-ಕೃಷ್ಣಮಣಿ
ತುಮಕೂರು ಲೋಕಸಭಾ (Tumakuru Loksabha) ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಘೋಷಣೆ ಆಗಿದೆ. ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡಗೆ (S.P.Muddahanumegowda) ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕಾಂಗ್ರೆಸ್ ನಾಯಕರ ವಿರುದ್ಧ ಸಂಜಯ್ ಜಯಚಂದ್ರ ಅಸಮಧಾನ ಹೊರ ಹಾಕಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಿರೋದು ಕುಂಚಿಟಿಗ ಒಕ್ಕಲಿಗ ಸಮುದಾಯವನ್ನ ನಿರ್ಲಕ್ಷ್ಯ ಮಾಡಿದಂತೆ ಎಂದಿದ್ದಾರೆ. ತಂದೆ ಜಯಚಂದ್ರಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನೂ ನೀಡಲಿಲ್ಲ. ನನಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಕೂಡ ನೀಡಲಿಲ್ಲ. ಇದರಿಂದ ಸಹಜವಾಗಿಯೇ ಕಾಂಗ್ರೆಸ್ ವಿರುದ್ಧ ಕುಂಚಿಟಿಗ ಒಕ್ಕಲಿಗ ಸಮುದಾಯ ಅಸಮಧಾನಗೊಳ್ಳುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನಂತಹ ಯುವಕರಿಗೆ ಟಿಕೆಟ್ ಕೊಟ್ಟು ಆದ್ಯತೆ ನೀಡಬೇಕಿತ್ತು. ಆದರೂ ಪಕ್ಷ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವು ತಲೆ ಬಾಗುತ್ತೇವೆ. ಯಾರಿಂದ ನಮಗೆ ಟಿಕೆಟ್ ಕೈ ತಪ್ಪಿತು ಅಂತ ವಿಶ್ಲೇಷಣೆ ಮಾಡಲ್ಲ ಎಂದು ಮಾಧ್ಯಮಗಳ ಜೊತೆಗೆ ಮಾತನಾಡಿ ಅಸಮಾಧಾನ ತೋರಿಸಿದ್ದಾರೆ. ಕುಂಚಿಟಿಗ ಸಮುದಾಯ ಕೋಪಗೊಳ್ಳುತ್ತದೆ ಎನ್ನುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತಗಳು ಬಂದಿಲ್ಲ ಎಂದರೆ ಮುಂದಿನ ದಿನಗಳಲ್ಲಿ ನಮ್ಮನ್ನು ದೂರುವಂತಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಸಂದೇಶ ಕಳುಹಿಸಿದ್ದಾರೆ. ಆದರೂ ಪಕ್ಷದ ನಿರ್ಧಾರಕ್ಕೆ ತಲೆ ಬಾಗುತ್ತೇವೆ ಎನ್ನುವ ಮೂಲಕ ಮುದ್ದಹನುಮೇಗೌಡರ ಪರ ಕೆಲಸ ಮಾಡುತ್ತೇವೆ ಅಂತಾನೂ ತಿಳಿಸಿದ್ದಾರೆ.
ಅತ್ತ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ವಿರೋಧಿಸಿ ಕಾಂಗ್ರೆಸ್ ಸೇರ್ಪಡೆ ಆಗಿದ್ದ ಮಾಜಿ ಶಾಸಕ ಗೌರಿಶಂಕರ್, ಈ ಬಾರಿ ಕಾಂಗ್ರೆಸ್ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಯೋಜನೆ ಹಾಕಿಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಸಚಿವರಾದ ಕೆ.ಎನ್ ರಾಜಣ್ಣ, ಡಾ ಜಿ ಪರಮೇಶ್ವರ್ ಕೈ ಮೇಲಾಗಿದ್ದು, ಕಳೆದೊಂದು ವಾರದ ಹಿಂದೆ ಪಕ್ಷಕ್ಕೆ ಸೇರ್ಪಡೆಯಾದ ಮುದ್ದಹನುಮೇಗೌಡರು ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿ.ಕೆ ಶಿವಕುಮಾರ್ ನಂಬಿಕೊಂಡು ಕಾಂಗ್ರೆಸ್ ಸೇರ್ಪಡೆ ಆಗಿರುವ ಗೌರಿಶಂಕರ್ ಟಿಕೆಟ್ ಸಿಗದೆ ಮೌನಕ್ಕೆ ಶರಣಾಗಿದ್ದಾರೆ. ಈ ಕಾರಣದಿಂದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೂ ಕಾಂಗ್ರೆಸ್ ಮತ ನಿರೀಕ್ಷೆ ಕಷ್ಟ ಆಗಲಿದೆ ಎನ್ನಲಾಗ್ತಿದೆ.
ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲು ಡಿ.ಕೆ ಶಿವಕುಮಾರ್ ನಿರಾಕರಿಸಲು ಕಾರಣವೇ ಕುಣಿಗಲ್ ಮತಕ್ಷೇತ್ರ. ಕಳೆದ ಬಾರಿ ಬಿಜೆಪಿ ಸೇರ್ಪಡೆಯಾಗಿದ್ದ ಮುದ್ದಹನುಮೇಗೌಡರು ಡಿ.ಕೆ ಸುರೇಶ್ ವಿರುದ್ಧ ಪ್ರಚಾರ ಮಾಡಿದ್ದರು. ಅಷ್ಟೇ ಅಲ್ಲದೆ ಡಿ.ಕೆ ಶಿವಕುಮಾರ್ ಸಂಬಂಧಿಯಾಗಿರುವ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ವಿರುದ್ಧವೂ ಅಬ್ಬರಿಸಿದ್ದರು. ಇದೀಗ ಸಂಸದರಾಗಿ ಆಯ್ಕೆಯಾದರೆ ತನ್ನದೇ ಆದ ಗುಂಪನ್ನು ಕಟ್ಟಿಕೊಂಡು ಮುಂದೊಂದು ದಿನ ಸಂಕಷ್ಟ ಆಗುವ ಆತಂಕವಿದೆ. ಇದೇ ಕಾರಣದಿಂದ ಎದುರಾಳಿ ಆಗುವುದನ್ನು ತಪ್ಪಿಸಲು ಟಿಕೆಟ್ ನೀಡುವ ಬಗ್ಗೆ ನಿರಾಸಕ್ತಿ ತೋರಿಸಿದ್ದರು. ಇದೀಗ ಅನಿವಾರ್ಯವಾಗಿ ಒತ್ತಡದ ಕಾರಣಕ್ಕೆ ಟಿಕೆಟ್ ಕೊಡಲಾಗಿದೆ. ಮತಯಾಚನೆ ವೇಳೆ ಇನ್ನೂ ಯಾವೆಲ್ಲ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತೋ ಕಾದು ನೋಡಬೇಕು.












