ದಿಂಡಗೂರು ಗ್ರಾಮದ ದಲಿತ ಸಮುದಾಯ ದೇವಸ್ಥಾನ ಪ್ರವೇಶಿಸಿದ ಬಳಿಕ ಅಲ್ಲಿಯ ವ್ಯವಸ್ಥೆ ಎಲ್ಲವೂ ಸರಿಯಾಗಿದೆ ಎಂಬ ಕಲ್ಪನೆ ಹೊರಜಗತ್ತಿಗೆ ಇದೆ. ಆದರೆ ಪ್ರತಿಧ್ವನಿ.ಕಾಂ ಗ್ರಾಮದ ವಾಸ್ತವತೆಯನ್ನು ತಿಳಿಯಲು ಮುಂದಾದಾಗ ಗ್ರೌಂಡ್ ರಿಪೋರ್ಟ್ ಬೇರೆಯೇ ಹೇಳುತ್ತದೆ. ಅಲ್ಲಿಯ ಗ್ರಾಮಸ್ಥರೇ ಹೇಳುವ ಪ್ರಕಾರ, ದೇವಸ್ಥಾನ ಪ್ರವೇಶಿಸಿದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೌದು, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ದಲಿತರಿಗೆ ಇನ್ನೂ ಸ್ವಾತಂತ್ರ್ಯ ಅನ್ನೋದು ನುಂಗಲಾರದ ಬಿಸಿ ತುಪ್ಪವಾಗಿಯೇ ಉಳಿದಿದೆ. ಕಳೆದ ಸೆಪ್ಟೆಂಬರ್ 28 ರಂದು ಚನ್ನರಾಯಪಟ್ಟಣದ ದಿಂಡಗೂರು ಗ್ರಾಮದ ದಲಿತರು ಪೋಲಿಸರ ನೆರವಿನೊಂದಿಗೆ ದೇವಾಲಯ ಪ್ರವೇಶದ ಘಟನೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಎಲ್ಲೆಡೆ ಇದು ಕ್ರಾಂತಿಕಾರಿ ನಡೆ ಎಂದು ಬಣ್ಣಸಿದರೆ ಆ ಹಳ್ಳಿಯ ಜನರಿಗೆ ಇದು ದೊಡ್ಡ ಸಮಸ್ಯೆಯಾಗಿ ಬದಲಾಗಿದೆ. ಸುಮಾರು 45 ದಲಿತ ಕುಟುಂಬವಿರುವ ಈ ಊರಿನಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ದೇವಾಲಯಕ್ಕೆ ಪ್ರವೇಶವನ್ನು ನೀಡುತ್ತಿರಲಿಲ್ಲ. ಈ ಅಸ್ಪೃಶ್ಯತೆಯಿಂದ ಬೇಸತ್ತ ಯುವಕರ ತಂಡವೊಂದು ದೇವಸ್ಥಾನ ಪ್ರವೇಶ ಕಲ್ಪಿಸುವಂತೆ ತಹಶೀಲ್ದಾರರಿಗೆ ಮನವಿ ಮಾಡಿದ್ದರು. (ದಿಂಡಗನೂರು ಸುಮಾರು ಐನೂರು ಜನರು ವಾಸಿಸುವಂತ ಹಳ್ಳಿಯಾಗಿದ್ದು ದಲಿತರು ಸೇರಿದಂತೆ ಬ್ರಾಹ್ಮಣ, ಲಿಂಗಾಯತ, ಕ್ಷೌರಿಕ, ಒಕ್ಕಲಿಗ, ಆಚಾರ್ಯ , ವಿಶ್ವಕರ್ಮ ಮತ್ತು ಬೆಸ್ತರ ಸಮುದಾಯಗಳು ಈ ಗ್ರಾಮದಲ್ಲಿ ವಾಸಿಸುತ್ತಿವೆ)
ಕಳೆದ ಸೆಪ್ಟೆಂಬರ್ 28ನೇ ತಾರೀಖು ಪೊಲೀಸ್ ಮತ್ತು ಇನ್ನಿತರೆ ಅಧಿಕಾರಿಗಳ ನೆರವಿನಿಂದ ದೇವಾಲಯಕ್ಕೆ ಪ್ರವೇಶಿಸಿದ ದಲಿತ ಸಮುದಾಯದ ಜನರನ್ನು ಊರಿನ ಮೇಲ್ಜಾತಿಯ ಜನರು ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಿರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದಿಂಡಗೂರಿನ ನಿವಾಸಿ ನಟರಾಜ್ ಅವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಧ್ವಿನಿಯೊಂದಿಗೆ ಮಾತಾನಾಡಿದ ನಟರಾಜ್, ನಾವು ಅನೇಕ ಶೋಷಣೆಗಳನ್ನು, ಅಸ್ಪೃಶ್ಯತೆಯನ್ನು ಅನುಭವಿಸಿಕೊಂಡು ಬಂದಿದ್ದೆವೇ. ನಮಗೆ ಒಂದು ಬದಲಾವಣೆ ಬೇಕು. ನಾವು ಎಲ್ಲರಂತೆ ಮನುಷ್ಯರು. ಸಮಾನವಾಗಿ ಬದುಕುವ ಹಕ್ಕು ನಮಗೂ ಇದೆ. ದಲಿತರು ಎಂದ ಮಾತ್ರಕ್ಕೆ ನಮ್ಮನ್ನು ಮನೆಯೊಳಗೆ ಸೇರಿಸುವುದಿಲ್ಲ, ಊಟ ಬಡಿಸುವಾಗ ಬಾಳೆ ಎಲೆ ತರುವುದಾಗಿ ಹೇಳ್ತಾರೆ, ಲೋಟ ಚೊಂಬು ಮುಟ್ಟಿದರೆ ಅದನ್ನು ನೀವೇ ಇಟ್ಕೊಳಿ ನೀವು ಮುಟ್ಟಿದ್ದು ನಾವು ಮತ್ತೆ ವಾಪಸ್ ತೆಗೆದುಕೊಳ್ಳಲ್ಲ, ದೇವಾಲಯಕ್ಕೆ ಹೋದರೆ ಒಳಗೆ ಬಿಡೋದಿಲ್ಲ, ನಮ್ಮ ಹಣ್ಣು ಕಾಯಿ ಮುಟ್ಟದೆ ತಾರತಮ್ಯ ಮಾಡೊದು, ನಮ್ಮ ಹೆಣ್ಣು ಮಕ್ಕಳು ಆರತಿ ತೆಗೆದುಕೊಂಡು ಹೋದರೆ ನಮ್ಮನ್ನು ಬೇರೆ ಗುಂಪು ಮಾಡುವುದು ಈತರದ ಅನೇಕ ಅಸ್ಪೃಶ್ಯತೆಯನ್ನು ನಮ್ಮದೇ ಊರಿನಲ್ಲಿ ನಡೆಯುತ್ತಿದೆ ಇದನ್ನು ನೋಡಿಕೊಂಡು ಹೇಗೆ ಸುಮ್ಮನಿರುವುದು. ಈ ಅಸ್ಪೃಶ್ಯತೆಯನ್ನು ಕಿತ್ತೊಗೆಯಲು ನಾವು ಈ ಕೆಲಸಕ್ಕೆ ಮುಂದಾಗಿ ದೇವಸ್ಥಾನ ಪ್ರವೇಶ ಮಾಡಿದೆವು. ಆದರೆ ದೇವಸ್ಥಾನದ ಪ್ರವೇಶದ ನಂತರ ಊರಲ್ಲಿ ವಿಚಿತ್ರ ಬೆಳವಣಿಗೆಯಾಗಿದ್ದು ನಮ್ಮ ಪರಿಶಿಷ್ಟ ಸಮುದಾಯಕ್ಕೆ ದೊಡ್ಡ ಸಮಸ್ಯೆಯಾಗಿ ಬದಲಾಗಿದೆ ಎಂದಿದ್ದಾರೆ.
ಮುಂದುವರೆದು, ನಾವು ದೇವಾಲಯ ಪ್ರವೇಶ ಮಾಡಿದ ನಂತರ ಊರಿನ ಮೇಲ್ಜಾತಿಯ ಜನರು ಎಲ್ಲಾ ಸೇರಿ ಒಂದು ಸಭೆ ಮಾಡಿಕೊಂಡು ನಮ್ಮನ್ನು ಅಘೋಷಿತ ಸಾಮಾಜಿಕ ಬಹಿಷ್ಕಾರ ಮಾಡಿದ್ದಾರೆ. ಸಾಮಾನ್ಯವಾಗಿ ಯಾರಾದರು ನೋಡಿದರೆ ಇದು ಬಹಿಷ್ಕಾರದಂತೆ ಕಾಣುವುದಿಲ್ಲ ಆದರೆ ವಾಸ್ತವವಾಗಿ ನಾವು ಅನುಭವಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ನಾವು ಅಂಗಡಿಗಳಲ್ಲಿ ಏನಾದರು ಕೊಳ್ಳಲು ಹೋದರೆ ಇಲ್ಲ, ಕಾಲಿಯಾಗಿದೆ ಎನ್ನುತ್ತಾರೆ. ಕೂಲಿ ಕೆಲಸಕ್ಕೆ ಹೋದರೆ ಕೆಲಸವೇ ಇಲ್ಲ ಇನ್ನೂ ನೀವು ಬರೋದು ಬೇಡ ಅನ್ನುತ್ತಾರೆ. ಅನೇಕರು ಮಾತಾಡುವುದನ್ನು ನಿಲ್ಲಿಸಿದ್ದಾರೆ. ನಮ್ಮನ್ನು ನೋಡಿದರೆ ಕೆಂಡಕಾರುವಾಗೆ ಮುಖ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ನಿಮ್ಮ ಜೊತೆ ವ್ಯವಹಾರವೇ ಬೇಡ, ಕೊಟ್ಟಿರುವ ಹಣ ಈಗಲೇ ವಾಪಸ್ ಕೊಡಿ ಎನ್ನುತ್ತಿದ್ದಾರೆ ಇದರಿಂದ ನಮ್ಮ ಜನ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ, ಶಾಂತಿಸಭೆ ನಡೆಸುವ ಮುನ್ನವೇ, ಮೇಲ್ಜಾತಿಯ ಜನರೊಂದಿಗೆ ತಹಶೀಲ್ದಾರ್ ದೇವಾಲಯ ಪ್ರವೇಶದ ಕುರಿತು ಮಾತನಾಡಿದ್ದಾರೆ, ನೀವು ಒಪ್ಪಿದರು ಒಪ್ಪದೆ ಇದ್ದರೂ ಅವರು ಕಾನೂನು ಪ್ರಕಾರ ದೇವಸ್ಥಾನ ಪ್ರವೇಶ ಮಾಡೇ ಮಾಡುತ್ತಾರೆ. ಇಲ್ಲ ಎಂದು ಕೆಟ್ಟವರಾಗಬೇಡಿ ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ. ಒಲ್ಲದ ಮನಸ್ಸಿನಿಂದಲೇ ಮೇಲ್ಜಾತಿಯ ಜನರು ಪ್ರವೇಶಕ್ಕೆ ಯಾವುದೇ ತಕರಾರಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ನಟರಾಜ್ ಹೇಳಿದ್ದಾರೆ.
ಪ್ರತಿಧ್ವನಿ – ಗ್ರಾಮದಲ್ಲಿ ಅಘೋಷಿತ ಸಾಮಾಜಿಕ ಬಹಿಷ್ಕಾರ ವಾತಾವರಣ ನಿರ್ಮಾಣ ಆಗಿದೆ ಎಂದು ಎಲ್ಲಿಯಾದರು ದೂರು ನೀಡಿದ್ದೀರ?
ನಟರಾಜ್ – ಇಲ್ಲ ಸಧ್ಯಕ್ಕೆ ನಾವು ದೂರು ನೀಡಿಲ್ಲ, ಆದರೆ ಈ ಕುರಿತಾಗಿ ತಾಲೂಕು ತಾಶಿಲ್ದಾರ್ ಅವರಿಗೆ ಮೌಖಿಕವಾಗಿ ತಿಳಿಸಿದ್ದೇವೆ. ಮುಂದೆ ಇದೇ ರೀತಿ ಮುಂದುವರೆದರೆ ನಾವು ನಮ್ಮ ಸಂಘಟನೆಯ ಜೊತೆ ಮಾತಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮೌಢ್ಯ, ಅಸ್ಪೃಶ್ಯತೆ ಬಗ್ಗೆ ಜಾಗೃತಗೊಳಿಸಿದ ಸಂಘಟನೆಗಳು ಇವತ್ತು ನಮ್ಮನ್ನು ಕೈ ಬಿಟ್ಟಿವೆ – ಸಂತೋಷ್
ಗ್ರಾಮಪಂಚಾತಿ ಚುಣಾವಣೆ ವೇಳೆ ಎಸ್‌ಟಿ ಸಮುದಾಯಕ್ಕೇ ಮೀಸಲಾತಿ ಬಂದಿತ್ತು ಮತ್ತು ಈ ಎಸ್‌ಟಿ ಸಮುದಾಯಕ್ಕೆ ದೇಶಸ್ಥಾನ ಪ್ರವೇಶ ಇದೆ. ಎಸ್‌ಟಿ ಸಮುದಾಯಕ್ಕೆ ದೇಶಸ್ಥಾನ ಪ್ರವೇಶ ಸಿಗುವುದಾದರೆ ಎಸ್‌ಸಿ ಸಮುದಾಯಕ್ಕೆ ಯಾಕಿಲ್ಲ? ಎಂಬ ಅರಿವನ್ನು ಡಿಎಸ್‌ಎಸ್ ಜಿಲ್ಲಾ ಸಂಚಾಲಕರು ಮತ್ತು ಊರಿನ ನಿವಾಸಿಯಾಗಿರುವ ಗೋವಿಂದ ರಾಜ್ ಅವರು ಸಮುದಾಯಕ್ಕೆ ಮೂಡಿಸಿದ್ದರು. ಈ ಒಂದು ಹೇಳಿಕೆಗೆ ಇಡೀ ದಲಿತ ಸಮುದಾಯವೇ ಅವರ ಜೊತೆ ನಿಂತಿತ್ತು ಆದರೆ ಈಗ ಈ ಘಟನೆಯಿಂದಲೇ ಹಿಂದೆ ಸರಿದಿರುವುದು ಸಮುದಾಯಕ್ಕೆ ಬೇಸರ ತಂದಿದೆ ಎಂದು ಸಂತೋಷ್ ಹೇಳಿದ್ದಾರೆ.
ಜಾಗೃತಗೊಂಡ ಯುವ ಸಮೂಹ ಊರಿನಲ್ಲಿ ಆಗುತ್ತಿರುವ ಸಣ್ಣ ಪುಟ್ಟ ಶೋಷಣೆ, ತಾರತಮ್ಯ, ಅಸ್ಪೃಶ್ಯತೆ ಎಲ್ಲವನ್ನೂ ಗಂಭೀರವಾಗಿ ಗಮನಿಸಿದ್ದಾರೆ. ಮುಖ್ಯವಾಗಿ ದೇವಸ್ಥಾನದ ಜಾಗದಲ್ಲಿ ತಾರತಮ್ಯ, ಅಸ್ಪೃಶ್ಯತೆಯ ಆಚರಣೆ ಹೆಚ್ಚು ಆಗುತ್ತಿರುವ ಕುರಿತು ಗಮನಿಸಿದ ಯುವಕರು ದೇವಸ್ಥಾನಗಳಿಗೆ ಪೊಲೀಸರ ನೆರವಿನಿಂದ ಪ್ರವೇಶ ಮಾಡಲು ತೀರ್ಮಾನಿಸಿದ್ದಾರೆ. ನಂತರ ಊರಿನ ವಾತಾವರಣ ಬಿಗಡಾಯಿಸಿದಾಗ ದಲಿತರ ಪರ ನಿಲ್ಲಬೇಕಾದ ಹೋರಾಟಗಾರರು ನಮಗೂ ಈ ಘಟನೆಗೂ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಊರಿನ ನಿವಾಸಿ ಮತ್ತು ಶೋಷಣೆಗೊಂಡ ಸಂತೋಷ್ ಅವರು ಹೇಳಿದ್ದಾರೆ.(ದೇವಸ್ಥಾನ ಪ್ರವೇಶ ಮಾಡಲು ದಲಿತ ಸಮುದಾಯ ಡಿಎಸ್‌ಎಸ್ ಅನ್ನು ನೆರವು ಕೇಳಿತು ಎಂದು ಸಂತೋಷ್ ತಿಳಿಸಿದ್ದಾರೆ).
ಮುಂದುವರೆದು, ದಲಿತ ಸಂಘಟನೆಗಳು ಸಮಾನತೆ ಪರ ನಿಲ್ಲಬೇಕಾದವರು, ಅಸ್ಪೃಶ್ಯತೆ ವಿರುದ್ಧ ಮಾತಾಡಬೇಕಾದವರು ಆದರೆ ಇವತ್ತು ನಮ್ಮನ್ನು ಕೈಬಿಟ್ಟಿದ್ದಾರೆ. ಎಲ್ಲವನ್ನೂ ಹೇಳಿಕೊಟ್ಟು ಈಗ ನಮ್ಮನ್ನು ದೇವಸ್ಥಾನಕ್ಕೆ ಏಕೆ ಹೋದ್ರಿ ಎಂದು ನಮ್ಮನ್ನೆ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಗೋವಿಂದ ರಾಜು ಅವರಿಗೂ ನಮಗೂ ಯಾವುದೇ ಬೇಸರ ಕೋಪ ಇಲ್ಲ ಆದರೆ ಸಮುದಾಯ ಅವರನ್ನು ನಂಬಿತ್ತು ಆದರೆ ಮಾತಿನಂತೆ ಅವರು ನಡೆದುಕೊಳ್ಳಲಿಲ್ಲ. ಇದು ನಿಜಕ್ಕೂ ಬೇಸರದ ವಿಷಯ ಎಂದು ಸಂತೋಷ್ ಇದೇ ಸಂಧರ್ಭದಲ್ಲಿ ಹೇಳಿದ್ದಾರೆ.
ಪ್ರತಿಧ್ವನಿ – ಊರಲ್ಲಿ ಅಘೋಷಿತ ಸಾಮೂಹಿಕ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ ಎಂಬ ಮಾಹಿತಿ ಇದೆ ಈ ಕುರಿತು ನಿಮ್ಮ ಅಭಿಪ್ರಾಯ?
ಸಂತೋಷ್ – ಅಘೋಷಿತ ಸಮಾಜಿಕ ಬಹಿಷ್ಕಾರವೇ ಆಗಿದೆ ಎಂಬ ಕುರಿತು ನನಗೆ ಇನ್ನು ಅಧಿಕೃತ ಮಾಹಿತಿ ಬಂದಿಲ್ಲ. ಈತರ ಬೆಳವಣಿಗೆಯಾದರೆ ಕಾನೂನು ಮೂಲಕ ಉತ್ತರಿಸುತ್ತವೇ. ಹಿಂದೆ ನಮ್ಮ ಹಿರಿಯರು ಮೇಲ್ಜಾತಿಯ ಜನರ ಹಿಡಿತಕ್ಕೆ ಸಿಲುಕಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಲುಗಿದ್ದಾರೆ. ಸಾಲ , ಕೂಲಿ ,ಜೀತ ಅಂತ ಹತ್ತಾರು ವರ್ಷಗಳು ದುಡಿದಿದ್ದಾರೆ ಆದರೆ ನಾವು ಈ ಕಾಲದವರು ಸಮಾನತೆ ಬಯಸುವವರು, ಆರ್ಥಿಕವಾಗಿ ಸಾಮಾಜಿಕವಾಗಿ ಸ್ವಾತಂತ್ರರು ಹಾಗಾಗಿ ನಾವು ಜನರ ಈ ನಿಲುವನ್ನು ಒಪ್ಪಿಕೊಂಡು ಏನೇ ಆದರು ಸಹಿಸಿಕೊಳ್ಳುತ್ತೇವೆ ಆದರೆ ಸಮಾನತೆಯನ್ನು ಮರೆಯುವ ನಮ್ಮ ಹಕ್ಕುಗಳನ್ನು ಮಾರಿಕೊಂಡು ಬದುಕಲು ಇನ್ನೂ ಮುಂದೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಧ್ವನಿವೊಂದಿಗೆ ಮಾತಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಗೋವಿಂದ ರಾಜ್ ಅವರು, ನಾನು ಆ ಘಟನೆಯಿಂದ ಹೊರಗುಳಿದಿದ್ದೇನೆ. ನಾನು ಸಾಮಾಜಿಕ ಹೋರಾಟ, ಅಂಬೇಡ್ಕರ್ ಚಿಂತನೆ ಮತ್ತು ಮಾತುಗಳನ್ನು ಊರಿನ ಜನರಿಗೆ ತಿಳಿಸಿದ್ದೆ ಆದರೆ ಈ ಘಟನೆಯಲ್ಲಿ ನಾನು ಪಾಲ್ಗೊಂಡಿಲ್ಲ ಎಂದು ಹೇಳಿದ್ದಾರೆ.
ಪ್ರತಿಧ್ವನಿ– ಊರಿನ ದಲಿತ ಜನರನ್ನು ಅಘೋಷಿತ ಸಾಮಾಜಿಕ ಬಹಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ ಈ ಕುರಿತು ನಿಮ್ಮ ಅಭಿಪ್ರಾಯ?
ಗೋವಿಂದ ರಾಜು – ಆತರದ ಪ್ಲಾನ್ ಇರಬಹುದು ಆದರೆ ಯಾವುದೇ ಅಧಿಕೃತ ಘೋಷಣೆ ಅವರಿಂದ ಆಗಿಲ್ಲ. ಅಲ್ಲಿ ಇಲ್ಲಿ ಸಾಮಾಜಿಕ ಬಹಿಷ್ಕಾರದ ಮಾತು ಕೇಳಿ ಬರುತ್ತಿದೆ ಆದರೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಬಂದರೆ ಮುಂದಿನ ಕ್ರಮ ಕೈಗೊಳ್ಳಬಹುದು. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪ್ರತಿಧ್ವನಿ – ದೇವಸ್ಥಾನದ ಪ್ರವೇಶ ಮಾಡಿದ ದಲಿತ ಜನರ ಮೇಲೆ ನಿಮ್ಮ ಬೆಂಬಲ ಇದೆಯೇ?
ಗೋವಿಂದ ರಾಜು – ನಾನು ಈ ಘಟನೆಯಿಂದ ದೂರ ಉಳಿದಿದ್ದೇನೆ. ದೇವಸ್ಥಾನದಲ್ಲಿ ಅಜ್ಞಾನ, ಮೌಢ್ಯ ಇರುತ್ತದೆ ಅಂಬೇಡ್ಕರ್ ಕೂಡ ಒಂದು ಗ್ರಾಮದಲ್ಲಿ ಶಾಲೆಯ ಗಂಟೆಗಿನ್ನ ದೇವಾಲಯದ ಗಂಟೆ ಹೆಚ್ಚು ಕೇಳಿಸಿದರೆ ಅದು ಮೌಢ್ಯದ ಸಂಕೇತ ಎಂದು ಹೇಳಿದ್ದಾರೆ. ಇದನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಪ್ರತಿಧ್ವಿನಿ – ಮೌಢ್ಯದ ವಿರುದ್ದ ನೀವು ಬಿತ್ತಿದ ಬೀಜದಿಂದ ಜನರು ಕ್ರಾಂತಿಕಾರಿ ಹೆಜ್ಜೆ ಹಿಟ್ಟಿದ್ದಾರೆ. ಆದರೆ ಸಮುದಾಯವನ್ನು ಬೆಂಬಲಿಸದೆ ಈ ಘಟನೆಯಿಂದಲೇ ಹಿಂದೆ ಸರಿದದ್ದು ಯಾಕೆ?
ಗೋವಿಂದ ರಾಜು – ನಾನು ಸಾಮಾಜಿಕ ಹೋರಾಟ, ಅಂಬೇಡ್ಕರ್ ಚಿಂತನೆ ಮತ್ತು ಮಾತುಗಳನ್ನು ಊರಿನ ಜನರಿಗೆ ತಿಳಿಸಿದ್ದೆ ಆದರೆ ಈ ಪ್ರಕರಣಕ್ಕು ನನಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಮಾತನ್ನು ಧಿಕ್ಕರಿಸಿ ದೇವಾಲಕ್ಕೆ ಹೋದ ಯುವಕರು ನಮ್ಮ ಜೊತೆ ಮಾತನಾಡುತ್ತಿಲ್ಲ. ಆದರೆ ಸಮುದಾಯಕ್ಕೆ ತೊಂದರೆ ಬಂದರೆ ನಾವು ಅವರ ಜೊತೆ ನಿಲ್ಲುತ್ತೇವೆ. ನಾನು ಈತರದ ಘಟನೆಯ ಹಿಂದೆ ಭಾಗಿಯಾಗಬೇಕು ಎಂದರೆ ರಾಜ್ಯ ಡಿಎಸ್‌ಎಸ್ ಸಂಘಟನೆಗೆ ತಿಳಿಸಬೇಕು ಇಲ್ಲವೇ ನನ್ನನ್ನು ಪ್ರಶ್ನೆ ಮಾಡುತ್ತಾರೆ. ಮತ್ತು ದೇವಸ್ಥಾನಕ್ಕೆ ಹೋಗುವುದರಿಂದ ಜಾತಿ ವಿನಾಶ ಆಗುತ್ತದೆ ಎಂದರೆ ನಾನು ಅದನ್ನು ನಂಬುವುದಿಲ್ಲ.
ಊರಿನ ಜನರೆಲ್ಲರೂ ನಾವು ಒಟ್ಟಿಗೆ ಇದ್ದೆವು. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಆದರೆ ಈ 21ನೇ ಶತಮಾನದಲ್ಲಿ ಈತರದ ನಡೆ ಬೇಕಾಗಿತ್ತ ಎಂದು ಪ್ರಶ್ನಿಸಿದರು. ಇನ್ನೊಂದಷ್ಟು ದಿನ ಕಾದಿದರೆ ಒಕ್ಕಲಿಗ ಸಮುದಾಯವೇ ನಮ್ಮನ್ನು (ದಲಿತರನ್ನು) ದೇವಸ್ಥಾನ ಒಳಗೆ ಬನ್ನಿ ಎಂದು ಕರೆಯುತ್ತಿದ್ದರೊ ಏನೊ.? ಈತರದ ನಡೆಯಿಂದ ಬದಲಾವಣೆ ಆಗಲ್ಲ. ಇದನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಬೇಕು ನಂತರ ಕಾನೂನು ಮೂಲಕ ಗೆಲ್ಲಬೇಕು ಈತರದ ನಡೆಯಿಂದ ಬದಲಾವಣೆ ಆಗಲ್ಲ ಹಾಗಾಗಿ ನಾನು ಈ ಘಟನೆಯಲ್ಲಿ ಭಾಗಿಯಾಗಿಲ್ಲ ಮತ್ತು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಚನ್ನರಾಯಪಟ್ಟಣ ತಹಶಿಲ್ದಾರ್ ಮಾರುತಿ ಅವರ ಪ್ರತಿಕ್ರಿಯೆ
ಅಘೋಷಿತ ಸಾಮಾಜಿಕ ಬಹಿಷ್ಕಾರ ಮತ್ತು ಊರಿನ ಪ್ರಸ್ತುತ ವಾತಾವರಣದ ಬಗ್ಗೆ ಚನ್ನರಾಯಪಟ್ಟಣ ತಹಶಿಲ್ದಾರ್ ಮಾರುತಿ ಅವರನ್ನು ಪ್ರತಿಧ್ವನಿ ಸಂಪರ್ಕಿಸಿದಾಗ, ಶಾಂತಿ ಸಭೆಯಲ್ಲಿ ದೇವಸ್ಥಾನ ಪ್ರವೇಶ ಮಾಡಿದಾಗ ನಮಗೆ ಸವರ್ಣಿಯರಿಂದ ಯಾವುದೇ ಸಮಸ್ಯ ಆಗಿಲ್ಲ ಎಂದು ಹೇಳಿದ್ದಾರೆ. ಸವರ್ಣಿಯರು ಕೂಡ ದೇವಾಲಯ ಒಳಗೆ ಪ್ರವೇಶ ಮಾಡಲು ನಮಗೆ ಯಾವುದೇ ತಕರಾರು ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಯಾವುದೇ ಸಮಸ್ಯ ಇಲ್ಲ ಎಂದು ತಿಳಿದುಬಂದಿದೆ. ಪೋಲಿಸ್ ವಾಹನವನ್ನು ಕೂಡ ಊರಿನಲ್ಲಿ ಹಾಕಲಾಗಿದೆ. ಪ್ರತಿ ಮನೆಗೆ ಭೇಟಿ ನೀಡಿ ಸಮಸ್ಯೆ ಏನಾದರು ಇದೆಯೇ ಎಂದು ಕೇಳಲಾಗಿದೆ. ಸವರ್ಣಿಯರು ಕೂಡ ಭೇಟಿ ಮಾಡಿ ನಿಮ್ಮ ನಡುವೇ ಗುಸುಗುಸು ಪಿಸುಪಿಸು ಏನಾದರು ಇದೆಯೇ ಎಂದು ಕೇಳಿದ್ದೇವೆ ಯಾವುದು ಇಲ್ಲ ಎಂದು ಹೇಳಿದ್ದಾರೆ ಎಂದು ಪ್ರತಿಧ್ವನಿಗೆ ತಿಳಿಸಿದ್ದಾರೆ.
ಮುಂದುವರೆದು, ಪರಿಸ್ಥಿತಿ ಬಗ್ಗೆ ಡಿಸಿಗೆ ವಿಷಯ ತಿಳಿಸಲಾಗಿದೆ. ಅಘೋಷಿತ ಸಾಮಾಜಿಕ ಬಹಿಷ್ಕಾರ ಬಗ್ಗೆ ಮತ್ತು ಕೆಲಸ ಕೊಡುತ್ತಿಲ್ಲ ಎನ್ನುವುದು ಕಂಡು ಬಂದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಶಾಂತಿ ಸುವ್ಯವಸ್ಥೆ ಹತೋಟಿಯಲ್ಲಿದೆ. ಯಥಾಸ್ಥಿತಿ ಮುಂದುವರೆಯಲು ಬಿಟ್ಟಿದ್ದೇವೆ. ಏನಾದರು ಸಮಸ್ಯೆ ಕಂಡು ಬಂದರೆ ನಾವು ನೇರವಾಗಿ ಹೋಗಿ ಕ್ರಮ ಕೈಗೊಳ್ಳುತ್ತೇವೆ. ದೇವಸ್ಥಾನವನ್ನು ಪ್ರವೇಶಿಸುವ ಮಾಡುವುದು ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ಮನಸ್ಸುಗಳು, ಮನಸ್ಸುಗಳು ಮುರಿಯದಂತೆ ಒಗ್ಗಟಿನಿಂದ ಮುಂದುವರೆಯಲು ಏನು ಮಾಡಬೇಕೊ ಅದೆಲ್ಲವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ರಿಸರ್ವ್ ಪೋಲಿಸರನ್ನು ಊರಿನಿಂದ ತೆರವುಗೊಳಿಸುವ ವಾತಾವರಣ ಇನ್ನೂ ಕಂಡುಬಂದಿಲ್ಲ ಆದರೆ ಶಾಂತಿ ಸುವ್ಯವಸ್ಥೆ ಹತೋಟಿಯಲ್ಲಿದೆ ಎಂದು ಹೇಳಿದ್ದಾರೆ.
ಊರಿನ ಮುಖಂಡ ಶಿವಲಿಂಗೇಗೌಡ ಅವರ ಪ್ರತಿಕ್ರಿಯೆ
ಈ ಕುರಿತು ಮೇಲ್ಜಾತಿಯ ಹಿರಿಯ ಮುಖಂಡ ಶಿವಲಿಂಗೇಗೌಡ ಅವರು ಪ್ರತಿಧ್ವನಿಯೊಂದಿಗೆ ಮಾತನಾಡಿದ್ದು, ಒಂದು ಕೊಡದ ನೀರು ಕಲಕಿದಾಗ ತಿಳಿಯಾಗಲು ಕೆಲ ಸಮಯ ಬೇಕು ಈ ಘಟನೆಯೂ ಅದೇ ರೀತಿಯಾಗಿದೆ. ಶಾಂತಿ ಸಭೆ ಮಾಡಿ ಸಮಸ್ಯೆಯನ್ನು ತಿಳಿಯಾಗಿಸಿದ್ದೇವೆ. ಈ ರೀತಿಯ ಯಾವುದೇ ಸಮಸ್ಯೆ ನಮಗೆ ಕಂಡು ಬಂದಿಲ್ಲ.
ಗಾಸಿಪ್ ಮಾತುಗಳು ಬರುತ್ತವೆ ಆದರೆ ಅದೇ ಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಶಾಂತಿ ಕದಡುವ ವಾತಾವರಣ ಸೃಷ್ಟಿಯಾಗಲು ಬಿಡುವುದಿಲ್ಲ. ಈಗ ಕಾಲ ಬದಲಾಗಿದೆ ಎಲ್ಲರೂ ಒಗ್ಗಟ್ಟಿನಿಂದ ಮುಂದುವರೆಯಬೇಕು. ಕಗ್ಗಂಟು ಮಾಡಿಕೊಂಡು ಮುಂದುವರೆಯಲು ತಯಾರಿಲ್ಲ. ಮನಸ್ಸಿಗೆ ನೋವಾಗಿದೆ ಆದರೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಯಾರು ಸಿದ್ದರಿಲ್ಲ. ಯಾರೇ ಈತರದ ಕೃತ್ಯಕ್ಕೆ ಕೈಹಾಕಿದ್ದೆ ಆದರೆ ಅದಕ್ಕೆ ಅವರವರೇ ಹೊಣೆ ಎಂದು ಈಗಾಗಲೇ ಹೇಳಾಗಿದೆ. ಸದ್ಯಕ್ಕೆ ವ್ಯವಸ್ಥೆ ತಿಳಿಯಾಗಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಊರಿನ ದಲಿತ ಸಮುದಾಯಕ್ಕೆ ಸಮಾನವಾದ ಹಕ್ಕು ಬೇಕಾಗಿದೆ ಈ ನಿಟ್ಟಿನಲ್ಲಿ ಸಮಾಜಕಲ್ಯಾಣ ಇಲಾಖೆ ಕೆಲಸ ಮಾಡಬೇಕಿದೆ. ಸಂಭಂದ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಉಗ್ರಾಮದ ಪರಿಸ್ಥತಿಯನ್ನು ತಿಳಿಗೊಳಿಸಬೇಕು ಎಂದು ನಟರಾಜ್ ಮತ್ತು ಸಂತೋಷ್ ಅವರು ಪ್ರತಿಧ್ವನಿ ಮೂಲಕ ಕೇಳಿಕೊಂಡಿದ್ದಾರೆ.
ಪ್ರಕರಣದ ಹಿಂದಿನ ಕತೆ
ಕಳೆದ 8 ತಿಂಗಳ ಹಿಂದೆ ರಂಗಭೂಮಿ ಕಲಾವಿದ, ದಿಂಡಗೂರಿನ ಮಕ್ಕಳಿಗೆ ನಾಟಕಗಳನ್ನು ಕಲಿಸುತ್ತಿದ್ದ ನೀನಾಸಂನ ಸಂತೋಷ್ ದಿಂಡಗೂರಿನ ಹೋಟೆಲೊಂದಕ್ಕೆ ತೆರಳಿದ್ದಾರೆ. ಆದರೆ, ಜಾತಿ ಕಾರಣಕ್ಕೆ ಅವರಿಗೆ ಹೊಟೇಲ್ ಪ್ರವೇಶ ನಿರಾಕರಿಸಲಾಗಿದೆ. ಇದರಿಂದ ಅವಮಾನಕ್ಕೆ ಒಳಗಾದ ಅವರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಅವರಿಗೆ ನ್ಯಾಯ ಸಿಗದ ಹಿನ್ನೆಲೆ ಮೊದಲು ಡಿಎಸ್‌ಎಸ್ ಸಂಘಟನೆ ನೇತೃತ್ವದಲ್ಲಿ ದೇವಸ್ಥಾನ ಪ್ರವೇಶ ಮಾಡಲು ಕೇಳಿಕೊಂಡಿದ್ದಾರೆ ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಭೀಮ್ ಆರ್ಮಿ ಸಂಘಟನೆಯನ್ನು ಸಂಪರ್ಕಿಸಿದ ಅವರು ಊರಿಗೆ ಜನರೊಟ್ಟಿಗೆ ಸೇರಿ ಅಸ್ಪೃಶ್ಯತೆ ನಿವಾರಣೆ ಮಾಡಬೇಕು ಎನ್ನುವ ಕಾರಣಕ್ಕೆ ದೇವಾಲಯ ಪ್ರವೇಶಿಸಲು ನಿರ್ಧರಿಸಿದೆ. ಕಳೆದ ವಾರ (ಸೆಪ್ಟೆಂಬರ್ 19 2021ಕ್ಕೆ) ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು, ಹೊಟೇಲ್ ಪ್ರವೇಶ ನಿರಾಕರಣೆಯನ್ನು ಉಲ್ಲೇಖಿಸಿ, ಅನಧಿಕೃತವಾಗಿ ಹೋಟೆಲ್ ಹಾಕಿರುವುದರಿಂದ ತೆರವುಗೊಳಿಸಿ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ತಾವು ದೇವಾಲಯ ಪ್ರವೇಶಿಸುತ್ತಿರುವುದಾಗಿಯೂ ತಮಗೆ ರಕ್ಷಣೆ ನೀಡಬೇಕು ಎಂದು ತಹಶೀಲ್ದಾರ್, ಪೊಲೀಸ್ ಅಧಿಕಾರಿ, ಮುಜರಾಯಿ ಇಲಾಖೆ, ಸಮಾಜಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಇದಾಗಿ ಒಂದು ವಾರಕ್ಕೆ ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ಶಾಂತಿಸಭೆ ಮಾಡಲು ಬಂದಿದ್ದರು. ಆದರೆ, ಮೇಲ್ಜಾತಿ ಜನರು ಯಾರು ಬರದ ಕಾರಣ ಸಭೆ ನಡೆದಿರಲಿಲ್ಲ. ಮತ್ತೆ ಮುಂದಿನ ವಾರ ಸಭೆ ನಡೆಸುವುದಾಗಿ ತಿಳಿಸಿದ್ದರು. ಇದರ ಪ್ರಕಾರ ಮಂಗಳವಾರ (ಸೆ.28) ರಂದು ಎರಡು ಸಮುದಾಯದ ಜನರ ನಡುವೆ ಶಾಂತಿಸಭೆ ನಡೆಸಿ, ಜಿಲ್ಲಾಡಳಿತ, ಪೊಲೀಸರ ಸಮ್ಮುಖದಲ್ಲಿ ದಲಿತರು ಗ್ರಾಮದೇವತೆ ಸತ್ಯಮ್ಮ, ಕೇಶವಸ್ವಾಮಿ ದೇವಾಲಯ, ಮಲ್ಲೇಶ್ವರ ದೇವಾಲಯ, ಬಸವಣ್ಣ ದೇವಾಲಯ ಸೇರಿದಂತೆ ಗ್ರಾಮದಲ್ಲಿನ ದೇವಾಲಯಗಳಿಗೆ ಪ್ರವೇಶಿಸಿ, ಪೂಜೆ ಸಲ್ಲಿಸಿದ್ದಾರೆ.
ರಂಗಕರ್ಮಿ ಸಂತೋಷ್ ಅನ್ನು ಜಾತಿ ಕಾರಣದಿಂದ ಹೋಟೆಲ್ ಒಳಗೆ ಸೇರಿಸಿಕೊಳ್ಳದ ಪರಿಣಾಮ ಮತ್ತು ಅನಧಿಕೃತ ಜಾಗದಲ್ಲಿ ಹೋಟೆಲ್ ಹಾಕಿರುವ ಪರಿಣಾಮ ಚನ್ನರಾಯಪಟ್ಟಣದ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾಹಕರು ಸ್ಥಳೀಯ ಪಿಡಿಒ ಗೆ ನೋಟಿಸ್ ನೀಡಿದ್ದು, ಅನಧಿಕೃತವಾಗಿ ಅಂಗಡಿ ಹಾಕಿದ್ದು ಆ ಜಾಗದಲ್ಲಿ ಮತೀಯ ಮತ್ತು ಇತರೆ ಗಲಭೆ ಜರುಗುತ್ತಿದ್ದು ಶೀಘ್ರದಲ್ಲೇ ಅಂಗಡಿಯನ್ನು ತೆರವುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.
ಜಾತಿ ಶ್ರೇಷ್ಠತೆ ಈ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಸನ
ಇದು ಭಾರತೀಯ ಸಮಾಜದ ಜಾತಿ ಶ್ರೇಷ್ಠತೆಯ ವ್ಯಸನದ ಒಂದು ಪ್ರಾತ್ಯಕ್ಷಿಕೆ. ಇಲ್ಲಿ ಜಾತಿ ಪ್ರಜ್ಞೆ ಗಟ್ಟಿಯಾಗುತ್ತಿರುವಂತೆಯೇ ಶ್ರೇಷ್ಠತೆಯ ವ್ಯಸನವೂ ಗಟ್ಟಿಯಾಗುತ್ತಿದೆ. ಹಾಗೆಯೇ ಮಾನವ ಸಂವೇದನೆಯೂ ಶಿಥಿಲವಾಗುತ್ತಿದೆ. ದಲಿತರ ಮೇಲೆ ನಡೆಯುವ ದೌರ್ಜನ್ಯ, ಕ್ರೌರ್ಯ ಸಂಸತ್ತಿನ ಕಡತಗಳಲ್ಲಿ ವರ್ಷಾನುಗಟ್ಟಲೆ ನ್ಯಾಯಕ್ಕಾಗಿ ಹಾತೊರೆಯುತ್ತಾ ಧೂಳು ತಿನ್ನುವ ಹಾಳೆಗಳಾಗಿ ಪರ್ಯವಸಾನಗೊಳ್ಳುತ್ತವೆ.
ಈ ಜಾತಿ ತಾರತಮ್ಯ, ದೌರ್ಜನ್ಯಗಳನ್ನು ಮತಭೇದವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ಯೋಚಿಸಬೇಕು. ದಲಿತರ ಮೇಲೆ ದೌರ್ಜನ್ಯ ಎಸಗುತ್ತಿರುವ ಯಾವುದೇ ಸಮುದಾಯ ಜಾತಿ ಶ್ರೇಷ್ಠತೆಯ ಅಹಮಿನಿಂದಲೇ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲ ಯತ್ನಿಸುತ್ತದೆ. ಶೋಷಿತರನ್ನು, ದುರ್ಬಲರನ್ನು, ಅಸಹಾಯಕರನ್ನು ನಿಯಂತ್ರಣದಲ್ಲಿರಿಸಲು ಈ ಸಮುದಾಯಗಳಿಗೆ ಸಾಮಾಜಿಕ ಸ್ಥಾನಮಾನಗಳು ಭೌತಿಕವಾಗಿ ನೆರವಾದರೆ, ಬ್ರಾಹ್ಮಣ್ಯ ಎನ್ನಲಾಗುವ ಸಾಂಪ್ರದಾಯಿಕ ಮನಸ್ಥಿತಿ ಒಂದು ಬೌದ್ಧಿಕ ಅಸ್ತ್ರವಾಗುತ್ತದೆ. ಹಾಗಾಗಿಯೇ ಇಂದು ದಲಿತರ ಮೇಲಿನ ದೌರ್ಜನ್ಯಗಳು ಎಲ್ಲ ಸ್ತರಗಳಲ್ಲೂ ನಡೆಯುತ್ತಿದೆ. ಇದು ಭಾರತವನ್ನು ಕಾಡುತ್ತಿರುವ ಒಂದು ಸಾಮಾಜಿಕ ವ್ಯಾಧಿ. ಸಾಮುದಾಯಿಕ ನೆಲೆಯಲ್ಲಿ ಮಾತ್ರವೇ ಇದನ್ನು ನಿಷ್ಕರ್ಷೆಗೊಳಪಡಿಸುವುದರಿಂದ ನಾವು, ಶೋಷಣೆಯ ಮೂಲದಿಂದ ವಿಮುಖರಾಗುತ್ತೇವೆ. ಶ್ರೇಷ್ಠತೆ ಎನ್ನುವುದು ಒಂದು ವ್ಯಸನ, ಶೋಷಕ ಮನಸ್ಥಿತಿ ನಮ್ಮನ್ನು ಕಾಡುತ್ತಿರುವ ವ್ಯಾಧಿ. ಇದರ ಮೂಲ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲೇ ಅಡಗಿದೆ. ಜನರ ಮನಸ್ಥಿತಿಯಲ್ಲಿ ಅಡಗಿದೆ, ಮನೋಭಾವದಲ್ಲಿ ಅಡಗಿದೆ ಮತ್ತು ಸಾರ್ವಜನಿಕ ಧೋರಣೆಯಲ್ಲಿ ಅಡಗಿದೆ.
ತಮ್ಮ ಜಾತಿಯ ಬಗ್ಗೆ ಹೆಮ್ಮೆ ಪಡುವ ಹಕ್ಕು ಯಾರಿಗಾದರು ಇದ್ದರೆ ಅದು ದಲಿತರಿಗೆ ಮಾತ್ರ ಅನ್ನಿಸುತ್ತದೆ? ಶತಮಾನಗಳ ಅಮಾನುಷ ದೌರ್ಜನ್ಯವನ್ನು ಮೀರಿ ನಿಂತು ಗೌರವಯುತ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ದಮನಿತ ಜಾತಿಗಳವರಿಗೆ ಮಾತ್ರ ತಮ್ಮ ಹೋರಾಟದ ಹಾದಿಯ ಬಗ್ಗೆ ಹೆಮ್ಮೆ ಪಡುವ ಹಕ್ಕಿದೆ. ಜಾತಿ ಪದ್ಧತಿಯ ಮೇಲಿನ ಹಂತದಲ್ಲಿರುವ ಉಳಿದೆಲ್ಲಾ ಜಾತಿಗಳು ಹೆಚ್ಚೆಂದರೆ ತಮ್ಮ ಜಾತಿಯ ಬಗ್ಗೆ ನಾಚಿಕೆಪಡದಿರಲು ಯತ್ನಿಸಬಹುದಷ್ಟೇ. ವಿಪರ್ಯಾಸವೆಂದರೆ, ಇದಕ್ಕೆ ತದ್ವಿರುದ್ಧವಾಗಿ ಮೇಲ್ವರ್ಗ ಎಂದು ಕರೆಸಿಕೊಳ್ಳುವವರು ಇಂದಿಗೂ ತಮ್ಮ ಜಾತಿಯನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ.
ದಲಿತ ವರ್ಗದ ಒಟ್ಟು ಸಂಖ್ಯೆ ರಾಜ್ಯದ ರಾಜಕೀಯವನ್ನು ಬದಲಿಸಬಲ್ಲಷ್ಟು ದೊಡ್ಡದಿದೆ. ಅದನ್ನು ಆಧರಿಸಿ ಮೀಸಲು ಕ್ಷೇತ್ರಗಳೂ ಇವೆ. ಇಷ್ಟಿದ್ದೂ ಇಂದಿಗೂ, ರಾಜಕೀಯದ ಪ್ರಮುಖ ಸ್ಥಾನಗಳನ್ನುಅಲಂಕರಿಸಿರುವವರು ಬಹುತೇಕ ಹಿಂದು ಮೇಲ್ವರ್ಗದವರು.
ಜಾತಿ ಶ್ರೇಷ್ಠತೆ ಈ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಸನ. ಶೋಷಣೆ , ದೌರ್ಜನ್ಯ ಮತ್ತು ತಾರತಮ್ಯ ಈ ದೇಶದ ಊಳಿಗಮಾನ್ಯ-ಪುರುಷ ಪ್ರಧಾನ ಧೋರಣೆಯ ದ್ಯೋತಕ. ಈ ಎರಡರ ಸಮ್ಮಿಲನವನ್ನು ಇಂದಿನ ಸಮಾಜ ರಾಜಕೀಯ ವ್ಯವಸ್ಥೆಯ ಚೌಕಟ್ಟಿನಲ್ಲಿ ಕಾಣುತ್ತಿದ್ದೇವೆ. ಈ ಎರಡೂ ಅನಿಷ್ಟಗಳ ವಿರುದ್ಧ ಹೋರಾಡುವುದು ಸಂವೇದನಾಶೀಲ ಮನಸುಗಳ ಆದ್ಯತೆಯಾಗಬೇಕಿದೆ. ಸಾಂಸ್ಕೃತಿಕ ದೌರ್ಜನ್ಯ, ಆರ್ಥಿಕ ತಾರತಮ್ಯ ಮತ್ತು ಜಾತಿ ಶೋಷಣೆ ಈ ಮೂರೂ ವಿದ್ಯಮಾನಗಳ ವಿರುದ್ಧ ಹೋರಾಡುವ ಒಂದು ಸಂಘಟನಾತ್ಮಕ ಪ್ರಯತ್ನ ಇಂದಿನ ತುರ್ತು. ಇದು ಸೈದ್ಧಾಂತಿಕ ನೆಲೆಯ ವಿಘಟನೆಗಳಿಂದ ಸಾಧ್ಯವಾಗುವುದಿಲ್ಲ. ಬೌದ್ಧಿಕ ನೆಲೆಯ ಸಂಘಟನೆಯ ಮೂಲಕ ಸಾಧ್ಯ. ಈ ನಿಟ್ಟಿನಲ್ಲಿ ಯೋಚಿಸೋಣವೇ?