣವನ್ನು ಹಾಕಲಾಗಿತ್ತು.ಇದೀಗ ಮುಂಬರುವ ತಿಂಗಳಿಂದ ಹಣಕ್ಕೆ ಬದಲಾಗಿ ಹತ್ತು ಕೆಜಿ ಅಕ್ಕಿಯನ್ನು ಬರ ಪೀಡಿತ ತಾಲೂಕುಗಳಿಗೆ ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆಯೂ ಇಲಾಖೆ ಮುಂದಾಗಿದೆ.