ಭಾನಯವಾರ ಬೆಳಿಗ್ಗೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಸಾವಿರಾರು ರೈತರ ಮೇಲೆ, ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ರ ಬೆಂಗಾವಲು ಪಡೆಯ ವಾಹನಗಳನ್ನು ಚಲಾಯಿಸಿ, ಪ್ರತಿಭಟನಾ ನಿರತ ನಾಲ್ವರು ರೈತರನ್ನು ಬರ್ಭರವಾಗಿ ಹತ್ಯೆ ಹಾಗು 8 ಮಂದಿಗೂ ಹೆಚ್ಚು ಜನರಿಗೆ ಗಂಭೀರ ಗಾಯ ಆಗಿರುವ ಪ್ರಕರಣ ಎಲ್ಲೆಡೆ ಚರ್ಚೆಗೆ ಗ್ರಾಸವಾದ ಬೆನ್ನಲ್ಲೆ ಸಿದ್ದರಾಮಯ್ಯ ಉತ್ತರ ಪ್ರದೇಶ ಯೋಗಿ ಆಧಿತ್ಯನಾಥ್ ವಿರುದ್ದ ಕಿಡಿಕಾರಿದ್ದಾರೆ.
ರೈತರು ತನ್ನ ಶತ್ರುಗಳೆಂದು ತಿಳಿದುಕೊಂಡಿರುವ ಬಿಜೆಪಿ ಪಕ್ಷ ಅವರನ್ನು ಪೊಲೀಸರ ಮೂಲಕ ದಮನಿಸಲು ಪ್ರಯತ್ನಿಸಿ ವಿಫಲವಾದ ನಂತರ ಈಗ ನೇರವಾಗಿ ಹತ್ಯೆ ನಡೆಸಲು ಹೊರಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಉತ್ತರಪ್ರದೇಶದಲ್ಲಿ ಸಚಿವರ ಮಗನ ಕಾರಿನಡಿಗೆ ಸಿಕ್ಕಿ ರೈತರು ಸಾವಿಗೀಡಾದ ಪ್ರಕರಣ ಬಿಜೆಪಿಯ ಕೊಲೆಗಡುಕ ಮನಸ್ಸಿಗೆ ಸಾಕ್ಷಿ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೂಂಡಾ ರಾಜ್ಯದಲ್ಲಿ ದಲಿತರು, ರೈತರು, ಮಹಿಳೆಯರು ಮತ್ತು ಬಡವರ ಮಾನ-ಪ್ರಾಣ ಯಾವುದೂ ಸುರಕ್ಷಿತ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಸಂವಿಧಾನವೇ ಕುಸಿದುಬಿದ್ದಿರುವ ಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅಲ್ಲಿನ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿರೋಧ- ಭಿನ್ನಾಭಿಪ್ರಾಯವನ್ನು ಸಹಿಸದ ಬಿಜೆಪಿ ತನ್ನ ತಾಲಿಬಾನಿ ಮನಸ್ಥಿತಿಯನ್ನು ಬತ್ತಲು ಮಾಡಿಕೊಳ್ಳುತ್ತಿದೆ. ರೈತರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಹೊರಟ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಯೋಗಿ ಆದಿತ್ಯನಾಥ್ ಸರ್ಕಾರದ ಕೃತ್ಯ ಖಂಡನೀಯ ಎಂದು ಖಂಡಿಸಿದ್ದಾರೆ.