ರಾಯಚೂರು ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ ಡಿಕೆ ಶಿವಕುಮಾರ್, ದೇಶಕ್ಕೆ ಸಂವಿಧಾನ ಕೊಟ್ಟಂತಹ ಮಹಾಪುರುಷರಿಗೆ ಅಪಮಾನ ಮಾಡಿದವರು ಯಾರೇ ಆದರೂ ಅವರನ್ನು ವಜಾಗೊಳಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಭಾನುವಾರ ಮಾತನಾಡಿದ ಡಿ.ಕೆ. ಶಿವಕುಮಾರ್, ಅಂಬೇಡ್ಕರ್ ಅವರಿಗೆ ನ್ಯಾಯಾಧೀಶರು ಅಪಮಾನ ಮಾಡಿದ ವಿಚಾರವಾಗಿ ಡಿಎಸ್ ಎಸ್ ನವರು ಬೃಹತ್ ಪ್ರತಿಭಟನೆ ಮಾಡಿರುವುದು ಸರಿಯಾಗಿದೆ. ದೇಶಕ್ಕೆ ಸಂವಿಧಾನ ಕೊಟ್ಟಂತಹ ಮಹಾಪುರುಷರಿಗೆ ಅಪಮಾನ ಮಾಡಿದವರು ಯಾರೇ ಆದರೂ ಅವರನ್ನು ವಜಾಗೊಳಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಇಂದು ಅಂತಹ ಮಹಾನ್ ವ್ಯಕ್ತಿಯನ್ನೇ ಅಗೌರವವಾಗಿ ಕಾಣುವ ಪರಿಸ್ಥಿತಿ ಎಂದಾದರೆ, ಸರ್ಕಾರ ಕೂಡಲೇ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಬೇಕು. ಒಂದು ಬಾರಿ ಇದಕ್ಕೆ ಅವಕಾಶ ಕೊಟ್ಟರೆ ಮತ್ತೆ ಮತ್ತೆ ಇಂತಹ ಪ್ರಕರಣಗಳು ಮರುಕಳಿಸುತ್ತವೆ. ಇದಕ್ಕೆ ಅವಕಾಶ ನೀಡಬಾರದು. ನಿನ್ನೆ ಪ್ರತಿಭಟನೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಸೇರಿ ಪ್ರತಿಭಟನೆ ಮಾಡಿದ್ದು, ಅವರನ್ನು ಅಭಿನಂದಿಸುತ್ತೇನೆ. ಅವರ ಜತೆ ನಮ್ಮ ಧ್ವನಿ ಇರುತ್ತದೆ ಎಂದಿದ್ದಾರೆ.
ಮತ್ತೆಮೇಕೆ ದಾಟು ಪಾದಯಾತ್ರೆ ಆರಂಭ
ಇತ್ತೀಚೆಗೆ ಮುಖ್ಯಮಂತ್ರಿಗಳು ದೆಹಲಿ ಭೇಟಿ ಕೊಟ್ಟಾಗ ಕೇಂದ್ರ ಸಚಿವರ ಅನುಮತಿ ಪಡೆದು ಮೇಕೆದಾಟು ಯೋಜನೆ ಆರಂಭಿಸುತ್ತಾರೆ ಎಂದು ಭಾವಿಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ನಾವು ನಮ್ಮ ಪಾದಯಾತ್ರೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದೇವೆ. ಶೀ಼ಘ್ರದಲ್ಲೇ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.
ಅಹೋರಾತ್ರಿ ಧರಣಿ:
ಈಶ್ವರಪ್ಪನ ವಿಚಾರಕ್ಕಿಂತ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ಧೋರಣೆ. ಈಶ್ವರಪ್ಪ ಅವರ ಹೇಳಿಕೆ ವೈಯಕ್ತಿಕ ಎಂದು ಸೂರ್ಯ ಹೇಳಿದ್ದಾರೆ. ಹಾಗಾದರೆ ಅವರನ್ನು ವಜಾ ಮಾಡಬೇಕಲ್ಲವೇ? ಈಶ್ವರಪ್ಪ ಅವರನ್ನು ಒಂದೆರಡು ದಿನಗಳಲ್ಲಿ ವಜಾ ಮಾಡುತ್ತಾರೆ ಎಂದು ಭಾವಿಸಿ ರಾಜ್ಯಪಾಲರಿಗೆ ಗೌರವ ಕೊಟ್ಟು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದೆವು. ಇಲ್ಲದಿದ್ದರೆ ರಾಜ್ಯಪಾಲರ ಭಾಷಣಕ್ಕೂ ಅವಕಾಶ ನೀಡುತ್ತಿರಲಿಲ್ಲ. ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ.
ಮುಖ್ಯಮಂತ್ರಿಗಳಿಗೆ ಸ್ವಾಭಿಮಾನ ಇದ್ದಿದ್ದರೆ, ಹರಕಲು ಬಾಯಿ ಈಶ್ವರಪ್ಪ, ಮುರುಗೇಶ್ ನಿರಾಣಿ ಮುಂದಿನ ಸಿಎಂ ಎಂದು ಹೇಳಿದಾಗಲೇ ವಜಾ ಮಾಡಬೇಕಿತ್ತು.
ಇನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದರು. ಈಶ್ವರಪ್ಪನಿಗೆ ಅವರ ಸರ್ಕಾರದವರ ಮೇಲೆ ನಿಷ್ಠೆ ಇಲ್ಲ.
ಈ ವಿಚಾರವಾಗಿ ಯಾವ ಪಕ್ಷದ ನಾಯಕರು ಯಾವ ಹೇಳಿಕೆ ನೀಡುತ್ತಿದ್ದಾರೆ ಎಂದು ಜನ ನೋಡುತ್ತಿದ್ದಾರೆ. ನಿನ್ನೆ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಧರಣಿನಿರತ ಶಾಸಕರನ್ನು ಭೇಟಿ ಮಾಡಿ, ಇದು ಇಡೀ ದೇಶದ ವಿಚಾರ. ಸಂಸತ್ ಸದಸ್ಯರು, ಬೇರೆ ರಾಜ್ಯಗಳ ನಾಯಕರು ಕರೆ ಮಾಡಿ ಕರ್ನಾಟಕ ಕಾಂಗ್ರೆಸ್ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಸ್ವಾಭಿಮಾನ, ಗೌರವ, ಪ್ರಜಾಪ್ರಭುತ್ವ, ದೇಶಭಕ್ತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ಮಾಡಿದ್ದನ್ನು ನಮಗೆ ತಿಳಿಸಿದರು.