ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಲು ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ನಡುವೆ ಭಾರೀ ದೊಡ್ಡ ಪ್ರಮಾಣದಲ್ಲಿ ಪೈಪೋಟಿ ಏರ್ಪಟ್ಟಿತ್ತು. ದೆಹಲಿಯಲ್ಲಿ ಇಬ್ಬರೂ ನಾಯಕರು ಮೊಕ್ಕಾಂ ಹೂಡಿ, ಹೈಕಮಾಂಡ್ ನಾಯಕರ ಜೊತೆಗೆ ಸತತ ಸಭೆಗಳನ್ನು ಮಾಡುವ ಮೂಲಕ ಅಧಿಕಾರ ಹಿಡಿಯದೆ ವಿರೋಧ ಪಕ್ಷಗಳ ಟೀಕೆಗೂ ಕಾರಣವಾಗಿದ್ದರು. ಕೊನೆಗೆ ಹೈಕಮಾಮಡ್ ರೂಪಿಸಿದ ಸೂತ್ರಕ್ಕೆ ಒಪ್ಪಿಗೆ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದು, ನಾನು ಉಪಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಧ್ಯಮಗಳ ಎದುರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆ ಬಳಿಕ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗಲಿದ್ದು, ಆ ಬಳಿಕ ಉಳಿಕೆ ಎರಡೂವರೆ ವರ್ಷಗಳ ಕಾಲ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಸುಳಿವನ್ನು ಡಿಕೆ ಶಿವಕುಮಾರ್ ಆಪ್ತರು ಮಾಹಿತಿ ನೀಡಿದ್ದರು. ಆದರೀಗ ಉಲ್ಟಾ ಹೊಡೆದಂತೆ ಕಾಣಿಸುತ್ತಿದೆ.
ಮುಂದಿನ ಐದು ವರ್ಷಕ್ಕೂ ಸಿದ್ದರಾಮಯ್ಯ ಸಿಎಂ..!
ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಲಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಕಿಚ್ಚು ಹಚ್ಚಿದ್ದಾರೆ. ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದಿರುವ ಎಂಬಿ ಪಾಟೀಲ್, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಕನಸಿಗೆ ತಣ್ನೀರು ಸುರಿದಂತಾಗಿದೆ. ಸೋಮವಾರ ಸಂಜೆ ಮೈಸೂರಿನ ಸುತ್ತೂರು ಮಠದ ಬಳಿ ಮಾತನಾಡಿದ ಎಂ.ಬಿ ಪಾಟೀಲ್, ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಬಗ್ಗೆ ಎಐಸಿಸಿ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಮುಂದಿನ ಐದು ವರ್ಷವೂ ಸಿಎಂ ಆಗಿರಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.
ಒಂದೇ ಡಿಸಿಎಂ ಘೋಷಣೆಗೆ ಡಿಕೆಶಿ ಪಟ್ಟು.. ಎಂಬಿ ಪಾಟೀಲ್ ಸಿಟ್ಟು..!
ರಾಜ್ಯ ಸರ್ಕಾರದಲ್ಲಿ ಡಿಸಿಎಂ ಪೋಸ್ಟ್ಗೆ ಯಾವುದೇ ಮಾನ್ಯತೆ ಇಲ್ಲ. ಆದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಸಿಎಂ ಹಾಗು ಡಿಸಿಎಂ ಇಬ್ಬರೂ ಒಟ್ಟಿಗೆ ಸೇರಿ ನಿರ್ಧಾರ ತೆಗೆದುಕೊಳ್ಳುವುದು ನಡೆದುಕೊಂಡು ಬಂದಿರುವ ರೂಢಿ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಜೊತೆಗೆ ಅಧಿಕಾರ ಹಂಚಿಕೆಯಲ್ಲಿ ಪೈಪೋಟಿ ನಡೆಸಿದ್ದ ಡಿ.ಕೆ ಶಿವಕುಮಾರ್, ಒಂದೇ ಡಿಸಿಎಂ ಹುದ್ದೆ ಎಂದು ಹೈಕಮಾಂಡ್ ನಾಯಕರ ಬಾಯಲ್ಲೇ ಘೋಷಣೆ ಮಾಡಿಸಿದ್ದರು. ಇಲ್ಲದಿದ್ದರೆ ಡಿ.ಕೆ ಶಿವಕುಮಾರ್ಗೆ ಸರಿಸಮಾನವಾಗಿ ಇನ್ನೂ ಇಬ್ಬರನ್ನು ಡಿಸಿಎಂ ಮಾಡಲು ಸಿದ್ದರಾಮಯ್ಯ ಮನಸ್ಸು ಮಾಡಿದ್ದರು ಎನ್ನಲಾಗಿದೆ. ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್ನಲ್ಲಿ ನಾನೇ ಎರಡನೇ ನಾಯಕ ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ಒಂದೇ ಡಿಸಿಎಂ ಹುದ್ದೆಗೆ ಹಠ ಹಿಡಿದು ಯಶಸ್ವಿಯಾಗಿದ್ದ ಎಂಬಿ ಪಾಟೀಲ್ ಸಿಟ್ಟಾಗಿದ್ದು, ಸುಲಭವಾಗಿ ಸಿಗುತ್ತಿದ್ದ ಡಿಸಿಎಂ ಕೈ ತಪ್ಪಿಸಿದ ಸಿಟ್ಟನ್ನು ಈ ರೀತಿ ತೀರಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಎರಡೂವರೆ ವರ್ಷ ಇನ್ನೂ ದೂರ.. ಡಿಕೆಶಿ ಕನಸೂ ದೂರ..!
ಎರಡೂವರೆ ವರ್ಷಗಳ ಕಾಲ ಇನ್ನೂ ಬಹಳ ದೂರವಿದೆ. ಅಷ್ಟರಲ್ಲಿ ಏನು ಬೇಕಿದ್ದರೂ ಆಗಬಹುದು ಎನ್ನುವುದು ಸಿದ್ದರಾಮಯ್ಯ ಆಪ್ತರು ನೀಡುವ ಮಾಹಿತಿ. ಸಿದ್ದರಾಮಯ್ಯ ಜೊತೆಗೆ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದಿರುವ ಕನಕಪುರ ಬಂಡೆ ಮೇಲೆ ಹತ್ತಾರು ಕೇಸ್ಗಳಿದ್ದು, ಈಗಾಗಲೇ ಒಮ್ಮೆ ಜೈಲಿಗೂ ಹೋಗಿ ಬಂದಿದ್ದಾರೆ. ಜಾಮೀನು ಪಡೆದು ರಾಜಕೀಯ ಮಾಡುತ್ತಿರುವ ಡಿ.ಕೆ ಶಿವಕುಮಾರ್ಗೆ ಯಾವಾಗ ಬೇಕಿದ್ದರೂ ಕಾನೂನು ಸಂಕಷ್ಟ ಎದುರಾಗಬಹುದು. ಒಂದು ವೇಳೆ ಎರಡೂ ವರ್ಷಕ್ಕೂ ಮುನ್ನವೇ ಕಾನೂನು ಸಂಕಷ್ಟ ಎದುರಾದರೆ ಮುಖ್ಯಮಂತ್ರಿ ಆಗುವುದು ಇರಲಿ, ಇರುವ ಡಿಸಿಎಂ ಸ್ಥಾನಕ್ಕೂ ಕೊಕ್ಕೆ ಬೀಳುತ್ತದೆ. ಇನ್ನೆಲ್ಲಿಂದ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ಸಿದ್ದರಾಮಯ್ಯ ಆಪ್ತರ ಪ್ರಶ್ನೆ. ಇದೀಗ ಕ್ಯಾಬಿನೆಟ್ ಸೇರುವ ಸಚಿವರ ಪಟ್ಟಿಗೆ ಗುದ್ದಾಡಬೇಕಿದ್ದ ನಾಯಕರು, ಸಿಎಂ-ಡಿಸಿಎಂ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿರುವುದು ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಹುಟ್ಟುಹಾಕುವ ಸಾಧ್ಯತೆ ಇದೆ ಎನ್ನಬಹುದು.
ಕೃಷ್ಣಮಣಿ