ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲು ಶಾಸಕರ ಒತ್ತಾಯ ಮಾಡಿ ಪತ್ರ ಬರೆದಿದ್ದಾರೆ. ಶಾಸಕಾಂಗ ಸಭೆ ಕರೆಯಲು ಕಲಬುರಗಿ ಜಿಲ್ಲೆ ಆಳಂದ ಶಾಸಕ ಬಿ.ಆರ್ ಪಾಟೀಲ್ ಬರೆದ ಪತ್ರ ಬರೆದಿದ್ದು, ಆ ಪತ್ರಕ್ಕೆ ಸುಮಾರು 20ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿದ್ದಾರೆ. ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸೇರಿದಂತೆ ಅನೇಕ ಶಾಸಕರು ಸಹಿ ಮಾಡಿದ್ದಾರೆ. ಶಾಸಕಾಂಗ ಸಭೆ ಕರೆಯುವಂತೆ ಮನವಿ ಮಾಡಿರುವ ಪತ್ರಕ್ಕೆ ( ಅಸಮಾಧಾನ ಪತ್ರ ) ಸಹಿ ಹಾಕಿದ್ದೇನೆ ಎಂದು ಬಸವರಾಜ ರಾಯರೆಡ್ಡಿ ಮಾಧ್ಯಮಗಳ ಎದುರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಯಾವ ಅಸಮಾಧಾನವೂ ಇಲ್ಲ ಅಂತಾ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಈ ಬಗ್ಗೆ ಮಾತನಾಡಿದ್ದು, ಯಾರು ಸಹ ಪತ್ರ ಬರೆದಿಲ್ಲ, ಮಾಧ್ಯಮಗಳಲ್ಲಿ ಬರುತ್ತಿರುವುದು ಬರೋ ಬೋಗಸ್ ಸುದ್ದಿ ಎಂದಿದ್ದಾರೆ. ಆದರೆ ಶಾಸಕ ಬಿ.ಆರ್ ಪಾಟೀಲ್ ಬರೆದಿರುವ ಪತ್ರ ಮಾಧ್ಯಮಗಳಿಗೆ ಸಿಕ್ಕಿದ್ದು, ಅಸಮಾಧಾನ ಇದೆ ಅನ್ನೋದಕ್ಕೆ ಪತ್ರದಲ್ಲಿರುವ ಸಾಲುಗಳೇ ಸಾಕ್ಷಿ ಆಗಿವೆ.
ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಬರೆದಿರುವ ಪತ್ರದಲ್ಲೇನಿದೆ..?

ಜನರ ವಿಶ್ವಾಸ, ಭರವಸೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದೇವೆ, ಆದರೆ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಆಗ್ತಿಲ್ಲ. ಅನುದಾನ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. 20ಕ್ಕೂ ಹೆಚ್ಚು ಸಚಿವರು ನಮ್ಮ ಮನವಿಗೆ ಕ್ಯಾರೆ ಅಂತಿಲ್ಲ ಎಂದು ನೇರವಾಗಿಯೇ ವಾಗ್ದಾಳಿ ಮಾಡಲಾಗಿದೆ. ಇನ್ನು ಈ ರೀತಿಯ ನಡಾವಳಿಯಿಂದ ಕ್ಷೇತ್ರದ ಜನರ ಅಶೋತ್ತರ ಈಡೇರಿಸುವುದು ಕಷ್ಟವಾಗ್ತಿದೆ. ಅನುದಾನ ಬಿಡುಗಡೆಗೂ 3ನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರಾಗಿದ್ರೂ ಅನುದಾನಕ್ಕೆ 3ನೇ ವ್ಯಕ್ತಿಯ ಮೊರೆ ಹೋಗಬೇಕಾಗಿದೆ. ವರ್ಗಾವಣೆ ವಿಚಾರದಲ್ಲೂ ಸಚಿವರು ತಮಗೆ ಬೇಕಾದವರಿಗೆ ಮಣೆ ಹಾಕುತ್ತಿದ್ದಾರೆ. ನಾವು ಕೊಡುವ ವರ್ಗಾವಣೆ ಶಿಫಾರಸ್ಸು ಪತ್ರಗಳಿಗೆ ಸಚಿವರು ಮಾನ್ಯತೆ ಕೊಡ್ತಿಲ್ಲ. ನೀವು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಇದರಲ್ಲಿ ವಿಷಯದಲ್ಲೇ ಉಸ್ತುವಾರಿ ಸಚಿವರು ಅಸಹಕಾರ ಎಂದು ಉಲ್ಲೇಖವಾಗಿದೆ. ಮೊದಲಿಗೆ ಪತ್ರ ಬರೆಯುವುದು ಶಾಸಕರ ಹಕ್ಕು, ಅದನ್ನು ಚಲಾಯಿಸಿದ್ದೇವೆ ಎಂದಿದ್ದ ಬಿ.ಆರ್ ಪಾಟೀಲ್ ವಿವಾದ ಸ್ವರೂಪ ಪಡೆಯುತ್ತಿದ್ದ ಹಾಗೆ ರಿವರ್ಸ್ ಗೇರ್ ಹಾಕಿದ್ದಾರೆ.
ಸಿಎಂಗೆ ಬರೆದ ಪತ್ರದಲ್ಲಿ ಯಾರು ಯಾರು ಸಹಿ ಹಾಕಿದ್ದಾರೆ..?
ಆಳಂದ ಶಾಸಕ ಬಿ ಆರ್ ಪಾಟೀಲ್ ಬರೆದಿರುವ ಪತ್ರದಲ್ಲಿ ಯಲಬುರ್ಗ ಶಾಸಕ ಬಸವರಾಜ ರಾಯರೆಡ್ಡಿ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ, ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಕಾಗವಾಡ ಶಾಸಕ ರಾಜು ಕಾಗೆ ಸಹಿ ಮಾಡಿದ್ದಾರೆ. ಬಿ.ಆರ್ ಪಾಟೀಲ್ ಪತ್ರಕ್ಕೆ ನಾನು ಸಹಿ ಹಾಕಿದ್ದೇವೆ ಎಂದು ಸ್ವತಃ ರಾಯರೆಡ್ಡಿ ‘ನಾನು ಸಹಿ ಹಾಕಿದ್ದೇನೆ, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರ ಬರೆಯಲಾಗಿದ್ದು, ಹಿರಿಯ ಶಾಸಕರು ಸಹಿ ಮಾಡಿ ಎಂದಾಗ ನಾನು ಸಹಿ ಮಾಡಿದ್ದೇನೆ’ ಎಂದಿದ್ದಾರೆ. ರಾಜು ಕಾಗೆ, ಕೌಜಲಗಿ, ಬಿ.ಆರ್ ಪಾಟೀಲ್ ಬಂದು ಸಹಿ ಮಾಡಿಸಿಕೊಂಡರು ಅಂತಾನೂ ಹೇಳಿದ್ದಾರೆ. ಆ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ಮೇರೆಗೆ ಯೂಟರ್ನ್ ಆಗಿದ್ದಾರೆ ಎನ್ನಲಾಗ್ತಿದೆ.
ವಿವಾದ ಆದ್ಮೇಲೆ ಯೂಟರ್ನ್ ಹೊಡೆದು ಹೇಳಿದ್ದೇನು..?
ನಾನು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರವನ್ನೇ ಬರೆದಿಲ್ಲ. ಯಾವುದೋ ಹಳೆಯ ಲೆಟರ್ ಹೆಡ್ ಬಳಸಿಕೊಂಡು ನಾನು ಪತ್ರ ಬರೆದ ರೀತಿಯಲ್ಲಿ ಬಿಂಬಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಕಲಬುರಗಿ ಎಸ್‌ಪಿ ಅವರಿಗೆ ದೂರು ನೀಡಿದ್ದೇನೆ. ನನ್ನ ಲೆಟರ್ ಹೆಡ್‌ನಲ್ಲಿ ಸೀರಿಯಲ್ ನಂಬರ್ ಇರಲಿದ್ದು, ಈಗ ವಿವಾದ ಸೃಷ್ಟಿಸಿರುವ ಪತ್ರದಲ್ಲಿ ಯಾವುದೇ ಸೀರಿಯಲ್ ನಂಬರ್ ಇಲ್ಲ ಎಂದಿದ್ದಾರೆ. ಆದರೆ ಇಷ್ಟು ಜನರ ಮಾತುಗಳಲ್ಲಿ ಯಾರ ಮಾತು ಸತ್ಯ ಅನ್ನೋದನ್ನು ಕಾಂಗ್ರೆಸ್ ಪಕ್ಷವೇ ನಿರ್ಧಾರ ಮಾಡಬೇಕಿದೆ. ಮೊದಲಿಗೆ ಸ್ವತಃ ಬಿ.ಆರ್ ಪಾಟೀಲ್ ಅವರೇ ನಾನು ಪತ್ರ ಬರೆದಿದ್ದೇನೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೇಳುವುದು ಶಾಸಕರ ಹಕ್ಕು ಎಂದಿದ್ದರು. ಬಸವರಾಜ ರಾಯರೆಡ್ಡಿ ಕೂಡ ಹೌದು, ಬಿ.ಆರ್ ಪಾಟೀಲ್ ಬಂದಿದ್ದರು ಸಹಿ ಹಾಕಿದ್ದೇನೆ ಎಂದಿದ್ದರು. ಆ ಬಳಿಕ ಯಾವಾಗ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಅಲ್ಲಗಳೆದರೋ ಆಗ ಬಿ.ಆರ್ ಪಾಟೀಲ್ ಉಲ್ಟಾ ಹೊಡೆದಿದ್ದಾರೆ. ಹಾಗಿದ್ದರೆ ಯಾರು ಸರಿ..? ಯಾರು ತಪ್ಪು ಅನ್ನೋದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕಿದೆ. ಇಷ್ಟೆಲ್ಲಾ ಆದ್ಮೇಲೆ ಕಾಂಗ್ರೆಸ್ ಗೊಂದಲದ ಗೂಡಾಗ್ತಿದೆ ಅನ್ನೋದನ್ನು ಅಲ್ಲಗಳೆಯುವ ಸಾಧ್ಯತೆ ಇಲ್ಲ.
ಕೃಷ್ಣಮಣಿ