ರಾಯಚೂರು: ಜಾತಿಗಣತಿಗೆ (Caste census) ಸಂಬಂಧಿಸಿದಂತೆ, ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದ್ದು, ಒಳ ಮೀಸಲಾತಿ (Inner reservation) ಬಗ್ಗೆ ಸರ್ಕಾರಕ್ಕೆ ವಿರೋಧವಿಲ್ಲ. ಆದರೆ ಇದರ ಬಗ್ಗೆ ವರಿಷ್ಠರೊಂದಿಗೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ಅವರು ಇಂದು ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು ಪ್ರಕಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಜಾತಿ ಗಣತಿ ವರದಿಯನ್ನು ಈಗಾಗಲೇ ಸ್ವೀಕರಿಸಲಾಗಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.ವರದಿಯಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.
ವಸ್ತುಸ್ಥಿತಿ ಜನರ ಮುಂದಿಡುತ್ತೇವೆ.
ರಾಜ್ಯದ ಕಾಂಗ್ರೆಸ್ನ ವಿವಿಧ ನಾಯಕರು ವರಿಷ್ಠರೊಂದಿಗೆ ಚರ್ಚೆ ಮಾಡುವುದು ಸಹಜ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಊಹಾಪೋಹಗಳು ಅಗತ್ಯವಿಲ್ಲ. ವಿರೋಧಪಕ್ಷಗಳು, ನನ್ನ ಮೇಲಿನ ಸುಳ್ಳು ಆರೋಪಗಳನ್ನು ಮಾಡಿ ರಾಜೀನಾಮೆ ಬೇಡಿದರೆ, ರಾಜೀನಾಮೆ ಕೊಡಲು ಸಾಧ್ಯವಿಲ್ಲ.ಸುಳ್ಳು ಆರೋಪಗಳನ್ನು ಮಾಡಿದರೆ, ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ ಎಂದರು.
ಜೆಡಿಎಸ್ ನ ಜಿ.ಟಿ ದೇವೇಗೌಡ, ಮುಖ್ಯಮಂತ್ರಿಯವರನ್ನು ಬೆಂಬಲಿಸಿ ಮಾತನಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಜೆಡಿಎಸ್ ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದಲ್ಲಿದ್ದು, ಮುಡಾದ ಸದಸ್ಯರೂ ಆಗಿದ್ದಾರೆ. ಅವರು ಸತ್ಯ ಹೇಳಿರುವುದರಲ್ಲಿ ತಪ್ಪಿಲ್ಲ. ಈ ಪ್ರಕರಣದ ವಿರುದ್ಧ, ವಿರೋಧಪಕ್ಷದವರ ಪಾದಯಾತ್ರೆಯನ್ನು ನಡೆಸುವುದು ಬೇಡ ಎಂದವರಲ್ಲಿ ಜಿ.ಟಿ ದೇವೇಗೌಡರು ಒಬ್ಬರು ಎಂದರು.
ವಿರೋಧಪಕ್ಷದ ನಾಯಕರಾದ ಆರ್ ಅಶೋಕ್ ಅವರ ಮೇಲೆ ಎಫ್ಐಆರ್ ಆಗಿರುವುದರಿಂದ, ತಾನು ರಾಜಿನಾಮೆ ನೀಡಲು ಸಿದ್ಧ, ಸಿಎಂ ಅವರೂ ರಾಜೀನಾಮೆ ನೀಡಲಿ ಎಂದು ಹೇಳಿರುವ ಬಗ್ಗೆ ಉತ್ತರಿಸಿ, ಅವರು ಮೊದಲು ರಾಜೀನಾಮೆ ನೀಡಲಿ, ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮೊದಲು ರಾಜೀನಾಮೆ ನೀಡಲಿ ಎಂದರು.